Monday, July 11, 2022

ಪ್ರೋತ್ಸಾಹಧನ, ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಭದ್ರಾವತಿ, ಜು. ೧೧ : ೨೦೨೧-೨೨ನೇ ಸಾಲಿನಲ್ಲಿ ವ್ಯಾಸಂಗ ಮಾಡಿರುವ ತಾಲೂಕಿನ ಕ್ಷತ್ರಿಯ ಮರಾಠ ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮತ್ತು ಪ್ರತಿಭಾ ಪುರಸ್ಕಾರ ನೀಡಲು ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
      ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಅಂತಿಮ ಪದವಿ, ಸ್ನಾತಕೋತ್ತರ ಪದವಿ ಹಾಗೂ ಅಂತಿಮ ಇಂಜಿನಿಯರಿಂಗ್ ತರಗತಿಗಳಲ್ಲಿ ಶೇ.೯೦ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೇ.೬೫ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರ್ರೋತ್ಸಾಹ ಧನ ನೀಡಿ ಗೌರವಿಸಲಾಗುವುದು.
      ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳು ಇತ್ತೀಚಿನ ಎರಡು ಭಾವಚಿತ್ರ ಹಾಗೂ ಅಗತ್ಯ ದಾಖಲೆಗಳೊಂದಿಗೆ ನಗರದ ಚನ್ನಗಿರಿ ರಸ್ತೆಯ ಭವಾನಿ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಕಛೇರಿಗೆ ಜು.೩೦ ರೊಳಗಾಗಿ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಮೊ: ೯೪೪೯೧೫೯೯೭೭ ಅಥವಾ ೬೩೬೧೭೪೬೧೦೮ ಸಂಖ್ಯೆಗೆ ಸಂಪರ್ಕಿಸುವಂತೆ ಸಂಘದ ಅಧ್ಯಕ್ಷ ಸಚಿನ್‌ಸಿಂದ್ಯಾ ಕೋರಿದ್ದಾರೆ.

ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಪೊಲೀಸರ ವಶಕ್ಕೆ

    ಭದ್ರಾವತಿ, ಜು. ೧೧: ನಗರದ ಸಿ.ಎನ್ ರಸ್ತೆ ಎಸ್.ಎಸ್ ಜ್ಯೂಯಲರ್‍ಸ್ ಚಿನ್ನಾಭರಣ ಮಳಿಗೆಯಲ್ಲಿ ನಡೆದಿರುವ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನೂ ಹೆಚ್ಚಿನ ವಿಚಾರಣೆ ನಡೆಯುತ್ತಿರುವ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿ ಡಾ. ಬಿ.ಎಂ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದ್ದಾರೆ.      
    ಈ ಪ್ರಕರಣದಲ್ಲಿ ಒಟ್ಟು ೧.೫ ಕೆ.ಜಿ ಚಿನ್ನಾಭರಣ ಹಾಗು ೮೫ ಕೆ.ಜಿ ಬೆಳ್ಳಿ ಆಭರಣಗಳು ಕಳವಾಗಿದ್ದು, ಗ್ರಾಹಕರಿಂದ ದುರಸ್ತಿಗೆ ಪಡೆಯಲಾಗಿದ್ದ ೨೫೦ ಗ್ರಾಂ. ಚಿನ್ನಾಭರಣ ಸಹ ಕಳವು ಮಾಡಲಾಗಿದೆ ಎಂದರು.
     ಅನುಮಾನಸ್ಪದವಾಗಿ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಇಬ್ಬರನ್ನು ಬಂಧಿಸಲಾಗಿದೆ. ಇವರಿಂದ ೩೫ ಕೆ.ಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿದ್ದು, ಈ ಇಬ್ಬರು ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕಾರ್ಯಾಚರಣೆ ಮುಂದುವರೆಯುತ್ತಿದೆ ಎಂದರು.

