Wednesday, June 24, 2020

ಸಿಂಗನಮನೆ ಗ್ರಾ.ಪಂ. ವತಿಯಿಂದ ಶಾಲೆಗಳಿಗೆ ಸ್ಯಾನಿಟೈಸರ್

ಭದ್ರಾವತಿ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ, ವಸತಿ ನಿಲಯಗಳಿಗೆ ಮುನ್ನಚ್ಚರಿಕೆ ಕ್ರಮವಾಗಿ ಸ್ಯಾನಿಟೈಸರ್ ಕೈಗೊಳ್ಳಲಾಯಿತು.
ಭದ್ರಾವತಿ, ಜೂ. ೨೪: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಗುರುವಾರದಿಂದ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಿಗೆ ಹಾಗೂ ವಸತಿ ನಿಲಯಗಳಿಗೆ ಪಂಚಾಯಿತಿ ವತಿಯಿಂದ ಕೊರೋನಾ ವೈರಸ್ ಹರಡದಂತೆ ಮುನ್ನಚ್ಚರಿಕೆ ಕ್ರಮವಾಗಿ ಸ್ಯಾನಿಟೈಸರ್ ಕೈಗೊಳ್ಳಲಾಯಿತು. 
ಗ್ರಾಮೀಣ ಭಾಗದಲ್ಲಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ಸಮಸ್ಯೆಯಾಗದೆ ಸಾರಿಗೆ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ವತಿಯಿಂದ ಈಗಾಗಲೇ ಕೈಗೊಳ್ಳಲಾಗಿದೆ. ಅಲ್ಲದೆ ಆರೋಗ್ಯ ಮತ್ತು ಪೊಲೀಸ್ ಇಲಾಖೆ ವತಿಯಿಂದ ಸಹ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯುವಂತೆ ಸಿಂಗಮನೆ ಗ್ರಾಮ ಪಂಚಾಯಿತಿ ವಿದ್ಯಾರ್ಥಿಗಳಿಗೆ ಮನವಿ ಮಾಡಿದೆ. 
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್. ಉಮಾ, ಸದಸ್ಯರಾದ ಟಿ.ಡಿ ಶಶಿಕುಮಾರ್, ಜೆ. ಸುಜಾತ, ಅಭಿವೃದ್ಧಿ ಅಧಿಕಾರಿ ಸೋಮಶೇಖರ್, ಕಾರ್ಯದರ್ಶಿ ರೇವಣ್ಣ, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಅರಕೆರೆ ಗ್ರಾ.ಪಂ. ನೀರುಗಂಟಿ ನಿವೃತ್ತಿ : ಬೀಳ್ಕೊಡುಗೆ

ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮ ಪಂಚಾಯತಿಯಲ್ಲಿ ನೀರುಗಂಟಿಯಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಜೆ. ಬಸವರಾಜಪ್ಪನವರಿಗೆ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.  
ಭದ್ರಾವತಿ, ಜೂ. ೨೪: ತಾಲೂಕಿನ ಅರಕೆರೆ ಗ್ರಾಮ ಪಂಚಾಯತಿಯಲ್ಲಿ ನೀರುಗಂಟಿಯಾಗಿ ಕರ್ತವ್ಯ ನಿರ್ವಹಿಸುತಿದ್ದ. ಜೆ. ಬಸವರಾಜಪ್ಪ ವಯೋನಿವೃತ್ತಿ ಹೊಂದಿದರು. 
ಕೋಡಿಹೊಸೂರು ಗ್ರಾಮದ ಜೆ. ಬಸವರಾಜಪ್ಪನವರ ಕರ್ತವ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಚಂದ್ರಪ್ಪ, ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ, ಭೈರೇಶ್‌ಕುಮಾರ್, ಸದಸ್ಯ ಲಕ್ಷ್ಮೀಪತಿ ಇನ್ನಿತರ ಸದಸ್ಯರು ಮತ್ತು  ಗ್ರಾ.ಪಂ. ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

