Sunday, July 18, 2021

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಕಲ ಸಿದ್ದತೆ : ಈ ಬಾರಿ ಪರೀಕ್ಷೆಗೆ ೪೪೮೮ ವಿದ್ಯಾರ್ಥಿಗಳು

ಒಟ್ಟು ೨೫ ಪರೀಕ್ಷಾ ಕೇಂದ್ರಗಳು, ಒಂದು ಕೊಠಡಿಯಲ್ಲಿ ೧೦ ರಿಂದ ೧೨ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ


ಭದ್ರಾವತಿ ತಾಲೂಕಿನಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗುವಂತೆ ರೋಟರಿ ಕ್ಲಬ್ ವತಿಯಿಂದ ಸುಮಾರು ೨೦೦೦ ಎನ್ ೯೫ ಮಾಸ್ಕ್‌ಗಳನ್ನು ಉಚಿತವಾಗಿ ಶಿಕ್ಷಣ ಇಲಾಖೆಗೆ ನೀಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ರೋಟರ್ ಕ್ಲಬ್ ಅಧ್ಯಕ್ಷ ಎಚ್.ವಿ ಆದರ್ಶ, ಕಾರ್ಯದರ್ಶಿ ರಾಘವೇಂದ್ರ ಉಪಾಧ್ಯಾಯ, ಅಡವೀಶಯ್ಯ, ಡಾ. ಕೆ. ನಾಗರಾಜ್, ಉದಯಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   ಭದ್ರಾವತಿ, ಜು. ೧೮: ತಾಲೂಕಿನಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದ್ದು, ಈ ಬಾರಿ ಒಟ್ಟು ೪೪೮೮ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ತಿಳಿಸಿದರು.
    ಅವರು ಪತ್ರಿಕೆಯೊಂದಿಗೆ ಮಾತನಾಡಿ, ಜು.೧೯ ಮತ್ತು ೨೨ರಂದು ಎರಡು ದಿನ ಮಾತ್ರ ಈ ಬಾರಿ ಪರೀಕ್ಷೆ ನಡೆಯಲಿದೆ. ತಾಲೂಕಿನಾದ್ಯಂತ ಒಟ್ಟು ೨೫ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೪೪೮೮ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಎದುರಿಸುತ್ತಿದ್ದಾರೆ. ಕೊರೋನಾ ಹಿನ್ನಲೆಯಲ್ಲಿ ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೊರೋನಾ ಸೋಂಕಿಗೆ ಒಳಗಾದ ವಿದ್ಯಾರ್ಥಿಗಳಿಗೆ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಈ ಬಾರಿ ೧೨೪ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದು, ಈ ವಿದ್ಯಾರ್ಥಿಗಳಿಗೆ ಬಿ.ಎಚ್ ರಸ್ತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಸಮೀಪದಲ್ಲಿರುವ ಪೂರ್ಣಪ್ರಜ್ಞಾ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ವಲಸೆ ವಿದ್ಯಾರ್ಥಿಗಳಿಗೆ ವಾಸಸ್ಥಳದ ಸಮೀಪದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದರು.
   ಮುನ್ನಚ್ಚರಿಕೆ ಕ್ರಮವಾಗಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಒಂದು ಕೊಠಡಿಯಲ್ಲಿ ಕೇವಲ ೧೦ ರಿಂದ ೧೨ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಅದರಂತೆ ಒಂದು ಬೆಂಚಿಗೆ ಒಬ್ಬ ವಿದ್ಯಾರ್ಥಿಗೆ ಮಾತ್ರ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೂ ಇಲಾಖೆ ವತಿಯಿಂದ ಎನ್-೯೫ ಮಾಸ್ಕ್ ವಿತರಿಸಲಾಗುವುದು ಎಂದರು.
ಹೊಸ ಮಾದರಿ ಪರೀಕ್ಷೆ:
    ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಈ ಬಾರಿ ಓ.ಎಂ.ಆರ್ ಗುರುತು ಮಾಡುವ ಹೊಸ ಮಾದರಿ ಪರೀಕ್ಷೆಯನ್ನು ನಡೆಸುತ್ತಿದ್ದು,  ಒಂದೇ ದಿನ ೩ ವಿಷಯಗಳಿಗೆ ತಲಾ ೧ ಗಂಟೆಯಂತೆ ಒಟ್ಟು ೩ ಗಂಟೆ ಪರೀಕ್ಷೆ ನಡೆಯಲಿದೆ. ಒಂದೊಂದು ವಿಷಯಕ್ಕೂ ತಲಾ ೪೦ ಅಂಕ ನಿಗದಿಪಡಿಸಲಾಗಿದ್ದು, ಒಟ್ಟು ೧೨೦ ಅಂಕಗಳನ್ನು ಪ್ರಶ್ನೆ ಪತ್ರಿಕೆ ಒಳಗೊಂಡಿರುತ್ತದೆ.
    ಜು.೧೯ರಂದು ಕೋರ್ ವಿಷಯಗಳಿಗೆ ಹಾಗು ೨೨ರಂದು ಭಾಷಾ ವಿಷಯಗಳಿಗೆ ಪರೀಕ್ಷೆ ನಡೆಯಲಿದ್ದು, ಈ ಬಾರಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗುವುದು. ಫಲಿತಾಂಶವನ್ನು ಗ್ರೇಡ್ ಮಾದರಿಯಲ್ಲಿ ನೀಡಲಾಗುವುದು. ಈಗಾಗಲೇ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಅಭ್ಯಾಸದ ಉದ್ದೇಶದಿಂದ ಪ್ರತಿ ವಿಷಯವಾರು ಮಾದರಿ ಪ್ರಶ್ನೆ ಪ್ರತಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದ್ದು, ಪರೀಕ್ಷೆ ಬರೆಯುವ ವಿಧಾನಗಳನ್ನು ಸಹ ತಿಳಿಸಿಕೊಡಲಾಗಿದೆ ಎಂದರು.