ಮಹಿಳಾ ಸೇವಾ ಸಮಾಜದ ಅಧ್ಯಕ್ಷರಾಗಿ ಹೇಮಾವತಿ ವಿಶ್ವನಾಥ್ ಮರು ಆಯ್ಕೆ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಮಹಿಳಾ ಸೇವಾ ಸಮಾಜದ ಅಧ್ಯಕ್ಷರಾಗಿ ಹೇಮಾವತಿ ವಿಶ್ವನಾಥ್ ಸೇರಿದಂತೆ ಪದಾಧಿಕಾರಿಗಳು ಅವಿರೋಧವಾಗಿ ಮರು ಆಯ್ಕೆಯಾದರು.
    ಭದ್ರಾವತಿ, ಜು. ೧೧: ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಮಹಿಳಾ ಸೇವಾ ಸಮಾಜದ ಅಧ್ಯಕ್ಷರಾಗಿ ಹೇಮಾವತಿ ವಿಶ್ವನಾಥ್ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
       ಪ್ರಧಾನ ಕಾರ್ಯದರ್ಶಿಯಾಗಿ ಶೋಭಾ ಗಂಗರಾಜು, ಸಹ ಕಾರ್ಯದರ್ಶಿಯಾಗಿ ಇಂದಿರಾ ರಮೇಶ್ ಮತ್ತು ಖಜಾಂಚಿಯಾಗಿ ಶಾಂತಿ ಶೇಟ್ (ಜಯಂತಿ) ಮರು ಆಯ್ಕೆಯಾಗಿದ್ದಾರೆ.
      ಉಳಿದಂತೆ ಗೌರವ ಅಧ್ಯಕ್ಷರಾಗಿ ಗೌರಮ್ಮಶಂಕರಯ್ಯ, ಉಪಾಧ್ಯಕ್ಷರಾಗಿ ಯಶೋಧ ವೀರಭದ್ರಪ್ಪ, ನಿರ್ದೇಶಕರಾಗಿ ಕಮಲರಾಯ್ಕರ್, ಶಾರದ ಶ್ರೀನಿವಾಸ್, ಲೋಹಿತಾನಂಜಪ್ಪ, ಕಲ್ಪನಾ ಮಂಜುನಾಥ, ಗೀತಾ ರಘುನಂದನ್, ವಾಣಿ ನಾಗರಾಜ್, ಮುಖ್ಯ ಸಲಹೆಗಾರರಾಗಿ ರೂಪಾರಾವ್ ಮತ್ತು ಅನ್ನಪೂರ್ಣ ಸತೀಶ್ ಆಯ್ಕೆಯಾಗಿದ್ದಾರೆ.

ಸಂಸದರಿಂದ ರೈಲ್ವೆ ಮೇಲ್ಸೇತುವೆ ಕಾಮಗಾರಿ ವೀಕ್ಷಣೆ

ಭದ್ರಾವತಿ ಕಡದಕಟ್ಟೆ ರೈಲ್ವೆ ಗೇಟ್ ಬಳಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸೋಮವಾರ ಸಂಸದ ಬಿ.ವೈ ರಾಘವೇಂದ್ರ ವೀಕ್ಷಿಸಿದರು.
ಭದ್ರಾವತಿ, ಜು. ೧೧: ನಗರದ ಕಡದಕಟ್ಟೆ ರೈಲ್ವೆ ಗೇಟ್ ಬಳಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸೋಮವಾರ ಸಂಸದ ಬಿ.ವೈ ರಾಘವೇಂದ್ರ ವೀಕ್ಷಿಸಿದರು. 
ಕೆಲವು ತಿಂಗಳಿನಿಂದ ಕಾಮಗಾರಿ ಆರಂಭಗೊಂಡಿದ್ದು, ಶಿವಮೊಗ್ಗ-ಭದ್ರಾವತಿ ನಡುವೆ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಈ ನಡುವೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸಂಸದ ರಾಘವೇಂದ್ರ ಮಳೆ ನಡುವೆಯೂ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈಲ್ವೆ ಅಧಿಕಾರಿಗಳಿಗೆ ತ್ವರಿತಗತಿಯಲ್ಲಿ ಕಾಮಗಾರಿ ಕೈಗೊಳ್ಳುವ ಜೊತೆಗೆ ಗುಣಮಟ್ಟಕ್ಕೆ ಹೆಚ್ಚಿನ ಗಮನ ನೀಡುವಂತೆ ಹಾಗು ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರವಹಿಸುವಂತೆ ಸೂಚಿಸಿದರು.
ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್, ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಹಿರಿಯ ಅಭಿಯಂತರ ಸತೀಶ್, ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಕಾರ್ಯದರ್ಶಿ ಎಂ. ಪ್ರಭಾಕರ್, ಸ್ಥಳೀಯ ಮುಖಂಡರಾದ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಕಾರ್ಯದರ್ಶಿ ಚನ್ನೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ತಾಲೂಕು ಪಂಚಾಯಿತಿ ಸದಸ್ಯ ಕೆ. ಮಂಜುನಾಥ್, ನಗರಸಭಾ ಸದಸ್ಯ ವಿ. ಕದಿರೇಶ್, ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್, ಎಸ್.ಎಸ್ ಜ್ಯೋತಿ ಪ್ರಕಾಶ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.