ಶನಿವಾರ, ಜುಲೈ 25, 2020

ಮಕ್ಕಳ ವೈದ್ಯ ಸೇರಿ ೬ ಮಂದಿಗೆ ಕೊರೋನಾ ಸೋಂಕು

ಭದ್ರಾವತಿಯಲ್ಲಿ ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಆರೋಗ್ಯ ನಿರೀಕ್ಷಕಿ ಲತಾಮಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಕೊರೋನಾ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. 
ಭದ್ರಾವತಿ, ಜು. ೨೫: ತಾಲೂಕಿನಲ್ಲಿ  ಕೊರೋನಾ ಸೋಂಕು ಪ್ರಕರಣಗಳು ಮುಂದುವರೆದಿದ್ದು, ಶನಿವಾರ ಪುನಃ ೬ ಪ್ರಕರಣಗಳು ಪತ್ತೆಯಾಗಿವೆ. ಕೊರೋನಾ ವಾರಿಯರ್ಸ್ ಮಕ್ಕಳ ವೈದ್ಯನಿಗೂ ಸೋಂಕು ತಗುಲಿದೆ. 
ಸಿಎಂಎಸ್ ಚಿತ್ರ ಮಂದಿರ ಹಿಂಭಾಗದ ೬೨ ವರ್ಷದ ಮಕ್ಕಳ ವೈದ್ಯ, ಹೊಸಮನೆ ವಿಜಯನಗರ ಕಾಚಗೊಂಡನಹಳ್ಳಿಯಲ್ಲಿ ೨೨ ವರ್ಷದ ಹುಡುಗ, ಗೌಳಿಗರ ಬೀದಿಯಲ್ಲಿ ೬೨ ವರ್ಷದ ವ್ಯಾಪಾರಿ, ಹೊನ್ನಟ್ಟಿಹೊಸೂರು ಗ್ರಾಮದಲ್ಲಿ ೩೩, ತಡಸ ಗ್ರಾಮದಲ್ಲಿ ೩೮ ವರ್ಷದ ಪುರುಷ ಮತ್ತು ಸಿಂಗನಮನೆ ಗ್ರಾಮದಲ್ಲಿ ೫೪ ವರ್ಷದ ವ್ಯಕ್ತಿ ಸೋಂಕಿಗೆ ಒಳಗಾಗಿದ್ದಾರೆ. 
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಆರೋಗ್ಯ ನಿರೀಕ್ಷಕಿ ಲತಾಮಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ. 

ಕಾರ್ಗಿಲ್ ಯೋಧರ ಸ್ಮರಣೆ : ಆಕರ್ಷಕ ಕಲಾಕೃತಿ ರಚನೆ

ಕಾರ್ಗಿಲ್ ಯೋಧರ ಸ್ಮರಣೆಗಾಗಿ ಭದ್ರಾವತಿ ಹಳೇನಗರದ ನಿವಾಸಿ ಸೂಕ್ಷ್ಮ ಕೆತ್ತನೆಗಳ ಕಲಾವಿದ ಸಚಿನ್ ಎಂ. ವರ್ಣೇಕರ್ ಈ ಬಾರಿ ಕಲಾಕೃತಿ ರಚಿಸಿರುವುದು. 
ಭದ್ರಾವತಿ, ಜು. ೨೫: ಕಾರ್ಗಿಲ್ ಯೋಧರ ಸ್ಮರಣೆಗಾಗಿ ಹಳೇನಗರದ ನಿವಾಸಿ ಸೂಕ್ಷ್ಮ ಕೆತ್ತನೆಗಳ ಕಲಾವಿದ ಸಚಿನ್ ಎಂ. ವರ್ಣೇಕರ್ ಈ ಬಾರಿ ಕಲಾಕೃತಿ ರಚಿಸಿದ್ದು, ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಪ್ರಶಸ್ತಿ ಪುರಸ್ಕೃತ ಸಚಿನ್, ಅತಿ ಚಿಕ್ಕದಾದ ೦.೮ ಇಂಚು ಎತ್ತರ ಮತ್ತು ೦.೨೪೦ ಗ್ರಾಂ. ತೂಕದ ಬಂಗಾರದಿಂದ ತಯಾರಿಸಲಾದ ಆಕರ್ಷಕ ಕಲಾಕೃತಿಯನ್ನು ರಚಿಸುವ ಮೂಲಕ ಗಮನ ಸೆಳೆದಿದ್ದು, ಈ ಹಿಂದೆ ಅತಿ ಚಿಕ್ಕದಾದ ಶಿವಲಿಗ, ಆಯೋಧ್ಯೆ ರಾಮಮಂದಿರ, ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ  ಮಂಜುನಾಥಸ್ವಾಮಿ ದೇವಸ್ಥಾನ ಸೇರಿದಂತೆ ಹಲವು ಮಾದರಿಗಳ ಕಲಾಕೃತಿ ರಚಿಸಿದ್ದಾರೆ. 
ಕರ್ನಾಟಕ ರಾಮ್ ಸೇನಾ ಸಂಘಟನೆ ತಾಲೂಕು ಅಧ್ಯಕ್ಷರು ಸಹ ಆಗಿರುವ ಸಚಿನ್ ಭಾರತೀಯ ಸೈನಿಕರ ಮೇಲೆ ಅಪಾರ ಗೌರವ ಹೊಂದಿದ್ದು, ಸೈನಿಕರ ಹೋರಾಟ ಸ್ಮರಸಿಕೊಂಡು ಅವರಿಗೆ ಮತ್ತಷ್ಟು ಸ್ಪೂರ್ತಿ ತಂದು ಕೊಡುವ ನಿಟ್ಟಿನಲ್ಲಿ ಈ ಬಾರಿ ಕಲಾಕೃತಿ ರಚಿಸಿದ್ದಾರೆ. 

