Saturday, May 6, 2023

ಬಿ.ಕೆ ಸಂಗಮೇಶ್ವರ್‌ಗೆ ಹೆಚ್ಚಿನ ಮತಗಳ ಅಂತರದ ಗೆಲುವು : ಅಲ್ಪಸಂಖ್ಯಾತ ಮುಖಂಡರ ವಿಶ್ವಾಸ

ಭದ್ರಾವತಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಮಾತನಾಡಿದರು.
    ಭದ್ರಾವತಿ, ಮೇ. ೬ : ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಬಿ.ಕೆ ಸಂಗಮೇಶ್ವರ್ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆಂದು ಪಕ್ಷದ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.
    ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಕ್ಷೇತ್ರದಾದ್ಯಂತ ಶಾಸಕರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಾಸಕರು  ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡುವ ಜೊತೆಗೆ ಅವರ ಹಿತಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಅಲ್ಪಸಂಖ್ಯಾತ ಮುಖಂಡರೆಲ್ಲರೂ ಒಗ್ಗಟ್ಟಾಗಿದ್ದು, ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸುತ್ತಿದ್ದು, ರಾಜ್ಯಾದ್ಯಂತ ಪಕ್ಷಕ್ಕೆ ವ್ಯಾಪಕ ಬೆಂಬಲವಾಗುತ್ತಿದೆ. ಈ ಬಾರಿ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಶಾಸಕರು ಮಂತ್ರಿಯಾಗಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
    ಪತ್ರಿಕಾಗೋಷ್ಠಿಯಲ್ಲಿ ಸಿ.ಎಂ ಖಾದರ್, ಫೀರ್‌ಷರೀಫ್, ಅಮೀರ್‌ಜಾನ್, ಜಹೀರ್‌ಜಾನ್, ಅಂತೋಣಿ ವಿಲ್ಸನ್, ದಿಲ್‌ದಾರ್, ಜೆಬಿಟಿ ಬಾಬು, ಅಬುದಾಲಿ, ಬಷೀರ್ ಅಹಮದ್, ಅಖಿಲ್ ಅಹಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮತದಾರರ ಜಾಗೃತ ವೇದಿಕೆಯಿಂದ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ

ಭದ್ರಾವತಿಯಲ್ಲಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮತದಾರರ ಜಾಗೃತ ವೇದಿಕೆ ಪ್ರಮುಖರು ಶನಿವಾರ ಶಾರದ ಅಪ್ಪಾಜಿಯವರಿಗೆ ಹೂವಿನ ಹಾರ ಹಾಕುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.
    ಭದ್ರಾವತಿ, ಮೇ. ೬: ಕ್ಷೇತ್ರದಲ್ಲಿ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರನ್ನು ಗುರುತಿಸಿ ಅವರ ಏಳಿಗೆಗಾಗಿ ಶ್ರಮಿಸಿದ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರನ್ನು ಎಂದಿಗೂ ಮೆರಯಲು ಸಾಧ್ಯವಿಲ್ಲ. ಪ್ರಸ್ತುತ ಚುನಾವಣೆಯಲ್ಲಿ ಅವರ ಪತ್ನಿ ಶಾರದ ಅಪ್ಪಾಜಿಯವರು ಸ್ಪರ್ಧಿಸಿದ್ದು, ಅವರಿಗೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮತದಾರರ ಜಾಗೃತ ವೇದಿಕೆ ತಿಳಿಸಿದೆ.
    ಇತ್ತೀಚಿನ ವರ್ಷಗಳಲ್ಲಿ ಆಡಳಿತಾರೂಢ ಯಾವುದೇ ರಾಜಕೀಯ ಪಕ್ಷಗಳು ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯದ ಹಿತ ಕಾಪಾಡುವಲ್ಲಿ ವಿಫಲವಾಗಿವೆ. ಕೇವಲ ಓಟ್‌ಬ್ಯಾಂಕ್ ಓಲೈಕೆಯ ರಾಜಕಾರಣದಲ್ಲಿ ತೊಡಗಿರುವುದು ಜಗಜಾಹೀರವಾಗಿದೆ. ರಾಜಕೀಯ ಪಕ್ಷಗಳ ಇಂತಹ ನಿರ್ಲಕ್ಷ ಧೋರಣೆ ಒಂದೆಡೆಯಾದರೆ, ಶಾಸನಸಭೆಗೆ ಆರಿಸಿಹೋಗುವ ಜನಪ್ರತಿನಿಧಿಗಳು ಸಹ ತಮ್ಮ ವ್ಯಾಪ್ತಿಯಲ್ಲಿ ಈ ಸಮುದಾಯಗಳ ಬಗ್ಗೆ ಅಸಡ್ಡೆತನ ತೋರುತ್ತಿರುವುದು ಶೋಚನೀಯವಾದ ಸಂಗತಿಯಾಗಿದೆ. ಆಳುವ ಸರ್ಕಾರಗಳಿಗೆ ಎಚ್ಚರಿಸಲು, ಜನಪ್ರತಿನಿಧಿಗಳಿಗೆ ಚುರುಕು ಮುಟ್ಟಿಸಲು ಇದು ಸಕಾಲವಾಗಿದ್ದು, ಭವಿಷ್ಯದ ಹಿತದೃಷ್ಟಿಯಿಂದ ಯೋಚಿಸಿ ಮತಚಲಾಯಿಸಬೇಕಾಗಿದೆ.
    ಪಕ್ಷ ರಾಜಕಾರಣಕ್ಕಿಂತ ವ್ಯಕ್ತಿಪ್ರತಿಷ್ಠೆ ಕಣವಾಗಿರುವ ಕ್ಷೇತ್ರದಲ್ಲಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯಗಳಿಗೆ ರಾಜಕೀಯವಾಗಿ ಪ್ರಾತಿನಿದ್ಯ ನೀಡಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರು ಕಳೆದ ೩೦ ವರ್ಷಗಳ ಅವಧಿಯಲ್ಲಿ ಗುರುತಿಸಿರುವುದು ಸೂಕ್ಷ್ಮವಾಗಿ ಗಮನಿಸಬಹುದಾಗಿದೆ.
