ಬುಧವಾರ, ಮಾರ್ಚ್ 24, 2021

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಸರ್ವ ಸದಸ್ಯರ ಸಭೆ

ಭದ್ರಾವತಿ, ಮಾ. ೨೪: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಸರ್ವ ಸದಸ್ಯರ ಸಭೆ ಹಳೇನಗರದ ಸಂಘದ ನೂತನ ಕಟ್ಟಡದ ಆವರಣದಲ್ಲಿ ನಡೆಯಿತು.
    ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ ಮಾತನಾಡಿ, ಸಂಘದ ಬಹಳ ವರ್ಷಗಳ ಬೇಡಿಕೆ ಈಡೇರಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ಅನುದಾನ ಬಿಡುಗಡೆಗೊಳಿಸಿರುವ ಬಿ.ವೈ. ರಾಘವೇಂದ್ರ, ಶಾಸಕರ ನಿಧಿಯಿಂದ ಅನುದಾನ ಬಿಡುಗೊಳಿಸಿರುವ ಬಿ.ಕೆ ಸಂಗಮೇಶ್ವರ್ ಹಾಗು ದೇಣಿಗೆ ನೀಡಿರುವ ಸಂಘದ ಸದಸ್ಯರು, ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
   ಸಂಘದ ಖಜಾಂಚಿ ಲೆಕ್ಕಪತ್ರ ಮಂಡಿಸಿ ೫೦ ಲಕ್ಷ ರು. ವೆಚ್ಚದ ನೂತನ ಕಟ್ಟಡ ನಿರ್ಮಾಣಕ್ಕೆ ಇದುವರೆಗೂ ೩೨ ಲಕ್ಷ ರು. ಪಾವತಿಸಲಾಗಿದೆ. ಉಳಿದಂತೆ ಪ್ರಸಕ್ತ ಸಾಲಿನಲ್ಲಿ ಖರ್ಚು, ವೆಚ್ಚಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ ಎಂದರು.
    ಹಿರಿಯ ಸದಸ್ಯರಾದ ಕೆ. ಶಾಮಣ್ಣ, ಟಿ.ಜಿ ಚಂದ್ರಪ್ಪ, ಪಿಡಬ್ಲ್ಯೂಡಿ ರಂಗಸ್ವಾಮಿ, ಕೆ.ಎಸ್ ಶಿವಮೂರ್ತಿ, ಸಿ. ಪರಮೇಶ್ವರಪ್ಪ, ಎಚ್.ಎನ್ ಮಹಾರುದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿದ್ಯುತ್ ಕೊರತೆ : ಬೆಳಿಗ್ಗೆ, ಸಂಜೆ ತಲಾ ೧ ಗಂಟೆ ಲೋಡ್ ಶೆಡ್ಡಿಂಗ್

ಭದ್ರಾವತಿ, ಮಾ. ೨೪: ಅನಿವಾರ್ಯ ಕಾರಣಗಳಿಂದ ತಾಲೂಕಿನ ಮೆಸ್ಕಾಂ ವ್ಯಾಪ್ತಿಯ ವಿದ್ಯುತ್ ಪೂರೈಕೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ತಲಾ ೧ ಗಂಟೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ ಎಂದು ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
   ಕರ್ನಾಟಕ ಪವರ್ ಕಾರ್ಪೋರೇಷನ್, ಯುಪಿಸಿಎಲ್ ಮತ್ತು ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವುದರಿಂದ ಕೆಲವು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಈ ಹಿನ್ನಲೆಯಲ್ಲಿ ಬೇಡಿಕೆಯಷ್ಟು ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಕೆಪಿಸಿಯಿಂದ ಸುಮಾರು ೨೮೬೪ ಎಂ.ಡಬ್ಲ್ಯೂ, ಯುಪಿಸಿಎಲ್‌ನಿಂದ ಸುಮಾರು ೧೦೧೦ ಎಂ.ಡಬ್ಲ್ಯೂ ಮತ್ತು ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಸುಮಾರು ೪೦೭ ಎಂ.ಡಬ್ಲ್ಯೂನಷ್ಟು ವಿದ್ಯುತ್ ಕೊರತೆ ಉಂಟಾಗಿದೆ. ಈ ಹಿನ್ನಲೆಯಲ್ಲಿ ಮೆಸ್ಕಾಂ ೨೦೦ ಎಂ.ಡಬ್ಲ್ಯೂನಷ್ಟು ವಿದ್ಯುತ್ ಕೊರತೆ ಎದುರಿಸುವಂತಾಗಿದೆ.
    ಸ್ಟೇಟ್ ಲೋಡ್ ಡಿಸ್ಪ್ಯಾಚ್ ಸೆಂಟರ್ ಸೂಚನೆಯಂತೆ ತಾಲೂಕಿನಲ್ಲಿ ವಿದ್ಯುತ್ ಜಾಲದ ಸುರಕ್ಷತೆಯ ದೃಷ್ಟಿಯಿಂದ ಅನಿಯಮಿತವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಬರಬಹುದು. ಈ ಹಿನ್ನಲೆಯಲ್ಲಿ ಬೆಳಿಗ್ಗೆ ೧ ಗಂಟೆ ಹಾಗು ಸಂಜೆ ೧ ಗಂಟೆ ಲೋಡ್ ಶೆಡ್ಡಿಂಗ್ ಮಾಡಲಾಗುವುದು ಗ್ರಾಹಕರು ಸಹಕರಿಸುವಂತೆ ಕೋರಿದ್ದಾರೆ.

