Saturday, October 2, 2021

ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಬದುಕು ರೂಪಿಸಿಕೊಳ್ಳಿ : ಬಿ.ಕೆ ಸಂಗಮೇಶ್ವರ್


ಭದ್ರಾವತಿ ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನವಜೀವನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ, ಅ. ೨: ದುಶ್ಚಟಗಳಿಗೆ ಬಲಿಯಾದವರಿಗೆ ಹೊಸ ಜೀವನ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೂಪಿಸಿಕೊಂಡಿರುವ ಕಾರ್ಯಕ್ಕೆ ಯಾರಿಂದಲೂ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಶಂಸೆ ವ್ಯಕ್ತಪಡಿಸಿದರು.
    ಅವರು ಶನಿವಾರ ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನವಜೀವನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಈ ನಡುವೆ ದುಶ್ಚಟಗಳಿಗೆ ಬಲಿಯಾದವರನ್ನು ಸಹ ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿನಲ್ಲಿ ಬೆರೆಯುವಂತೆ ಮಾಡುತ್ತಿರುವುದು ಬಹುದೊಡ್ಡ ಕಾರ್ಯವಾಗಿದೆ. ಸಮಾಜದಲ್ಲಿ ಯಾರು ಸಹ ದುಶ್ಚಟಗಳಿಗೆ ಬಲಿಯಾಗಬಾರದು. ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಜಾಗೃತಿ ಹೊಂದಬೇಕೆಂದರು.
    ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಜಿ. ಆನಂದಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಹಕಾರಿ ಧುರೀಣ ಕೆ.ಎನ್ ಭೈರಪ್ಪ ಗೌಡ, ವೇದಿಕೆ ಸದಸ್ಯರಾದ ಆರ್. ಕರುಣಾಮೂರ್ತಿ, ಪಾಲಾಕ್ಷಪ್ಪ, ಯೋಜನೆಯ ಜಿಲ್ಲಾ ನಿರ್ದೇಶಕಿ ಬಿ. ಗೀತಾ, ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್, ನಗರಸಭಾ ಸದಸ್ಯರಾದ ಮಣಿ ಎಎನ್‌ಎಸ್, ಸುದೀಪ್‌ಕುಮಾರ್, ಅಕ್ಕಮಹಾದೇವಿ ಬಳಗದ ಸವರ್ಣಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಡಜ ಹುಳುಗಳ ದಾಳಿಗೆ ಇಬ್ಬರು ಬಲಿ

ಕಡಜ ಹುಳುಗಳ ದಾಳಿಯಿಂದ ಮೃತಪಟ್ಟ ಸಿ.ಬಿ ನಂಜಪ್ಪ
    ಭದ್ರಾವತಿ, ಅ. ೨: ಜಮೀನಿಗೆ ಹೋಗಿ ಬರುವಾಗ ಕಡಜದ ಹುಳು ಕಚ್ಚಿದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ನಗರಸಭೆ ವ್ಯಾಪ್ತಿಯ ಆನೆಕೊಪ್ಪ ಎಂಪಿಎಂ ಬಡಾವಣೆಯಲ್ಲಿ ಬಳಿ ನಡೆದಿದೆ.
    ಹೊಸ ಬುಳ್ಳಾಪುರ ನಿವಾಸಿ ಸಿ.ಬಿ ನಂಜಪ್ಪ(೫೦) ಹಾಗು ತರೀಕೆರೆ ಸಿದ್ಲಿಪುರ ಗ್ರಾಮದ ನಿವಾಸಿ ಮಲ್ಲಿಕಾ(೫೫) ಮೃತಪಟ್ಟಿದ್ದು, ಶುಕ್ರವಾರ ಬೆಳಿಗ್ಗೆ ಸಿ.ಬಿ ನಂಜಪ್ಪ ಮತ್ತು ಇವರ ಜಮೀನನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಮಲ್ಲಿಕಾ ಇಬ್ಬರು ದ್ವಿಚಕ್ರವಾಹನದಲ್ಲಿ ಬರುತ್ತಿದ್ದಾಗ ಕಡಜದ ಹುಳುಗಳು ದಾಳಿ ನಡೆಸಿವೆ. ಇದರಿಂದಾಗಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
    ಸಿ.ಬಿ ನಂಜಪ್ಪ ಅವರು ಬಹಳ ವರ್ಷಗಳಿಂದ ಕಾಗದನಗರದಲ್ಲಿ ಹಿಟ್ಟಿನ ಗಿರಣಿ ಮುನ್ನಡೆಸಿಕೊಂಡು ಹೋಗುತ್ತಿದ್ದರು. ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಶನಿವಾರ ಸಂಜೆ ಇವರ ಅಂತ್ಯಸಂಸ್ಕಾರ ನೆರವೇರಿತು.
    ಮೃತರ ನಿಧನಕ್ಕೆ ಎಂಪಿಎಂ ಕಾರ್ಮಿಕರ ಕುಟುಂಬ ವರ್ಗದವರು, ಸ್ಥಳೀಯ ಗಣ್ಯರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಅಂಧರ ಕೇಂದ್ರದಲ್ಲಿ ಮಹಾತ್ಮ ಗಾಂಧಿ ಜಯಂತಿ, ಪುಣ್ಯಸ್ಮರಣೆ

