ಹಳೇನಗರ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ
ಲಾರಿಗಳಿಂದ ಡೀಸೆಲ್ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಭದ್ರಾವತಿ, ಆ. ೧೧: ಲಾರಿಗಳಿಂದ ಡೀಸೆಲ್ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಟಿಪ್ಪುನಗರ ನಿವಾಸಿಗಳಾದ ಸೋನು(೨೪) ಮತ್ತು ನೂರುಲ್ಲಾ (೨೪) ಬಂಧಿತರಾಗಿದ್ದು, ಇವರಿಂದ ೧೫ ಸಾವಿರ ರೂ ಮೌಲ್ಯದ ೧೫೦ ಲೀಟರ್ ಡೀಸೆಲ್ ಹಾಗು ಕೃತ್ಯಕ್ಕೆ ಬಳಸಿದ್ದ ಸುಮಾರು ೭ ಲಕ್ಷ ರು. ಮೌಲ್ಯದ ಅಶೋಕ್ ಲೈಲ್ಯಾಂಡ್ ವಾಹನ ವಶಪಡಿಸಿಕೊಳ್ಳಲಾಗಿದೆ.
ಠಾಣಾ ವ್ಯಾಪ್ತಿಯ ತರೀಕೆರೆ ರಸ್ತೆಯ ಶಿವನಿ ಕ್ರಾಸ್ ನಲ್ಲಿರುವ ಪೆಟ್ರೋಲ್ ಬಂಕ್ ಪಕ್ಕದ ಖಾಲಿ ಜಾಗದಲ್ಲಿ ತಾಲೂಕಿನ ಮಾವಿನಕೆರೆ ನಿವಾಸಿ ಮಹೇಶ್‌ರವರು ತಮ್ಮ ಲಾರಿಯನ್ನು ನಿಲ್ಲಿಸಿದ್ದು, ಈ ಲಾರಿಯಲ್ಲಿದ್ದ ಡೀಸೆಲ್ ಕಳವು ಮಾಡಲಾಗಿತ್ತು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ಬೇಧಿಸಲು ಹಿರಿಯ ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಶೈಲ ನೇತೃತ್ವದಲ್ಲಿ ಠಾಣೆಯ ಉಪ ನಿರೀಕ್ಷಕ ಶರಣಪ್ಪ ಹಂಡ್ರುಗಲ್, ಸಿಬ್ಬಂದಿಗಳಾದ ಎಚ್.ಸಿ ಹಾಲಪ್ಪ, ಮಧುಪ್ರಸಾದ್ ಹಾಗೂ ಸಿಪಿಸಿ ನಾರಾಯಣಸ್ವಾಮಿ, ಮೌನೇಶ್, ರಾಘವೇಂದ್ರ ಮತ್ತು ರುದ್ರಪ್ಪ ಅವನ್ನೊಳಗೊಂಡ ತಂಡ ರಚಿಸಲಾಗಿತ್ತು.
೨ ದಿನದಲ್ಲಿ ಪ್ರಕರಣ ಬೇಧಿಸುವಲ್ಲಿ ತಂಡ ಯಶಸ್ವಿಯಾಗಿದ್ದು, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ತಂಡವನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ.
No comments:
Post a Comment