Thursday, April 29, 2021

ನಗರಸಭೆವತಿಯಿಂದ ವಿವಿಧೆಡೆ ಕೊರೋನಾ ಜಾಗೃತಿ ಕಾರ್ಯಕ್ರಮ

ಭದ್ರಾವತಿ, ಏ. ೨೯: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ನಗರಸಭೆ ಜಾಗೃತಿ ಕಾರ್ಯಪಡೆ ವತಿಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಗುರುವಾರ ಜಾಗೃತಿ ಮೂಡಿಸಲಾಯಿತು.
ಸಾಮಾಜಿಕ ಅಂತರ ಪಾಲಿಸಿ, ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜರ್ ಬಳಸಿ, ಮನೆಯಲ್ಲೇ ಇರೋಣ ಕೊರೋನಾ ತೊಲಗಿಸೋಣ, ಎಲ್ಲರೂ ಕೊರೋನಾ ವಿರುದ್ಧ ಹೋರಾಟ ನಡೆಸೋಣ ಇತ್ಯಾದಿ ಫಲಕಗಳೊಂದಿಗೆ ಸಿದ್ಧರೂಢನಗರದ ಮುಖ್ಯದ್ವಾರದ ಬಳಿ, ಗ್ರಾಮ ದೇವತೆ ಶ್ರೀ ಹಳದಮ್ಮ ದೇವಸ್ಥಾನದ ಮುಂಭಾಗ ಇತ್ಯಾದಿ ಸ್ಥಳಗಳಲ್ಲಿ  ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ನಗರಸಭೆ ವ್ಯವಸ್ಥಾಪಕಿ ಎಂ. ಸುನಿತಾಕುಮಾರಿ, ಲೇಖಾಧಿಕಾರಿ ಸಯ್ಯದ್ ಮೆಹಬೂಬ್ ಆಲಿ,  ಕಂದಾಯಾಧಿಕಾರಿ ರಾಜ್‌ಕುಮಾರ್ ಸೇರಿದಂತೆ ಅಧಿಕಾರಿ ಹಾಗು ಸಿಬ್ಬಂದಿಗಳು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

ಚಿತ್ರ: ಡಿ೨೯-ಬಿಡಿವಿಟಿ೨
ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ನಗರಸಭೆ ಜಾಗೃತಿ ಕಾರ್ಯಪಡೆ ವತಿಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಗುರುವಾರ ಜಾಗೃತಿ ಮೂಡಿಸಲಾಯಿತು.


ನಗರಸಭೆ ೩೪ ವಾರ್ಡ್ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ದತೆ : ಕೋವಿಡ್ ಹಿನ್ನಲೆಯಲ್ಲಿ ಬಿಗಿ ಭದ್ರತೆ

