Thursday, March 13, 2025

ಮಾ.೧೫ರಂದು ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ

    ಭದ್ರಾವತಿ: ಶ್ರೀ ಕ್ಷೇತ್ರ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಾ.೧೫ರಂದು ಮಧ್ಯಾಹ್ನ ೧೨ ಗಂಟೆಗೆ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. 
    ಪ್ರತಿ ವರ್ಷದಂತೆ ಈ ಬಾರಿ ಸಹ ರಥೋತ್ಸವ ಅದ್ದೂರಿಯಾಗಿ ಜರುಗಲಿದ್ದು, ರಥೋತ್ಸವ ನಂತರ ಮಧ್ಯಾಹ್ನ ೧೨.೩೦ಕ್ಕೆ ಅನ್ನ ಸಂತರ್ಪಣೆ ನೆರವೇರಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಶ್ರೀ ವೀರಾಂಜನೇಯ ಸೇವಾ ಸಮಿತಿ ಕೋರಿದೆ. 

ಗಾಂಜಾ ಸೇವನೆ ಪ್ರಕರಣ ದಾಖಲು

ಭದ್ರಾವತಿ: ನಗರದ ನ್ಯೂಟೌನ್ ಗಾಂಧಿ ಉದ್ಯಾನವನ ಸಮೀಪ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ್ದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ. 
ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ರಮೇಶ್‌ರವರು ಮಾ.೧೨ರಂದು ಸಂಜೆ ೬.೩೦ರ ಸಮಯದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಓರ್ವ ವ್ಯಕ್ತಿ ಗಾಂಜಾ ಸೇವನೆ ಮಾಡಿರುವ ಕುರಿತು ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆತನನ್ನು ವಶಕ್ಕೆ ಪಡೆದು ಸಾರ್ವಜನಿಕ ಸರ್ಕಾರಿಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ. 