ವಿಕಲಚೇತನ ಸಂಕಷ್ಟಕ್ಕೆ ಸ್ಪಂದಿಸಿದ ಶ್ರೀ ಚನ್ನವೀರಸ್ವಾಮಿ ಮಠ

ಭದ್ರಾವತಿ ತಾಲೂಕಿನ ಅರಕರೆ ಗ್ರಾಮದ ಶ್ರೀ ಚನ್ನವೀರಸ್ವಾಮಿ ಮಠ ವತಿಯಿಂದ ವಿಕಲಚೇತನ ಬಾಲಕನೊಬ್ಬನಿಗೆ ಗಾಲಿ ಕುರ್ಚಿ ವಿತರಿಸಲಾಯಿತು. 
ಭದ್ರಾವತಿ, ಜು. ೨೫: ತಾಲೂಕಿನ ಅರಕರೆ ಗ್ರಾಮದ ಶ್ರೀ ಚನ್ನವೀರಸ್ವಾಮಿ ಮಠ ವಿಕಲಚೇತನ ಬಾಲಕನೊಬ್ಬನ ಸಂಕಷ್ಟಕ್ಕೆ ಸ್ಪಂದಿಸಿದೆ. 
ಡಿ.ಬಿ ಹಳ್ಳಿ ಗ್ರಾಮದ ತಿಮ್ಮಯ್ಯ ಎಂಬುವರ ಮಗ ಶ್ರೀನಿವಾಸ ಅಂಗ ವೈಕಲ್ಯದಿಂದ ಬಳಲುತ್ತಿದ್ದು, ಈ ಬಾಲಕನ ಸಂಕಷ್ಟಕ್ಕೆ ಸ್ಪಂದಿಸಿ ಅಗತ್ಯವಿರುವ ಗಾಲಿ ಕುರ್ಚಿ ವಿತರಿಸಲಾಯಿತು. 
ಮಠದ ಪೀಠಾಧ್ಯಕ್ಷ ಶ್ರೀ ಕರಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅರಕೆರೆ ಭೈರೇಶ್‌ಕುಮಾರ್ ಹಾಗೂ ಭಕ್ತರು ಉಪಸ್ಥಿತರಿದ್ದರು. 