ಬೃಹತ್ ರಕ್ತದಾನ ಶಿಬಿರ : ೯೪ ಯೂನಿಟ್ ರಕ್ತ ಸಂಗ್ರಹ

ಭದ್ರಾವತಿಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ.ಕೆ ಶ್ರೀನಾಥ್ ಮಾತನಾಡಿದರು. 
ಭದ್ರಾವತಿ, ಜೂ. ೨೪: ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಒಟ್ಟು ೯೪ ಯೂನಿಟ್ ರಕ್ತ ಸಂಗ್ರಹಿಸಲಾಯಿತು. 
ಬಿ.ಕೆ ಸಂಗಮೇಶ್ವರ್ ಅಭಿಮಾನಿಗಳ ಬಳಗ, ತಾಲೂಕು ಬಿಜೆಪಿ ಯುವ ಮೋರ್ಚಾ, ಕುಂಚ ಕಲಾವಿದರ ಸಂಘ, ಕೆಎಸ್‌ಆರ್‌ಟಿಸಿ ಡಿಪೋ, ಕಾಂಗ್ರೆಸ್ ಕಾರ್ಮಿಕರ ವಿಭಾಗ, ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್, ಕಟ್ಟಡ ಕಾರ್ಮಿಕ ಸಂಘ, ಕೆಜಿಎನ್ ನೌಜವಾನ್ ಟ್ರಸ್ಟ್, ವೀರಶೈವ ಸಮಾಜ, ತಮಿಳು ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಕ್ತನಿಧಿ ಘಟಕ ಮೆಗ್ಗಾನ್ ಆಸ್ಪತ್ರೆ ಹಾಗೂ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಜಿಲ್ಲಾ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಮೆಗ್ಗಾನ್ ಆಸ್ಪತ್ರೆ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ. ಸೈಯದ್ ಫರೀನ್, ವೈದ್ಯೆ ಡಾ. ಪ್ರೀತಿ, ಆರೋಗ್ಯ ರಕ್ಷಾ ಸಮಿತಿಯ ಸುಂದರ್ ಬಾಬು, ನಾಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಯೋಗ ಶಾಲಾ ತಂತ್ರಜ್ಞ  ಮೋಹನ್ ಕುಮಾರ್ ಸ್ವಾಗತಿಸಿದರು. ಆಶಾ ಕಾರ್ಯಕರ್ತೆ ವಸಂತ ನಿರೂಪಿಸಿದರು. 

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಭದ್ರಾವತಿಯಲ್ಲಿ ಸಕಲ ಸಿದ್ದತೆ : ಅಧಿಕಾರಿಗಳಿಂದ ಮರು ಪರಿಶೀಲನೆ

