Friday, March 10, 2023

ಮಾ.11ರಂದು ನವೀಕೃತ ಪತ್ರಿಕಾಭವನ ಉದ್ಘಾಟನೆ



ಮಾ.೧೧ರಂದು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ,

    ಭದ್ರಾವತಿ, ಮಾ. ೧೧ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನ್ಯೂಟೌನ್ ಸಿಲ್ವರ್ ಜ್ಯೂಬಿಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗು ಹೊಸ ಸೇತುವೆ ರಸ್ತೆ ಸಿದ್ದರೂಢನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ವತಿಯಿಂದ ಮಾ.೧೧ರ ಶನಿವಾರ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಕಾರ್ಯಾಗಾರ, ಸರ್ಕಾರಿ ನೌಕರರ ತಾಲೂಕು ಮಟ್ಟದ ಸಮ್ಮೇಳನ ಮತ್ತು ಮಹಿಳಾ ದಿನಾಚರಣೆ ಬೆಳಿಗ್ಗೆ ೧೧ ಗಂಟೆಗೆ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ತಾಲೂಕು ಕಛೇರಿ ರಸ್ತೆ ಕಂಚಿಬಾಗಿಲು ವೃತ್ತದ ಸಮೀಪ ನಿರ್ಮಾಣಗೊಳ್ಳಲಿರುವ ಗುರು ಭವನ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆಡಳಿತ ಭವನ ಮತ್ತು ನ್ಯೂಟೌನ್ ಸಿಲ್ವರ್ ಜ್ಯೂಬಿಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕಟ್ಟಡದ ಶಂಕುಸ್ಥಾಪನೆ ಸಂಸದ ಬಿ.ವೈ ರಾಘವೇಂದ್ರ ನೆರವೇರಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ ಉಪಸ್ಥಿತರಿರುವರು.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಕೆ.ಬಿ ಅಶೋಕ್ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ಭಾರತಿ ಶೆಟ್ಟಿ, ಎಸ್.ಎಲ್ ಭೋಜೇಗೌಡ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ನಗರಸಭಾ ಸದಸ್ಯ ಆರ್. ಶ್ರೇಯಸ್ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

ನಗರಸಭೆ ಉಪಾಧ್ಯಕ್ಷರಾಗಿ ಸರ್ವಮಂಗಳ ಭೈರಪ್ಪ

ಭದ್ರಾವತಿ ನಗರಸಭೆ ಉಪಾಧ್ಯಕ್ಷರಾಗಿ ವಾರ್ಡ್ ನಂ. ೨೬ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯೆ ಸರ್ವಮಂಗಳ ಭೈರಪ್ಪ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. 
    ಭದ್ರಾವತಿ, ಮಾ. ೧೦: ನಗರಸಭೆ ಉಪಾಧ್ಯಕ್ಷರಾಗಿ ವಾರ್ಡ್ ನಂ. ೨೬ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯೆ ಸರ್ವಮಂಗಳ ಭೈರಪ್ಪ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
    ಸರ್ವಮಂಗಳರವರು ೧೮ ಹಾಗು ಇವರ ಪ್ರತಿಸ್ಪರ್ಧಿ ವಾರ್ಡ್ ನಂ.೨೫ರ ಜೆಡಿಎಸ್ ಪಕ್ಷದ ನಗರಸಭಾ ಸದಸ್ಯ ಉದಯಕುಮಾರ್ ೧೧ ಮತಗಳನ್ನು ಪಡೆದುಕೊಂಡರು. ಒಟ್ಟು ೩೫ ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಪರಿಶಿಷ್ಟ ಜಾತಿಗೆ ಮೀಸಲಾದ ಉಪಾಧ್ಯಕ್ಷ ಸ್ಥಾನದ ಅಧಿಕಾರ ಒಪ್ಪಂದದಂತೆ ಹಂಚಿಕೆ ಮಾಡಿಕೊಂಡಿದ್ದು, ಮೊದಲ ಒಪ್ಪಂದ ಅವಧಿಗೆ ಚನ್ನಪ್ಪ ಅಧಿಕಾರ ಪೂರೈಸಿದ್ದಾರೆ. ಇದೀಗ ೨ನೇ ಒಪ್ಪಂದದ ಅವಧಿಗೆ ಸರ್ವಮಂಗಳ ಆಯ್ಕೆಯಾಗಿದ್ದಾರೆ.
    ಚುನಾವಣೆಯಲ್ಲಿ ಬಿಜೆಪಿ ಪಕ್ಷದ ೩ ಸದಸ್ಯರು ಹಾಗು ಓರ್ವ ಪಕ್ಷೇತರ ಸದಸ್ಯ ತಟಸ್ಥರಾಗಿ ಉಳಿದುಕೊಂಡಿದ್ದು, ಓರ್ವ ಜೆಡಿಎಸ್ ಸದಸ್ಯ ಚುನಾವಣೆಯಲ್ಲಿ ಪಾಲ್ಗೊಂಡಿಲ್ಲ. ಉಪವಿಭಾಗಾಧಿಕಾರಿ ರವಿಚಂದ್ರನಾಯಕ್ ಚುನಾವಣಾಧಿಕಾರಿ ಕರ್ತವ್ಯ ನಿರ್ವಹಿಸಿದರು. ಪೌರಾಯುಕ್ತ ಮನುಕುಮಾರ್ ಉಪಸ್ಥಿತರಿದ್ದರು.