ಭದ್ರಾವತಿಯಲ್ಲಿ ಕಾಶ್ಮೀರದಲ್ಲಿ ನಡೆದ ಉಗ್ರರ ಅಟ್ಟಹಾಸ ಖಂಡಿಸಿ ವಕೀಲರ ಸಂಘದಿಂದ ಮಾಧವಾಚಾರ್ ವೃತ್ತದಲ್ಲಿ ಮಾನವ ಸರಪಳಿ ಸಹಿತ ರಸ್ತೆ ತಡೆ ಮಾಡಿ ಘಟನೆಯನ್ನು ಖಂಡಿಸಲಾಯಿತು.
ಭದ್ರಾವತಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರಗಾಮಿಗಳು ಹಿಂದೂ ಪ್ರವಾಸಿಗರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಬುಧವಾರ ತಾಲೂಕು ವಕೀಲರ ಸಂಘದ ವತಿಯಿಂದ ಪ್ರತಿಭಟನಾ ಮೆರವಣಿಗೆಯೊಂದಿಗೆ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಇದಕ್ಕೂ ಮೊದಲು ಸಂಘದ ಕಛೇರಿಯಲ್ಲಿ ಅಧ್ಯಕ್ಷ ಉಮೇಶ್ ನೇತೃತ್ವದಲ್ಲಿ ಸಂತಾಪ ಸೂಚಕ ಸಭೆ ನಡೆಸಿ ಹತ್ಯೆಯಾದ ಹಿಂದೂ ಪ್ರವಾಸಿಗರಿಗೆ ಸಂತಾಪ ಸೂಚಿಸುವ ಮೂಲಕ ಮೌನಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ, ಹಿರಿಯ ವಕೀಲರಾದ ನಾರಾಯಣರಾವ್, ಮಂಜಪ್ಪ, ಹನುಮಂತರಾವ್, ಮಹಮದ್ ಇಲಿಯಾಸ್, ಉದಯಕುಮಾರ್, ವಿ. ವೆಂಕಟೇಶ್, ತಿರುಮಲೇಶ್, ಕೆ.ಎನ್ ಶ್ರೀಹರ್ಷ, ಕೆ.ಎಸ್ ಸುದೀಂದ್ರ ಸೇರಿದಂತೆ ಇನ್ನಿತರರು, ಉಗ್ರಗಾಮಿಗಳು ಪ್ರವಾಸಕ್ಕೆ ತೆರಳಿದ್ದ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಹತ್ಯೆ ನಡೆಸಿರುವುದು ನಿಜಕ್ಕೂ ಹೇಯಕೃತ್ಯ. ಈ ಘಟನೆಯಲ್ಲಿ ಶಿವಮೊಗ್ಗ ನಿವಾಸಿ, ಉದ್ಯಮಿ ಮಂಜುನಾಥ್ ಸಹ ಹತ್ಯೆಯಾಗಿರುವುದು ದುಃಖಕರ ಸಂಗತಿಯಾಗಿದೆ. ಅವರ ಕುಟುಂಬಕ್ಕೆ ವಕೀಲರ ಸಂಘ ಸಾಂತ್ವಾನ ಹೇಳುತ್ತದೆ. ಈ ಘಟನೆಗೆ ಕಾರಣರಾದ ಉಗ್ರರನ್ನು ಸರ್ಕಾರ ತಕ್ಷಣ ಮಟ್ಟ ಹಾಕದೆ ಹೋದರೆ ಅಲ್ಲಿ ನಡೆದ ಘಟನೆ ವಿಕೋಪಕ್ಕೆ ನಾಂದಿಯಾಗಬಲ್ಲದು ಎಂದರು.
