ಶಿಮೂಲ್ ಅಧ್ಯಕ್ಷ ಡಿ. ಆನಂದ್
ಭದ್ರಾವತಿ, ಅ. ೨೧: ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ, ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಬೆಂಬಲಿಗ ಡಿ. ಆನಂದ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಶುಕ್ರವಾರ ನಡೆಯಲಿದ್ದು, ಈ ನಡುವೆ ನನ್ನನ್ನು ಅಧಿಕಾರದಿಂದ ಕೆಳಗಿಸಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಡಿ. ಆನಂದ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಆನಂದ್, ೫ ವರ್ಷ ಅವಧಿಯನ್ನು ಹೊಂದಿರುವ ಶಿಮೂಲ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಎಲ್ಲಾ ನಿರ್ದೇಶಕರ ಸಹಕಾರ ಪಡೆದು ಯಾವುದೇ ಷರತ್ತು ಇಲ್ಲದೆ ಅಧ್ಯಕ್ಷನಾಗಿದ್ದೇನೆ. ನಾನು ಅಧಿಕಾರಕ್ಕೆ ಬರುವ ಮೊದಲು ಹಾಲು ಉತ್ಪಾದಕರಿಂದ ಕೇವಲ ಸುಮಾರು ೩.೫ ಲಕ್ಷ ಲೀಟರ್ ಹಾಲನ್ನು ಮಾತ್ರ ಖರೀದಿಸಲಾಗುತ್ತಿತ್ತು. ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ ಹೆಚ್ಚು ಮಾಡುವ ಮೂಲಕ ಸುಮಾರು ೬ ಲಕ್ಷಕ್ಕೂ ಅಧಿಕ ಹಾಲನ್ನು ಖರೀದಿಸುವಂತೆ ಮಾಡಿದ್ದೇನೆ. ಉತ್ಪಾದಕರ ಹಿತ ಕಾಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಈ ರೀತಿಯ ಪ್ರಯತ್ನ ರಾಜ್ಯದಲ್ಲಿ ಈ ಒಕ್ಕೂಟದಲ್ಲಿ ಮಾತ್ರ ನಡೆದಿದ್ದು, ಕೊರೋನಾ ಕಾಲದಲ್ಲೂ ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಅಲ್ಲದೆ ಯಾವುದೇ ಭಷ್ಟಾಚಾರಗಳು ಸಹ ನಡೆದಿಲ್ಲ. ಆದರೂ ಸಹ ನನ್ನನ್ನು ಅಧಿಕಾರದಿಂದ ಕೆಳಗಿಸಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದರು.
ನಾನು ಅಧಿಕಾರ ವಹಿಸಿಕೊಳ್ಳುವಾಗ ಯಾವುದೇ ರೀತಿಯ ಒಳಒಪ್ಪಂದಗಳು ನಡೆದಿರುವುದಿಲ್ಲ. ಕೆಲವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಬಹಿರಂಗವಾಗಿ ಚರ್ಚೆಗೆ ಬರಲಿ, ದೇವರ ಮುಂದೆ ಪ್ರಮಾಣ ಮಾಡಲಿ. ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ ಅಥವಾ ದುಡ್ಡು ಮಾಡಲು ಅಧಿಕಾರದಲ್ಲಿ ಉಳಿದುಕೊಂಡಿಲ್ಲ. ನನಗೆ ನನ್ನದೆ ಆದ ಸ್ವಾಭಿಮಾನವಿದ್ದು, ನಾನು ಸಹ ಒಬ್ಬ ರೈತನ ಮಗನಾಗಿ ಹಾಲು ಉತ್ಪಾದಕರ ಕಷ್ಟಗಳನ್ನು ಅರಿತುಕೊಂಡಿದ್ದೇನೆ. ಇದೀಗ ಹಾಲು ಉತ್ಪಾದಕರ ಹಿತಕ್ಕಿಂತ ಜಾತಿ ರಾಜಕಾರಣ ಹೆಚ್ಚಾಗಿದೆ. ಅಧಿಕಾರದ ವ್ಯಾಮೋಹದಿಂದ ಒಕ್ಕೂಟ ಹಾಗು ಸರ್ಕಾರದ ಕಾನೂನುಗಳನ್ನು ಗಾಳಿಗೆ ತೂರಿ ನನ್ನನ್ನು ಅಧಿಕಾರದಿಂದ ಕೆಳಗಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರು ತಮ್ಮ ಬೆಂಬಲಿಗ ಆನಂದ್ ಅವರನ್ನು ನಿರ್ದೇಶಕರ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅಪ್ಪಾಜಿಯವರ ಮತ್ತೊಬ್ಬ ಬೆಂಬಲಿಗ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಸೋಲು ಅನುಭವಿಸಿದ್ದರು. ಈ ನಡುವೆ ಆನಂದ್ ಅವರನ್ನು ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಸಹ ಯಶಸ್ವಿಯಾಗಿದ್ದರು. ಅಲ್ಲದೆ ಆನಂದ್ ಅಧ್ಯಕ್ಷರಾಗುವಲ್ಲಿ ಸಹಕಾರಿ ಧುರೀಣ ಆರ್.ಎಂ ಮಂಜುನಾಥಗೌಡರವರು ಸಹ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಒಕ್ಕೂಟದಲ್ಲಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ೩ ಪಕ್ಷದ ನಿರ್ದೇಶಕರುಗಳಿದ್ದು, ಬದಲಾದ ಕಾಲಘಟ್ಟದಲ್ಲಿ ಅಪ್ಪಾಜಿ ಇಲ್ಲದಿರುವುದು ಹೊಸದೊಂದು ತಿರುವಿಗೆ ದಾರಿ ಮಾಡಿಕೊಟ್ಟಿದೆ.
No comments:
Post a Comment