ಮಾ.೨೫ರಂದು ‘ಭದ್ರಾವತಿ ರಂಗಭೂಮಿ-ಭವಿತವ್ಯದ ದಾರಿಗಳು’

   ಭದ್ರಾವತಿ, ಮಾ. ೨೪: ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘ ಹಾಗು ರಂಗ ಕಲಾವಿದರು ಜೊತೆಗೂಡಿ ಮಾ.೨೫ರಂದು ಸಂಜೆ ೫.೪೫ಕ್ಕೆ 'ಭದ್ರಾವತಿ ರಂಗಭೂಮಿ-ಭವಿತವ್ಯದ ದಾರಿಗಳು' ವಿಚಾರ ಕುರಿತು ರಂಗ ಮಂಥನ ಏರ್ಪಡಿಸಲಾಗಿದೆ.
   ಶಿವಮೊಗ್ಗ ಕಲಾವಿದರು ಅಧ್ಯಕ್ಷ ಕೊಟ್ರಪ್ಪ ಜಿ. ಹಿರೇಮಾಗಡಿ ಅಧ್ಯಕ್ಷತೆ ವಹಿಸಲಿದ್ದು, ತಾಲೂಕು ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಅಪರಂಜಿ ಅಭಿನಯ ಶಾಲೆಯ ಅಪರಂಜಿ ಶಿವರಾಜ್ ಮತ್ತು ಕಲಾವಿದರು ಪ್ರಧಾನ ಕಾರ್ಯದರ್ಶಿ ಜಿ.ಆರ್ ಲವ ಉಪಸ್ಥಿತರಿರುವರು.

ಅದ್ದೂರಿಯಾಗಿ ಜರುಗಿದ ಶ್ರೀ ಮದ್ದೂರಮ್ಮ ದೇವಿ ಜಾತ್ರಾ ಮಹೋತ್ಸವ

ಭದ್ರಾವತಿ ನಗರಸಭೆ ವ್ಯಾಪ್ತಿಯ ಉಜ್ಜನಿಪುರ ಶ್ರೀ ಮದ್ದೂರಮ್ಮ ದೇವಿ ಜಾತ್ರಾ ಮಹೋತ್ಸವ ಎರಡು ದಿನಗಳ ಕಾಲ ಅದ್ದೂರಿಯಾಗಿ ಜರುಗಿತು. ಅಮ್ಮನವರಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ನೆರವೇರಿಸಲಾಯಿತು.
  ಭದ್ರಾವತಿ, ಮಾ. ೨೪: ನಗರಸಭೆ ವ್ಯಾಪ್ತಿಯ ಉಜ್ಜನಿಪುರ ಶ್ರೀ ಮದ್ದೂರಮ್ಮ ದೇವಿ ಜಾತ್ರಾ ಮಹೋತ್ಸವ ಎರಡು ದಿನಗಳ ಕಾಲ ಅದ್ದೂರಿಯಾಗಿ ಜರುಗಿತು.
   ಬುಧವಾರ ಮಧ್ಯಾಹ್ನ ಅಮ್ಮನವರಿಗೆ ವಿಶೇಷ ಪೂಜೆ, ಮಹಾಮಂಗಳಾರತಿ, ತಂಬಿಟ್ಟಿನ ಆರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
ದೇವಸ್ಥಾನ ಸೇವಾ ಸಮಿತಿ ವತಿಯಿಂದ ಭಕ್ತಾಧಿಗಳಿಗೆ ತಂಪು ಪಾನೀಯ ವಿತರಣೆ, ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.