ರ್‍ಯಾಮ್ಕೋಸ್ ಅಧ್ಯಕ್ಷರಾಗಿ ೨ನೇ ಬಾರಿಗೆ ಎಚ್.ಎಲ್ ಷಡಾಕ್ಷರಿ ಅವಿರೋಧ ಆಯ್ಕೆ

ಮೊದಲ ಬಾರಿಗೆ ಉಪಾಧ್ಯಕ್ಷರಾಗಿ ಮುಸ್ಲಿಂ ಸಮುದಾಯದ ನೂರು ಬೇಗ್ 

ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ(ರ್‍ಯಾಮ್ಕೋಸ್)ದ ಅಧ್ಯಕ್ಷರಾಗಿ ೨ನೇ ಬಾರಿಗೆ ಎಚ್.ಎಲ್ ಷಡಾಕ್ಷರಿ ಹಾಗು ರ್‍ಯಾಮ್ಕೋಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ ನೂರ್ ಬೇಗ್ ಉಪಾಧ್ಯಕ್ಷರಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ಭದ್ರಾವತಿ :  ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ(ರ್‍ಯಾಮ್ಕೋಸ್)ದ ಅಧ್ಯಕ್ಷರಾಗಿ ೨ನೇ ಬಾರಿಗೆ ಎಚ್.ಎಲ್ ಷಡಾಕ್ಷರಿ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ೧೫ ನಿರ್ದೇಶಕರ ಸ್ಥಾನ ಹೊಂದಿರುವ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಎಲ್ ಷಡಾಕ್ಷರಿ ಮತ್ತು ಮಂಜುನಾಥೇಶ್ವರ ನಾಮಪತ್ರ ಸಲ್ಲಿಸಿದ್ದರು. ಅಂತಿಮ ಕ್ಷಣದಲ್ಲಿ ಮಂಜುನಾಥೇಶ್ವರ ಅವರು ನಾಮಪತ್ರ ಹಿಂಪಡೆದ ಹಿನ್ನಲೆಯಲ್ಲಿ ಷಡಾಕ್ಷರಿ ಅವಿರೋಧವಾಗಿ ಆಯ್ಕೆಯಾದರು. ಉಳಿದಂತೆ ಉಪಾಧ್ಯಕ್ಷರಾಗಿ ರ್‍ಯಾಮ್ ಕೋಸ್ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ(ಬಿಸಿಎಂ-ಎ) ನೂರ್ ಬೇಗ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 
    ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಡಿಸಿಸಿ ಬ್ಯಾಂಕ್) ಮಾಜಿ ಉಪಾಧ್ಯಕ್ಷರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾಗಿರುವ ಷಡಾಕ್ಷರಿಯವರು ಈ ಹಿಂದೆ ೨೦೧೫-೧೬ರ ಸಾಲಿನಲ್ಲಿ ೧ ವರ್ಷದ ಅವಧಿಗೆ ರ್‍ಯಾಮ್ಕೋಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 
  ಚುನಾವಣಾ ಅಧಿಕಾರಿಯಾಗಿ ಸಿಡಿಓ ಶಾಂತರಾಜ್ ಕಾರ್ಯನಿರ್ವಹಿಸಿದರು. ಮುಖ್ಯ ವ್ಯವಸ್ಥಾಪಕ ಎಂ. ವಿರುಪಾಕ್ಷಪ್ಪ ಉಪಸ್ಥಿತರಿದ್ದರು. ನಿರ್ದೇಶಕರಾದ ಬಿ.ಜಿ ಜಗದೀಶ್‌ಗೌಡ, ಟಿ. ಅಣ್ಣಪ್ಪ, ಆರ್. ಶ್ರೀನಿವಾಸ್, ಎಂ.ಎಸ್ ಬಸವರಾಜಪ್ಪ, ಎ.ಜಿ ವಿಜಯಕುಮಾರ್, ಲಲಿತಮ್ಮ, ಎನ್.ಪಿ ಅನುಸೂಯಮ್ಮ, ಕೆ.ವಿ ರುದ್ರಪ್ಪ, ಸಿ.ಹನುಮಂತಪ್ಪ, ಎ.ಎಂ ಹರ್ಷ, ಎಚ್.ಎಸ್ ಸಂಜೀವಕುಮಾರ್ ಮತ್ತು ಎಸ್.ಎಂ ಹಾಲೇಶಪ್ಪ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. 
      ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ವಿದ್ಯುತ್ ಇಲಾಖೆ ನಿರ್ವಹಣಾ ಸಮಿತಿ ಸದಸ್ಯ ಬಸವಂತಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ದಶರಥ ಗಿರಿ, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಮುಸ್ವೀರ್ ಬಾಷಾ, ಪಂಚ ಗ್ಯಾರೆಂಟಿಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ್, ಟಿಎಪಿಸಿಎಂಎಸ್ ಸದಸ್ಯ ಲೋಕೇಶ್, ಮುಖಂಡರಾದ ಜೆಬಿಟಿ ಬಾಬು, ಗೌಡರಹಳ್ಳಿ ಶೌಕತ್ ಆಲಿ ಸೇರಿದಂತೆ ಇನ್ನಿತರರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದ್ದಾರೆ. 

