Tuesday, February 18, 2025

ಫೆ.೨೦ರಂದು ವಾಣಿಜ್ಯ ಮತ್ತು ನಿರ್ವಹಣೆ ವೇದಿಕೆ ಉದ್ಘಾಟನೆ

    ಭದ್ರಾವತಿ : ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಫೆ.೨೦ರಂದು ಬೆಳಿಗ್ಗೆ ೧೧ ಗಂಟೆಗೆ ವಾಣಿಜ್ಯ ಮತ್ತು ನಿರ್ವಹಣೆ ವೇದಿಕೆ ಉದ್ಘಾಟನೆ ನಡೆಯಲಿದೆ. 
    ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ ವತಿಯಿಂದ ಐಕ್ಯೂಎಸಿ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಕಾರ್ಯಕ್ರಮ ಕುವೆಂಪು ವಿ.ವಿ ವಾಣಿಜ್ಯ ಶಾಸ್ತ್ರ ವಿಭಾಗದ ಡೀನ್, ಹಿರಿಯ ಪ್ರಾಧ್ಯಾಪಕ ಪ್ರೊ. ಆರ್. ಹಿರೇಮಣಿ ನಾಯ್ಕ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಐಕ್ಯೂಎಸಿ  ಸಂಯೋಜಕ ಸಹಾಯಕ ಪ್ರಾಧ್ಯಾಪಕ ಎಂ. ಮಹಮದ್ ನಜೀಬ್, ವಾಣಿಜ್ಯ ಶಾಸ್ರ್ತ ವಿಭಾಗದ ಮುಖ್ಯಸ್ಥ ಆರ್. ಮಂಜಪ್ಪ, ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಟಿ.ಜಿ ಉಮಾ, ವೇದಿಕೆ ಸಂಯೋಜಕ, ಸಹಾಯಕ ಪ್ರಾಧ್ಯಾಪಕ ವಿ.ಬಿ ಚಿರಂಜೀವಿ, ಆರ್. ವೆಂಕಟೇಶ್, ಬಿ.ಜಿ ಅಕ್ಷತಾ, ಕೆ. ಶಂಕರ್ ಯಾದವ್, ಎಚ್.ಎನ್ ಸುಷ್ಮ ಮತ್ತು ಎಸ್. ಶಾಂತಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್. ಹೊಸಳ್ಳೇರ್ ಅಧ್ಯಕ್ಷತೆ ವಹಿಸಲಿದ್ದಾರೆ. 

