Thursday, February 3, 2022

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗೆ ದಿನಾಂಕ, ವೇಳೆ ನಿಗದಿಪಡಿಸಿ

ಅಕ್ರಮವಾಗಿ ಪಡಿತರ ಮಾರಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿರುವ ಮಾಲೀಕನ ಪರವಾನಗಿ ರದ್ದುಪಡಿಸಿ

ಭದ್ರಾವತಿ ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ದಿನಾಂಕ ಹಾಗು ವೇಳೆಯಲ್ಲಿ ಪಡಿತರ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಗುರುವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೩: ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ದಿನಾಂಕ ಹಾಗು ವೇಳೆಯಲ್ಲಿ ಪಡಿತರ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಗುರುವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಕಳೆದ ಕೆಲವು ದಿನಗಳ ಹಿಂದೆ ನಗರಸಭೆ ವ್ಯಾಪ್ತಿಯ ಸಿದ್ದಾಪುರ ತಾಂಡದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ದಾಳಿ ನಡೆಸಿ ವಶಪಡಿಸಿಕೊಂಡಿರುವುದಕ್ಕೆ ಕ್ಷೇತ್ರದ ನಾಗರೀಕರ ಪರವಾಗಿ ಪಕ್ಷ ತಹಸೀಲ್ದಾರ್ ಪ್ರದೀಪ್ ಆರ್ ನಿಕ್ಕಮ್ ಅವರನ್ನು ಅಭಿನಂದಿಸುವ ಜೊತೆಗೆ ಕ್ಷೇತ್ರದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ದಿನಾಂಕ ಹಾಗು ವೇಳೆಯಲ್ಲಿ ಪಡಿತರ ವಿತರಿಸುತ್ತಿಲ್ಲ. ಇದರಿಂದಾಗಿ ನಾಗರೀಕರು ಪಡಿತರ ಪಡೆಯಲು ತೊಂದರೆ ಅನುಭವಿಸುವಂತಾಗಿದೆ. ವಿತರಕರು ನಿಗದಿಪಡಿಸುವ ದಿನಾಂಕ ಹಾಗು ವೇಳೆ ಎದುರು ನೋಡುವಂತೆ ಮತ್ತು ದಿನವಿಡೀ ಸರದಿ ಸಾಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
    ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ತಾಲೂಕು ಸಂಚಾಲಕ ಅಬ್ದುಲ್ ಖದೀರ್ ಮತ್ತು ಜಿಲ್ಲಾ ಮುಖಂಡ ಡಿ.ಎಸ್ ಪರಮೇಶ್ವರಚಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
        ಅಂಗಡಿ ಮಾಲೀಕನ ಪರವಾನಗಿ ರದ್ದು ಮಾಡಿ:
    ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಮಾರಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿರುವ ಸಿದ್ದಾಪುರ ತಾಂಡದ ನ್ಯಾಯಬೆಲೆ ಅಂಗಡಿ ಮಾಲೀಕನ ಪರವಾನಗಿ ತಕ್ಷಣ ರದ್ದುಪಡಿಸುವಂತೆ ಆಗ್ರಹಿಸಿ ಜನತಾದಳ(ಸಂಯುಕ್ತ) ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಗುರುವಾರ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ  ಹೋರಾಟ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
    ಅಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಲಾಗಿದ್ದ ಅಕ್ಕಿಯನ್ನು ಬುಲೆರೋ ವಾಹನದಲ್ಲಿ ಸಾಗಿಸಲು ಯತ್ನಿಸಿ ಸ್ಥಳೀಯರ ಎದುರು ಸಿಕ್ಕಿಬಿದ್ದಿದ್ದು, ಅಲ್ಲದೆ ನ್ಯಾಯಬೆಲೆ ಅಂಗಡಿ ಮಾಲೀಕ ಯೋಗೇಶ್ ನಾಯ್ಕ ಮತ್ತು ಬುಲೆರೋ ವಾಹನದ ಚಾಲಕ ಪರಾರಿಯಾಗಿದ್ದಾರೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ಇವೆಲ್ಲವನ್ನು ಗಮನಿಸಿದಾಗ ಪಡಿತರ ಚೀಟಿದಾರರಿಗೆ ಉದ್ದೇಶ ಪೂರ್ವಕವಾಗಿ ವಂಚಿಸಿರುವುದು ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ತಕ್ಷಣ ಅಂಗಡಿ ಮಾಲೀಕನ ಪರವಾನಗಿ ರದ್ದುಪಡಿಸುವಂತೆ ಆಗ್ರಹಿಸಿದ್ದಾರೆ.  ಗ್ರಾಮಸ್ಥರಾದ ರಮೇಶ್, ಮಂಜುನಾಥ್ ಮತ್ತು ನಾಗರಾಜ್ ಉಪಸ್ಥಿತರಿದ್ದರು.


ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಮಾರಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿರುವ ಭದ್ರಾವತಿ ಸಿದ್ದಾಪುರ ತಾಂಡದ ನ್ಯಾಯಬೆಲೆ ಅಂಗಡಿ ಮಾಲೀಕನ ಪರವಾನಗಿ ತಕ್ಷಣ ರದ್ದುಪಡಿಸುವಂತೆ ಆಗ್ರಹಿಸಿ ಜನತಾದಳ(ಸಂಯುಕ್ತ) ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಗುರುವಾರ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ  ಹೋರಾಟ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.

ಕೆಎಸ್‌ಆರ್‌ಟಿಸಿ ಘಟಕದಲ್ಲಿ ಶ್ರೀ ಚೌಡೇಶ್ವರಿ ದೇವಿ ವಾರ್ಷಿಕ ಮಹೋತ್ಸವ

ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಘಟಕದಲ್ಲಿ ಗುರುವಾರ ಶ್ರೀ ಚೌಡೇಶ್ವರಿ ದೇವಿ ವಾರ್ಷಿಕ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡು ದೇವಿಗೆ ಪೂಜೆ ಸಲ್ಲಿಸುವ ಮೂಲಕ ಭಕ್ತರಿಗೆ ಆಶೀರ್ವದಿಸಿದರು.
    ಭದ್ರಾವತಿ, ಫೆ. ೩: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಘಟಕದಲ್ಲಿ ಗುರುವಾರ ಶ್ರೀ ಚೌಡೇಶ್ವರಿ ದೇವಿ ವಾರ್ಷಿಕ ಮಹೋತ್ಸವ ಅದ್ದೂರಿಯಾಗಿ ಜರುಗಿತು.
    ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ, ಅಲಂಕಾರ, ಹೋಮ-ಹವನ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಘಟಕದ ವ್ಯವಸ್ಥಾಪಕಿ ಅಂಬಿಕಾ ಸುದೇಂದ್ರ ಮಹೋತ್ಸವದ ನೇತೃತ್ವ ವಹಿಸಿದ್ದರು. ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡು ಶ್ರೀ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಭಕ್ತರಿಗೆ ಆಶೀರ್ವದಿಸಿದರು.
ಘಟಕದ ಅಧಿಕಾರಿಗಳು, ಸಿಬ್ಬಂದಿಗಳು, ಚಾಲಕರು, ನಿರ್ವಾಹಕರು ಹಾಗು ಕುಟುಂಬ ವರ್ಗದವರು ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ಮಂಗಳ ವಾದ್ಯ ಕಲಾವಿದರ ಸಮುದಾಯ ಭವನ ನಿವೇಶನ ಖರೀದಿಗೆ ೧ ಲಕ್ಷ ರು. ದೇಣಿಗೆ : ಶಾಸಕ ಬಿ.ಕೆ ಸಂಗಮೇಶ್ವರ್

