ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರಿಗೆ ಭದ್ರಾವತಿ ನಗರಸಭೆ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ರಾಜೀನಾಮೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಮತ್ತು ಕೆ.ಜಿ ರಾಜ್‌ಕುಮಾರ್ ಉಪಸ್ಥಿತರಿದ್ದರು.
ಭದ್ರಾವತಿ, ಆ. ೨೩: ನಗರಸಭೆ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ಅವರು ಒಡಂಬಡಿಕೆಯಂತೆ ೧೦ ತಿಂಗಳ ಅಧಿಕಾರ ಪೂರೈಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ೧೦ ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನಕ್ಕಾಗಿ ೩ ಮಂದಿ ನಡುವೆ ಪೈಪೋಟಿ ಎದುರಾಗಿದೆ.
ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಮೊದಲ ಹಂತದ ೩೦ ತಿಂಗಳ ಮೀಸಲಾತಿಯನ್ವಯ ತಲಾ ೧೦ ತಿಂಗಳ ಆಡಳಿತ ಹಂಚಿಕೆ ಮಾಡಿಕೊಂಡಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾತಿ ಹೊಂದಿದೆ. ಈಗಾಗಲೇ ೧೦ ತಿಂಗಳ ಅವಧಿಯನ್ನು ಗೀತಾ ಕೆ.ಜಿ ರಾಜ್‌ಕುಮಾರ್ ಪೂರೈಸಿದ್ದಾರೆ. ೨೦ ತಿಂಗಳು ಬಾಕಿ ಉಳಿದಿದ್ದು, ೨ನೇ ೧೦ ತಿಂಗಳ ಅವಧಿಗೆ ೩ ಮಂದಿ ನಡುವೆ ಪೈಪೋಟಿ ಎದುರಾಗಿದೆ.
ವಾರ್ಡ್ ನಂ.೧೩ರ ಸದಸ್ಯೆ ಅನುಸುಧಾ ಮೋಹನ್, ವಾರ್ಡ್ ನಂ.೩೪ರ ಲತಾ ಚಂದ್ರಶೇಖರ್ ಮತ್ತು ವಾರ್ಡ್ ನಂ.೩೫ರ ಶೃತಿ ವಸಂತ್ ನಡುವೆ ತೀವ್ರ ಪೈಪೋಟಿ ಎದುರಾಗಿದ್ದು, ಈ ಮೂವರ ಇಬ್ಬರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಒಬ್ಬರು ಗೌಂಡರ್ ಸಮುದಾಯಕ್ಕೆ ಸೇರಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್ ಕೈಗೊಳ್ಳುವ ನಿರ್ಧಾರ ಅಂತಿಮವಾಗಿದ್ದು, ಯಾರು ಅಧ್ಯಕ್ಷಗಿರಿ ಯಾರಿಗೆ ಎಂಬುದನ್ನು ಕಾದು ನೋಡಬೇಕಾಗಿದೆ.