Sunday, July 26, 2020

ಸಿಂಗಮನೆ ಗ್ರಾಮ ಪಂಚಾಯಿತಿ ಚವಳಿ ಕ್ಯಾಂಪ್‌ನಲ್ಲಿ ಕೊರೋನಾ ಸೋಂಕು ಪತ್ತೆ

ಭದ್ರಾವತಿ ತಾಲೂಕಿನ ಸಿಂಗನ ಮನೆ ಗ್ರಾಮ ಪಂಚಾಯಿತಿ ಚವಳಿ ಕ್ಯಾಂಪ್‌ನಲ್ಲಿ ಬಟ್ಟೆ ವ್ಯಾಪಾರಿಯೊಬ್ಬರಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಗ್ರಾ.ಪಂ. ವತಿಯಿಂದ ಸ್ಯಾನಿಟೈಜರ್ ಕೈಗೊಳ್ಳಲಾಯಿತು. 
ಭದ್ರಾವತಿ, ಜು. ೨೬: ತಾಲೂಕಿನ ಸಿಂಗನ ಮನೆ ಗ್ರಾಮ ಪಂಚಾಯಿತಿಯಲ್ಲಿ ಕೊರೋನಾ ಸೋಂಕು ಪ್ರಕರಣವೊಂದು ಭಾನುವಾರಪತ್ತೆಯಾಗಿದೆ. 
ಕಳೆದ ಕೆಲವು ದಿನಗಳ ಹಿಂದೆ ಇದೆ ಗೋಣಿಬೀಡು ಗ್ರಾಮದಲ್ಲಿ ಸೋಂಕು ಪತ್ತೆಯಾಗಿತ್ತು. ಇದೀಗ ಚವಳಿ ಕ್ಯಾಂಪ್‌ನಲ್ಲಿ ಸೋಂಕು ಪತ್ತೆಯಾಗಿದೆ. ತಮಿಳುನಾಡಿಗೆ ಹೋಗಿ ಬಂದಿರುವ ಬಟ್ಟೆ ವ್ಯಾಪಾರಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಸೋಂಕು ಪತ್ತೆಯಾದ ಮನೆಯ ಸುತ್ತಮುತ್ತ ಕಂಟೈನ್ಮೆಂಟ್ ವಲಯವನ್ನಾಗಿಸಿದ್ದು, ಗ್ರಾಮ ಪಂಚಾಯಿತಿ ಆಡಳಿತ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮವಾಗಿ ಸ್ಯಾನಿಟೈಜರ್ ಮಾಡಿ ಸೀಲ್‌ಡೌನ್‌ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ. 
ವಿಐಎಸ್‌ಎಲ್ ಕೋವಿಡ್-೧೯ ಕಾರ್ಯಾರಂಭ: 
ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯನ್ನು ಕೆಲವು ದಿನಗಳ ಹಿಂದೆ ೫೦ ಹಾಸಿಗೆಯುಳ್ಳ ಕೋವಿಡ್-೧೯ ಚಿಕಿತ್ಸಾ ಕೇಂದ್ರವನ್ನಾಗಿ ಪರಿವರ್ತಿಸಲಾಗಿತ್ತು. ಕಳೆದ ೨ ದಿನಗಳಿಂದ ಚಿಕಿತ್ಸಾ ಕೇಂದ್ರ ಕಾರ್ಯಾರಂಭಗೊಂಡಿದ್ದು, ವೈದ್ಯರು, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 

