Sunday, December 1, 2024

ಪುರುಷ-ಮಹಿಳೆ ಸಮಾನತೆಯಿಂದ ಸಾಗಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣ : ಡಾ.ಆರ್. ಅನುರಾಧ ಪಟೇಲ್

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜರುಗಿದ ಚುಂಚಾದ್ರಿ ಮಹಿಳಾ ವೇದಿಕೆ  ಸರ್ವ ಸದಸ್ಯರ ವಾರ್ಷಿಕ ಸಭೆ ಗೌರವಾಧ್ಯಕ್ಷೆ ಡಾ.ಆರ್. ಅನುರಾಧ ಪಟೇಲ್ ಉದ್ಘಾಟಿಸಿದರು. 
    ಭದ್ರಾವತಿ: ಇಂದು ಸಮಾಜದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆಯಲಿದ್ದು, ಪುರುಷರಿಗೆ ಸರಿಸಮಾನ ಸ್ಥಾನಮಾನಗಳನ್ನು ಹೊಂದಿದ್ದಾರೆ. ಪುರುಷ ಮತ್ತು ಮಹಿಳೆ ಇಬ್ಬರು ಸಹ ಸಮಾನತೆಯಿಂದ ಮುಂದೆ ಸಾಗಬೇಕು. ಆಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ.ಆರ್. ಅನುರಾಧ ಪಟೇಲ್ ಹೇಳಿದರು. 
    ಅವರು ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜರುಗಿದ ವೇದಿಕೆಯ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.
    ಇಂದು ಪುರುಷ ಮತ್ತು ಮಹಿಳೆಯರ ನಡುವೆ ಸಾಕಷ್ಟು ಪೈಪೋಟಿ ನಡೆಯುತ್ತಿವೆ. ಈ ನಡುವೆ ಇಬ್ಬರಲ್ಲೂ ಭಿನ್ನಾಭಿಪ್ರಾಯ ಮೂಡುತ್ತಿವೆ. ಇದರಿಂದಾಗಿ ಕೌಟುಂಬಿಕವಾಗಿ, ಸಾಮಾಜಿಕವಾಗಿ ಹಾಗು ಆರ್ಥಿಕವಾಗಿ ಸಾಕಷ್ಟು ಸಂಘರ್ಷಗಳು ನಡೆಯುತ್ತಿವೆ. ಪುರುಷ ಮತ್ತು ಮಹಿಳೆ ಇಬ್ಬರು ಪರಸ್ಪರ ಗೌರವಿಸಿಕೊಳ್ಳುವ ಜೊತೆಗೆ ಸಮಾನತೆಯಿಂದ ಮುನ್ನಡೆಯಬೇಕೆಂದರು. 
       ಸಾಮಾಜಿಕ ಸೇವಾ ಚಟುವಟಿಕೆ ಉದ್ದೇಶದಿಂದ ಪ್ರಾರಂಭಗೊಂಡ ವೇದಿಕೆ ಪ್ರಸ್ತುತ ೨೫ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿದೆ. ವೇದಿಕೆ ರಜತ ಮಹೋತ್ಸವ ಸಮಾರಂಭ ಆಯೋಜಿಸಲು ಉದ್ದೇಶಿಸಲಾಗಿದ್ದು, ಸಮಾರಂಭದ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದರು.        
       ರಾಜ್ಯ ಒಕ್ಕಲಿಗರ ಮಹಿಳಾ ವೇದಿಕೆ ಮೈಸೂರು ಜಿಲ್ಲಾಧ್ಯಕ್ಷೆ ಲತಾ ಹಾಗು ನಿರ್ದೇಶಕಿ ಲೀಲಾರವರನ್ನು ಗೌರವಿಸಲಾಯಿತು. ನಗರಸಭೆ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ಪರ್ಧೆಯಲ್ಲಿ ವೇದಿಕೆ ಸದಸ್ಯರು ಭಾಗವಹಿಸಿ ಉತ್ತಮ ಸಾಧನೆ ತೋರಿದ ಹಿನ್ನಲೆಯಲ್ಲಿ ಅವರನ್ನು ಅಭಿನಂದಿಸಲಾಯಿತು. 
       ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆವಹಿಸಿದ್ದರು. ಸುಧಾ ಪ್ರಾರ್ಥಿಸಿ, ಪ್ರತಿಭಾ ಸ್ವಾಗತಿಸಿದರು. ಭಾರತಿ ವರದಿ ಮಂಡಿಸಿ, ಸುಮತಿ ಕಾರ್ಯಕ್ರಮ ನಿರೂಪಿಸಿದರು. ಸುಮಾ ಪ್ರಸ್ತಾವಿಕ ನುಡಿಗಳನ್ನಾಡಿ, ಶೀಲಾ ವಂದಿಸಿದರು. 

No comments:

Post a Comment