ಮಕ್ಕಳನ್ನು ಕ್ರಿಯಾತ್ಮಕ ಚಟುವಟಿಕೆಗಳೊಂದಿಗೆ ಆಧ್ಯಾತ್ಮಿಕವಾಗಿ ಬೆಳೆಸಿ : ಸ್ಟೀವನ್ ಡೇಸಾ

ಧರ್ಮೋಪದೇಶ ತರಗತಿಯ ಸಮಾರೋಪ ಸಮಾರಂಭ 

ಭದ್ರಾವತಿ ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ಪುಣ್ಯಕ್ಷೇತ್ರದ ಪ್ರಾವಿಡೆನ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಧರ್ಮೋಪದೇಶ ತರಗತಿಗಳ ಸಮಾರೋಪ ಸಮಾರಂಭದಲ್ಲಿ ಧರ್ಮೋಪದೇಶ ಶಿಕ್ಷಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.  
    ಭದ್ರಾವತಿ : ಮಕ್ಕಳನ್ನು ಕ್ರಿಯಾತ್ಮಕ ಚಟುವಟಿಕೆಗಳೊಂದಿಗೆ ಆಧ್ಯಾತ್ಮಿಕವಾಗಿ ಬೆಳೆಸುವುದು ಅತಿ ಅವಶ್ಯಕ ಎಂದು ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ಪುಣ್ಯಕ್ಷೇತ್ರದ ಧರ್ಮಗುರು ಸ್ಟೀವನ್ ಡೇಸಾ ಹೇಳಿದರು. 
    ಅವರು ಪುಣ್ಯಕ್ಷೇತ್ರದ ಪ್ರಾವಿಡೆನ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಧರ್ಮೋಪದೇಶ ತರಗತಿಗಳ ಸಮಾರೋಪ ಸಮಾರಂಭದ ನೇತೃತ್ವವಹಿಸಿ ಮಾತನಾಡಿದರು. ಮಕ್ಕಳು ಏನೇ ಕಲಿತರು ದಯೆ, ಕರುಣೆ, ಮಮಕಾರ, ಪ್ರೀತಿ, ತಾಳ್ಮೆ, ಕುಟುಂಬದೊಂದಿಗೆ ಹೊಂದಿಕೊಂಡು ಹೋಗುವುದು ಮತ್ತು ಇತರರಿಗೆ ಸಹಾಯ ಮಾಡುವ ಗುಣಗಳು ಧರ್ಮೋಪದೇಶ ತರಗತಿಯಲ್ಲಿ ಮಕ್ಕಳು ಪಡೆಯುತ್ತಾರೆ ಎಂದರು.  
    ಧರ್ಮೋಪದೇಶ ಹೇಳಿಕೊಡುವ ಧರ್ಮ ಕೇಂದ್ರದ ಶಿಕ್ಷಕಿಯರು ಯಾವುದೇ ಸಂಭಾವನೆ ಇಲ್ಲದೆ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಧರ್ಮ ಕೇಂದ್ರದ ಮಕ್ಕಳಿಗೆ ಧರ್ಮೋಪದೇಶ ಬೋಧಿಸುವುದರೊಂದಿಗೆ ತಮ್ಮ ನಿಸ್ವಾರ್ಥ ಸೇವೆಯನ್ನು ಧರ್ಮ ಕೇಂದ್ರಕ್ಕೆ ಸಲ್ಲಿಸುತ್ತಿದ್ದಾರೆ. ಇವರ ಸೇವೆ ಶ್ಲಾಘನೀಯ ಮತ್ತು ಮೆಚ್ಚುವಂಥದ್ದು ಎಂದು ತಿಳಿಸಿದರು.
    ಪ್ರಸ್ತುತ ಮುಂಬೈನ ಧರ್ಮ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗುರುಗಳಾದ ಫಾದರ್ ಅಶ್ವಿಲ್ ಡಯಾಸ್, ನಿರ್ಮಲ ಆಸ್ಪತ್ರೆಯ ಸುಪಿರಿಯರ್ ಸಿಸ್ಟರ್ ವಿಲ್ಮಾ, ಧರ್ಮೋಪದೇಶ ತರಗತಿಗಳ ನಿರ್ದೇಶಕಿ ಸಿಸ್ಟರ್ ತೆರೇಸಾ, ಸಿಸ್ಟರ್ ಶೋಭಾನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
  ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು. ನಂತರ ೨೦೨೪-೨೫ನೇ ಸಾಲಿನಲ್ಲಿ ವಾರಕ್ಕೊಮ್ಮೆ ನಡೆದ ಧರ್ಮೋಪದೇಶ ತರಗತಿಯಲ್ಲಿ ಶೇ. ೭೫ ರಷ್ಟು ಹಾಜರಿ ಪಡೆದ ಮಕ್ಕಳಿಗೆ ಹಾಗೂ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಮಕ್ಕಳಿಗೆ ಬಹುಮಾನ ವಿತರಣೆ ವಿತರಿಸಲಾಯಿತು.  ಧರ್ಮೋಪದೇಶ ಶಿಕ್ಷಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.  ಪೋಷಕರು, ಮಕ್ಕಳು ಪಾಲ್ಗೊಂಡಿದ್ದರು.  ಪ್ರಿಯ ನಿರೂಪಿಸಿ ಜೋಶುವ ಥಾಮಸ್ ಸ್ವಾಗತಿಸಿದರು. ಕುಮಾರ್ ಜೆಸ್ಟಿನ್ ವಂದಿಸಿದರು.

ಫೆ.೧೯ರಂದು ಅಂಬೇಡ್ಕರ್‌ರವರ ೧೨ ಅಡಿ ಎತ್ತರದ ಕಂಚಿನ ಪ್ರತಿಮೆಗೆ ಹಾಲಿನ ಅಭಿಷೇಕ, ಬೃಹತ್ ಮಾಲಾರ್ಪಣೆ

ಅಂಬೇಡ್ಕರ್‌ರವರ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ
    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ, ಅಂಬೇಡ್ಕರ್ ವೃತ್ತದಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪುತ್ಥಳಿಗೆ ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ವತಿಯಿಂದ ಫೆ. ೧೯ರಂದು ಹಾಲಿನ ಅಭಿಷೇಕ ಮತ್ತು ಬೃಹತ್ ಮಾಲಾರ್ಪಣೆ ನಡೆಯಲಿದೆ. 
    ನಗರಸಭೆ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೧೨ ಅಡಿ ಎತ್ತರದ ಡಾ. ಬಿ.ಆರ್ ಅಂಬೇಡ್ಕರ್‌ರವರ ನೂತನ ಕಂಚಿನ ಪ್ರತಿಮೆ ಜ.೨೬ರಂದು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟನೆಗೊಳಿಸಿದ್ದರು. ಈ ಹಿಂದೆ ಪ್ರತಿಷ್ಠಾಪಿಸಲಾಗಿದ್ದ ಮೂರ್ತಿ ಬದಲಿಗೆ ಹೊಸದಾಗಿ ಅಂಬೇಡ್ಕರ್ ನೈಜತೆ ಹೋಲುವ ಪ್ರತಿಮೆ ಪ್ರತಿಷ್ಠಾಪಿಸುವಂತೆ ಪ್ರಗತಿಪರ ಹಾಗು ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಹೋರಾಟಗಾರರ ಬಹಳ ವರ್ಷಗಳ ಬೇಡಿಕೆಗೆ ಸ್ಪಂದಿಸಿ ನೂತನ ಪ್ರತಿಮೆ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. 
    ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಹಾಲಿನ ಅಭಿಷೇಕ ಮತ್ತು ಬೃಹತ್ ಮಾಲಾರ್ಪಣೆ ಕಾರ್ಯಕ್ರಮಕ್ಕೆ ಕ್ಷೇತ್ರದ ಸಮಸ್ತ ನಾಗರೀಕರು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ರಾಜ್ಯಾಧ್ಯಕ್ಷ ನಾರಾಯಣ ಐಹೊಳೆ ಕೋರಿದ್ದಾರೆ. 

ಫೆ.೨೦ರಂದು ಬೆಳಿಗ್ಗೆ ರೈತರಿಂದ ಪ್ರತಿಭಟನೆ

ಎಸ್. ಕುಮಾರ್ 
    ಭದ್ರಾವತಿ : ತಾಲೂಕಿನ ಬೆಳ್ಳಿಗೆರೆ, ಉದಯನಗರ ಮತ್ತು ಬದನೆಹಾಳ್ ಗ್ರಾಮಗಳ ಹೊಳೆಹೊನ್ನೂರು ಹೋಬಳಿ ರೈತರ ಹಿತ ರಕ್ಷಣಾ ಸಮಿತಿ ವತಿಯಿಂದ ಅರಣ್ಯ ಮತ್ತು ಕಂದಾಯ ಇಲಾಖೆಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಫೆ. ೨೦ರಂದು ಬೆಳಿಗ್ಗೆ ೧೧ ಗಂಟೆಗೆ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 
    ರೈತರು ಕಳೆದ ಸುಮಾರು ೬೫-೭೦ ವರ್ಷಗಳಿಂದ ಸಾಗುವಳಿ ಪತ್ರ ಪಡೆದು ಪಹಣಿ ಮತ್ತು ಇತರೆ ಎಲ್ಲಾ ದಾಖಲೆಗಳನ್ನು ಹೊಂದಿದ್ದರೂ ಸಹ ರೈತರ ಜಮೀನುಗಳಿಂದ ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇದಕ್ಕೂ ಮೊದಲು ಬೆಳಿಗ್ಗೆ ೧೦.೩೦ಕ್ಕೆ ರಂಗಪ್ಪ ವೃತ್ತದಿಂದ ತಾಲೂಕು ಕಛೇರಿವರೆಗೂ ಪಾದಯಾತ್ರೆ ನಡೆಯಲಿದೆ. ರೈತರ ಹೋರಾಟಕ್ಕೆ ಬ್ಲಾಕ್ ಕಾಂಗ್ರೆಸ್ ಬೆಂಬಲ ಸೂಚಿಸಿದ್ದು, ಜನಪ್ರತಿನಿಧಿಗಳು, ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್ ಕೋರಿದ್ದಾರೆ.