ಭದ್ರಾವತಿಯಲ್ಲಿ ಆರ್‌ಎಸ್‌ಎಸ್ ಮಹಾರಾಣಾ ಪ್ರತಾಪ್ ಶಾಖೆ ವತಿಯಿಂದ ಹೊಸಮನೆ ಹಿಂದೂ ಮಹಾಸಭಾ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಗುರು ಪೂಜಾ ಉತ್ಸವದಲ್ಲಿ ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ್ಯ ಸಹ ಬೌಧ್ಧಿಕ್ ಪ್ರಮುಖ್ ಗೋವಿಂದಜೀ ಪಾಲ್ಗೊಂಡು ಮಾತನಾಡಿದರು.
ಭದ್ರಾವತಿ: ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದಿದ್ದರೂ ನಮ್ಮಲ್ಲಿನ ಮಾನಸಿಕ ದಾಸ್ಯದ ಮನೋಭಾವ ಹೋಗಿಲ್ಲ. ಮೊದಲು ಈ ದಾಸ್ಯದ ಮನೋಭಾವನೆಯಿಂದ ಹೊರ ಬರಬೇಕು. ದೇಶದ ಬಗ್ಗೆ ವಿಶ್ವವೇ ಹೆಮ್ಮೆಪಡುವಂತಹ, ಗೌರವ ನೀಡುವಂತಹ ವಾತಾವರಣವನ್ನು ಎಲ್ಲರೂ ಸೇರಿ ನಿರ್ಮಾಣ ಮಾಡಬೇಕೆಂದು ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ್ಯ ಸಹ ಬೌಧ್ಧಿಕ್ ಪ್ರಮುಖ್ ಗೋವಿಂದಜೀ ಕರೆ ನೀಡಿದರು.
ಅವರು ಆರ್‌ಎಸ್‌ಎಸ್ ಮಹಾರಾಣಾ ಪ್ರತಾಪ್ ಶಾಖೆ ವತಿಯಿಂದ ಹೊಸಮನೆ ಹಿಂದೂ ಮಹಾಸಭಾ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಗುರು ಪೂಜಾ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ದೇಶದಲ್ಲಿ ನಮ್ಮ ಜೀವನ ಪದ್ದತಿ, ಆಹಾರ, ಆಚಾರ-ವಿಚಾರ, ಸಂಸ್ಕೃತಿ, ಸಂಪ್ರದಾಯಗಳು, ಧಾರ್ಮಿಕ ಅಚರಣೆಗಳ ಬಗ್ಗೆ ತಿಳಿದಿರಬೇಕು. ಅವುಗಳ ಬಗ್ಗೆ ಹೆಮ್ಮೆ ಇರುಬೇಕು ಹೊರತು ದಾಸ್ಯ ಮನೋಭಾವನೆಗೆ ಒಳಗಾಗಿ ಆಧುನಿಕ ಬದುಕಿನಲ್ಲಿ ಉದಾಸೀನತೆ ಬೆಳೆಸಿಕೊಳ್ಳಬಾರದು ಎಂದರು.