ಕಾರ್ಮಿಕರೆಲ್ಲರೂ ಒಂದೇ ಸಂಘಟನೆಯಲ್ಲಿ ಗುರುತಿಸಿಕೊಂಡಾಗ ಸಂಘಟನೆಗೆ ಹೆಚ್ಚು ಬಲ : ಬಿ.ಕೆ ಮೋಹನ್

ಭದ್ರಾವತಿಯಲ್ಲಿ ಅಖಿಲ ಕರ್ನಾಟಕ ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಹಳೇನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದ ಶ್ರೀ ಮಾತಾ ಬನಶಂಕರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕ ಇಲಾಖೆ ಕಲ್ಯಾಣ ಮಂಡಳಿಯ ಕ್ಯಾಲೆಂಡರ್ ವಿತರಣೆ ಹಾಗು ಮಹಿಳಾ ದಿನಾಚರಣೆ ಕಾರ್ಯಕ್ರಮ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿದರು. 
    ಭದ್ರಾವತಿ : ಕಾರ್ಮಿಕರೆಲ್ಲರೂ ಒಂದೇ ಸಂಘಟನೆಯಲ್ಲಿ ಗುರುತಿಸಿಕೊಂಡಾಗ ಸಂಘಟನೆಗೆ ಹೆಚ್ಚು ಬಲ ಬರುವ ಜೊತೆಗೆ ಕಾರ್ಮಿಕರ ಬೇಡಿಕೆಗಳು ತಕ್ಷಣ ಈಡೇರಿಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಸಂಘಟನೆ ಮುಖಂಡರು ಗಮನ ಹರಿಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು. 
    ಅವರು ಗುರುವಾರ ಅಖಿಲ ಕರ್ನಾಟಕ ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಹಳೇನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದ ಶ್ರೀ ಮಾತಾ ಬನಶಂಕರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕ ಇಲಾಖೆ ಕಲ್ಯಾಣ ಮಂಡಳಿಯ ಕ್ಯಾಲೆಂಡರ್ ವಿತರಣೆ ಹಾಗು ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ನಗರದ ಕಾರ್ಮಿಕರಲ್ಲಿ ಬಲಿಷ್ಠ ಸಂಘಟನೆ ಕೊರತೆ ಕಂಡು ಬರುತ್ತಿದ್ದು, ಇದು ವಿಪರ್ಯಾಸದ ಸಂಗತಿಯಾಗಿದೆ. ಯಾವುದೇ ಸಂಘಟನೆ ಬಲಶಾಲಿಯಾಗಿರಬೇಕು. ಆ ಮೂಲಕ ನಮ್ಮ ಹಕ್ಕು, ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದರು. 
ಅಸಂಘಟಿತ ಕಾರ್ಮಿಕರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಕಾರ್ಮಿಕರು ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಲ್ಲದೆ ಕಾರ್ಮಿಕ ಇಲಾಖೆ ಅರ್ಹ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಮುಂದಾಗಬೇಕೆಂದರು. 
    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಮಾತನಾಡಿ, ಅಸಂಘಟಿತ ಕಾರ್ಮಿಕರು ಸರ್ಕಾರದ ಸೌಲಭ್ಯಗಳ ಬಗ್ಗೆ ತಿಳುವಳಿಕೆ ಹೊಂದಬೇಕು.  ಅಸಂಘಟಿತ ಕಾರ್ಮಿಕರ ಪರವಾಗಿ ಕ್ಷೇತ್ರದ ಶಾಸಕರು ಜೊತೆಗಿದ್ದು, ತಮ್ಮ ಹಕ್ಕು, ಬೇಡಿಕೆಗಳನ್ನು ಈಡೇರಿಸಿಕೊಡಲು ಬದ್ಧರಾಗಿದ್ದಾರೆ ಎಂದರು. 
  ಒಕ್ಕೂಟದ ಅಧ್ಯಕ್ಷ ತ್ಯಾಗರಾಜ್ ಅಧ್ಯಕ್ಷತೆವಹಿಸಿ ಮಾತನಾಡಿದರು. ಒಕ್ಕೂಟದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿರ್ಮಲ ಆಸ್ಪತ್ರೆ ಸುಪೇರಿಯರ್ ಸಿಸ್ಟರ್ ವಿಲ್ಮಾ, ಆಶಾಕಾರ್ಯಕರ್ತೆ ರಾಜೇಶ್ವರಿ, ವಲಯ ಅರಣ್ಯಾಧಿಕಾರಿ ದುಗ್ಗಪ್ಪ, ಟೈಲರ್ ಸಂಘದ ಅಧ್ಯಕ್ಷ ಸುಂದರ್, ಪೂರ್ಣಿಮಾ, ಕಾರ್ಮಿಕ ನಿರೀಕ್ಷಕರಾದ ಬಿ.ಎಂ ರಕ್ಷಿತ್ ಮತ್ತು ಸುಪ್ರೀತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಯುವ ಮುಖಂಡ ವಿಜಯ್ ನಿರೂಪಿಸಿದರು. ಒಕ್ಕೂಟದ ತಾಲೂಕು ಕಾರ್ಯಾಧ್ಯಕ್ಷ ಎನ್. ಕುಮಾರ್, ಜಿಲ್ಲಾ ಉಪಾಧ್ಯಕ್ಷ ಸಂಜಯ್, ತಾಲೂಕು  ಕಾರ್ಯದರ್ಶಿಗಳಾದ ಮಧುಸೂದನ್ ಮತ್ತು ಮಧು ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಅಸಂಘಟಿತ ಕಾರ್ಮಿಕರು ಪಾಲ್ಗೊಂಡಿದ್ದರು.