ಕೊನೆಗೂ ಅನ್ನದಾನದ ಪ್ರತಿಮೆಗೆ ಮುಕ್ತಿ : ಆ.5ರಂದು ಸರ್.ಎಂ.ವಿ ಪ್ರತಿಮೆ ಲೋಕಾರ್ಪಣೆ

ಭದ್ರಾವತಿಯಲ್ಲಿ ಆ.5ರಂದು ಲೋಕಾರ್ಪಣೆಗೊಳ್ಳಲಿರುವ ಸರ್.ಎಂ ವಿಶ್ವೇಶ್ವರಯ್ಯನವರ ಪ್ರತಿಮೆಯೊಂದಿಗೆ ಶಿಲ್ಪ ಕಲಾವಿದ ಎಸ್.ಜಿ ಶಂಕರಮೂರ್ತಿ ಉಪಸ್ಥಿತರಿರುವುದು. 
ಭದ್ರಾವತಿ, ಜು. 25: ಸುಮಾರು 2 ವರ್ಷಗಳಿಂದ ಲೋಕಾರ್ಪಣೆಗೊಳ್ಳದೆ ನೆನೆಗುದಿಗೆ ಬಿದ್ದಿರುವ ನಗರದ ರೈಲ್ವೆ ನಿಲ್ದಾಣದ ಬಳಿ ಬಿ.ಎಚ್ ರಸ್ತೆಗೆ ಹೊಂದಿಕೊಂಡಿರುವ ನಿಲ್ದಾಣದ ದ್ವಾರಬಾಗಿಲಿನಲ್ಲಿ ಪ್ರತಿಷ್ಠಾಪಿಸಲಾಗಿರುವ ನಗರದ ಅನ್ನದಾತ, ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯನವರ ಪ್ರತಿಮೆಗೆ ಕೊನೆಗೂ ಮುಕ್ತಿ ಲಭಿಸಿದೆ. 
ರೈಲ್ವೆ ಸಲಹಾ ಸಮಿತಿ ಸದಸ್ಯರಾಗಿ ನಗರದ ಹಿರಿಯ ಬಿಜೆಪಿ ಮುಖಂಡ ಎನ್. ವಿಶ್ವನಾಥರಾವ್ ನೇಮಕಗೊಂಡ ನಂತರ  ನಗರದ ರೈಲ್ವೆ ನಿಲ್ದಾಣದ ಅಭಿವೃದ್ಧಿ ಹಂತ ಹಂತವಾಗಿ ನಡೆಯುತ್ತಿದ್ದು, ನಿಲ್ದಾಣದ ಒಳ ಹಾಗೂ ಹೊರ ಭಾಗದಲ್ಲಿ ರೈಲ್ವೆ ಇಲಾಖೆ ಅನುದಾನದ ಜೊತೆಗೆ ಲೋಕಸಭಾ ಸದಸ್ಯರು, ಸ್ಥಳೀಯ ಶಾಸಕರು, ನಗರಸಭೆ ಆಡಳಿತ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆರ್ಥಿಕ ನೆರವಿನೊಂದಿಗೆ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. 
ಈ ನಡುವೆ ನಗರದ ಅನ್ನದಾತ, ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯನವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಅವರ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಈ ಪ್ರತಿಮೆ ನಿರ್ಮಾಣ ಕಾರ್ಯವನ್ನು ಸಿದ್ದರೂಢನಗರದ ರಂಗದಾಸೋಹಿ, ಹಿರಿಯ ಶಿಲ್ಪ ಕಲಾವಿದ ಎಸ್.ಜಿ ಶಂಕರಮೂರ್ತಿ ವಹಿಸಿಕೊಂಡಿದ್ದರು. ಮೇ, 2018ರಂದು ಸುಮಾರು 8.5 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಶೀಘ್ರವಾಗಿ ಮುಕ್ತಾಯಗೊಳಿಸಿದ್ದರು. ನಂತರ ನಿಗದಿತ ಸ್ಥಳದಲ್ಲಿ ಪ್ರತಿಮೆ ಪ್ರತಿಷ್ಠಾಪನೆಗೊಂಡರೂ ಸಹ  ಲೋಕಾರ್ಪಣೆಗೊಳ್ಳದೆ ನೆನೆಗುದಿಗೆ ಬಿದ್ದಿತ್ತು. ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳು ಪ್ರತಿಮೆ ಅನಾವರಣಗೊಳಿಸುವಂತೆ ಹಲವು ಬಾರಿ ಒತ್ತಾಯಿಸಿದ್ದವು. 
ಇದೀಗ ಆ.05ರಂದು ಬೆಳಿಗ್ಗೆ 11 ಗಂಟೆಗೆ ಲೋಕಾರ್ಪಣೆ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್, ಶಾಸಕ ಬಿ.ಕೆ ಸಂಗಮೇಶ್ವರ್, ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್, ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.