ಭದ್ರಾವತಿ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆ ಪರೀಕ್ಷಾ ಕೇಂದ್ರಕ್ಕೆ ಬುಧವಾರ ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ಹಳೇನಗರ ಪೊಲೀಸ್ ಠಾಣಾಧಿಕಾರಿ ಹಾಗೂ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಶಾಂತಮ್ಮ, ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. 
ಭದ್ರಾವತಿ, ಜೂ. ೨೪: ರಾಜ್ಯಾದ್ಯಂತ ಗುರುವಾರದಿಂದ ಆರಂಭಗೊಳ್ಳಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಾಲೂಕಿನಲ್ಲಿ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಮತ್ತು ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ದತಾ ಕಾರ್ಯಗಳನ್ನು ಮರು ಪರಿಶೀಲನೆ ನಡೆಸಿದರು. 
ಪತ್ರಿಕೆಯೊಂದಿಗೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಒಟ್ಟು ೧೮ ಖಾಸಗಿ ಬಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಈ ಪೈಕಿ ೧೪ ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ. ಉಳಿದಂತೆ ೪ ಬಸ್‌ಗಳು ಹೆಚ್ಚುವರಿಯಾಗಿ ಮೀಸಲಿಡಲಾಗಿದೆ. ೧ ಕೆಎಸ್‌ಆರ್‌ಟಿಸಿ ಬಸ್ ಸಹ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಈ ಬಸ್ ತಾಲೂಕಿನ ಬಂಡಿಗುಡ್ಡ ಮಾರ್ಗವಾಗಿ ಸಂಚರಿಸಲಿದೆ ಎಂದರು. 
ತಾಲೂಕಿನಲ್ಲಿ ಒಟ್ಟು ೧೫ ಪರೀಕ್ಷಾ ಕೇಂದ್ರಗಳಿದ್ದು, ಹೆಚ್ಚುವರಿಯಾಗಿ ೩ ಪರೀಕ್ಷಾ ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ. ಒಂದು ಪರೀಕ್ಷಾ ಕೊಠಡಿಯಲ್ಲಿ ಈ ಹಿಂದೆ ೨೪ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿತ್ತು. ಇದೀಗ ೨೦ಕ್ಕೆ ಸೀಮಿತಗೊಳಿಸಲಾಗಿದೆ. ನ್ಯೂಟೌನ್ ಸೇಂಟ್ ಚಾರ್ಲ್ಸ್ ಪರೀಕ್ಷಾ ಕೇಂದ್ರ ತಾಲೂಕಿನಲ್ಲಿ ಅತಿದೊಡ್ಡ ಪರೀಕ್ಷಾ ಕೇಂದ್ರವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಹೊಳೆಹೊನ್ನೂರಿನ ಸೇಂಟ್ ಮೇರಿಸ್ ಅತಿ ಚಿಕ್ಕ ಪರೀಕ್ಷಾ ಕೇಂದ್ರವಾಗಿದೆ ಕಡಿಮೆ ವಿದ್ಯಾರ್ಥಿಗಳನ್ನು ಒಳಗೊಂಡಿದೆ ಎಂದರು. 
        ಪರೀಕ್ಷಾ ಕೇಂದ್ರಗಳಲ್ಲಿ ಒಬ್ಬ ವಿದ್ಯಾರ್ಥಿಗೆ ೨ ಮಾಸ್ಕ್ ವಿತರಣೆಗೆ ವ್ಯವಸ್ಥೆ ಕೈಗೊಳ್ಳಲಾಗಿದೆ. ವಿವಿಧ ಸಂಘ-ಸಂಸ್ಥೆಗಳು, ದಾನಿಗಳು ನೀಡಿರುವ ಮಾಸ್ಕ್‌ಗಳನ್ನು ಆಯಾ ಕೇಂದ್ರಗಳಲ್ಲಿ ಹೆಚ್ಚುವರಿಯಾಗಿಡಲಾಗಿದೆ. ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೂ ೨ ಥರ್ಮೋ ಸ್ಕ್ರೀನಿಂಗ್ ಯಂತ್ರ ಹಾಗೂ ಸ್ಯಾನಿಟೈಸರ್‌ಗಳನ್ನು ವಿತರಿಸಲಾಗಿದೆ. ಅಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು. 
ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕೈಗೊಳ್ಳಬೇಕಾಗಿರುವ ಕಾರ್ಯಗಳ ಕುರಿತು ಪುನಃ ಮನವರಿಕೆ ಮಾಡಿಕೊಡಲಾಗಿದೆ. ಅಲ್ಲದೆ ವಿದ್ಯಾರ್ಥಿ ಕರ್ನಾಟಕ ಪರೀಕ್ಷಾ ಮಂಡಳಿ ವತಿಯಿಂದ ಜಾಗೃತಿ ಕರಪತ್ರಗಳನ್ನು ಹಾಗೂ ಪರೀಕ್ಷಾ ಕೇಂದ್ರಗಳಿಗೆ ಪೋಸ್ಟರ್‌ಗಳನ್ನು ವಿತರಿಸಲಾಗಿದೆ. ಎಲ್ಲಾ ಕಾರ್ಯಗಳನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ವೀಕ್ಷಕರ ತಂಡ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಇದರ ಜೊತೆಗೆ ಹೊಸದಾಗಿ ‘ಬಿ’ ಗ್ರೂಪ್ ಅಧಿಕಾರಿಗಳನ್ನೊಳಗೊಂಡ ಸ್ಥಾನಿಕ ಜಾಗೃತಿ ದಳ ಸಹ ಕಾರ್ಯ ನಿರ್ವಹಿಸಲಿದೆ. ಒಟ್ಟಾರೆ ಪರೀಕ್ಷೆ ಯಶಸ್ವಿಯಾಗಿ ನಡೆಯಲು ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದರು. 
ಪೊಲೀಸ್ ಉಪಾಧೀಕ್ಷರ ಸುಧಾಕರ ನಾಯ್ಕ ಮಾತನಾಡಿ, ತಾಲೂಕಿನ ೧೫ ಪರೀಕ್ಷಾ ಕೇಂದ್ರಗಳಲ್ಲಿ ತಲಾ ಇಬ್ಬರು ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದು, ಒಟ್ಟು ೩೦ ಮಂದಿಯೊಂದಿಗೆ ರೂಟ್ ಕಾರ್ಯಚರಣೆಯಲ್ಲಿ ೭ ಮಂದಿ ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮತ್ತ ಜನದಟ್ಟಣೆ ಉಂಟಾಗದಂತೆ ಎಚ್ಚರವಹಿಸಲಾಗಿದ್ದು, ಪ್ರತಿಯೊಬ್ಬರು ಮಾಸ್ಕ್ ಧರಿಸಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು, ಪರೀಕ್ಷಾ ಕೇಂದ್ರಗಳ ಅಧಿಕಾರಿಗಳು, ಸಿಬ್ಬಂದಿಗಳಿಗೆ ಮಾತ್ರ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಇತರರಿಗೆ ಪ್ರವೇಶ ನಿಬಂಧಿಸಲಾಗಿದೆ ಎಂದರು.