ಭದ್ರಾವತಿ ನಗರಸಭೆ ವತಿಯಿಂದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ: ಪೌರಕಾರ್ಮಿಕರ ಸೇವೆ ಅನನ್ಯವಾಗಿದ್ದು, ಅವರನ್ನು ದೇವರ ಸ್ವರೂಪ ಎಂದು ಭಾವಿಸಿದರೇ ತಪ್ಪಾಗಲಾರದು. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ ಹೇಳಿದರು.
ಅವರು ಶನಿವಾರ ನಗರಸಭೆ ವತಿಯಿಂದ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಪೌರಕಾರ್ಮಿಕರ ಸೇವೆ ಅವಿಸ್ಮರಣೀಯವಾಗಿದೆ. ಅವರ ಬದುಕು ಸಹ ಉತ್ತಮಗೊಳ್ಳಬೇಕು. ಪೌರಕಾರ್ಮಿಕರು ತಮ್ಮ ಆರೋಗ್ಯದ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ಹರಿಸಬೇಕು. ಸರ್ಕಾರ ಪೌರಕಾರ್ಮಿಕರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳು ಪ್ರಾಮಾಣಿಕವಾಗಿ ಅವರಿಗೆ ತಲುಪುವಂತಾಗಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪೌರಾಯುಕ್ತ ಎಚ್.ಎಂ ಮನುಕುಮಾರ್, ಪೌರಕಾರ್ಮಿಕರು ಸಹ ಸಮಾಜದಲ್ಲಿ ನಮ್ಮೆಲ್ಲರಂತೆ ಬದುಕುತ್ತಿದ್ದಾರೆ. ಅವರಿಗೂ ಸಮಾಜದಲ್ಲಿ ಒಂದು ಸ್ಥಾನಮಾನ, ಗೌರವವಿದೆ ಇದನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಪೌರಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ.
ಪೌರಕಾರ್ಮಿಕರು ಇಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಪೌರಕಾರ್ಮಿಕರ ಕೆಲಸ ಪೌರಕಾರ್ಮಿಕರೇ ನಿರ್ವಹಿಸಬೇಕಾಗಿದೆ. ಇದನ್ನು ಬೇರೆಯವರಿಂದ ಮಾಡಲು ಸಾಧ್ಯವಿಲ್ಲ. ಅವರಿಂದಾಗಿ ಸಮಾಜದಲ್ಲಿ ನಾವೆಲ್ಲರೂ ನೆಮ್ಮದಿಯಿಂದ, ಸ್ವಚ್ಛವಾಗಿ, ಆರೋಗ್ಯದಿಂದ ಬದುಕಲು ಸಾಧ್ಯವಾಗಿದೆ. ಅವರಿಗೂ ಸಮಾಜದಲ್ಲಿ ಎಲ್ಲರೂ ಗೌರವ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಹಿರಿಯ ಕಾರ್ಮಿಕರಾದ ಸರೋಜಮ್ಮ ಪೌರ ಸೇವಾ ನೌಕರರ ಸೇವಾ ಸಂಘದ ಉಪಾಧ್ಯಕ್ಷ ಅಬ್ಬಯ್ಯ ಹಾಗೂ ನಗರಸಭೆ ಎಲ್ಲಾ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಂಗಕರ್ಮಿ ಕಿರುತೆರೆ ನಟ ಅಪರಂಜಿ ಶಿವರಾಜ್ ನಿರ್ದೇಶನದಲ್ಲಿ ಪೌರಕಾರ್ಮಿಕರ ಕುರಿತ ನಾಟಕ ಪ್ರದರ್ಶನ ನಡೆಯಿತು.
20 ಪೌರಕಾರ್ಮಿಕರನ್ನು ಸರ್ಕಾರ ಕಾಯಂಗೊಳಿಸಿದ್ದು, ಶಾಸಕ ಬಿ.ಕೆ ಸಂಗಮೇಶ್ವರ ಆದೇಶ ಪ್ರತಿಗಳನ್ನು ವಿತರಿಸಿದರು.
ಪರಿಸರ ಅಭಿಯಂತರ ಪ್ರಭಾಕರ್ ಸ್ವಾಗತಿಸಿದರು ಕಂದಾಯ ಅಧಿಕಾರಿ ರಾಜಕುಮಾರ್ ನಿರೂಪಿಸಿದರು. ಇದಕ್ಕೂ ಮೊದಲು ನಗರದ ರಂಗಪ್ಪ ವೃತ್ತದಿಂದ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದವರಿಗೂ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ವಿಶೇಷವಾಗಿ ಶಾಸಕ ಬಿ.ಕೆ ಸಂಗಮೇಶ್ವರ ಪುಷ್ಪಾವೃಷ್ಟಿಯೊಂದಿಗೆ ಪೌರಕಾರ್ಮಿಕರನ್ನು ಗೌರವಿಸಿದರು.
ಭದ್ರಾವತಿ ನಗರಸಭೆ ವತಿಯಿಂದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಕಾಯಂ ನೇಮಕಾತಿಗೊಂಡ ಪೌರಕಾರ್ಮಿಕರಿಗೆ ಆದೇಶ ಪ್ರತಿಗಳನ್ನು ಶಾಸಕ ಬಿ.ಕೆ ಸಂಗಮೇಶ್ವರ್ ವಿತರಿಸಿದರು.