ಬೆಳಿಗ್ಗೆ ೧೦ ಗಂಟೆಯೊಳಗೆ ಫಲಿತಾಂಶ ಪ್ರಕಟ, ಗುಂಪು ಸೇರುವುದು, ಮೆರವಣಿಗೆ ನಡೆಸುವುದು ನಿಷೇಧ


ಭದ್ರಾವತಿ ನಗರಸಭೆ ೩೪ ವಾರ್ಡ್‌ಗಳ ಚುನಾವಣೆ ಮತ ಎಣಿಕೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಚುನಾವಣಾ ನೋಡಲ್ ಅಧಿಕಾರಿಯಾಗಿರುವ ಉಪವಿಭಾಗಾದಿಕಾರಿ ಟಿ.ವಿ ಪ್ರಕಾಶ್ ಮಾತನಾಡಿದರು. 
   ಭದ್ರಾವತಿ, ಏ. ೨೯:  ನಗರಸಭೆ ೩೪ ವಾರ್ಡ್‌ಗಳ ಚುನಾವಣೆ ಮತ ಎಣಿಕೆ ಕಾರ್ಯ ಶುಕ್ರವಾರ ಹಳೇನಗರದ ಸಂಚಿಯಹೊನ್ನಮ್ಮ ಸರ್ಕಾರಿ ಬಾಲಿಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಸಾಧ್ಯವಾದಷ್ಟು ಬೆಳಿಗ್ಗೆ ೧೦ ಗಂಟೆಯೊಳಗೆ ಮತ ಎಣಿಕೆ ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಳಿಸಲು ಪ್ರಯತ್ನಿಸಲಾಗುವುದು ಎಂದು ಚುನಾವಣಾ ನೋಡಲ್ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ತಿಳಿಸಿದರು.
    ಅವರು ಗುರುವಾರ ಪೂರ್ವ ಸಿದ್ದತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕೋವಿಡ್-೧೯ರ ಹಿನ್ನಲೆಯಲ್ಲಿ ಮತ ಎಣಿಕೆ ತ್ವರಿತಗೊಳಿಸಲು ಅನುಕೂಲವಾಗುವಂತೆ ೨ ಹಂತದ ವ್ಯವಸ್ಥೆ ರೂಪಿಸಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಕೊಠಡಿ-೧ರಲ್ಲಿ ಒಟ್ಟು ೭ ಟೇಬಲ್‌ಗಳಿದ್ದು, ವಾರ್ಡ್ ನಂ.೧, ೨, ೩, ೪, ೩೩, ೩೪ ಮತ್ತು ೩೫ರ ಭಾಗ ಸಂಖ್ಯೆ ೧ ರಿಂದ ೧೭ ಮತ್ತು ೧೨೭ ರಿಂದ ೧೩೯ರವರೆಗಿನ ಮತಗಟ್ಟೆಗಳ ಎಣಿಕೆ ಹಾಗು ಕೊಠಡಿ-೨ರಲ್ಲಿ ಒಟ್ಟು ೪ ಟೇಬಲ್‌ಗಳಿದ್ದು, ವಾರ್ಡ್ ನಂ. ೫, ೬, ೭ ಮತ್ತು ೮ರ ಭಾಗ ಸಂಖ್ಯೆ ೧೮ ರಿಂದ ೩೫ರವರೆಗಿನ ಮತಗಟ್ಟೆಗಳ ಎಣಿಕೆ ನಡೆಯಲಿದೆ.
    ಕೊಠಡಿ-೩ರಲ್ಲಿ ಒಟ್ಟು ೩ ಟೇಬಲ್‌ಗಳಿದ್ದು, ವಾರ್ಡ್ ನಂ.೯, ೧೦ ಮತ್ತು ೧೧ರ ಭಾಗ ಸಂಖ್ಯೆ ೩೬ ರಿಂದ ೪೫ರವರೆಗಿನ ಮತಗಟ್ಟೆಗಳ ಎಣಿಕೆ ಮತ್ತು ಕೊಠಡಿ-೪ರಲ್ಲಿ ಒಟ್ಟು ೪ ಟೇಬಲ್‌ಗಳಿದ್ದು, ವಾರ್ಡ್ ನಂ. ೧೨, ೧೩, ೧೪ ಮತ್ತು ೧೫ರ ಭಾಗ ಸಂಖ್ಯೆ ೪೬ ರಿಂದ ೬೧ರವರೆಗಿನ ಮತಗಟ್ಟೆಗಳ ಎಣಿಕೆ ಹಾಗು ಕೊಠಡಿ-೫ರಲ್ಲಿ ಒಟ್ಟು ೩ ಟೇಬ್‌ಲ್‌ಗಳಿದ್ದು, ವಾರ್ಡ್ ನಂ. ೧೬, ೧೭ ಮತ್ತು ೧೮ರ ಭಾಗ ಸಂಖ್ಯೆ ೬೨ ರಿಂದ ೭೩ರ ವರೆಗಿನ ಮತಗಟ್ಟೆಗಳ ಎಣಿಕೆ ನಡಯಲಿದೆ.
     ಇದೆ ರೀತಿ ಎರಡನೇ ಹಂತದಲ್ಲಿ ಕೊಠಡಿ-೧ರಲ್ಲಿ ಒಟ್ಟು ೭ ಟೇಬಲ್‌ಗಳಿದ್ದು, ವಾರ್ಡ್ ನಂ. ೧೯, ೨೦, ೨೧, ೨೨, ೨೩, ೨೪ ಮತ್ತು ೨೫ರ ಭಾಗ ಸಂಖ್ಯೆ ೭೪ ರಿಂದ ೯೮ರ ವರೆಗಿನ ಮತಗಟ್ಟೆಗಳ ಎಣಿಕೆ ಮತ್ತು ಕೊಠಡಿ-೨ರಲ್ಲಿ ಒಟ್ಟು ೪ ಟೇಬಲ್‌ಗಳಿದ್ದು, ವಾರ್ಡ್ ನಂ.೨೬, ೨೭, ೨೮ ಮತ್ತು ೩೦ರ ಭಾಗ ಸಂಖ್ಯೆ ೯೯ ರಿಂದ ೧೧೮ರವರೆಗಿನ ಮತಗಟ್ಟೆಗಳ ಎಣಿಕೆ ಹಾಗು ಕೊಠಡಿ-೩ರಲ್ಲಿ ಒಟ್ಟು ೩ ಟೇಬಲ್‌ಗಳಿದ್ದು, ವಾರ್ಡ್ ನಂ.೩೧ ಮತ್ತು ೩೨ರ ಭಾಗ ಸಂಖೆಯ ೧೧೯ ರಿಂದ ೧೨೬ರ ವರೆಗಿನ ಮತಗಟ್ಟೆಗಳ ಎಣಿಕೆ ನಡೆಯಲಿದೆ ಎಂದರು.
     ಬಹುತೇಕ ವಾರ್ಡ್‌ಗಳ ಮತ ಎಣಿಕೆ ೪ ಸುತ್ತುಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಕೇವಲ ೨ ರಿಂದ ೩ ವಾರ್ಡ್‌ಗಳ ಮತ ಎಣಿಕೆ ಮಾತ್ರ ೫ನೇ ಸುತ್ತು ತಲುಪಲಿದೆ. ಬೆಳಿಗ್ಗೆ ೮ ಗಂಟೆ ನಿಗದಿತ ಸಮಯದಲ್ಲಿ ಎಣಿಕೆ ಆರಂಭಗೊಳ್ಳಲಿದೆ. ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಹೆಚ್ಚಿನ ಜನರು ಸೇರದಂತೆ ಎಚ್ಚರವಹಿಸಲಾಗುತ್ತಿದೆ ಎಂದರು.
      ಎಚ್ಚರ ವಹಿಸಲು ಆರೋಗ್ಯಾಧಿಕಾರಿ ಸೂಚನೆ:
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮಾತನಾಡಿ, ಕೊರೋನಾ ಸೋಂಕು ೨ನೇ ಅಲೆ ತೀವ್ರವಾಗಿ ಹರಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಈ ಹಿನ್ನಲೆಯಲ್ಲಿ ಚುನಾವಣೆ ಮತ ಎಣಿಕೆ ಕಾರ್ಯದಲ್ಲಿ ಪಾಲ್ಗೊಳ್ಳುವವರು ಎಚ್ಚರವಹಿಸುವುದು ಅಗತ್ಯವಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದರು.
         ಪೊಲೀಸ್ ಭದ್ರತೆ :
      ಪೊಲೀಸ್ ಇಲಾಖೆ ವತಿಯಿಂದ ಮತ ಎಣಿಕೆ ಕಾರ್ಯಕ್ಕೆ ಸಂಬಂಧಿಸಿದಂತೆ ೧-ಡಿವೈಎಸ್ಪಿ, ೩-ಸಿಪಿಐ, ೧೪-ಪಿಎಸ್‌ಐ, ೩೦-ಎಪಿಎಸ್‌ಐ, ೧೫೦-ಎಚ್‌ಪಿಸಿ, ೧-ಕೆಎಸ್‌ಆರ್‌ಪಿ ತುಕಡಿ, ೨-ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
     ಮತ ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿ ಅಥವಾ ಅವರ ಪರವಾಗಿ ಓರ್ವ ಏಜೆಂಟರ್‌ಗೆ ಮಾತ್ರ ಅವಕಾಶ ನೀಡಲಾಗಿದ್ದು, ಉಳಿದಂತೆ ಯಾರಿಗೂ ಅವಕಾಶವಿಲ್ಲ. ಕನಕಮಂಟಪ ಮೈದಾನದಲ್ಲಿ ಸಾರ್ವಜನಿಕರು ಸೇರುವಂತಿಲ್ಲ. ಎಲ್ಲೂ ಸಹ ಗುಂಪು ಸೇರುವಂತಿಲ್ಲ. ಮೆರವಣಿಗೆ ನಡೆಸುವಂತಿಲ್ಲ.
     ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ಪೊಲೀಸ್  ಉಪಾಧೀಕ್ಷಕ ಕೃಷ್ಣಮೂರ್ತಿ, ನಗರಸಭೆ ಪೌರಾಯುಕ್ತ ಮನೋಹರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ನಗರವೃತ್ತ ನಿರೀಕ್ಷಕ ರಾಘವೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಭದ್ರಾವತಿ ನಗರಸಭೆ ೩೪ ವಾರ್ಡ್‌ಗಳ ಚುನಾವಣೆ ಮತ ಯಂತ್ರಗಳನ್ನು ಸ್ಟ್ರಾಂಗ್ ರೂಂನಲ್ಲಿ ಬಿಗಿ ಭದ್ರತೆಯಲ್ಲಿಟ್ಟಿರುವುದು.