Sunday, November 7, 2021

ನ.೮ರಂದು ತಾಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನೆ

    ಭದ್ರಾವತಿ, ನ. ೭: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮಧ್ಯವರ್ತಿಗಳ ಹಾವಳಿ ಖಂಡಿಸಿ, ರೈತರ ಸಂಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳ ವರ್ತನೆ ವಿರುದ್ಧ ಪ್ರತಿಭಟನೆ ಹಾಗು ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ ಶ್ರದ್ಧಾಂಜಲಿ ಸಭೆ ತಾಲೂಕು ಪಂಚಾಯಿತಿ ಮುಂಭಾಗ ನ.೮ರಂದು ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
    ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ, ಪ್ರಗತಿಪರ ಚಿಂತಕ ಪ್ರೊ. ಜಿ.ಕೆ ಗೋವಿಂದರಾವ್, ದಕ್ಷ ಲೋಕಾಯುಕ್ತ ವೆಂಕಟಾಚಲ ಹಾಗು ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಗುವುದು. ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮಧ್ಯವರ್ತಿಗಳ ಹಾವಳಿ ಹಾಗು ಭ್ರಷ್ಟಾಚಾರ ಮಿತಿಮೀರಿದ್ದು, ಅರ್ಹ ಫಲಾನುಭವಿಗಳು ಸೌಲಭ್ಯಗಳನ್ನು ಪಡೆಯಲು ತೊಂದರೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಗ್ರಾಮದ ರೈತರೊಬ್ಬರಿಗೆ ನ್ಯಾಯಾಲಯದ ಆದೇಶವಿದ್ದರೂ ಸಹ ಪೋಡಿ ಮಾಡಿಕೊಡದೆ ನಿರ್ಲಕ್ಷ್ಯತನದಿಂದ ವರ್ತಿಸುತ್ತಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಕೋರಿದ್ದಾರೆ.

ಶಿರಸ್ತೆದಾರ್ ಕಾರು ಅಪಘಾತ

    ಭದ್ರಾವತಿ, ನ. ೭; ಚಿಕ್ಕಮಗಳೂರು ಪ್ರಧಾನ ಸಿವಿಲ್ ನ್ಯಾಯಾಲಯದ ಶಿರಸ್ತೆದಾರ್ ಅವರ ಕಾರು ಅಪಘಾತಗೊಂಡಿರುವ ಘಟನೆ ತಾಲೂಕಿನ ಕೆಂಪೇಗೌಡ ನಗರದಲ್ಲಿ ನಡೆದಿದೆ.
    ಕೆಂಪೇಗೌಡ ನಗರದ ಬಳಿ ಬಿ.ಎಚ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲಿ ಹಂಪ್ಸ್ ಎದುರಾದ ಹಿನ್ನೆಲೆಯಲ್ಲಿ ಶಿರಸ್ತೆದಾರ್ ಹಾಲನಾಯ್ಕ ಅವರ ಕಾರು ನಿಧನವಾಗಿ ಚಲಿಸುತ್ತಿದ್ದಾಗ ಹಿಂಬದಿಯಿಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಈ ಹಿನ್ನಲೆಯಲ್ಲಿ ಕಾರು ಖಜಂಗೊಂಡಿದ್ದು, ಆದರೆ ಕಾರಿನಲ್ಲಿದ್ದ ಹಾಲನಾಯ್ಕ ಅವರ ಕುಟುಂಬಸ್ಥರಿಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ.
    ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಹಾಲನಾಯ್ಕ ಕುಟುಂಬದವರು ಭದ್ರಾವತಿಗೆ ಆಗಮಿಸಿದ್ದರು ಎನ್ನಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಅಪಘಾತ ಸಂಬಂಧ ಕಾಗದನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಜಾರ ಜನಾಂಗದಲ್ಲಿ ದೀಪ ಬೆಳಗುವ ವಿಶೇಷ ಆಚರಣೆ ‘ಮೇರಾ’

