Saturday, December 26, 2020

ಕನ್ನಡ ಕಾಯಕ ಪಡೆಗೆ ಅಪರಂಜಿ ಶಿವರಾಜ್ ನೇಮಕ

ಅಪರಂಜಿ ಶಿವರಾಜ್
ಭದ್ರಾವತಿ, ಡಿ. ೨೬: ಕನ್ನಡ ಅಭಿವೃದ್ಧಿ ಪ್ರಾಧಿಕಾರ ನವಂಬರ್ ೧, ೨೦೨೦ ರಿಂದ ಅಕ್ಟೋಬರ್ ೩೧, ೨೦೨೧ರವರೆಗೆ 'ಕನ್ನಡ ಕಾಯಕ ವರ್ಷ' ಇದರ ಅಂಗವಾಗಿ ಜಾರಿಗೆ ತಂದಿರುವ ಕಾರ್ಯಕ್ರಮದ ಕಾರ್ಯಸೂಚಿಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಚಿಸಿರುವ ಕನ್ನಡ ಕಾಯಕ ಪಡೆಗೆ ಶಿವಮೊಗ್ಗ ಜಿಲ್ಲೆಯಿಂದ ನಗರದ ಚಲನಚಿತ್ರ ನಟ, ರಂಗ ಕಲಾವಿದ ಅಪರಂಜಿ ಶಿವರಾಜ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.
     ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಭರಣ ಆದೇಶಹೊರಡಿಸಿದ್ದು, ಪ್ರಥಮ ಹಂತವಾಗಿ ಡಿ.೨೯ರಂದು ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ರಾಜ್ಯದ ಎಲ್ಲಾ ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಕೆ ಮತ್ತು ಶುದ್ಧ ಕನ್ನಡ ನಾಮಫಲಕ ಅಳವಡಿಕೆ ಅಭಿಯಾನ ಯಶಸ್ವಿಗೆ ಹೆಚ್ಚಿನ ರೀತಿಯಲ್ಲಿ ಶ್ರಮಿಸುವಂತೆ ಅಧ್ಯಕ್ಷರು ಅಪರಂಜಿ ಶಿವರಾಜ್‌ರವರಿಗೆ ಸೂಚಿಸಿದ್ದಾರೆ.





ಜ.೨ ಮತ್ತು ೩ರಂದು ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ : ಡಿ.ಟಿ ಮೇಘರಾಜ್

