Sunday, December 1, 2024

ಕನ್ನಡ ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ : ಹಿರೇನಲ್ಲೂರು ಶ್ರೀನಿವಾಸ್

ಭದ್ರಾವತಿ ಶುಗರ್‌ಟೌನ್ ಲಯನ್ಸ್ ಕ್ಲಬ್‌ನಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಆಚರಣೆ ಕಾರ್ಯಕ್ರಮ ಹಿರೇನಲ್ಲೂರು ಶ್ರೀನಿವಾಸ್, ಬೆಳ್ಳೋಡಿ ಶಿವಕುಮಾರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ: ನಾಡಿನ ಹಿರಿಯರು ಹಚ್ಚಿರುವ ಕನ್ನಡ ದೀಪ ಎಂದೂ ಆರದಂತೆ ಕಾಪಾಡಿ ಅದನ್ನು ಉಳಿಸಿ ಬೆಳೆಸುವ ಮಹತ್ತರವಾದ ಜವಾಬ್ದಾರಿ ಇಂದಿನವರ ಮೇಲಿದೆ ಎಂದು ಶಿಕ್ಷಕ ಹಿರೇನಲ್ಲೂರು ಶ್ರೀನಿವಾಸ್ ಹೇಳಿದರು.
    ಅವರು ಶುಗರ್‌ಟೌನ್ ಲಯನ್ಸ್ ಕ್ಲಬ್‌ನಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
    ಕನ್ನಡ ಭಾಷೆಯ ಮೂಲಕ ನಮ್ಮ ಎಲ್ಲಾ ರೀತಿಯ ಭಾವನೆಗಳನ್ನು ಹೊರಹಾಕಲು, ವ್ಯಕ್ತಪಡಿಸಲು ಸಾಧ್ಯ. ಇಂತಹ ಶಕ್ತಿ ನಮ್ಮ ಕನ್ನಡ ಭಾಷೆಗಿರುವುದು ನಾಡಿನ ಕನ್ನಡಿಗರ ಹೆಮ್ಮೆಯ ಸಂಗತಿಯಾಗಿದೆ.  ಆದರೆ ಇಂದು ಕನ್ನಡ ಭಾಷೆ ಓದಬೇಕು, ಕಲಿಕಾ ಮಾಧ್ಯಮ ಕನ್ನಡ ಭಾಷೆಯಾಗಬೇಕು ಎಂಬುದು ಕೇವಲ ವೇದಿಕೆಗಳಲ್ಲಿ ಮಾತ್ರ ಸೀಮಿತವಾಗಿ ಕೇಳಿ ಬರುತ್ತಿದೆ. ಇಂದು ಬಹುತೇಕ ಮಕ್ಕಳು ಆಂಗ್ಲ ಭಾಷೆಯಲ್ಲಿ ಓದುತ್ತಿದ್ದು, ಇದೊಂದು ರೀತಿಯ ವಿಪರ್ಯಾಸದ ಸಂಗತಿಯಾಗಿದೆ. ಈ ನಡುವೆ ಆಂಗ್ಲ ಭಾಷೆಯಲ್ಲಿ ಓದುತ್ತಿದ್ದರೂ ಸಹ ಕನ್ನಡ ಭಾಷೆಯ ಬಗ್ಗೆ, ಕನ್ನಡತನದ ಬಗ್ಗೆ ಹಾಗು ನಾಡಿನ ಸಾಹಿತ್ಯ ಸಾಂಸ್ಕೃತಿಕ ಸಂಗತಿಗಳ ಬಗ್ಗೆ ಒಲವನ್ನು ಬೆಳೆಸಿಕೊಳ್ಳಬೇಕೆಂದರು. 
    ಲಯನ್ಸ್ ಕ್ಲಬ್ ೩೧೭ಸಿ ಜಾಗತಿಕ ತಂಡದ ಮುಖ್ಯ ಸಮನ್ವಯಾಧಿಕಾರಿ ಬೆಳ್ಳೋಡಿ ಶಿವಕುಮಾರ್ ಮಾತನಾಡಿ, ನಮ್ಮ ದೇಶದಲ್ಲಿ ದೀಪಾವಳಿ ಹಬ್ಬದ ನಂತರ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳ ಹೊಸ ಆರ್ಥಿಕ ಚಟುವಟಿಕೆಗಳು ನಡೆಯಲು ನಿರ್ಧಾರವಾಗುತ್ತದೆ. ಹಾಗಾಗಿ ಇದಕ್ಕೆ ವಿಶೇಷ ಮಹತ್ವವಿದೆ. ಅದೇ ರೀತಿಯಲ್ಲಿ ಸಂಘ-ಸಂಸ್ಥೆಗಳಲ್ಲಿ ಸಹ ಆರ್ಥಿಕ ಚಟುವಟಿಕೆಗಳ ಲೆಕ್ಕಪತ್ರಗಳನ್ನು ಸರಿಯಾಗಿ ಪಾರದರ್ಶಕವಾಗಿ ನಿರ್ವಹಿಸಿದಾಗ ಅವುಗಳ ಬಗ್ಗೆ ನಂಬಿಕೆ, ಘನತೆ, ಗೌರವ ಹೆಚ್ಚಾಗುತ್ತದೆ. ಇದನ್ನು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್‌ನಂತಹ ಅಂತರಾಷ್ಟ್ರೀಯ ಸಂಸ್ಥೆ ಮಂಚೂಣಿಯಲ್ಲಿರುವುದು ಗೌರವದ ಸಂಗತಿ ಎಂದರು.
    ಉಮೇಶ್ ರಾಜು, ಯೋಗೀಶ್, ಶಿವಕುಮಾರ್, ಬಿ.ಎಸ್ ಮಹೇಶ್ ಕುಮಾರ್, ಜಿ.ಎಚ್ ಶಿವಾನಂದಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
    ನಿಂಗೋಜಿರಾವ್ ಪ್ರಾರ್ಥಿಸಿ, ಉಮೇಶ್ ಸ್ವಾಗತಿಸಿದರು. ತಮ್ಮೇಗೌಡ ಕಾರ್ಯಕ್ರಮ ನಿರೂಪಿಸಿ ವರದಿ ಮಂಡಿಸಿದರು. ಯೋಗೀಶ್ ಲೆಕ್ಕಪತ್ರ ಮಂಡಿಸಿ ವಂದಿಸಿದರು. ಅನಂತಕೃಷ್ಣ ನಾಯಕ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಸವಿತ ಅಥಿತಿಗಳ ಪರಿಚಯ ನಡೆಸಿಕೊಟ್ಟರು.  

