Monday, November 7, 2022

ಕ್ಷೇತ್ರದಲ್ಲಿ ಪುನಃ ಒಕ್ಕಲಿಗರು ಪ್ರಾಬಲ್ಯ ಸಾಧಿಸಲು ವೇದಿಕೆ ಅಸ್ತಿತ್ವಕ್ಕೆ : ಎಸ್. ಕುಮಾರ್

ಭದ್ರಾವತಿ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ  ಪೂರ್ವಭಾವಿ ಸಭೆ ಜರುಗಿತು.
    ಭದ್ರಾವತಿ, ನ. ೭ : ಈ ಹಿಂದೆ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದ ಒಕ್ಕಲಿಗರು ಇದೀಗ ತಮ್ಮ ಪ್ರಾಬಲ್ಯ ಕಳೆದುಕೊಳ್ಳುತ್ತಿದ್ದಾರೆ. ಎಲ್ಲಾ ರಂಗದಲ್ಲೂ ಶೋಷಣೆಗೆ ಒಳಗಾಗುತ್ತಿದ್ದು, ಈಗಲಾದರೂ ಎಚ್ಚೆತ್ತುಕೊಂಡು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘಟಿತರಾಗುವುದು ಅನಿವಾರ್ಯವಾಗಿದೆ ಎಂದು ಒಕ್ಕಲಿಗ ಸಮಾಜದ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಹೇಳಿದರು.
ಅವರು ಸೋಮವಾರ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಸ್ತುತ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರು ಸಾಕಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ. ಸಮುದಾಯದವರ ರಕ್ಷಣೆ ಇಂದು ಅಗತ್ಯವಾಗಿದ್ದು, ಪಕ್ಷ ಭೇದ, ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರು ಒಗ್ಗಟ್ಟಾಗಿ ಸಂಘಟಿತರಾಗಬೇಕಾಗಿದೆ. ಆಗ ಮಾತ್ರ ಸಮುದಾಯಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ. ನಮ್ಮ ಹೋರಾಟಗಳು ಯಶಸ್ವಿಯಾಗುತ್ತವೆ ಎಂದರು.
ಸಮುದಾಯದ ಅನೇಕ ಮುಖಂಡರು ಮಾತನಾಡಿ, ಈಗಲಾದರೂ ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಎಲ್ಲರಿಗೂ ಮೊದಲು ಸಮುದಾಯದವರ ಹಿತರಕ್ಷಣೆ ಮುಖ್ಯವಾಗಿದ್ದು, ಈ ಹಿನ್ನಲೆಯಲ್ಲಿ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ಬರುತ್ತಿರುವುದು ಸಮುದಾಯಕ್ಕೆ ಹೆಚ್ಚಿನ ಶಕ್ತಿ ಬಂದಂತಾಗಿದೆ ಎಂದರು.
ರೈತ ಮುಖಂಡ ಮಂಜಪ್ಪ ಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಾಲಕೃಷ್ಣ, ಕಬಡ್ಡಿ ಕೃಷ್ಣೇಗೌಡ, ಟಿ. ವೆಂಕಟೇಶ್, ಸಾವಿತ್ರಿ ಪುಟ್ಟೇಗೌಡ, ಕೃಷ್ಣಮೂರ್ತಿ, ರಮೇಶ್, ಮಣಿ ಎಎನ್‌ಎಸ್, ಮಹೇಶ್, ಅನಿಲ್‌ಕುಮಾರ್, ಜಯರಾಮ್, ಲವೇಶ್‌ಗೌಡ,  ಕ್ಲಬ್ ಸುರೇಶ್, ಕೃಷ್ಣಪ್ಪ, ಎನ್. ರಾಮಕೃಷ್ಣ, ಸುರೇಶ್, ಜಯರಾಂ ಗೊಂದಿ, ಗಂಗಾಧರ್, ಎಲ್. ದೇವರಾಜ್  ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಇಂಟರ್ ಸಿಬಿಎಸ್‌ಇ ಸ್ಕೂಲ್ ಅಥ್ಲೆಟಿಕ್ ಮೀಟ್‌ನಲ್ಲಿ ಬಿಜಿಎಸ್ ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ

ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಇಂಟರ್ ಸಿಬಿಎಸ್‌ಇ ಸ್ಕೂಲ್ ಅಥ್ಲೆಟಿಕ್ ಮೀಟ್ ೧೪ ವರ್ಷದೊಳಗಿನ ವಯೋಮಾನದ ಕ್ರೀಡಾಕೂಟದಲ್ಲಿ ತಾಲೂಕಿನ ಕಾರೇಹಳ್ಳಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ(ಬಿಜಿಎಸ್) ಶಾಲೆಯ ಮಕ್ಕಳು ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿಕೊಂಡಿದ್ದಾರೆ.
    ಭದ್ರಾವತಿ, ನ. ೭ : ಶಿವಮೊಗ್ಗ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ಸಹ್ಯಾದ್ರಿ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್ ಸಹಕಾರದೊಂದಿಗೆ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಇಂಟರ್ ಸಿಬಿಎಸ್‌ಇ ಸ್ಕೂಲ್ ಅಥ್ಲೆಟಿಕ್ ಮೀಟ್ ೧೪ ವರ್ಷದೊಳಗಿನ ವಯೋಮಾನದ ಕ್ರೀಡಾಕೂಟದಲ್ಲಿ ತಾಲೂಕಿನ ಕಾರೇಹಳ್ಳಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ(ಬಿಜಿಎಸ್) ಶಾಲೆಯ ಮಕ್ಕಳು ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿಕೊಂಡಿದ್ದಾರೆ.
    ೮ನೇ ತರಗತಿ ವಿದ್ಯಾರ್ಥಿಗಳಾದ ಜಸ್ವಂತ್ ರೆಡ್ಡಿ ಉದ್ದ ಜಿಗಿತ ಹಾಗು ೨೦೦ ಮೀಟರ್ ಓಟದಲ್ಲಿ ಪ್ರಥಮ, ವೇದಾಂತ್ ಬಿ.ಎಂ ಗುಂಡು ಎಸೆತದಲ್ಲಿ ದ್ವಿತೀಯ, ಸಮರ್ಥ್ ಚಕ್ರವರ್ತಿ ೧೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಹಾಗು ಬಾಲಕರ ವಿಭಾಗದ ರಿಲೇ ಸಮರ್ಥ್ ಚಕ್ರವರ್ತಿ ಮತ್ತು ಜಸ್ವಂತ್ ರೆಡ್ಡಿ ಹಾಗು ೭ನೇ ತರಗತಿ ವಿದ್ಯಾರ್ಥಿಗಳಾದ ಕಾರ್ತಿಕ್ ರೆಡ್ಡಿ ಮತ್ತು ಶ್ರೀಧರ್ ಹಾಗು ಬಾಲಕಿಯರ ವಿಭಾಗದಲ್ಲಿ ೭ನೇ ತರಗತಿ ವಿದ್ಯಾರ್ಥಿನಿಯರಾದ ಕೆ. ಬಿಂದು, ಎಸ್. ಹರ್ಷಿತ, ಆರ್. ಶ್ರೇಯ ಮತ್ತು ೮ನೇ ತರಗತಿ ವಿದ್ಯಾರ್ಥಿನಿ ತನಿಷಾ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಜಸ್ವಂತ್ ರೆಡ್ಡಿ ಕ್ರೀಡಾಕೂಟ ಸಮಗ್ರ ಬಹುಮಾನ ಪಡೆದುಕೊಂಡು ಕೀರ್ತಿ ತಂದಿದ್ದಾರೆ.
    ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಎಲ್. ವೆಂಕಟೇಶ್ ನಾಯ್ಕ್, ಪ್ರಭಾಕರನ್ ಮತ್ತು ಭಾಗ್ಯಶ್ರೀ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಬೇತಿ ನೀಡುವ ಮೂಲಕ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಗೆ ಕಾರಣಕರ್ತರಾಗಿದ್ದು, ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪ್ರಶಸ್ತಿ ತಮ್ಮದಾಗಿಸಿಕೊಂಡಿರುವ ವಿದ್ಯಾರ್ಥಿಗಳನ್ನು ಹಾಗು ದೈಹಿಕ ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.  