ದೀಪಾವಳಿ ಹಬ್ಬದಂದು ವಿಶೇಷವಾಗಿ ಬಂಜಾರ ಜನಾಂಗದಲ್ಲಿ ದೀಪ ಬೆಳಗುವುದು(ಮೇರಾ ಮಾಡುವುದು) ವಾಡಿಕೆಯಾಗಿದ್ದು, ಭದ್ರಾವತಿ ತಾಲೂಕಿನ ಸಿರಿಯೂರು ತಾಂಡ ಸೇರಿದಂತೆ ಇತರೆಡೆ ಬಂಜಾರ ಜನಾಂಗದ ಕುಟುಂಬದ ಹೆಣ್ಣು ಮಕ್ಕಳು ಗ್ರಾಮದ ಮನೆ ಮನೆಗಳಿಗೆ ತೆರಳಿ ದೀಪ ಬೆಳಗಿದರು.
    ಭದ್ರಾವತಿ, ನ. ೭: ದೀಪಾವಳಿ ಹಬ್ಬದಂದು ವಿಶೇಷವಾಗಿ ಬಂಜಾರ ಜನಾಂಗದಲ್ಲಿ ದೀಪ ಬೆಳಗುವುದು(ಮೇರಾ ಮಾಡುವುದು) ವಾಡಿಕೆಯಾಗಿದ್ದು, ತಾಲೂಕಿನ ಸಿರಿಯೂರು ತಾಂಡ ಸೇರಿದಂತೆ ಇತರೆಡೆ ಬಂಜಾರ ಜನಾಂಗದ ಕುಟುಂಬದ ಹೆಣ್ಣು ಮಕ್ಕಳು ಗ್ರಾಮದ ಮನೆ ಮನೆಗಳಿಗೆ ತೆರಳಿ ದೀಪ ಬೆಳಗಿದರು.
    ಬಂಜಾರ ಜನಾಂಗದಲ್ಲಿ ದೀಪವನ್ನು ಹೆಣ್ಣಿಗೆ ಹೋಲಿಕೆ ಮಾಡಿದ್ದು, ಹೆಣ್ಣು ಮನೆ ಬೆಳಗುವ ದೀಪ ಎಂಬ ಗೌರವಭಾವದಿಂದ ಕಾಣಲಾಗುತ್ತದೆ. ಈ ಕಾರಣದಿಂದ ಈ ಜನಾಂಗದ ಹೆಣ್ಣು ಮಕ್ಕಳು ಅಮಾವಾಸ್ಯೆ ರಾತ್ರಿಯಂದು ದೀಪ ಹಿಡಿದು ತಂದೆಗೆ 'ಬಾಪೂ ತೋನ ಮೇರಾ', ತಾಯಿಗೆ 'ಯಾಡಿ ತೋನ ಮೇರಾ', ಅಣ್ಣನಿಗೆ 'ಭೀಯಾ ತೋನ ಮೇರಾ', ಅತ್ತೆಗೆ 'ಫೂಫಿ ತೋನ ಮೇರಾ' ಹೀಗೆ ಕುಟುಂಬ ಪ್ರತಿಯೊಬ್ಬ ಸದಸ್ಯರಿಗೂ, ಹಿತೈಷಿಗಳಿಗೂ ದೀಪ ಬೆಳಗುವ ಮೂಲಕ ಶುಭ ಹಾರೈಸುತ್ತಾರೆ.
    ಹೆಣ್ಣು ದೀಪ ಬೆಳಗುವ ಮೂಲಕ ಆ ಮನೆಯ ಅಂಧಕಾರ, ದೃಷ್ಟಶಕ್ತಿ ದೂರವಾಗುತ್ತದೆ ಎಂಬ ನಂಬಿಕೆ ಈ ಜನಾಂಗದ್ದಾಗಿದೆ. ಸಿರಿಯೂರು ತಾಂಡದಲ್ಲಿ ಬಂಜಾರ ಯುವ ವೇದಿಕೆ ಅಧ್ಯಕ್ಷ ಕೃಷ್ಣನಾಯ್ಕ ಕುಟುಂಬ ಸದಸ್ಯರು ದೀಪ ಬೆಳಗುವ ಮೂಲಕ ಗಮನ ಸೆಳೆದರು.

ಎಲ್ಲರೂ ಎಚ್ಚರಿಕೆ ಗಂಟೆಯಾಗಿದ್ದಾಗ ಮಾತ್ರ ಜವಾಬ್ದಾರಿಯಿಂದ ಮುನ್ನಡೆಯಲು ಸಾಧ್ಯ : ಕೆ.ಎನ್ ಶ್ರೀಹರ್ಷ

ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ನ. ೭: ಸಾರ್ವಜನಿಕ ಕ್ಷೇತ್ರದಲ್ಲಿನ ಸಂಘಟನೆಗಳನ್ನು ಮುನ್ನಡೆಸಿಕೊಂಡು ಹೋಗಲು ಸಮಾಜದ ಎಲ್ಲರೂ ಎಚ್ಚರಿಕೆ ಗಂಟೆಯಾಗಿರಬೇಕು. ಆಗ ಮಾತ್ರ ಸಂಘಟನೆಯ ಜವಾಬ್ದಾರಿ ಹೊತ್ತವರು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಾರೆಂದು ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಹೇಳಿದರು.
    ಅವರು ಭಾನುವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
    ಸಂಘದ ವತಿಯಿಂದ ಅಭಿನಂದಿಸುತ್ತಿರುವುದು ಹೃದಯಸ್ಪರ್ಶಿ ವಿಚಾರವಾಗಿದ್ದು, ಈ ನಡುವೆ ವಕೀಲರ ಸಂಘದ ಅಧ್ಯಕ್ಷರಾಗಿರುವುದು ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ಎಲ್ಲರ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ಕೆ.ಎನ್ ಶ್ರೀಹರ್ಷರವರು ಪತ್ರಕರ್ತರ ಸಂಘದ ಜೊತೆಗೆ ವಕೀಲರ ಸಂಘದ ಅಧ್ಯಕ್ಷರಾಗುವ ಮೂಲಕ ಇದೀಗ ಮತ್ತಷ್ಟು ಜವಾಬ್ದಾರಿಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಈಗಾಗಲೇ ಪತ್ರಕರ್ತರ ಸಂಘದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದ್ದು, ವಕೀಲರ ಸಂಘದಲ್ಲೂ ಇದೆ ರೀತಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ. ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದ್ದೇನೆ ಎಂದರು.
    ಪತ್ರಿಕಾಭವನ ಕಟ್ಟಡ ಸಮಿತಿ ಅಧ್ಯಕ್ಷ ಕಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಮತ್ತು ಉಪಾಧ್ಯಕ್ಷ ಚನ್ನಪ್ಪ ಮಾತನಾಡಿದರು. ಪತ್ರಕರ್ತ ಎನ್. ಬಾಬು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಪ್ರಧಾನ ಕಾರ್ಯದರ್ಶಿ ಬಸವರಾಜ್ ಸ್ವಾಗತಿಸಿದರು. ಪತ್ರಕರ್ತ ಸುಭಾಷ್‌ರಾವ್ ಸಿಂಧ್ಯಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷ ಕೂಡ್ಲಿಗೆರೆ ಮಂಜುನಾಥ್ ನಿರೂಪಿಸಿದರು. ರವೀಂದ್ರನಾಥ್ ಪ್ರಾರ್ಥಿಸಿದರು.  
    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಚಿತ್ರನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು.



ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅವರನ್ನು ಸನ್ಮಾನಿಸಲಾಯಿತು.