ಭದ್ರಾವತಿ ನಗರಸಭೆ ಮಾಜಿ ಸದಸ್ಯ, ಕಡದಕಟ್ಟೆ ನಿವಾಸಿ ಜಿ. ಸುರೇಶಯ್ಯ ಅವರ ತಂದೆ ದೊಡ್ಡಘಟ್ಟ ಮಠದ ಕೆ. ಗುರುಮೂರ್ತಯ್ಯನವರ ೩ನೇ ವರ್ಷದ ಪುಣ್ಯಸ್ಮರಣೆ ಹಾಗು ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ನಡೆಯಿತು.
    ಭದ್ರಾವತಿ, ಅ. ೨: ನಗರಸಭೆ ಮಾಜಿ ಸದಸ್ಯ, ಕಡದಕಟ್ಟೆ ನಿವಾಸಿ ಜಿ. ಸುರೇಶಯ್ಯ ಅವರ ತಂದೆ ದೊಡ್ಡಘಟ್ಟ ಮಠದ ಕೆ. ಗುರುಮೂರ್ತಯ್ಯನವರ ೩ನೇ ವರ್ಷದ ಪುಣ್ಯಸ್ಮರಣೆ ಹಾಗು ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ನಡೆಯಿತು.
    ವಿಕಲಚೇತನರೊಂದಿಗೆ ವಿಶೇಷವಾಗಿ ಪುಣ್ಯಸ್ಮರಣೆ ಆಚರಿಸುವುದರೊಂದಿಗೆ ರಾತ್ರಿ ವೇಳೆ ಚಳಿಯಿಂದ ರಕ್ಷಣೆ ಪಡೆಯಲು ಅಗತ್ಯವಿರುವ ಹೊದಿಕೆಗಳನ್ನು ವಿತರಿಸಲಾಯಿತು.
    ಜೇಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ, ಸೂಡಾ ಸದಸ್ಯ ರಾಮಲಿಂಗಯ್ಯ, ನಿವೃತ್ತ ಮುಖ್ಯ ಶಿಕ್ಷಕ ಮರುಳಯ್ಯ, ನಗರಸಭೆ ಮಾಜಿ ಸದಸ್ಯ ಸುರೇಶಯ್ಯ ಹಾಗು ಕುಟುಂಬ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಅಧ್ಯಕ್ಷತೆ ವಹಿಸಿದ್ದರು.

