ಭದ್ರಾವತಿ : ತಾಲೂಕಿನ ಗೊಂದಿ ಗ್ರಾಮದ ಚಾನಲ್‌ನಲ್ಲಿ ಈಜಲು ಹೋಗಿದ್ದ ಮಹಿಳೆಯೊಬ್ಬರು ಸುಮಾರು ೬ ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗು ನಗದು ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಕೋಣನೂರು ಗ್ರಾಮದ ನಿವಾಸಿ ಅಬಿದಾ ಬಾನು(೩೮) ಒಟ್ಟು ೭೫ ಗ್ರಾಂ. ತೂಕದ, ೬ ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗು ೧೦ ಸಾವಿರ ರು. ನಗದು ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಅಬಿದಾ ಬಾನು ಸೇರಿದಂತೆ ಒಟ್ಟು ೨೦ ಮಂದಿ ನಗರದ ಜನ್ನಾಪುರದ ಚಂದ್ರಾಲಯದಲ್ಲಿ ಸಂಬಂಧಿಕರ ಮದುವೆಗೆ ಏ.೨೦ರಂದು ಆಗಮಿಸಿದ್ದು, ಅಂದು ಮದುವೆ ಕಾರ್ಯ ಮುಗಿಸಿಕೊಂಡು ಓಮ್ನಿ ವಾಹನದಲ್ಲಿ ಗೊಂದಿ ಗ್ರಾಮಕ್ಕೆ ತೆರಳಿ ಚಾನಲ್‌ನಲ್ಲಿ ಈಜಾಡಲು ಹೋಗಿದ್ದಾರೆ.
ಚಾನಲ್‌ನಲ್ಲಿ ಈಜಲು ಹೋಗುವಾಗ ಚಿನ್ನಾಭರಣಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಬಹುದು ಎಂಬ ಮುನ್ನಚ್ಚರಿಕೆಯಿಂದ ಅಬಿದ ಬಾನುರವರು ಕೊರಳಿನಲ್ಲಿದ್ದ ಸುಮಾರು ೨೫ ಗ್ರಾಂ. ತೂಕದ ೧ ಬಂಗಾರದ ನಕ್ಲೆಸ್, ೩೦ ಗ್ರಾಂ. ತೂಕದ ಮತ್ತೊಂದು ಬಂಗಾರದ ನಕ್ಲೆಸ್, ಒಟ್ಟು ೧೪ ಗ್ರಾಂ. ತೂಕದ ೪ ಬಂಗಾರದ ಉಂಗುರಗಳು ಮತ್ತು ೬ ಗ್ರಾಂ. ತೂಕದ ಎರಡು ಜೊತೆ ಬಂಗಾರದ ಓಲೆಯನ್ನು ತಮ್ಮ ವ್ಯಾನಿಟಿ ಬ್ಯಾಗಿನಲ್ಲಿ ಹಾಕಿಕೊಂಡಿದ್ದು, ಓಮ್ನಿ ವಾಹನದಲ್ಲಿಯೇ ವ್ಯಾನಿಟಿ ಬಿಟ್ಟು ಈಜಾಡಲು ತೆರಳಿದ್ದಾರೆ. ಪುನಃ ಹಿಂದಿರುಗಿ ಬಂದು ವ್ಯಾನಿಟಿ ಬ್ಯಾಗ್ ಪರಿಶೀಲನೆ ನಡೆಸಿದ್ದು, ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಹಾಗು ನಗದು ಕಳವು ಮಾಡಿರುವುದು ತಿಳಿದು ಬಂದಿದೆ.
No comments:
Post a Comment