ಫಿಲ್ಟರ್‌ಶೆಡ್ ನಿವಾಸಿಗಳ ಸಂಕಷ್ಟಕ್ಕೆ ಜನಪ್ರತಿನಿಧಿಗಳು ಸ್ಪಂದಿಸಲಿ : ಶಶಿಕುಮಾರ್ ಎಸ್. ಗೌಡ

ಭದ್ರಾವತಿ ಜನ್ನಾಪುರ ಫಿಲ್ಟರ್‌ಶೆಡ್‌ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್. ಗೌಡ ನೇತೃತ್ವವಹಿಸಿ ಮಾತನಾಡಿದರು.
    ಭದ್ರಾವತಿ: ಜನ್ನಾಪುರ ಫಿಲ್ಟರ್‌ಶೆಡ್‌ನಲ್ಲಿ ಬಡ ಜನರು ವಾಸಿಸುತ್ತಿದ್ದು, ಇವರ ಸಂಕಷ್ಟಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುವ ಮೂಲಕ ನೆರವಿಗೆ ಮುಂದಾಗಬೇಕು. ನ್ಯಾಯಬದ್ಧವಾದ ಹೋರಾಟಗಳಿಗೆ ಎಲ್ಲರೂ ಸಹಕರಿಸಬೇಕೆಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್. ಗೌಡ ಮನವಿ ಮಾಡಿದರು. 
    ಅವರು ಫಿಲ್ಟರ್‌ಶೆಡ್‌ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು. ಫಿಲ್ಟರ್‌ಶೆಡ್‌ನಲ್ಲಿ ಬಡ ಜನರಿಗೆ ಇನ್ನೂ ಹಕ್ಕು ಪತ್ರ ನೀಡಿಲ್ಲ. ಹಲವು ಮೂಲ ಸೌಕರ್ಯಗಳ ಕೊರತೆ ಇದ್ದು, ಕೆಲವು ವರ್ಷಗಳಿಂದ ಅನಧಿಕೃತವಾಗಿ ನಿರ್ಮಿಸಲಾಗಿರುವ ಸಮುದಾಯ ಭವನದ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಈ ಹೋರಾಟದ ಹಿಂದೆ ಯಾವುದೇ ದುರುದ್ದೇಶವಿಲ್ಲ. ಸಮುದಾಯ ಭವನ ಫಿಲ್ಟರ್‌ಶೆಡ್ ನಿವಾಸಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಸದ್ಬಳಕೆಯಾಗಬೇಕೆಂದರು. 
    ಸ್ಥಳೀಯ ಮುಖಂಡ ಉಮೇಶ್ ಮಾತನಾಡಿ, ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ಬಡ ಜನರಿಗೆ ಹಕ್ಕು ಪತ್ರ ನೀಡದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇಲ್ಲಿನ ಜನರ ಹೋರಾಟಕ್ಕೆ ನಮ್ಮ ಬೆಂಬಲವಿದ್ದು, ಅನಧಿಕೃತ ಸಮುದಾಯ ಭವನದ ವಿರುದ್ಧ ನಡೆಯುತ್ತಿರುವ ನ್ಯಾಯಬದ್ಧವಾದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಅಗತ್ಯವಿದೆ ಎಂದರು.  
    ನಗರಸಭೆ ಸದಸ್ಯರಾದ ಸವಿತಾ ಉಮೇಶ್, ನಾಗರತ್ನ ಅನಿಲ್‌ಕುಮಾರ್, ಆರ್. ಮೋಹನ್ ಕುಮಾರ್ ಸೇರಿದಂತೆ ಇನ್ನಿತರರು ಮಾತನಾಡಿದರು. ಸ್ಥಳೀಯ ಮುಖಂಡರು, ನಿವಾಸಿಗಳು ಪಾಲ್ಗೊಂಡಿದ್ದರು. 

