Thursday, October 21, 2021

ಶಿಮೂಲ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಷಡ್ಯಂತ್ರ : ಡಿ. ಆನಂದ್ ಆರೋಪ

ಶಿಮೂಲ್ ಅಧ್ಯಕ್ಷ ಡಿ. ಆನಂದ್  
    ಭದ್ರಾವತಿ, ಅ. ೨೧: ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ, ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಬೆಂಬಲಿಗ ಡಿ. ಆನಂದ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಶುಕ್ರವಾರ ನಡೆಯಲಿದ್ದು, ಈ ನಡುವೆ ನನ್ನನ್ನು ಅಧಿಕಾರದಿಂದ ಕೆಳಗಿಸಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಡಿ. ಆನಂದ್ ಆರೋಪಿಸಿದ್ದಾರೆ.
    ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಆನಂದ್, ೫ ವರ್ಷ ಅವಧಿಯನ್ನು ಹೊಂದಿರುವ ಶಿಮೂಲ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಎಲ್ಲಾ ನಿರ್ದೇಶಕರ ಸಹಕಾರ ಪಡೆದು ಯಾವುದೇ ಷರತ್ತು ಇಲ್ಲದೆ ಅಧ್ಯಕ್ಷನಾಗಿದ್ದೇನೆ. ನಾನು ಅಧಿಕಾರಕ್ಕೆ ಬರುವ ಮೊದಲು ಹಾಲು ಉತ್ಪಾದಕರಿಂದ ಕೇವಲ ಸುಮಾರು ೩.೫ ಲಕ್ಷ ಲೀಟರ್ ಹಾಲನ್ನು ಮಾತ್ರ ಖರೀದಿಸಲಾಗುತ್ತಿತ್ತು. ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ ಹೆಚ್ಚು ಮಾಡುವ ಮೂಲಕ ಸುಮಾರು ೬ ಲಕ್ಷಕ್ಕೂ ಅಧಿಕ ಹಾಲನ್ನು ಖರೀದಿಸುವಂತೆ ಮಾಡಿದ್ದೇನೆ. ಉತ್ಪಾದಕರ ಹಿತ ಕಾಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಈ ರೀತಿಯ ಪ್ರಯತ್ನ ರಾಜ್ಯದಲ್ಲಿ ಈ ಒಕ್ಕೂಟದಲ್ಲಿ ಮಾತ್ರ ನಡೆದಿದ್ದು, ಕೊರೋನಾ ಕಾಲದಲ್ಲೂ ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಅಲ್ಲದೆ ಯಾವುದೇ ಭಷ್ಟಾಚಾರಗಳು ಸಹ ನಡೆದಿಲ್ಲ. ಆದರೂ ಸಹ ನನ್ನನ್ನು ಅಧಿಕಾರದಿಂದ ಕೆಳಗಿಸಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದರು.
    ನಾನು ಅಧಿಕಾರ ವಹಿಸಿಕೊಳ್ಳುವಾಗ ಯಾವುದೇ ರೀತಿಯ ಒಳಒಪ್ಪಂದಗಳು ನಡೆದಿರುವುದಿಲ್ಲ. ಕೆಲವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಬಹಿರಂಗವಾಗಿ ಚರ್ಚೆಗೆ ಬರಲಿ, ದೇವರ ಮುಂದೆ ಪ್ರಮಾಣ ಮಾಡಲಿ. ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ ಅಥವಾ ದುಡ್ಡು ಮಾಡಲು ಅಧಿಕಾರದಲ್ಲಿ ಉಳಿದುಕೊಂಡಿಲ್ಲ. ನನಗೆ ನನ್ನದೆ ಆದ ಸ್ವಾಭಿಮಾನವಿದ್ದು, ನಾನು ಸಹ ಒಬ್ಬ ರೈತನ ಮಗನಾಗಿ ಹಾಲು ಉತ್ಪಾದಕರ ಕಷ್ಟಗಳನ್ನು ಅರಿತುಕೊಂಡಿದ್ದೇನೆ. ಇದೀಗ ಹಾಲು ಉತ್ಪಾದಕರ ಹಿತಕ್ಕಿಂತ ಜಾತಿ ರಾಜಕಾರಣ ಹೆಚ್ಚಾಗಿದೆ. ಅಧಿಕಾರದ ವ್ಯಾಮೋಹದಿಂದ ಒಕ್ಕೂಟ ಹಾಗು ಸರ್ಕಾರದ ಕಾನೂನುಗಳನ್ನು ಗಾಳಿಗೆ ತೂರಿ ನನ್ನನ್ನು ಅಧಿಕಾರದಿಂದ ಕೆಳಗಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರು ತಮ್ಮ ಬೆಂಬಲಿಗ ಆನಂದ್ ಅವರನ್ನು ನಿರ್ದೇಶಕರ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅಪ್ಪಾಜಿಯವರ ಮತ್ತೊಬ್ಬ ಬೆಂಬಲಿಗ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಸೋಲು ಅನುಭವಿಸಿದ್ದರು. ಈ ನಡುವೆ ಆನಂದ್ ಅವರನ್ನು ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಸಹ ಯಶಸ್ವಿಯಾಗಿದ್ದರು. ಅಲ್ಲದೆ ಆನಂದ್ ಅಧ್ಯಕ್ಷರಾಗುವಲ್ಲಿ ಸಹಕಾರಿ ಧುರೀಣ ಆರ್.ಎಂ ಮಂಜುನಾಥಗೌಡರವರು ಸಹ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಒಕ್ಕೂಟದಲ್ಲಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ೩ ಪಕ್ಷದ ನಿರ್ದೇಶಕರುಗಳಿದ್ದು, ಬದಲಾದ ಕಾಲಘಟ್ಟದಲ್ಲಿ ಅಪ್ಪಾಜಿ ಇಲ್ಲದಿರುವುದು ಹೊಸದೊಂದು ತಿರುವಿಗೆ ದಾರಿ ಮಾಡಿಕೊಟ್ಟಿದೆ.

ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಶಿಕ್ಷಕರಿಂದ ಕಪ್ಪುಪಟ್ಟಿ ಧರಿಸಿ ಹೋರಾಟ : ಶಿಕ್ಷಣ ಸಚಿವರಿಗೆ ಮನವಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭದ್ರಾವತಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ  ಗುರುವಾರ ಕಪ್ಪುಪಟ್ಟಿ ಧರಿಸಿ ಹೋರಾಟ ನಡೆಸುವ ಮೂಲಕ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ  ಗುರುವಾರ ಕಪ್ಪುಪಟ್ಟಿ ಧರಿಸಿ ಹೋರಾಟ ನಡೆಸುವ ಮೂಲಕ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
    ಪದವೀಧರ ಶಿಕ್ಷಕರ ಸಮಸ್ಯೆ, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಅವರ ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ೧ ಬಾರಿ ವರ್ಗಾವಣೆ ಮಾಡುವುದು. ಮುಖ್ಯ ಶಿಕ್ಷಕರಿಗೆ ೧೫, ೨೦ ಮತ್ತು ೨೫ ವರ್ಷಗಳ ವೇತನ ಬಡ್ತಿ ನೀಡುವುದು, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು ಹಾಗು ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ ಮತ್ತು  ದೈಹಿಕ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.
ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ನಡುವೆಯೂ ಹೋರಾಟ ನಡೆಸುತ್ತಿದ್ದು, ಒಂದು ವೇಳೆ ಸರ್ಕಾರ ಬೇಡಿಕೆಗಳಿಗೆ  ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು  ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.    
    ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಎನ್ ಸೋಮಶೇಖರಯ್ಯ ಮೂಲಕ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ  ಎಂ. ಎಸ್ ಬಸವರಾಜ್, ಪ್ರಧಾನ ಕಾರ್ಯದರ್ಶಿ ಎಸ್. ಕೆ ಮೋಹನ್,   ಜಿಲ್ಲಾ ಪ್ರಧಾನಕಾರ್ಯದರ್ಶಿ ಶ್ರೀಧರಗೌಡ ವೈ ಎನ್,  ಜಿಲ್ಲಾ ಉಪಾಧ್ಯಕ್ಷರಾದ ಚಿತ್ರ,  ಜೈಕುಮಾರ್ ಎಂ. ಬಿ, ತಾಲ್ಲೂಕು ಉಪಾಧ್ಯಕ್ಷರಾದ ಸುಮತಿ, ರಾಜು, ದೈಹಿಕ ಶಿಕ್ಷಣಾಧಿಕಾರಿ ಪ್ರಭು, ಪದಾಧಿಕಾರಿಗಳಾದ ನಿರ್ಮಲ, ಮಾಯಮ್ಮ, ಶಾರದಮ್ಮ, ಆನಂದ್ ಎಂ. ಸಿ, ಪೃಥ್ವಿರಾಜ್, ಮಲ್ಲಿಕಾರ್ಜುನ್, ಕೋಕಿಲ, ಧಾರತಿ, ನಂಜನಾಯ್ಕ, ಶಿವಕುಮಾರ್, ಪಾಲಾಕ್ಷಪ್ಪ ಇನ್ನಿತರರು ಪಾಲ್ಗೊಂಡಿದ್ದರು.

ನಗರಸಭೆ ನೂತನ ಉಪಾಧ್ಯಕ್ಷ ಚನ್ನಪ್ಪರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನ, ಅಭಿನಂದನೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ದಲಿತ ನೌಕರರ ಒಕ್ಕೂಟ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ರಾಜ್ಯ ವೈಚಾರಿಕ ಸಂಶೋದನಾ ಪರಿಷತ್ತು ಹಾಗು ತಾಲ್ಲೂಕು ಬಡ್ತಿ ಮುಖ್ಯ ಶಿಕ್ಷಕರ ಸಂಘದ ವತಿಯಿಂದ ಭದ್ರಾವತಿ ನೂತನ ನಗರಸಭೆ ಉಪಾಧ್ಯಕ್ಷೆ ಚನ್ನಪ್ಪ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಅ. ೨೧:  ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ದಲಿತ ನೌಕರರ ಒಕ್ಕೂಟ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ರಾಜ್ಯ ವೈಚಾರಿಕ ಸಂಶೋದನಾ ಪರಿಷತ್ತು ಹಾಗು ತಾಲ್ಲೂಕು ಬಡ್ತಿ ಮುಖ್ಯ ಶಿಕ್ಷಕರ ಸಂಘದ ವತಿಯಿಂದ ನೂತನ ನಗರಸಭೆ ಉಪಾಧ್ಯಕ್ಷೆ ಚನ್ನಪ್ಪ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ದಲಿತ ನೌಕರರ ಒಕ್ಕೂಟದ ಅಧ್ಯಕ್ಷೆ ಎಸ್. ಉಮಾ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಸಂಚಾಲಕ ಚಿನ್ನಯ್ಯ,  ದಲಿತ ನೌಕರರ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಸಿ. ಜಯಪ್ಪ, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಪರಿಸರ ಅಭಿಯಂತರ ಪ್ರಭಾಕರ್, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲ್ಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಹಳೆನಗರದ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಇಂದಿರಾ, ಎ. ತಿಪ್ಪೇಸ್ವಾಮಿ, ಪ್ರಸನ್ನ, ನರಸಿಂಹ, ಮಾಯಮ್ಮ, ಶಿವಲಿಂಗಮ್ಮ, ರಾಜಾನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ನೂತನ ಉಪಾಧ್ಯಕ್ಷ ಚನ್ನಪ್ಪನವರು ನಡೆದುಕೊಂಡು ಬಂದ ಹೋರಾಟದ ದಾರಿ, ಜನರ ಬಗೆಗಿನ ಅವರಲ್ಲಿನ ಕಾಳಜಿಯನ್ನು ವಿವರಿಸಿ ಪ್ರಶಂಸೆ ವ್ಯಕ್ತಪಡಿಸಿದರು.  ನರಸಿಂಹಮೂರ್ತಿ ಸ್ವಾಗತಿಸಿದರು. ಲೋಕೇಶ್ ವಂದಿಸಿದರು. ಈಶ್ವರಪ್ಪ ನಿರೂಪಿಸಿದರು.