    ಕ್ಷೇತ್ರದಲ್ಲಿ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ಹಲವು ಮಂದಿ ರಾಜಕೀಯ ಸ್ಥಾನಮಾನ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ. ಮರಾಠ,  ತಮಿಳು, ತೆಲುಗು, ನಾಯ್ಡು, ದೇವಾಂಗ, ಭಾವಸಾರ, ಉಪ್ಪಾರ, ಮಡಿವಾಳ, ಬಲಿಜ, ಶೆಟ್ಟಿ, ಕುಂಬಾರ, ಮೇದಾರ, ಗಂಗಾಮತಸ್ಥ, ಸವಿತಾ ಸಮಾಜ, ಭೋವಿ, ಲಂಬಾಣಿ, ವಿಶ್ವಕರ್ಮ, ಕಾಟಿಕ್ ಸಮಾಜ, ರಜಪೂತ್, ಆರ್ಯವೈಶ್ಯ, ಜೈನ ಸಮಾಜ, ಪರಿಶಿಷ್ಟ ಜಾತಿ/ಪಂಗಡ ಹಾಗು ಇತರೆ ೧೦೮ ಜಾತಿ, ವರ್ಗಗಳನ್ನು ಅಪ್ಪಾಜಿಯವರು ಗುರುತಿಸಿ ಬೆಳೆಸಿದ ಪರಿಣಾಮ ಶಾರದ ಅಪ್ಪಾಜಿಯವರಿಗೆ ಈ ಚುನಾವಣೆಯಲ್ಲಿ ಬೆಂಬಲ ಸೂಚಿಸುವ ಮೂಲಕ ಅವರ ಗೆಲುವಿಗೆ ಶ್ರಮಿಸುವುದಾಗಿ ವೇದಿಕೆ ಸಂಚಾಲಕರು ತಿಳಿಸಿದ್ದಾರೆ.
    ವೇದಿಕೆ ಪ್ರಮುಖರು ಶನಿವಾರ ಶಾರದ ಅಪ್ಪಾಜಿಯವರಿಗೆ ಹೂವಿನ ಹಾರ ಹಾಕುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಪ್ರಮುಖರಾದ ಸುರೇಶ್, ಮಹಮದ್ ಸನ್ನಾವುಲ್ಲಾ, ಎಚ್.ಎಸ್ ಸಂಜೀವಕುಮಾರ್, ಕರಿಯಪ್ಪ, ಶಿವಾಜಿರಾವ್ ಗಾಯಕ್‌ವಾಡ್, ಎನ್ ಕೃಷ್ಣಪ್ಪ, ವಿಶ್ವೇಶ್ವರ ಗಾಯಕ್‌ವಾಡ್, ಡಿ.ಟಿ ಶ್ರೀಧರ, ಲೋಕೇಶ್ವರ್‌ರಾವ್, ಎನ್. ರಾಮಕೃಷ್ಣ, ವಿಜಯ, ವಿಶಾಲಾಕ್ಷಿ, ಬಸವರಾಜ ಬಿ ಆನೇಕೊಪ್ಪ, ಉದಯ್ ಕುಮಾರ್, ಆನಂದ್, ತ್ಯಾಗರಾಜ್, ಅಮೋಸ್, ಧರ್ಮರಾಜ್, ವಸಂತ, ವೆಂಕಟೇಶ್ ಉಜ್ಜನಿಪುರ, ಸುಬ್ಬಣ್ಣ, ಮಂಜುನಾಥ್, ಎ. ಮಸ್ತಾನ್, ಅಜ್ಮಲ್, ಸವೂದ್, ನಸರುಲ್ಲ, ತಬ್ರೇಸ್ ಖಾನ್, ಅಂತೋಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಭಿವೃದ್ಧಿಗೆ ಮುಂದಡಿಯೊಂದಿಗೆ ಹಲವು ಭರವಸೆಗಳ ಪ್ರಣಾಳಿಕೆ

ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಈಡೇರಿಸುವ ವಿಶ್ವಾಸ

ಭದ್ರಾವತಿಯಲ್ಲಿ ಜಾತ್ಯತೀತ ಜನತಾದಳ ವತಿಯಿಂದ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಹಲವು ಭರವಸೆಗಳ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು. 
    ಭದ್ರಾವತಿ, ಮೇ. ೬: ಸಾಧಿಸಿದ್ದೇವೆ ಸಾಕಷ್ಟು-ಮಾಡಬೇಕಾಗಿದೆ ಮತ್ತಷ್ಟು, ಈಡೇರಿಸಿದ್ದೇವೆ ನೂರಾರು-ಇನ್ನೂ ಉಳಿದಿದೆ ಹಲವಾರು. ಅಪ್ಪಾಜಿ ಅಭಿವೃದ್ಧಿಯ ಹಾದಿಯಲ್ಲಿ ಶಾರದ ಅಪ್ಪಾಜಿ ಮುಂದಡಿ ಎಂಬ ಶೀರ್ಷಿಕೆಯೊಂದಿಗೆ ಶನಿವಾರ ಜ್ಯಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪ್ರಣಾಳಿಕೆ ಬಿಡುಗಡೆಗೊಳಿಸಿದರು.
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿವೆ ಎಂದರು.
    ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಹೊಸಸೇತುವೆ(ಮುಳುಗು ಸೇತುವೆ)ಗೆ ಪರ್ಯಾಯವಾಗಿ ಸುಭದ್ರವಾದ ಸೇತುವೆ ನಿರ್ಮಿಸುವುದು. ಡಾ. ಬಿ.ಆರ್ ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿಯನ್ನು ಸುಮಾರು ೧೦ ಕೋ. ರು. ಅನುದಾನದಲ್ಲಿ ಸುಸಜ್ಜಿತ ಮೂಲ ಸೌಕರ್ಯ ಕಲ್ಪಿಸಿ ಪೂರ್ಣಗೊಳಿಸುವುದು. ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳ ಸಬಲೀಕರಣ, ಬಾಕಿಯರಿಗೆ ಸುಸಜ್ಜಿತ ಶೌಚಾಲಯ ಹಾಗು ವಿಶ್ರಾಂತಿ ಕೊಠಡಿಗಳ ನಿರ್ಮಾಣ. ನೆನೆಗುದಿಗೆ ಬಿದ್ದಿರುವ ದೊಣಬಘಟ್ಟ-ಕೆ.ಕೆ ಮಗ್ಗಿ ಸಂಪರ್ಕ ಸೇತುವೆ ನಿರ್ಮಾಣ ಯೋಜನೆ ಸಾಕಾರಗೊಳಿಸುವುದು ಹಾಗು ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಪುನಶ್ಚೇತನ, ಮಹಿಳೆಯರಿಗಾಗಿ ಗಾರ್ಮೆಂಟ್ಸ್ ಫ್ಯಾಕ್ಟರಿ ಸ್ಥಾಪನೆ, ಸಣ್ಣ ಕೈಗಾರಿಕಾ ಘಟಕಗಳ ಸ್ಥಾಪನೆ ಮೂಲಕ ಉದ್ಯೋಗಾವಕಾಶ ಕಲ್ಪಿಸುವುದು ಸೇರಿದಂತೆ ಇನ್ನಿತರ ಭರವಸೆಗಳನ್ನು ನೀಡಲಾಗಿದೆ.
    ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಪ್ರಮುಖರಾದ ಸುರೇಶ್, ಮಹಮದ್ ಸನ್ನಾವುಲ್ಲಾ, ಎಚ್.ಎಸ್ ಸಂಜೀವಕುಮಾರ್, ಕರಿಯಪ್ಪ, ಶಿವಾಜಿರಾವ್ ಗಾಯಕ್‌ವಾಡ್, ಎನ್ ಕೃಷ್ಣಪ್ಪ, ವಿಶ್ವೇಶ್ವರ ಗಾಯಕ್‌ವಾಡ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.  

ಅಭ್ಯರ್ಥಿಗಳಿಂದ ಕಾರ್ಖಾನೆಗಳನ್ನು ಉಳಿಸಿಕೊಳ್ಳುವ ಒಮ್ಮತದ ನಿರ್ಣಯ


ಭದ್ರಾವತಿ, ಮೇ. 6 : ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ವತಿಯಿಂದ ಶನಿವಾರ  ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಮತದಾನ ಜಾಗೃತಿ ಮತ್ತು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.  
       ಪ್ರಮುಖವಾಗಿ ಮೈಸೂರು ಕಾಗದ ಕಾರ್ಖಾನೆ ಪುನರ್ ಆರಂಭಿಸುವುದು, ವಿಐಎಸ್ಎಲ್ ಅಭಿವೃದ್ಧಿಪಡಿಸುವುದು ಸೇರಿದಂತೆ  ಇನ್ನಿತರ ವಿಚಾರಗಳ ಕುರಿತು ಚರ್ಚಿಸಲಾಯಿತು. ಅಭ್ಯರ್ಥಿಗಳು  ಎರಡೂ ಕಾರ್ಖಾನೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಮ್ಮತದ ನಿರ್ಣಯ ಕೈಗೊಂಡರು.
     ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿಕೆ ಸಂಗಮೇಶ್, ಜೆಡಿಯು  ಅಭ್ಯರ್ಥಿ ಶಶಿಕುಮಾರ್ ಎಸ್ ಗೌಡ, ಪಕ್ಷೇತರ ಅಭ್ಯರ್ಥಿಗಳಾದ ಸುಮಿತ್ರ ಬಾಯಿ, ಬಿ.ಎನ್ ರಾಜು ಮತ್ತು ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ ಉಪಸ್ಥಿತರಿದ್ದರು.