ಭದ್ರಾವತಿ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನ ಮುಂಭಾಗದಲ್ಲಿರುವ ಶ್ರೀ ರಾಮ ದೇವಾಸ್ಥಾನದಲ್ಲಿ ತಾಲೂಕು ಸವಿತಾ ಸಮಾಜ ಮಂಗಳ ವಾದ್ಯ ಕಲಾವಿದರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೭ನೇ ವರ್ಷ ಶ್ರೀ ತ್ಯಾಗರಾಜ ಸ್ವಾಮಿ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.   
    ಭದ್ರಾವತಿ, ಫೆ. ೩: ಮಂಗಳ ವಾದ್ಯ ಕಲಾವಿದರ ಸಮುದಾಯ ಭವನಕ್ಕೆ ನಿವೇಶನ ಖರೀದಿಸಲು ವೈಯಕ್ತಿಕವಾಗಿ ೧ ಲಕ್ಷ ರು. ದೇಣಿಗೆ ನೀಡುವ ಜೊತೆಗೆ ೧೦ ಲಕ್ಷ ರು. ಅನುದಾನ ಬಿಡುಗಡೆಗೊಳಿಸುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು.
    ಅವರು ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನ ಮುಂಭಾಗದಲ್ಲಿರುವ ಶ್ರೀ ರಾಮ ದೇವಾಸ್ಥಾನದಲ್ಲಿ ತಾಲೂಕು ಸವಿತಾ ಸಮಾಜ ಮಂಗಳ ವಾದ್ಯ ಕಲಾವಿದರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೭ನೇ ವರ್ಷ ಶ್ರೀ ತ್ಯಾಗರಾಜ ಸ್ವಾಮಿ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಶುಭ ಸಮಾರಂಭಗಳಲ್ಲಿ ಮಂಗಳ ವಾದ್ಯ ಕಲಾವಿದರ ಕೊಡುಗೆ ಅನನ್ಯವಾಗಿದ್ದು, ವೃತ್ತಿ ಬದುಕಿನ ಜೊತೆಗೆ ಕಲಾ ಸೇವೆಯಲ್ಲಿ ತೊಡಗಿರುವುದು ಹೆಮ್ಮೆಯ ವಿಚಾರವಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕಲ್ಪಿಸಿಕೊಡುವ ಜೊತೆಗೆ ವೈಯಕ್ತಿಕವಾಗಿ ಸಹ ಸಾಧ್ಯವಾದಷ್ಟು ನೆರವು ಕಲ್ಪಿಸಿ ಕೊಡುವ ಮೂಲಕ ಸಂಕಷ್ಟಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
    ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಮಾತನಾಡಿ, ಮಂಗಳ ವಾದ್ಯಕ್ಕೆ ಮನಸ್ಸಿನಲ್ಲಿನ ನೋವುಗಳನ್ನು ದೂರ ಮಾಡುವ ಅದ್ಭುತ ಶಕ್ತಿ ಇದೆ. ಶುಭ ಸಮಾರಂಭಗಳಲ್ಲಿ ಪ್ರತಿಯೊಬ್ಬರ ಮನಸ್ಸಿಗೆ ನೆಮ್ಮದಿ ನೀಡುವ ಮಂಗಳ ವಾದ್ಯಕ್ಕೆ ಇಂದಿಗೂ ಹೆಚ್ಚಿನ ಮಹತ್ವವಿದೆ. ಈ ಕಲಾವಿದರ ಬದುಕು ವಿಭಿನ್ನವಾಗಿದ್ದು, ಸಮಾಜದಲ್ಲಿ ಯಾರೊಂದಿಗೂ ಸಂಘರ್ಷಕ್ಕೆ ಇಳಿಯದೆ ತಮ್ಮಷ್ಟಕ್ಕೆ ತಾವು ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ಕಲಾವಿದರಿಗೆ ಸಂಕಷ್ಟಗಳಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಗರಸಭೆ ವತಿಯಿಂದ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನ ಕಲ್ಪಿಸಿ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
    ಸಂಘದ ಅಧ್ಯಕ್ಷ ಪಿ. ವರದರಾಜು(ಮಹೇಶ್) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷರಾದ ಗೋವಿಂದರಾಜು, ಎನ್. ರಮೇಶ್, ಪ್ರಧಾನ ಕಾರ್ಯದರ್ಶಿ ತುಳಸಿ ಏಳುಮಲೈ, ಖಜಾಂಚಿ ಬೊಮ್ಮನಕಟ್ಟೆ ಚನ್ನಯ್ಯ, ಗೌರವ ಸಲಹೆಗಾರರಾದ ಗಣೇಶ್, ಅರುಳಲಿಂಗಂ, ಡೋಲು ರಾಜಣ್ಣ, ರಮೇಶ್, ಹೊನ್ನಟ್ಟಿ ಹೊಸೂರು ರಾಜಣ್ಣ, ಪ್ರಕಾಶ್, ಸುರೇಶ್, ಶ್ರೀನಿವಾಸ, ಹಂಸಲಿಂಗಂ, ಶಿವಶಂಕರ್, ಜನ್ನಾಪುರ ಮಹೇಶ್, ರವಿಚಂದ್ರ, ಏಳುಮಲೈ, ಮೂರ್ತಿ,  ಸವಿತಾ ಸಮಾಜ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಸ್ ರಮೇಶ್,  ತಾಲೂಕು ಉಪಾಧ್ಯಕ್ಷ ಜಿ. ವೆಂಕಟೇಶ್, ಮಾಜಿ ಅಧ್ಯಕ್ಷ ಎಂ. ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.