೪ ಜನರ ಪೈಕಿ ಗೀತಾಗೆ ಒಲಿದ ಅದೃಷ್ಟ, ಛಲವಾದಿ ಸಮಾಜದ ಅಧ್ಯಕ್ಷನಿಗೆ ಒಲಿದ ಅದೃಷ್ಟ
ಭದ್ರಾವತಿ ನಗರಸಭೆ ನೂತನ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್
ಭದ್ರಾವತಿ, ಅ. ೧೬: ಈ ಬಾರಿ ನಡೆದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲೂ ಹಲವು ವಿಶೇಷತೆಗಳು ಕಂಡು ಬಂದವು.
ಪ್ರಮುಖವಾಗಿ ಅಧ್ಯಕ್ಷ ಸ್ಥಾನಕ್ಕೆ ಸಹೋದರಿಬ್ಬರು ತಮ್ಮ ಪತ್ನಿಯರನ್ನು ಕಣಕ್ಕಿಳಿಸಿದ್ದು ವಿಶೇಷವಾಗಿ ಕಂಡು ಬಂದಿತು. ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದಿಂದ ಬಿ.ಎಸ್ ಸುಬ್ಬಣ್ಣ ತಮ್ಮ ಪತ್ನಿ, ವಾರ್ಡ್ ನಂ.೧೫ರ ಸದಸ್ಯೆ ಮಂಜುಳ ಅವರನ್ನು ಹಾಗು ಬಿಜೆಪಿ ಪಕ್ಷದಿಂದ ಬಿ.ಎಸ್ ನಾರಾಯಣ್ಣಪ್ಪ ತಮ್ಮ ಪತ್ನಿ, ವಾರ್ಡ್ ನಂ.೫ರ ಸದಸ್ಯೆ ಶಶಿಕಲಾ ಅವರನ್ನು ಕಣಕ್ಕಿಳಿಸಿದ್ದರು. ಮಂಜುಳ ೧೨ ಮತಗಳನ್ನು ಶಶಿಕಲಾ ೪ ಮತಗಳನ್ನು ಪಡೆದು ಪರಾಭವಗೊಂಡರು.
ಪರಿಶಿಷ್ಟ ಉಪಾಧ್ಯಕ್ಷ ಸ್ಥಾನಕ್ಕೆ ಎರಡು ಪಕ್ಷಗಳು ಒಂದೇ ಸಮುದಾಯದವರನ್ನು ಕಣಕ್ಕಿಳಿಸಿರುವುದು ಮತ್ತೊಂದು ವಿಶೇಷವಾಗಿ ಕಂಡು ಬಂದಿತು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ವಾರ್ಡ್ ನಂ.೯ರ ಸದಸ್ಯ ಚನ್ನಪ್ಪ ಮತ್ತು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ವಾರ್ಡ್ ನಂ.೨೫ರ ಸದಸ್ಯ ಕೆ. ಉದಯಕುಮಾರ್ ಇಬ್ಬರು ಛಲವಾದಿ ಸಮಾಜದವರಾಗಿದ್ದು, ಚನ್ನಪ್ಪ ೨೦ ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಉದಯಕುಮಾರ್ ೧೨ ಮತಗಳನ್ನು ಪಡೆದು ಪರಾಭವಗೊಂಡರು.
ಭದ್ರಾವತಿ ನಗರಸಭೆ ನೂತನ ಉಪಾಧ್ಯಕ್ಷ ಚನ್ನಪ್ಪ
ಮತ್ತೊಂದು ವಿಶೇಷ ಎಂದರೆ ಬಿಜೆಪಿ ಸದಸ್ಯರು ಅಧ್ಯಕ್ಷರ ಚುನಾವಣೆಯಲ್ಲಿ ಮಾತ್ರ ಮತ ಚಲಾಯಿಸಿದ್ದು, ಉಪಾಧ್ಯಕ್ಷರ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಇಲ್ಲದ ಕಾರಣ ತಟಸ್ಥರಾಗಿ ಉಳಿದರು.
ಗೀತಾಗೆ ಒಲಿದ ಅದೃಷ್ಟ :
ವಾರ್ಡ್ ನಂ.೨ರ ಗೀತಾ ರಾಜ್‌ಕುಮಾರ್, ವಾರ್ಡ್ ನಂ.೧೩ರ ಅನುಸುಧಾ ಮೋಹನ್, ವಾರ್ಡ್ ನಂ.೩೪ರ ಲತಾ ಚಂದ್ರಶೇಖರ್ ಮತ್ತು ವಾರ್ಡ್ ನಂ.೩೫ರ ಶೃತಿ ವಸಂತಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಾಗಿದ್ದರು. ಈ ನಾಲ್ವರು ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದು, ಇವರಲ್ಲಿ ಯಾರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ಗೊಂದಲ ನಿರ್ಮಾಣವಾಗಿತ್ತು. ಅಂತಿಮವಾಗಿ ಶನಿವಾರ ಬೆಳಿಗ್ಗೆ ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗೀತಾ ರಾಜ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಒಟ್ಟು ೩೦ ತಿಂಗಳ ಅಧಿಕಾರದ ಅವಧಿಯಲ್ಲಿ ನಾಲ್ವರಿಗೂ ಅವಕಾಶ ಕಲ್ಪಿಸಿಕೊಡುವುದಾಗಿ ಸಭೆಯಲ್ಲಿ ಭರವಸೆ ನೀಡಲಾಗಿದ್ದು, ಒಂದು ವೇಳೆ ಈ ರೀತಿ ನಡೆದುಕೊಂಡಲ್ಲಿ ಗೀತಾ ಅವರ ಅವಧಿ ಕೇವಲ ೭.೫ ತಿಂಗಳು ಮಾತ್ರ ಎನ್ನಲಾಗಿದೆ.
ಛಲವಾದಿ ಸಮಾಜದ ಅಧ್ಯಕ್ಷನಿಗೆ ಉಪಾಧ್ಯಕ್ಷ ಸ್ಥಾನ :
ತಾಲೂಕು ಛಲವಾದಿ ಸಮಾಜದ ಅಧ್ಯಕ್ಷ, ವಾರ್ಡ್ ನಂ.೯ರ ಸದಸ್ಯ ಚನ್ನಪ್ಪ ಈ ಬಾರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎರಡು ಬಾರಿ ನಗಸಭೆಗೆ ಆಯ್ಕೆಯಾಗಿದ್ದು, ಒಂದು ಬಾರಿ ನಾಮನಿರ್ದೇಶನ ಸದಸ್ಯರಾಗಿ ಒಟ್ಟು ೩ ಬಾರಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ. ಅಲ್ಲದೆ ಚನ್ನಪ್ಪ ಹಿಂದೂ ಮಹಾಸಭಾ ಹಿಂದೂ ರಾಷ್ಟ್ರಸೇನಾ ಶ್ರೀ ವಿನಾಯಕ ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಛಲವಾದಿ ಸಮಾಜದ ಅಧ್ಯಕ್ಷರಾಗಿದ್ದ ಬದರಿನಾರಾಯಣ ಅವರು ಕಳೆದ ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.