ಸರ್ಕಾರಿ ನೌಕರರ ಹಿತರಕ್ಷಣೆಯೊಂದಿಗೆ ಶೈಕ್ಷಣಿಕ ಅಭಿವೃದ್ಧಿಗೆ ಗಮನ

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿಗೆ ಅಭಿನಂದನೆ 

ಭದ್ರಾವತಿ ತಾಲೂಕಿನ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿಯವರನ್ನು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಭಿನಂದಿಸಿದರು. 
ಭದ್ರಾವತಿ, ಜು. ೨೬: ರಾಜ್ಯಾದ್ಯಂತ ಸರ್ಕಾರಿ ನೌಕರರ ಹಿತ ಕಾಪಾಡುವಲ್ಲಿ ಹೆಚ್ಚಿನ ಆಸಕ್ತಿ ವಹಿಸುವ ಜೊತೆಗೆ ಭದ್ರಾವತಿ ತಾಲೂಕಿನ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿಯವರನ್ನು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಭಿನಂದಿಸಿದರು. 
ನಗರದ ಹೊಸಸೇತುವೆ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾ ಸಂಸ್ಥೆಯ ಸಮಗ್ರ ಮೂಲಭೂತ ಸೌಕರ್ಯಗಳ ಅವಶ್ಯಕತೆಗಳಿಗೆ ರಾಜ್ಯ ಸರ್ಕಾರದಿಂದ ೧ ಕೋ. ರು, ಅನುದಾನ ಬಿಡುಗಡೆ ಮಾಡಿಸುವವಲ್ಲಿ ಸಿ.ಎಸ್ ಷಡಾಕ್ಷರಿಯವರು ಯಶಸ್ವಿಯಾಗಿದ್ದು, ಅಲ್ಲದೆ ವಿದ್ಯಾಸಂಸ್ಥೆಗೆ ಸೇರಿದ ನಗರಸಭೆ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿರುವ ೩ ಎಕರೆ ಜಮೀನನ್ನು ಸುಮಾರು ೧ ಕೋ. ರು. ಗಳಿಗೆ ಸುಮಾರು ೧೦ ವರ್ಷಗಳ ಹಿಂದೆ ಮಾರಾಟ ಮಾಡಲು ಯತ್ನಿಸಿದ್ದ ಪ್ರಕ್ರಿಯೆಯನ್ನು ತಡೆದು ಭವಿಷ್ಯದ ಶೈಕ್ಷಣಿಕ ಅಭಿವೃಧ್ಧಿ ಚಟುವಟಿಗಳಿಗೆ ಉಳಿಸಿಕೊಳ್ಳುವ ಜೊತೆಗೆ ಸರ್ಕಾರಿ ನೌಕರರ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿನ್ನಲೆಯಲ್ಲಿ ತಾಲೂಕಿನ ಸರ್ಕಾರದ ವಿವಿಧ ಇಲಾಖೆಗಳ ಸಂಘಟನೆಯ ಪದಾಧಿಕಾರಿಗಳು ಷಡಾಕ್ಷರಿಯವರನ್ನು ಅಭಿನಂದಿಸಿ ಗೌರವಿಸಿದರು. 
ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಸದಸ್ಯರುಗಳಾದ ಕೆ. ಶಾಮಣ್ಣ, ಡಾ.ಜಿ.ಎಂ ನಟರಾಜ್, ಬಿ.ಎಲ್ ರಂಗಸ್ವಾಮಿ ಹಾಗು ವಿವಿಧ ಇಲಾಖೆಗಳ ಪದಾಧಿಕಾರಿಗಳಾದ ಎಸ್.ಕೂಬಾನಾಯ್ಕ, ಬಿ. ಸಿದ್ದಬಸಪ್ಪ, ಲೋಹಿತೇಶ್ವರಪ್ಪ, ಬಸವಂತರಾವ್ ದಾಳೆ, ಎನ್. ಧನಂಜಯ, ಯು.ಮಹಾದೇವಪ್ಪ, ಎಂ.ಎಸ್.ಮಲ್ಲಿಕಾರ್ಜುನ , ರೇವಣಪ್ಪ, ನಿಸ್ಸಾರ್ ಖಾನ್, ಜಗದೀಶ್, ರಾಜಾನಾಯ್ಕ್, ದೇವೇಂದ್ರ ನಾಯ್ಕ್, ಎನ್.ಡಿ ಮಂಜುನಾಥ್, ಶಿವಕುಮಾರ್, ಜಯಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.