Tuesday, November 30, 2021

ಛಲವಾದಿ ಮಹಾಸಭಾ ವತಿಯಿಂದ ಸಂವಿಧಾನ ದಿನ ಆಚರಣೆ


ಭದ್ರಾವತಿ ನಗರಸಭೆ ೨೫ನೇ ವಾರ್ಡ್ ವ್ಯಾಪ್ತಿಯ ಹುಡ್ಕೋ ಕಾಲೋನಿ ಮಾರುಕಟ್ಟೆ ಸಂಕೀರ್ಣದಲ್ಲಿರುವ ತಾಲೂಕು ಛಲವಾದಿ ಮಹಾಸಭಾ ಸಂಘದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಹಾಗೂ ಗೌತಮ ಬುದ್ಧನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಸಂವಿಧಾನ ಪೀಠಿಕೆ ವಾಚಿಸಲಾಯಿತು.
    ಭದ್ರಾವತಿ, ನ. ೩೦: ತಾಲೂಕು ಛಲವಾದಿ ಮಹಾಸಭಾ ವತಿಯಿಂದ ವಿಶೇಷವಾಗಿ ಸಂವಿಧಾನ ದಿನ ಆಚರಿಸಲಾಯಿತು.
    ನಗರಸಭೆ ೨೫ನೇ ವಾರ್ಡ್ ವ್ಯಾಪ್ತಿಯ ಹುಡ್ಕೋ ಕಾಲೋನಿ ಮಾರುಕಟ್ಟೆ ಸಂಕೀರ್ಣದಲ್ಲಿರುವ ಸಂಘದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಹಾಗೂ ಗೌತಮ ಬುದ್ಧನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಸಂವಿಧಾನ ಪೀಠಿಕೆ ವಾಚಿಸಲಾಯಿತು.
    ನ್ಯಾಯವಾದಿ ಟಿ. ಚಂದ್ರೇಗೌಡ ಸಂವಿಧಾನದ ಆಶಯ ಹಾಗು ಮಹತ್ವ ವಿವರಿಸಿದರು. ಸಮಾಜದ ಪ್ರಮುಖರಾದ ಜಯರಾಜ್ ಅಧ್ಯಕ್ಷತೆ ವಹಿಸಿದ್ದು, ಮಹಾಸಭಾ ಅಧ್ಯಕ್ಷ ಸುರೇಶ್, ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಶ್ರೀನಿವಾಸ್, ವಕೀಲೆ ವರಲಕ್ಷ್ಮೀ, ಉದ್ಯಮಿ ಎನ್. ಶ್ರೀನಿವಾಸ್, ಇಂಜಿನಿಯರ್ ಶಿವನಂಜಯ್ಯ, ಮಹೇಶ್, ಈ.ಪಿ ಬಸವರಾಜ್, ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು:
    ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ-೧ ಮತ್ತು ೨ ಹಾಗು ಚುನಾವಣಾ ಸಾಕ್ಷರತಾ ಕ್ಲಬ್, ಶಿವಮೊಗ್ಗ ನೆಹರು ಯುವ ಕೇಂದ್ರ ಸಹಯೋಗದೊಂದಿಗೆ ೭೧ನೇ ಸಂವಿಧಾನ ದಿನ ಆಚರಿಸಲಾಯಿತು.
    ನೆಹರು ಯುವ ಕೇಂದ್ರದ ಉಲ್ಲಾಸ್ ಕಾರ್ಯಕ್ರಮ ಉದ್ಘಾಟಿಸಿದರು. ಶಿವಮೊಗ್ಗ ಕಲಾ ಕಾಲೇಜಿನ ಸತ್ಯನಾರಾಯಣ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾ ಡಾ.ಎಂ.ಜಿ ಉಮಾಶಂಕರ್ ಅಧ್ಯಕ್ಷತೆ ವಹಿಸಿದ್ದರು.
    ಪ್ರಾಧ್ಯಾಪಕರಾದ ಡಾ. ಬಿ.ಎಂ ನಾಸಿರ್‌ಖಾನ್, ಶಿವರುದ್ರಪ್ಪ, ಡಾ. ಆರ್. ಸೀಮಾ ಮತ್ತು ಬಿ. ಗುರುಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.




ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ-೧ ಮತ್ತು ೨ ಹಾಗು ಚುನಾವಣಾ ಸಾಕ್ಷರತಾ ಕ್ಲಬ್, ಶಿವಮೊಗ್ಗ ನೆಹರು ಯುವ ಕೇಂದ್ರ ಸಹಯೋಗದೊಂದಿಗೆ ೭೧ನೇ ಸಂವಿಧಾನ ದಿನ ಆಚರಿಸಲಾಯಿತು.

ಪೇಜಾವರ ಶ್ರೀಪಾದಂಗಳವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆಗೆ ಖಂಡನೆ

ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಮಿಸಿ ಮನವಿ


ಸಂಗೀತ ನಿರ್ದೇಶಕ ಹಂಸಲೇಖರವರು ಪೇಜಾವರ ಶ್ರೀಪಾದಂಗಳವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಅಖಿಲ ಭಾರತ ಮಾಧ್ವ ಮಹಾ ಮಂಡಳಿ ನೇತೃತ್ವದಲ್ಲಿ  ಮಂಗಳವಾರ ಭದ್ರಾವತಿಯಲ್ಲಿ ತಹಸೀಲ್ದಾರ್‌ರವರಿಗೆ ಮನವಿ ಸಲ್ಲಿಸಿದವು.
     ಭದ್ರಾವತಿ, ನ. ೩೦: ಸಂಗೀತ ನಿರ್ದೇಶಕ ಹಂಸಲೇಖರವರು ಪೇಜಾವರ ಶ್ರೀಪಾದಂಗಳವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಅಖಿಲ ಭಾರತ ಮಾಧ್ವ ಮಹಾ ಮಂಡಳಿ ನೇತೃತ್ವದಲ್ಲಿ  ಮಂಗಳವಾರ ತಹಸೀಲ್ದಾರ್‌ರವರಿಗೆ ಮನವಿ ಸಲ್ಲಿಸಿದವು.
     ಪ್ರಮುಖರು ಮಾತನಾಡಿ, ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಆಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣದ ಹೋರಾಟದಲ್ಲಿ ಮುಂಚೂಣಿಗೆ ಬಂದು ಸನಾತನ ಹಿಂದೂ ಧರ್ಮದ ಏಳಿಗೆಯ ಕಾರ್ಯವನ್ನು ಕೈಗೊಂಡಿರುತ್ತಾರೆ. ಸಮಾಜದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಲು ದಲಿತ ಕೇರಿಗಳಲ್ಲಿ ಸಂಚರಿಸಿ ಧರ್ಮ ಜಾಗೃತಿ ಉಂಟು ಮಾಡುವ ಜೊತೆಗೆ ಅಸ್ಪೃಶ್ಯರು ಸಹ ಮುಖ್ಯವಾಹಿನಿಗೆ ಬರಲು ಶ್ರಮಿಸಿದ್ದ ಸಂತ ಶ್ರೇಷ್ಠರಾಗಿದ್ದಾರೆ ಎಂದರು.
    ಇಂತಹ ಮಹಾನ್ ಚೇತನ ಕುರಿತು ಹಂಸಲೇಖರವರು ಅವಹೇಳನಕಾರಿಯಾಗಿ ಮಾತನಾಡಿರುವುದು ಅಕ್ಷಮ್ಯ. ಇದರಿಂದಾಗಿ ಮಾಧ್ವ ಸಮಾಜ, ಬ್ರಾಹ್ಮಣ ಸಮಾಜ ಹಾಗು ಸಮಸ್ತ ಬಾಂಧವರ ಭಾವನೆಗಳಿಗೆ ನೋವುಂಟು ಮಾಡಿದೆ. ಇಷ್ಟೆ ಅಲ್ಲದೆ ಇತ್ತೀಚೆಗೆ ಕಿಡಿಗೇಡಿಯೋರ್ವ ಶ್ರೀಪಾದಂಗಳವರ ಭಾವಚಿತ್ರವನ್ನು ಪಾದರಕ್ಷೆಯಿಂದ ತುಳಿದು ಅಸಂಖ್ಯಾತ ಭಕ್ತರ ಭಾವನೆಗಳಿಗೆ ದುಃಖವನ್ನುಂಟು ಮಾಡಿರುತ್ತಾನೆ. ಈ ಕಿಡಿಗೇಡಿ ವಿರುದ್ಧ ವಿರುದ್ಧ ಹಾಗು ಅವಹೇಳನಕಾರಿಯಾಗಿ ಮಾತನಾಡಿರುವ ಹಂಸಲೇಖರವರ ವಿರುದ್ದ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
    ಮಾಧ್ವ ಮಹಾ ಮಂಡಳಿ, ಶ್ರೀ ಸಂಕರ್ಷಣ ಧರ್ಮ ಸಂಸ್ಥೆ, ಶ್ರೀ ಸತ್ಯಪ್ರಮೋದ ಸೇವಾ ಸಮಿತಿ, ಶ್ರೀ ಶ್ರೀನಿವಾಸ ಕಲ್ಯಾಣ ಸಮಿತಿ, ಶ್ರೀ ಹರಿದಾಸ ಭಜನಾ ಮಂಡಳಿ, ಕರಾವಳಿ ವಿಪ್ರ ಬಳಗ, ಶ್ರೀ ಗುರುರಾಜ ಸೇವಾ ಸಮಿತಿ, ಜ್ಞಾನವಾಹಿನಿ ಭಜನಾ ಮಂಡಳಿ, ಹರಿಪ್ರಿಯ ಭಜನಾ ಮಂಡಳಿ ಮತ್ತು ವಿಜಯೀಂದ್ರ ಭಕ್ತ ಮಂಡಳಿ ಪ್ರಮುಖರಾದ ವಿ. ಜಯತೀರ್ಥ, ನರಸಿಂಹಚಾರ್, ಗೋಪಾಲಚಾರ್, ಸಿ. ರಾಘವೇಂದ್ರ, ಜಿ. ರಮಾಕಾಂತ್, ಕೆ.ಆರ್ ವೆಂಕಟೇಶ್ ರಾವ್, ಎನ್. ವಂದನಾ, ಪವನ್‌ಕುಮಾರ್ ಉಡುಪ, ನಿರಂಜನಚಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು

ಬಿಳಿಕಿ ಮಠಕ್ಕೆ ಬಿಜೆಪಿ ಅಭ್ಯರ್ಥಿ ಡಿ.ಎಸ್ ಅರುಣ್ ಭೇಟಿ : ಶ್ರೀಗಳಿಂದ ಆಶೀರ್ವಾದ

   
ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಯುವ ಮುಖಂಡ ಡಿ.ಎಸ್ ಅರುಣ್ ಮಂಗಳವಾರ ಭದ್ರಾವತಿ ತಾಲೂಕಿನ ಬಿಳಿಕಿ ಮಠಕ್ಕೆ ಭೇಟಿ ನೀಡಿ ಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರು.
    ಭದ್ರಾವತಿ, ನ. ೩೦: ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಯುವ ಮುಖಂಡ ಡಿ.ಎಸ್ ಅರುಣ್ ಮಂಗಳವಾರ ತಾಲೂಕಿನ ಬಿಳಿಕಿ ಮಠಕ್ಕೆ ಭೇಟಿ ನೀಡಿ ಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರು.
    ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ(ಕಾಡಾ) ಅಧ್ಯಕ್ಷೆ ಪವಿತ್ರ ರಾಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೃಷಿಕೇಷ್ ಪೈ, ಮಹಿಳಾ ಪ್ರಮುಖರಾದ ಬಿಜೆಪಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ  ಶೋಭಾ ಪಾಟೀಲ್, ಆರ್.ಎಸ್. ಶೋಭಾ, ಮಾಲಾ ನಾಯ್ಕ್, ದೇವರಾಜ್ ಪಟೇಲ್, ಆನಂದ್, ಅವಿನಾಶ್, ಪ್ರಭಾಕರ್, ಚನ್ನೇಶ್, ಮಂಗೋಟೆ ರುದ್ರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.