ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹೊಸಮನೆ ನೃಪತುಂಗ ಬಡಾವಣೆಯಲ್ಲಿರುವ ಶ್ರೀ ಜ್ಞಾನೇಶ್ವರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅನುದಾನ ಮತ್ತು ಅನುದಾನರಹಿತ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಚಾಲನೆ ನೀಡಿ ಮಾತನಾಡಿದರು.
ಭದ್ರಾವತಿ, ಆ. ೨೩ : ವಿದ್ಯಾರ್ಥಿಗಳಿಗೆ ಕ್ರೀಡೆ ಜೊತೆಗೆ ಅವರಲ್ಲಿನ ಕೌಶಲ್ಯಗಳನ್ನು ಗುರುತಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು.
ಅವರು ಮಂಗಳವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹೊಸಮನೆ ನೃಪತುಂಗ ಬಡಾವಣೆಯಲ್ಲಿರುವ ಶ್ರೀ ಜ್ಞಾನೇಶ್ವರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅನುದಾನ ಮತ್ತು ಅನುದಾನರಹಿತ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆ ಸಹ ಮುಖ್ಯವಾಗಿದೆ. ಎಲ್ಲರೂ ಇಂದು ತಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದು ವೈದ್ಯರು, ಇಂಜಿನಿಯರ್‌ಗಳಾಗಬೇಕೆಂದು ಬಯಸುತ್ತಾರೆ. ಆದರೆ ಮಕ್ಕಳಲ್ಲಿರುವ ಕೌಶಲ್ಯಗಳನ್ನು ಗುರುತಿಸುವ ಕೆಲಸ ಯಾರು ಸಹ ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಶಿಕ್ಷಕರು ಮತ್ತು ಪೋಷಕರು ಮಕ್ಕಳ ಕೌಶಲ್ಯಗಳನ್ನು ಗುರುತಿಸಿ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿದಾಗ ಅವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಲಹೆ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭಾ ಸದಸ್ಯೆ ಮಂಜುಳಾ ಸುಬ್ಬಣ್ಣ, ಶಿಕ್ಷಣ ಸಂಯೋಜಕ ರವಿಕುಮಾರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಜಿ. ಪ್ರಭು, ಸಿ. ಚನ್ನಪ್ಪ, ಶಿವಲಿಂಗೇಗೌಡ, ಶ್ರೀ ಜ್ಞಾನೇಶ್ವರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ನಿರ್ದೇಶಕ ಕೇಶವ, ದೈಹಿಕ ಶಿಕ್ಷಕಿ, ಸಮಾಜ ಸೇವಕಿ ಅನಿತಾ ಮೇರಿ, ಕನಕ ವಿದ್ಯಾಸಂಸ್ಥೆ ಪ್ರಾಂಶುಪಾಲ ಸಿ.ಡಿ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶ್ರೀ ಜ್ಞಾನೇಶ್ವರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟದಲ್ಲಿ ಸೆಂಟ್ ಮೇರಿಸ್, ವಿಜಯ, ಎಸ್‌ಎವಿ (ಕಾರೇಹಳ್ಳಿ), ನವಚೇತನ, ಅಕ್ಕಮಹಾದೇವಿ, ಜೆಎನ್‌ಇಎಸ್, ಸೆಂಟ್ ಡೊಮಿನಿಕ್, ಜ್ಞಾನದೀಪಿಕ, ಸ್ವಾಮಿ ವಿವೇಕಾನಂದ, ವಿಶ್ವ ಬಂಧು, ರಾಘವೇಂದ್ರ ಮತ್ತು ವಿಶ್ವೇಶ್ವರಾಯ ಸೇರಿದಂತೆ ಒಟ್ಟು ೧೨ ಶಾಲೆಗಳ ಮಕ್ಕಳು ಪಾಲ್ಗೊಂಡಿದ್ದರು. ಚರಣ್‌ಸಿಂಗ್, ಶಿವರಾಜ್, ಲೋಕೇಶ್, ರವಿ, ರಂಗನಾಥ ಸೇರಿದಂತೆ ವಿವಿಧ ಶಾಲೆಗಳ ದೈಹಿಕ ಶಿಕ್ಷಕರುಗಳು, ಸಿಆರ್‌ಪಿಗಳು ಪಾಲ್ಗೊಂಡಿದ್ದರು.
No comments:
Post a Comment