ಮಳೆಯಿಂದ ಗೋಡೆ ಕುಸಿದು ವೃದ್ದ ಮಹಿಳೆ ನಿಧನ

ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನೆಯೊಂದರ ಗೋಡೆ ಕುಸಿದು ಬಿದ್ದ ಪರಿಣಾಮ ವಯೋವೃದ್ದೆ ರತ್ನಮ್ಮ ಮೃತಪಟ್ಟಿರುವುದು.
    ಭದ್ರಾವತಿ: ತಾಲೂಕಿನ ಅರಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನೆಯೊಂದರ ಗೋಡೆ ಕುಸಿದು ಬಿದ್ದ ಪರಿಣಾಮ ವಯೋವೃದ್ದೆಯೋರ್ವರು ಮೃತಪಟ್ಟಿರುವ ಘಟನೆ ನಡೆದಿದೆ.
    ರತ್ನಮ್ಮ(೬೫) ಮೃತಪಟ್ಟಿದ್ದು, ರಾತ್ರಿ ವೇಳೆ ಗೋಡೆ ಕುಸಿದಿದೆ ಎನ್ನಲಾಗಿದೆ. ಮನೆಯಲ್ಲಿ ರತ್ನಮ್ಮ ಒಬ್ಬರೇ ಇದ್ದಾಗ ಈ ಘಟನೆ ನಡೆದಿದ್ದು, ಈ ಹಿನ್ನಲೆಯಲ್ಲಿ ಈ ಘಟನೆ ಯಾರಿಗೂ ತಿಳಿದಿಲ್ಲ. ಬೆಳಿಗ್ಗೆ ಇವರ ಮಗ ಮನೆಗೆ ಬಂದಾಗ ಬೆಳಕಿಗೆ ಬಂದಿದೆ.  ಸ್ಥಳಕ್ಕೆ ತಹಸೀಲ್ದಾರ್ ಕಛೇರಿ ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಮಾಜಿ ಜಿಪಂ ಸದಸ್ಯ ಎಚ್.ಎಂ. ಷಡಾಕ್ಷರಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
    ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಸಂಬಂಧ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ತಹಸೀಲ್ದಾರ್ ಆರ್. ಪ್ರದೀಪ್ ತಿಳಿಸಿದರು.


ಭದ್ರಾವತಿ: ತಾಲೂಕಿನ ಅರಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನೆಯೊಂದರ ಗೋಡೆ ಕುಸಿದು ಬಿದ್ದಿರುವುದು.

ಶಾರದ ಅಪ್ಪಾಜಿ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ

ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಗೆ ಶನಿವಾರ ಶಾರದ ಅಪ್ಪಾಜಿ ಮಾಲಾರ್ಪಣೆ ಮಾಡುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು.
    ಭದ್ರಾವತಿ: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಪತ್ನಿ ಶಾರದ ಅಪ್ಪಾಜಿ ಶನಿವಾರ ಗಾಂಧಿ ಜಯಂತಿಯಂದು ನಗರದ ತರೀಕೆರೆ ರಸ್ತೆಯಲ್ಲಿರುವ ಮಾಹತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು.
    ಸೆ.೨೧ರಂದು ತಾಲೂಕಿನ ಗೋಣಿಬೀಡಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಎಂ.ಜೆ ಅಪ್ಪಾಜಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಶಾರದ ಅಪ್ಪಾಜಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ನಂತರ ಇದೆ ವೇದಿಕೆಯಲ್ಲಿ ಮಾತನಾಡಿದ, ಶಾರದ ಅಪ್ಪಾಜಿ ಅ.೨ರ ಗಾಂಧಿ ಜಯಂತಿಯಂದು ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮುಂದಿನ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ಮಹಾತ್ಮಗಾಂಧಿ ವೃತ್ತದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮುಂದಿನ ರಾಜಕೀಯ ಜೀವನ ಪತಿ ಅಪ್ಪಾಜಿಯವರ ಆದರ್ಶತನಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತೇನೆ ಎಂದರು.
    ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಜೆಡಿಎಸ್ ಪಕ್ಷದ ನಗರಸಭಾ ಸದಸ್ಯರು, ಮುಖಂಡರು ಹಾಗು ಕಾರ್ಯಕರ್ತರು ಪಾಲ್ಗೊಂಡಿದ್ದರು.