ಭದ್ರಾವತಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್ ಮಾತನಾಡಿದರು.
ಭದ್ರಾವತಿ, ಡಿ. ೨೬: ರಾಜ್ಯದಲ್ಲಿ ಬಿಜೆಪಿ ಪಕ್ಷ ನೆಲೆ ಕಂಡುಕೊಳ್ಳಲು ಶಿವಮೊಗ್ಗ ಜಿಲ್ಲೆಯ ಕೊಡುಗೆ ಆಪಾರವಾಗಿದೆ. ತತ್ವ, ಸಿದ್ದಾಂತ, ಹೋರಾಟಗಳ ನೆಲೆಗಟ್ಟಿನಲ್ಲಿ ರೂಪುಗೊಂಡು ಪ್ರಸ್ತುತ ದಕ್ಷಿಣ ಭಾರತದಲ್ಲೂ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪಕ್ಷ ದೇಶಾದ್ಯಂತ ಜನಮನ್ನಣೆಗೆ ಪಾತ್ರವಾಗಿದೆ. ಇಂತಹ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇದೀಗ ಪುನಃ ಸಂಘಟನಾತ್ಮಕ ಚಟುವಟಿಕೆ ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಜ.೨ ಮತ್ತು ೩ ರಂದು ಎರಡು ದಿನಗಳ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಲಾಗುತ್ತಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್ ತಿಳಿಸಿದರು.
     ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ರಾಜಕಾರಣದ ಪ್ರತಿ ಹಂತದಲ್ಲಿ ಶಿವಮೊಗ್ಗ ಜಿಲ್ಲೆಯ ಕೊಡುಗೆ ಅನನ್ಯ ಹಾಗು ಅಪಾರವಾಗಿದೆ. ೧೯೭೧ರಲ್ಲಿ ಜಿಲ್ಲೆಯಲ್ಲಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು ರೂಪುಗೊಂಡ ಪರಿಣಾಮ ಸಾಕಷ್ಟು ಬದಲಾವಣೆಗಳಾದವು. ೧೯೭೬ರಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ, ೧೯೯೨ರಲ್ಲಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಗಳು ಜಿಲ್ಲೆಯಲ್ಲಿ ನಡೆದವು. ಈ ನಡುವೆ ಪಕ್ಷದಿಂದ ಹಲವು ಮಂದಿ ಚುನಾವಣೆಗಳಲ್ಲಿ ಕಣಕ್ಕಿಳಿದು ಸ್ಪರ್ಧಿಸಿದರು. ಸೋಲು-ಗೆಲುವುಗಳಿಗೆ ಎದೆಗುಂದದೆ ನಿರಂತರವಾಗಿ ಪ್ರಯತ್ನಿಸಿದ ಫಲವಾಗಿ ೧೯೭೫ರಲ್ಲಿ ಪಕ್ಷದಿಂದ ೨ ಜನ ಮಾತ್ರ ವಿಧಾನಸಭೆಗೆ ಆಯ್ಕೆಯಾದರು. ಈ ಪೈಕಿ ೧ ಸ್ಥಾನ ಜಿಲ್ಲೆಗೆ ಸೇರಿದ್ದಾಗಿದ್ದು, ನಂತರ ೧೯೭೯ರಲ್ಲಿ ೪ ಜನ ಆಯ್ಕೆಯಾಗಿದ್ದು, ಈ ಪೈಕಿ ೨ ಸ್ಥಾನ ಜಿಲ್ಲೆಗೆ ಸೇರಿದ್ದಾಗಿದೆ. ನಂತರ ೧೯೯೮ರಲ್ಲಿ ನಡೆದ ಚುನಾವಣೆಯಲ್ಲಿ ೪೦ ಜನ ಆಯ್ಕೆಯಾಗಿದ್ದು, ಆ ನಂತರ ಪಕ್ಷ ರಾಜ್ಯದಲ್ಲಿ ನೆಲೆ ಕಂಡುಕೊಂಡಿತು. ೧೯೯೮ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ೧೮ ಜನ ಸಂಸದರು ಆಯ್ಕೆಯಾದರು. ಈ ಪೈಕಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಹ ಕ್ಷೇತ್ರ ಸಹ ಒಂದಾಗಿದೆ. ಅಂದಿನಿಂದ ನಿರಂತರವಾಗಿ ೫ ಬಾರಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿ.ವೈ. ರಾಘವೇಂದ್ರರವರು ೩ನೇ ಬಾರಿಗೆ ಸಂಸದರಾಗಿ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
    ಜಿಲ್ಲೆ ಹಾಗು ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಕೊಡುಗೆ ಅಪಾರವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ೭ ಸ್ಥಾನಗಳ ಪೈಕಿ ೬ ಸ್ಥಾನಗಳಲ್ಲಿ ಬಿಜೆಪಿ ಶಾಸಕರಿದ್ದು, ಮುಂದಿನ ದಿನಗಳಲ್ಲಿ ಭದ್ರಾವತಿ ಸಹ ಸೇರಿ ೭ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದ್ದಾರೆ. ಬಿಜೆಪಿ ಆರಂಭದಿಂದಲೂ ಜನ ಸಾಮಾನ್ಯರ ಪಕ್ಷವಾಗಿ ರೂಪುಗೊಂಡು ಸಮಾಜವಾದಿ ಚಿಂತೆನೆಗಳನ್ನು ಮೈಗೂಡಿಸಿಕೊಂಡು ಬಡವರ, ದಿನದಲಿತರ ಪರವಾಗಿ, ರೈತರ ಪರವಾಗಿ ಹೋರಾಟ ನಡೆಸುತ್ತಿದೆ. ಇವೆಲ್ಲವೂ ಕಾರ್ಯರೂಪಕ್ಕೆ ತಂದಿರುವ ಪರಿಣಾಮವಾಗಿ ಇಂದು ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯ ಪಕ್ಷವಾಗಿ ರೂಪುಗೊಂಡಿದೆ. ಈ ನಿಟ್ಟಿನಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸುವ ಉದ್ದೇಶದಿಂದ ಕಾರ್ಯಕಾರಿಣಿ ಸಭೆ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಸಮಾವೇಶಗಳು, ಈ ಹಿಂದಿನ ಸಭೆಯಲ್ಲಿ ನಡೆದಿರುವ ಬದಲಾವಣೆಗಳು, ಕಂಡು ಕೊಂಡಿರುವ ಫಲಿತಾಂಶಗಳು, ಹೊಸತನಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
    ಸಭೆಯಲ್ಲಿ ಪ್ರಮುಖರಾದ ಪಕ್ಷದ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಕಾರ್ಯದರ್ಶಿ ಚನ್ನೇಶ್, ಮುಖಂಡರಾದ ವಿ. ಕದಿರೇಶ್, ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ಅವಿನಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  


ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಸಹಕಾರ ನೀಡುವಂತೆ ಕೋರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಿ.ಟಿ ಮೇಘರಾಜ್‌ರವರನ್ನು ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಸನ್ಮಾನಿಸಿ ಅಭಿನಂದಿಸಿದರು.  