ಭಾರತ ದೇಶದ ಪ್ರತಿಯೊಬ್ಬ ನಾಗರಿಕರು ಜಾತಿ, ಮತ, ಧರ್ಮ, ವರ್ಗ, ಭಾಷೆ, ಎಲ್ಲವನ್ನೂ ಬದಿಗಿಟ್ಟು ದೇಶಾಭಿಮಾನದಿಂದ ಈ ಘಟನೆಯನ್ನು ಖಂಡಿಸಿ ಉಗ್ರರ ನಿಗ್ರಹಕ್ಕೆ ಒತ್ತಾಯಿಸಬೇಕು. ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ಬೆಂಬಲವಾಗಿ ಎಲ್ಲರೂ ನಿಲ್ಲಬೇಕಿದೆ. ಭಾರತ ದೇಶ ಹಿಂದೂಗಳ ದೇಶವಾದರೂ ಸಹ ಇಲ್ಲಿ ಎಲ್ಲಾ ಧರ್ಮದವರೂ ಶಾಂತಿಯುತವಾಗಿ ಬಾಳುತ್ತಿದ್ದಾರೆ. ಆದರೆ ಈ ನಮ್ಮ ಐಕ್ಯತೆಯನ್ನು ಇಂತಹ ಘಟನೆಗಳಿಂದ ಮುರಿಯಲು ಉಗ್ರರು ತ್ಯೆಗಳನ್ನು ನಡೆಸುತ್ತಿದ್ದಾರೆ ಇದನ್ನು ಪ್ರತಿಯೊಬ್ಬರೂ ಖಂಡಿಸಲೇ ಬೇಕೆಂದರು.
ಪ್ರತಿಭಟನಾ ಮೆರವಣಿಗೆ-ರಸ್ತೆತಡೆ-ಮಾನವ ಸರಪಳಿ:
ನ್ಯಾಯಾಲಯದ ಆವರಣದಿಂದ ವಕೀಲರು ತ್ರಿವರ್ಣ ಧ್ವಜ ಹಿಡಿದು ಉಗ್ರರ ವಿರುದ್ಧ ಘೋಷಣೆಗಳನ್ನು ಹಾಕುವ ಮೂಲಕ ಭಾರತ ಮಾತೆಗೆ ಜೈಕಾರ ಹಾಕಿದರು. ಭಾರತ ಮಾತೆಯ ಸಿಂಧೂರ ಕಾಶ್ಮೀರ ಎನ್ನುತ್ತಾ, ನೂರಾರು ವಕೀಲರು ಪ್ರತಿಭಟನಾ ಮೆರವಣಿಗೆ ಆರಂಭಿಸಿ, ರಂಗಪ್ಪವೃತ್ತ, ಡಾ.ರಾಜ್‌ಕುಮಾರ್ ರಸ್ತೆ ಮೂಲಕ ಮಾಧವಾಚಾರ್ ವೃತ್ತದವರೆಗೂ ತೆರಳಿದರು. ನಂತರ ಮಾನವಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು.
ಮಾಧವಾಚಾರ್ ವೃತ್ತದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ವಕೀಲರಾದ ಟಿ. ಚಂದ್ರೇಗೌಡ, ವಿಶ್ವನಾಥ್, ಜಯರಾಂ ಸೇರಿದಂತೆ ಇನ್ನಿತರರು ಮಾತನಾಡಿ, ಉಗ್ರರ ಕೃತ್ಯ ಹೇಯವಾಗಿದ್ದು, ಭಾರತೀಯ ಸೈನ್ಯದ ವಿರುದ್ಧ ನೇರವಾಗಿ ಹೋರಾಟ ಮಾಡಲು ಸಾಧ್ಯವಾಗದೆ ಉಗ್ರರು ಈ ರೀತಿ ಹೇಡಿತನದಿಂದ ಹೇಯಕೃತ್ಯ ಎಸಗಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಲೇಬೇಕೆಂಬುದು ಈ ದೇಶದ ಪ್ರತಿಯೊಬ್ಬರ ಆಗ್ರಹವಾಗಿದೆ ಎಂದರು.
ಕೊನೆಯಲ್ಲಿ ತಾಲೂಕು ಕಚೇರಿ ಆವರಣದಲ್ಲಿ ವಕೀಲರಾದ ಪುಟ್ಟಸ್ವಾಮಿ, ರೂಪಾ ರಾವ್, ಶೋಭಾ, ಶಿವಕುಮಾರ್, ಮಂಗೋಟೆ ರುದ್ರೇಶ್ ಸೇರಿದಂತೆ ಇನ್ನಿತರರು ಉಗ್ರರ ಕೃತ್ಯವನ್ನು ಖಂಡಿಸಿ ಮಾತನಾಡಿ ಕಂದಾಯಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.