ವ್ಯಾಸ ಮಹರ್ಷಿಗಳು ಜನ್ಮತಾಳಿದ ದಿನ ಗುರು ಪೂರ್ಣಿಮೆ. ಈ ದಿನವನ್ನು ಆರ್‌ಎಸ್‌ಎಸ್ ಗುರು ಪೂಜಾ ಉತ್ಸವ ಎಂಬ ಹೆಸರಿನಲ್ಲಿ ಅಚರಿಸಿಕೊಂಡು ಬರುತ್ತಿದೆ. ಗುರು ಶಿಷ್ಯರ ಸಂಬಂಧದ ರೀತಿಯಲ್ಲಿ ಭಗವಾ ಧ್ವಜವೇ ಗುರುವಾಗಿ ಸ್ವೀಕರಿಸಿ ಗೌರವಿಸಿ ಅರ್ಪಣೆ ಮಾಡಲಾಗುತ್ತಿದೆ. ಗುರು ಎಂದರೆ ಕೇವಲ ವಿದ್ಯೆಯನ್ನು ಮಾತ್ರ ಕಲಿಸುವುದಲ್ಲ. ಆತ ಶಿಷ್ಯನ ಜೊತೆಗೆ ಉತ್ತಮ ಬಾಂಧ್ಯವನ್ನು ಹೊಂದಿ ಆತನನ್ನು ಸರ್ವಾಂಗೀಣ ಅಭಿವೃಧ್ಧಿ ವ್ಯಕ್ತಿಯನ್ನಾಗಿ ಮಾಡಿ, ಸಮಾಜದ ಎಲ್ಲಾ ರಂಗಗಳಲ್ಲಿ ಯಶಸ್ವಿಯಾಗಿ ಉತ್ತಮ ಕಾರ್ಯಗಳನ್ನು ನಿರ್ವಹಿಸುವಂತೆ ಮಾಡುವ ಶಕ್ತಿಯೇ ಗುರು. ಇಂತಹ ಶಿಷ್ಯರನ್ನು ಆರ್‌ಎಸ್‌ಎಸ್ ತನ್ನ ನಿತ್ಯ ಶಾಖೆಯಲ್ಲಿ ತಯಾರು ಮಾಡುತ್ತದೆ ಎಂದರು.
ದೇಹದಲ್ಲಿ ಉತ್ಸಾಹ, ಶಾರೀರಿಕವಾಗಿ, ಬೌಧ್ಧಿಕವಾಗಿ ಮತ್ತು ಮಾನಸಿಕವಾಗಿ ಉತ್ತಮ ಜ್ಞಾನವನ್ನು ಆರ್‌ಎಸ್‌ಎಸ್ ಶಾಖೆಗಳಲ್ಲಿ ತಿಳಿಸಲಾಗುತ್ತದೆ. ಸಂಸ್ಕಾರ ಇದ್ದರೆ ಯಾವುದೇ ಕೆಲಸ ಕಾರ್ಯಗಳನ್ನು ಸಂಘಟಿತವಾಗಿ, ಶಿಸ್ತುಬದ್ದವಾಗಿ ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಎಂ. ವಾಗೀಶ್ ಕೋಠಿ ಮಾತನಾಡಿ, ಇಂದಿನ ಯುವಕರೇ ದೇಶದ ಭವಿಷ್ಯದ ಪ್ರಜೆಗಳು, ನಾಯಕರುಗಳು, ಆರ್‌ಎಸ್‌ಎಸ್ ಶಾಖೆಗಳಲ್ಲಿ ಕಲಿತ ಸಂಸ್ಕಾರದಿಂದ ಜೀವನದಲ್ಲಿ ಎಂತಹ ಸಮಸ್ಯೆಗಳು ಬಂದರೂ ಅದನ್ನು ಯಶಸ್ವಿಯಾಗಿ ಎದುರಿಸುವ. ಎಂತಹ ಘಟನೆಗಳು ನಡೆದರೂ ಅವುಗಳನ್ನು ಸರಿಯಾಗಿ ನಿಭಾಯಿಸುವ ಧೈರ್ಯ ಬರುತ್ತದೆ ಎಂದರು.
ದೇಶದಲ್ಲಿ ಆರ್‌ಎಸ್‌ಎಸ್ ಅಸ್ತಿತ್ವದಲ್ಲಿರುವ ಕಾರಣ ಭಾರತ ಬಗ್ಗೆ ಇಂದು ವಿಶ್ವವೇ ವಿಶೇಷ ರೀತಿಯಲ್ಲಿ ಗುರುವಿನ ಸ್ಥಾನದಲ್ಲಿ ಭಲಾಢ್ಯ ರಾಷ್ಟ್ರವನ್ನಾಗಿ ನೋಡುತ್ತಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಯುವಕರು ಕಡ್ಡಾಯವಾಗಿ ನಿತ್ಯ ಆರ್‌ಎಸ್‌ಎಸ್ ಶಾಖೆಗಳಿಗೆ ಹೋಗಿ ಶಿಕ್ಷಣ ಪಡೆಯಬೇಕೆಂದರು. ತಾಲೂಕು ಸಂಘ ಚಾಲಕ್ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.