ವಿಶ್ವ ಕ್ಷಯ ರೋಗ ದಿನಾಚರಣೆ : ಜಾಥಾ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಚಾಲನೆ

ಭದ್ರಾವತಿಯಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ಬುಧವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಚಾಲನೆ ನೀಡಿದರು.  
   ಭದ್ರಾವತಿ, ಮಾ. ೨೪: ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ಬುಧವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಚಾಲನೆ ನೀಡಿದರು.  
    ತಾಲೂಕು ಆರೋಗ್ಯಾಧಿಕಾರಿ ಎಂ.ವಿ ಅಶೋಕ್ ಮಾತನಾಡಿ,  'ಕ್ಷಯ ರೋಗ ನಿರ್ಮೂಲನೆಗೆ ಕಾಲಘಟಿಸುತ್ತಿದೆ' ಘೋಷ ವಾಕ್ಯದೊಂದಿಗೆ ಈ ಬಾರಿ ವಿಶ್ವ ಕ್ಷಯ ರೋಗ ದಿನಾಚರಣೆ ಆಚರಿಸಲಾಗುತ್ತಿದೆ. ಭಾರತದಲ್ಲಿ ಪ್ರತಿದಿನ ೬,೦೦೦ ರೋಗಿಗಳಿಗೆ ಕ್ಷಯರೋಗ ಕಂಡುಬರುತ್ತಿದ್ದು, ಸುಮಾರು ೬೦೦ ಜನ (೫ ನಿಮಿಷಕ್ಕೆ ಇಬ್ಬರು) ಸಾವನ್ನಪ್ಪುತ್ತಿದ್ದಾರೆ. ಸತತ ೨ ವಾರಗಳ ಕೆಮ್ಮು ಮತ್ತು ಕಫ, ಸಂಜೆ ಜ್ವರ, ಎದೆ ನೋವು, ರಾತ್ರಿ ವೇಳೆ ಬೆವರುವುದು, ತೂಕ ಕಡಿಮೆ ಆಗುವುದು ಹಾಗೂ ಕೆಲವೊಮ್ಮೆ ರಕ್ತದಲ್ಲಿ ಕಫ ಬೀಳುವುದು. ಕ್ಷಯರೋಗದ ಮುಖ್ಯ ಲಕ್ಷಣಗಳಾಗಿವೆ ಎಂದರು.
   ಕ್ಷಯರೋಗಿಯು ಕೆಮ್ಮಿದಾಗ ಮತ್ತು ಸೀನಿದಾಗ ಹೊರಬರುವ ತುಂತುರು ಹನಿಗಳಿಂದ ಗಾಳಿಯ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ರೋಗಾಣುಗಳು ಹರಡುತ್ತವೆ.  ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಾಹಿತಿ ಶಿಕ್ಷಣ ಮತ್ತು ಸಂಪರ್ಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಈ ವರ್ಷ ಕ್ಷಯರೋಗ ನಿರ್ಮೂಲನೆಗೆ ಶಿವಮೊಗ್ಗ ಜಿಲ್ಲೆ ಆಯ್ಕೆಯಾಗಿದ್ದು, ಈ ಹಿನ್ನಲೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ಬೀದಿ ನಾಟಕಗಳನ್ನು, ಶಾಲಾ-ಕಾಲೇಜುಗಳಲ್ಲಿ ಐ.ಇ.ಸಿ ಕಾರ್ಯಕ್ರಮ, ನಗರದ ಪ್ರಮುಖ ಕಟ್ಟಡಗಳ ಮೇಲೆ ಕೆಂಪು ದೀಪಗಳನ್ನು ಬೆಳಗಿಸುವುದು ಹಾಗು ತಾಲೂಕಿನ ಎಲ್ಲಾ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಆಯಾ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಐ.ಇ.ಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.  
    ಆಶಾ ಮೇಲ್ವಿಚಾರಕಿ ವಸಂತ, ಹಿರಿಯ ಆರೋಗ್ಯ ಸಹಾಯಕ ಆನಂದಮೂರ್ತಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ನಿರ್ಮಲ ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಕಾಲೇಜ್ ನರ್ಸಿಂಗ್ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
   ತಾಲೂಕು ಕಛೇರಿ ಮುಂಭಾಗ ಆರಂಭಗೊಂಡ ಜಾಥಾ ಬಸವೇಶ್ವರ ವೃತ್ತ, ಸಿ.ಎನ್ ರಸ್ತೆ ರಸ್ತೆ ಮೂಲಕ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ತಲುಪಿತು.