ನ.೮ರಂದು ಪಾರ್ಶ್ವ ಚಂದ್ರಗ್ರಹಣ : ಬರೀಗಣ್ಣಿನಿಂದ ವೀಕ್ಷಿಸಿ, ಆನಂದಿಸಿ

ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹರೋನಹಳ್ಳಿ ಸ್ವಾಮಿ

ಪಾರ್ಶ್ವ ಚಂದ್ರಗ್ರಹಣ ಸಂಭವಿಸುವ ಪ್ರಕ್ರಿಯೆ
    ಭದ್ರಾವತಿ, ನ. ೭ :  ಪಾರ್ಶ್ವ ಚಂದ್ರಗ್ರಹಣ ನ.೮ರ ಮಂಗಳವಾರ ಗೋಚರಿಸಲಿದ್ದು, ನಿಸರ್ಗ ಚಲನೆಯ ಈ ನೆರಳು ಬೆಳಕಿನ ಆಟದ ವಿಸ್ಮಯ ಬರೀಗಣ್ಣಿನಿಂದ ವೀಕ್ಷಿಸಿ ಆನಂದಿಸಬಹುದಾಗಿದೆ ಎಂದು ಹವ್ಯಾಸಿ ಖಗೋಳ ಶಾಸ್ತ್ರಜ್ಞ  ಹರೋನಹಳ್ಳಿ ಸ್ವಾಮಿ ತಿಳಿಸಿದ್ದಾರೆ.
    ಇತ್ತೀಚೆಗೆ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಿದ್ದು, ಇದೀಗ ಪಾರ್ಶ್ವ ಚಂದ್ರಗ್ರಹಣ ಎದುರಾಗುತ್ತಿದೆ. ಸಂಜೆ ೫.೫೭ ರಿಂದ ೬.೧೮ರ ವರೆಗೆ ಗೋಚರಿಸಲಿದ್ದು, ನಿಸರ್ಗದ ಈ ನೆರಳು ಬೆಳಕಿನ ಆಟವನ್ನು ಕಣ್ತುಂಬಿಕೊಂಡು ಆನಂದಿಸಬಹುದಾಗಿದೆ. ಬರೀಗಣ್ಣಿನಿಂದ ವೀಕ್ಷಿಸಬಹುದಾಗಿದ್ದು, ಕಣ್ಣಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇದು ಸಂಪೂರ್ಣ ಖಗ್ರಾಸ ಚಂದ್ರಗ್ರಹಣವಾಗಿದ್ದು, ದಕ್ಷಿಣ ಭಾರತೀಯರಿಗೆ ಗೋಚರಿಸಲಿದೆ.
    ಚಂದ್ರಗ್ರಹಣ ಹೇಗೆ ಸಂಭವಿಸುತ್ತದೆ ?
    ಸೂರ್ಯನ ಸುತ್ತಾ ಭೂಮಿ, ಭೂಮಿಯ ಸುತ್ತಾ ಚಂದ್ರ ಗುರುತ್ವ ಬಲದ ಕಾರಣ ಸುತ್ತುತ್ತಿವೆ. ಸೂರ್ಯ ಮತ್ತು ಚಂದ್ರರ ನಡುವೆ ಭೂಮಿಯು ಒಂದೇ ಸಮತಲದೊಂದಿಗೆ ಸರಳ ರೇಖೆಯಲ್ಲಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಭೂಮಿ ಚಂದ್ರನನ್ನು ಮರೆ ಮಾಡುವ ಘಟನೆಯೇ ಚಂದ್ರಗ್ರಹಣ.
    ಚಂದ್ರನನ್ನು ಭೂಮಿಯ ನೆರಳು ಪೂರ್ಣ ಮುಚ್ಚಿದಾಗ ಪೂರ್ಣ ಚಂದ್ರಗ್ರಹಣ, ಭಾಗಶಃ ಮರೆಮಾಡಿದರೆ ಪಾರ್ಶ್ವ ಚಂದ್ರಗ್ರಹಣ ಎನ್ನುತ್ತೇವೆ.
    ಕೆಂಪು ಬಣ್ಣದ ಚಂದ್ರ ಗೋಚರ :
    ಹುಣ್ಣಿಮೆ ಪೂರ್ವದಲ್ಲಿ ಚಂದ್ರ ಉದಯವಾಗುತ್ತಿದ್ದರೆ, ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿರುವಾಗ ಸೂರ್ಯನ ಬೆಳಕು ಭೂಮಿಯ ವಾತಾವರಣದ ಕೆಂಪುಧೂಳಿನ ಮೂಲಕ ಹಾದು ಬರುವಾಗ ಬೆಳಕಿನ ವಕ್ರೀಭವನದ ಕಾರಣ ಕೆಂಪು ಬಣ್ಣ ನಮ್ಮ ಕಣ್ಣು ತಲುಪುವುದರಿಂದ ಚಂದ್ರ ಕೆಂಪು ಬಣ್ಣದಿಂದ ಗೋಚರಿಸುವನು. ಕೆಂಪು ಬಣ್ಣ ಹೆಚ್ಚಾಗಿದ್ದರೆ, ಧೂಳಿನ ಮಾಲಿನ್ಯ ಹೆಚ್ಚಾಗಿದೆ ಎಂದರ್ಥ,
    ಹಿರಿಯೂರು ಗ್ರಾಮದಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ :
    ಟೆಲಿಸ್ಕೋಪ್ ಮೂಲಕ ಸಂಜೆ ಹಿರಿಯೂರು ರಂಗಮಂದಿರದಲ್ಲಿ ಗ್ರಹಣ, ಗುರು, ಶನಿ ಗ್ರಹಗಳ ವೀಕ್ಷಣೆ, ಚಂದ್ರನ ಕುಳಿಗಳ ದರ್ಶನ, ಆಶಾಕ ವೀಕ್ಷಣೆ ಮಾಡಿಸಲಾಗುವುದು. ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಹರೋನಹಳ್ಳಿ ಸ್ವಾಮಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: ೭೮೯೨೧೫೪೬೯೫ ಸಂಖ್ಯೆಗೆ ಕರೆ ಮಾಡಬಹುದಾಗಿದೆ.