ಪುರುಷ-ಮಹಿಳೆ ಸಮಾನತೆಯಿಂದ ಸಾಗಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣ : ಡಾ.ಆರ್. ಅನುರಾಧ ಪಟೇಲ್

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜರುಗಿದ ಚುಂಚಾದ್ರಿ ಮಹಿಳಾ ವೇದಿಕೆ  ಸರ್ವ ಸದಸ್ಯರ ವಾರ್ಷಿಕ ಸಭೆ ಗೌರವಾಧ್ಯಕ್ಷೆ ಡಾ.ಆರ್. ಅನುರಾಧ ಪಟೇಲ್ ಉದ್ಘಾಟಿಸಿದರು. 
    ಭದ್ರಾವತಿ: ಇಂದು ಸಮಾಜದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆಯಲಿದ್ದು, ಪುರುಷರಿಗೆ ಸರಿಸಮಾನ ಸ್ಥಾನಮಾನಗಳನ್ನು ಹೊಂದಿದ್ದಾರೆ. ಪುರುಷ ಮತ್ತು ಮಹಿಳೆ ಇಬ್ಬರು ಸಹ ಸಮಾನತೆಯಿಂದ ಮುಂದೆ ಸಾಗಬೇಕು. ಆಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ.ಆರ್. ಅನುರಾಧ ಪಟೇಲ್ ಹೇಳಿದರು. 
    ಅವರು ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜರುಗಿದ ವೇದಿಕೆಯ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.
    ಇಂದು ಪುರುಷ ಮತ್ತು ಮಹಿಳೆಯರ ನಡುವೆ ಸಾಕಷ್ಟು ಪೈಪೋಟಿ ನಡೆಯುತ್ತಿವೆ. ಈ ನಡುವೆ ಇಬ್ಬರಲ್ಲೂ ಭಿನ್ನಾಭಿಪ್ರಾಯ ಮೂಡುತ್ತಿವೆ. ಇದರಿಂದಾಗಿ ಕೌಟುಂಬಿಕವಾಗಿ, ಸಾಮಾಜಿಕವಾಗಿ ಹಾಗು ಆರ್ಥಿಕವಾಗಿ ಸಾಕಷ್ಟು ಸಂಘರ್ಷಗಳು ನಡೆಯುತ್ತಿವೆ. ಪುರುಷ ಮತ್ತು ಮಹಿಳೆ ಇಬ್ಬರು ಪರಸ್ಪರ ಗೌರವಿಸಿಕೊಳ್ಳುವ ಜೊತೆಗೆ ಸಮಾನತೆಯಿಂದ ಮುನ್ನಡೆಯಬೇಕೆಂದರು. 
       ಸಾಮಾಜಿಕ ಸೇವಾ ಚಟುವಟಿಕೆ ಉದ್ದೇಶದಿಂದ ಪ್ರಾರಂಭಗೊಂಡ ವೇದಿಕೆ ಪ್ರಸ್ತುತ ೨೫ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿದೆ. ವೇದಿಕೆ ರಜತ ಮಹೋತ್ಸವ ಸಮಾರಂಭ ಆಯೋಜಿಸಲು ಉದ್ದೇಶಿಸಲಾಗಿದ್ದು, ಸಮಾರಂಭದ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದರು.        
       ರಾಜ್ಯ ಒಕ್ಕಲಿಗರ ಮಹಿಳಾ ವೇದಿಕೆ ಮೈಸೂರು ಜಿಲ್ಲಾಧ್ಯಕ್ಷೆ ಲತಾ ಹಾಗು ನಿರ್ದೇಶಕಿ ಲೀಲಾರವರನ್ನು ಗೌರವಿಸಲಾಯಿತು. ನಗರಸಭೆ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ಪರ್ಧೆಯಲ್ಲಿ ವೇದಿಕೆ ಸದಸ್ಯರು ಭಾಗವಹಿಸಿ ಉತ್ತಮ ಸಾಧನೆ ತೋರಿದ ಹಿನ್ನಲೆಯಲ್ಲಿ ಅವರನ್ನು ಅಭಿನಂದಿಸಲಾಯಿತು. 
       ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆವಹಿಸಿದ್ದರು. ಸುಧಾ ಪ್ರಾರ್ಥಿಸಿ, ಪ್ರತಿಭಾ ಸ್ವಾಗತಿಸಿದರು. ಭಾರತಿ ವರದಿ ಮಂಡಿಸಿ, ಸುಮತಿ ಕಾರ್ಯಕ್ರಮ ನಿರೂಪಿಸಿದರು. ಸುಮಾ ಪ್ರಸ್ತಾವಿಕ ನುಡಿಗಳನ್ನಾಡಿ, ಶೀಲಾ ವಂದಿಸಿದರು.