ಭದ್ರಾವತಿ ನಗರದ ಮಿಲಿಟ್ರಿ ಕ್ಯಾಂಪ್ ನಲ್ಲಿರುವ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಮಹಿಳಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಯೋಜಿಸಲಾಗಿತ್ತು.
ಭದ್ರಾವತಿ : ಮಹಿಳೆಯರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಯಾವುದೇ ಹಿಂಜರಿಕೆಯಿಲ್ಲದೆ ಮುಂದೆ ಬರೆಬೇಕು. ಆ ಮೂಲಕ ಸೇವೆ, ಹೋರಾಟ, ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ಹೇಳಿದರು.
ಅವರು ನಗರದ ಮಿಲಿಟ್ರಿ ಕ್ಯಾಂಪ್ ನಲ್ಲಿರುವ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮಹಿಳೆಯರಲ್ಲಿ ಮುಖ್ಯ ವಾಹಿನಿಗೆ ಬರಲು ಭಯ, ಆತಂಕ, ಮುಜುಗರ ಸ್ವಭಾವ ಇರಬಾರದು. ಧೈರ್ಯವಾಗಿ ಮನೆಯಿಂದ ಹೊರ ಬಂದು ಇಂತಹ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮಹಿಳೆಯರು ತಮ್ಮ ಮನಸ್ಥಿತಿಗಳನ್ನು ಬದಲಿಸಿಕೊಳ್ಳಬೇಕು ಎಂದರು.
ಯುವ ಮುಖಂಡ ಬಿ.ಎಸ್ ಗಣೇಶ್ ಮಾತನಾಡಿ, ಮಹಿಳೆಯರಿಗೆ ಇಂತಹ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸೇವೆ ಮಾಡುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಚಾರವಾಗಿದೆ. ನೆಲ, ಜಲ, ಭಾಷೆ ಉಳಿವಿಗಾಗಿ ಹೋರಾಟ ಮುಂದುವರಿಸಬೇಕೆಂದರು.
ವೇದಿಕೆ ಉಪಾಧ್ಯಕ್ಷೆ ಹೇಮಾವತಿ, ಕಾರ್ಯದರ್ಶಿ ನಾಗರತ್ನ, ಸಹ ಕಾರ್ಯದರ್ಶಿ ರುಕ್ಮಿಣಿ ಹಾಗೂ ಪೊಲೀಸ್ ಅಧಿಕಾರಿ ಚಂದ್ರಕಲಾ, ಹೊಸಮನೆ ಆಟೋ ಸಂಚಾಲಕಿ ನಾಗರತ್ನಮ್ಮ, ಸಮಾಜ ಸೇವಕಿ ಜಾನಕಿ ಅಚನೂರು ಸೇರಿದಂತೆ ಕರವೇ ಸದಸ್ಯರು ಭಾಗವಹಿಸಿದರು.