ಪೊಲೀಸ್ ಉಮೇಶ್‌ರವರ ೪೬ನೇ ವರ್ಷದ ಹುಟ್ಟುಹಬ್ಬ : ರಕ್ತದಾನ ಶಿಬಿರ

ಭದ್ರಾವತಿ ಹುತ್ತಾಕಾಲೋನಿ ನಿವಾಸಿ, ಸಮಾಜ ಸೇವಕ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್‌ರವರ ೪೬ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ ನೆರವೇರಿತು.
    ಭದ್ರಾವತಿ, ಡಿ. ೨೬: ನಗರದ ಹುತ್ತಾಕಾಲೋನಿ ನಿವಾಸಿ, ಸಮಾಜ ಸೇವಕ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್‌ರವರ ೪೬ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ ರಕ್ತದಾನ ಶಿಬಿರ ನೆರವೇರಿತು.
    ಕಳೆದ ಕೆಲವು ವರ್ಷಗಳಿಂದ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವ ಕಡು ಬಡವರಿಗಾಗಿ ಉಚಿತ ಆಂಬ್ಯುಲೆನ್ಸ್ ಸೇವೆ, ದೇವಸ್ಥಾನಗಳ ಧಾರ್ಮಿಕ ಕಾರ್ಯಗಳಿಗೆ ನೆರವು, ಕೊರೋನಾ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿದ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಬಡವರಿಗೆ ಲಾಕ್‌ಡೌನ್ ಮುಕ್ತಾಯಗೊಳ್ಳುವವರೆಗೂ ಆಹಾರ ತಯಾರಿಸಿ ವಿತರಣೆ ಮಾಡುವ ಜೊತೆಗೆ ವಿವಿಧ ಸಂಘ-ಸಂಸ್ಥೆಗಳಿಗೆ ದವಸ ಧಾನ್ಯ ಸೇರಿದಂತೆ ದಿನಬಳಕೆ ವಸ್ತುಗಳ ವಿತರಣೆ ಸೇರಿದಂತೆ ವಿವಿಧ ರೀತಿಯ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಪೊಲೀಸ್ ಉಮೇಶ್‌ರವರು ತೊಡಗಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಅಭಿಮಾನಿಗಳು ಉಮೇಶ್‌ರವರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಅಚರಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಿದರು.
    ರಕ್ತದಾನ ಶಿಬಿರ, ಸತ್ಯನಾರಾಯಣ ಪೂಜೆ ಸೇರಿದಂತೆ ಇನ್ನಿತರ ಕಾರ್ಯಕ್ರಮ ನೆರವೇರಿದವು. ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಹುಟ್ಟುಹಬ್ಬ ಶುಭಾಶಯ ಕೋರಿ ಉಮೇಶ್‌ರವರನ್ನು ಅಭಿನಂದಿಸಿದರು.
    ನಗರಸಭೆ ಹಿರಿಯ ಸದಸ್ಯರಾದ ಕೆ.ಎನ್ ಭೈರಪ್ಪಗೌಡ, ಮಹೇಶ್, ನ್ಯೂಟೌನ್ ಶ್ರೀ ಕರುಮಾರಿಯಮ್ಮ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಕುಪ್ಪಸ್ವಾಮಿ, ಸತೀಶ್‌ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಅನಸೂಯ ನಿಧನ


ಅನಸೂಯ
    ಭದ್ರಾವತಿ, ಡಿ. ೨೬: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸುಬ್ರಮಣ್ಯರವರ ತಾಯಿ ಅನಸೂಯ(೭೦) ಶನಿವಾರ ನಿಧನ ಹೊಂದಿದರು.
    ಪತಿ ಸಿ.ಕೆ ಗೋಪಾಲಸ್ವಾಮಿ, ಪುತ್ರ ಸುಬ್ರಮಣಿ, ಸೊಸೆ ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ನೇತೃತ್ವದಲ್ಲಿ ಹಿರಿಯ ಪತ್ರಕರ್ತರಾದ ಕಣ್ಣಪ್ಪ, ಎನ್. ಬಾಬು, ಟಿ.ಎಸ್ ಆನಂದಕುಮಾರ್, ಸುದರ್ಶನ್, ಬದರಿನಾರಾಯಣ, ಸುಭಾಷ್‌ರಾವ್ ಸಿಂಧ್ಯಾ, ಶೈಲೇಶ್‌ಕೋಠಿ, ಬಸವರಾಜ್, ಅನಂತಕುಮಾರ್ ಸೇರಿದಂತೆ ಇನ್ನಿತರರು ಮೃತರ ಅಂತಿಮ ದರ್ಶನ ಪಡೆದು ನಂತರ ಪತ್ರಿಕಾಭವನದಲ್ಲಿ ನಡೆದ ಸಭೆಯಲ್ಲಿ ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು.