Friday, August 11, 2023

ಕಸಾಪ ದತ್ತಿ ಕಾರ್ಯಕ್ರಮ : ಅಂಧ ವಿಕಲಚೇತನರಿಂದ ಗೀತ ಗಾಯನ

ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಭದ್ರಾವತಿ ನ್ಯೂಟೌನ್‌ ಲಯನ್ಸ್‌ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ  ಇಎಸ್‌ಐ ಉದ್ಯೋಗಿ ಎಸ್. ಮನೋಜ್‌ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್‌ ಉದ್ಘಾಟಿಸಿದರು.
    ಭದ್ರಾವತಿ, ಆ. ೧೧: ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನ್ಯೂಟೌನ್‌ ಲಯನ್ಸ್‌ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ  ಇಎಸ್‌ಐ ಉದ್ಯೋಗಿ ಎಸ್. ಮನೋಜ್‌ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್‌ ಉದ್ಘಾಟಿಸಿದರು.
    ಸಿದ್ದಾರ್ಥ ಅಂಧರ ಕೇಂದ್ರದ ಮಕ್ಕಳಿಂದ ಗೀತ ಗಾಯನ ನಡೆಯಿತು. ಪರಿಷತ್‌ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ ಅಧ್ಯಕ್ಷತೆ ವಹಿಸಿದ್ದರು.
    ದತ್ತಿ ದಾನಿ ಲಯನ್ಸ್‌ ಎನ್‌. ಶ್ರೀನಿವಾಸ್‌, ಕರ್ನಾಟಕ ಜಾನಪದ ಪರಿಷತ್‌ ಅಧ್ಯಕ್ಷ ಎಂ.ಆರ್‌ ರೇವಣಪ್ಪ, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ರಾಜೇಶ್‌ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಶಾಸಕ ಬಿ.ಕೆ ಸಂಗಮೇಶ್ವರ್‌

ಶಾಸಕ ಬಿ.ಕೆ ಸಂಗಮೇಶ್ವರ್‌
    ಭದ್ರಾವತಿ, ಆ. ೧೧:  ಈ ಹಿಂದೆ ಕಾಂಗ್ರೆಸ್‌-ಜೆಡಿಎಸ್‌ ಸಂಯುಕ್ತ ಸರ್ಕಾರದಲ್ಲಿ ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಶಾಸಕ ಬಿ.ಕೆ ಸಂಗಮೇಶ್ವರ್‌ ಅವರನ್ನು ಈ ಬಾರಿ ವಿಧಾನಸಭೆ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರನ್ನಾಗಿ ಸಭಾಧ್ಯಕ್ಷ ಯು.ಟಿ ಖಾದರ್‌ ನೇಮಕಗೊಳಿಸಿದ್ದಾರೆ.
    ಸಮಿತಿ ಒಟ್ಟು ೧೫ ಸದಸ್ಯರನ್ನು ಒಳಗೊಂಡಿದ್ದು, ಬಿ.ಕೆ ಸಂಗಮೇಶ್ವರ್‌, ಶಾಮನೂರು ಶಿವಶಂಕರಪ್ಪ, ಬಾಲಚಂದ್ರ ಲಕ್ಷ್ಮಣರಾವ್‌, ಪ್ರಭು ಬಿ. ಚೌವ್ಹಾಣ್‌, ಸಿದ್ದು ಸವದಿ, ಗೋಪಾಲಕೃಷ್ಣ ಬೇಳೂರು, ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್‌, ದಿನಕರ್‌ ಕೇಶವ ಶೆಟ್ಟಿ, ಜಾರಕಿಹೊಳಿ, ಚನ್ನಾರೆಡ್ಡಿ ಪಾಟೀಲ ತುನ್ನೂರ, ಅವಿನಾಶ್‌ ಉಮೇಶ್‌ ಜಾಧವ್‌, ಅಶೋಕ್‌ ಕುಮಾರ್‌ ರೈ, ಅಶೋಕ ಮಲ್ಲಪ್ಪ ಮನಗೂಳಿ, ನಾರಾ ಭರತ್‌ರೆಡ್ಡಿ ಮತ್ತು ಎನ್‌.ಟಿ ಶ್ರೀನಿವಾಸ್‌ ಸಮಿತಿ ಸದಸ್ಯರಾಗಿದ್ದಾರೆ.
    ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ ೨೧(೨)ರ ಮೇರೆಗೆ ಸಭಾಧ್ಯಕ್ಷರು ಸಮಿತಿಯನ್ನು ರಚಿಸಿ ಸಂಗಮೇಶ್ವರ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಿದ್ದಾರೆ.
    ಸದನದಲ್ಲಿ ಸದಸ್ಯರುಗಳು ಕೇಳುವ ಪ್ರಶ್ನೆಗಳು, ಗಮನ ಸೆಳೆಯುವ ಸೂಚನೆ, ಶೂನ್ಯ ವೇಳೆ ಚರ್ಚೆ, ಅಧ್ಯಕ್ಷರ ಅಪ್ಪಣೆ ಮೇರೆಗೆ ಚರ್ಚಿಸುವ ಸಂದರ್ಭದಲ್ಲಿ ಸಚಿವರುಗಳು ನೀಡುವ ಭರವಸೆಗಳನ್ನು ಪರಿಶೀಲಿಸುವುದು, ಗರಿಷ್ಠ ೨ ತಿಂಗಳ ಅವಧಿಯಲ್ಲಿ ಕಾರ್ಯಗತಗೊಳಿಸಲಾಗಿದೆಯೇ ಇಲ್ಲವೇ ಎಂಬುದನ್ನು ನಿರ್ಣಯಿಸುವುದು ಹಾಗು ವರದಿ ಮಾಡುವ ಜವಾಬ್ದಾರಿಯನ್ನು ಸಮಿತಿ ಹೊಂದಿದೆ. ಅಲ್ಲದೆ ಕೆಲವು ಭರವಸೆಗಳಲ್ಲಿನ ವಿಷಯಗಳನ್ನಾಧರಿಸಿ ಇಲಾಖೆ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡುವ ಅಧಿಕಾರ ಹೊಂದಿದೆ.
    ಸಚಿವ ಸ್ಥಾನವೂ ಇಲ್ಲ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನವೂ ಇಲ್ಲ:
    ವಿಧಾನಸಭಾ ಕ್ಷೇತ್ರದಿಂದ ೪ನೇ ಬಾರಿಗೆ ಆಯ್ಕೆಯಾಗಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಈ ಬಾರಿ ಸಚಿವ ಸ್ಥಾನ ಲಭಿಸುವ ವಿಶ್ವಾಸ ಆರಂಭದಲ್ಲಿ ಹೊಂದಲಾಗಿತ್ತು. ಆದರೆ ಸಚಿವ ಸ್ಥಾನ ಕೈತಪ್ಪಿ ಹೋಯಿತು. ನಂತರ ಯಾವುದಾದರೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಲಭಿಸುವ ವಿಶ್ವಾಸವಿತ್ತು. ಆದರೆ ಇದೀಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಹ ಕೈತಪ್ಪಿ ಹೋಗುವ ಆತಂಕ ಎದುರಾಗಿದೆ. 

ಲಾರಿಗಳಿಂದ ಡೀಸೆಲ್ ಕಳವು : ಇಬ್ಬರು ಕಳ್ಳರ ಬಂಧನ

ಹಳೇನಗರ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ


ಲಾರಿಗಳಿಂದ ಡೀಸೆಲ್ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
    ಭದ್ರಾವತಿ, ಆ. ೧೧: ಲಾರಿಗಳಿಂದ ಡೀಸೆಲ್ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ  ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
    ಶಿವಮೊಗ್ಗ ಟಿಪ್ಪುನಗರ ನಿವಾಸಿಗಳಾದ ಸೋನು(೨೪) ಮತ್ತು ನೂರುಲ್ಲಾ (೨೪) ಬಂಧಿತರಾಗಿದ್ದು, ಇವರಿಂದ ೧೫ ಸಾವಿರ ರೂ ಮೌಲ್ಯದ ೧೫೦ ಲೀಟರ್ ಡೀಸೆಲ್ ಹಾಗು ಕೃತ್ಯಕ್ಕೆ ಬಳಸಿದ್ದ ಸುಮಾರು ೭ ಲಕ್ಷ ರು. ಮೌಲ್ಯದ ಅಶೋಕ್ ಲೈಲ್ಯಾಂಡ್ ವಾಹನ ವಶಪಡಿಸಿಕೊಳ್ಳಲಾಗಿದೆ.
    ಠಾಣಾ ವ್ಯಾಪ್ತಿಯ ತರೀಕೆರೆ ರಸ್ತೆಯ ಶಿವನಿ ಕ್ರಾಸ್ ನಲ್ಲಿರುವ ಪೆಟ್ರೋಲ್ ಬಂಕ್ ಪಕ್ಕದ ಖಾಲಿ ಜಾಗದಲ್ಲಿ ತಾಲೂಕಿನ ಮಾವಿನಕೆರೆ ನಿವಾಸಿ ಮಹೇಶ್‌ರವರು ತಮ್ಮ ಲಾರಿಯನ್ನು ನಿಲ್ಲಿಸಿದ್ದು,  ಈ ಲಾರಿಯಲ್ಲಿದ್ದ ಡೀಸೆಲ್ ಕಳವು ಮಾಡಲಾಗಿತ್ತು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
    ಈ ಪ್ರಕರಣ ಬೇಧಿಸಲು ಹಿರಿಯ ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಶೈಲ ನೇತೃತ್ವದಲ್ಲಿ ಠಾಣೆಯ ಉಪ ನಿರೀಕ್ಷಕ  ಶರಣಪ್ಪ ಹಂಡ್ರುಗಲ್, ಸಿಬ್ಬಂದಿಗಳಾದ ಎಚ್.ಸಿ ಹಾಲಪ್ಪ, ಮಧುಪ್ರಸಾದ್ ಹಾಗೂ ಸಿಪಿಸಿ ನಾರಾಯಣಸ್ವಾಮಿ, ಮೌನೇಶ್, ರಾಘವೇಂದ್ರ ಮತ್ತು ರುದ್ರಪ್ಪ ಅವನ್ನೊಳಗೊಂಡ ತಂಡ ರಚಿಸಲಾಗಿತ್ತು.
    ೨ ದಿನದಲ್ಲಿ ಪ್ರಕರಣ ಬೇಧಿಸುವಲ್ಲಿ ತಂಡ ಯಶಸ್ವಿಯಾಗಿದ್ದು, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ತಂಡವನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ.