Monday, February 10, 2025

ಮ್ಯಾಟ್ರಿಮೋನಿ ಅಪ್ಲಿಕೇಷನ್ ಮೂಲಕ ಮದುವೆಯಾಗುವುದಾಗಿ ನಂಬಿಸಿ ವಂಚನೆ

ಭೀಮರಾಜ್ ಅಲಿಯಾಸ್ ಜೈಭೀಮ್ ಬಿನ್ ವಿಠಲ್
    ಭದ್ರಾವತಿ: ಮ್ಯಾಟ್ರಿಮೋನಿ ಅಪ್ಲಿಕೇಷನ್ ಮೂಲಕ ತಾಲೂಕಿನ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರು. ದೋಚಿದ್ದ ವಂಚಕನೊಬ್ಬ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. 
    ಬಂಧಿತ ವ್ಯಕ್ತಿ ಬಿಜಾಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದ ನಿವಾಸಿ ಭೀಮರಾಜ್ ಅಲಿಯಾಸ್ ಜೈಭೀಮ್ ಬಿನ್ ವಿಠಲ್(೪೦) ಎಂದು ಗುರುತಿಸಲಾಗಿದೆ. ವಂಚನೆ ಪ್ರಕರಣ ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಆನ್‌ಲೈನ್ ಅಪ್ಲಿಕೇಷನ್‌ಗಳನ್ನು ನಂಬಿ ಮೋಸ ಹೋಗದಂತೆ ಜಿಲ್ಲಾ ಪೊಲೀಸ್ ಭೀಮರಾಜ್ ಪೋಟೋ ಹಾಗು ಆತ ನಡೆಸಿದ ವಂಚನೆ ಪ್ರಕರಣಗಳ ಪಟ್ಟಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. 
    ಘಟನೆ ವಿವರ: 
    ಮ್ಯಾಟ್ರಿಮೋನಿ ಮೂಲಕ ಮಹಿಳೆಗೆ ಪರಿಚಯವಾದ ಭೀಮರಾಜ್, ಈ ಮೊದಲೇ ತಾನು ಮದುವೆಯಾಗಿರುವುದನ್ನು ಮರೆಮಾಚಿ ಮದುವೆಯಾಗುವುದಾಗಿ ನಂಬಿಸಿದ್ದಾನೆ. ನಂತರ ಅವರಿಂದ ಹಣ ಮತ್ತು ಒಡವೆಗಳನ್ನು ಪಡೆದು ಬಳಿಕ ಸಂಪರ್ಕಕ್ಕೆ ಸಿಗದೆ ಪರಾರಿಯಾಗಿದ್ದಾನೆ. 
    ಮಹಿಳೆಯಿಂದ ತನ್ನ ತಾಯಿಯ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಪೋನ್ ಪೇ ಮೂಲಕ ಒಟ್ಟು ೫,೪೩,೪೫೧ ರು.ಗಳನ್ನು ಪಡೆದಿದ್ದು, ನಂತರ ೨,೦೦,೦೦೦ ರು. ನಗದು ಹಣ ಪಡೆದುಕೊಂಡಿದ್ದಾನೆ. ಅಲ್ಲದೆ ಕಛೇರಿ ಸಮಾರಂಭದ ಕಾರಣ ಹೇಳಿ ಸುಮಾರು ೨,೨೫,೦೦೦ ರು. ಮೌಲ್ಯದ ಸುಮಾರು ೩೦ ಗ್ರಾಂ. ತೂಕದ ಚಿನ್ನಾಭರಣಗಳನ್ನು ಪಡೆದುಕೊಂಡು ವಂಚಿಸಿದ್ದಾನೆ ಎನ್ನಲಾಗಿದೆ. ಮಹಿಳೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು. 
    ಭೀಮರಾಜ್ ಪ್ರಸ್ತುತ ಕೊಪ್ಪಳ ಜಿಲ್ಲೆಯ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಈತನ ವಿರುದ್ಧ ರಾಜ್ಯ ವಿವಿಧ ೧೦ ಪೊಲೀಸ್ ಠಾಣೆಗಳಲ್ಲಿ ೧೨ ಪ್ರಕರಣಗಳು ದಾಖಲಾಗಿವೆ. 

ಗ್ರಾಮ ಆಡಳಿತ ಅಧಿಕಾರಿಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ೨ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳು(ಗ್ರಾಮ ಲೆಕ್ಕಿಗರು) ಸೋಮವಾರದಿಂದ ಭದ್ರಾವತಿ ತಾಲೂಕು ಕಚೇರಿ ಮುಂಭಾಗ ೨ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. 
    ಭದ್ರಾವತಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳು(ಗ್ರಾಮ ಲೆಕ್ಕಿಗರು) ಸೋಮವಾರದಿಂದ ತಾಲೂಕು ಕಚೇರಿ ಮುಂಭಾಗ ೨ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. 
    ಕಂದಾಯ ಇಲಾಖೆಯ ಮೂಲ ಆಧಾರ ಸ್ತಂಭವಾಗಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು, ಸೇವಾ ಸೌಲಭ್ಯಗಳನ್ನು ಒದಗಿಸಲು ಸಂಬಂಧಿಸಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಮುಷ್ಕರ ನಡೆಸಲಾಗುತ್ತಿದ್ದು ತಾಲೂಕಿನ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.  .
    ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ರವಿಕುಮಾರ್ ಮುಷ್ಕರದ ನೇತೃತ್ವ ವಹಿಸಿದ್ದರು. ತಾಲೂಕು ಸಂಘದ ಪದಾಧಿಕಾರಿಗಳಾದ ಶಿವಣ್ಣ, ರಾಜೇಶ್ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಎಸ್‌ಎಸ್‌ಎಲ್‌ಸಿ ಮಕ್ಕಳನ್ನು ಪ್ರೋತ್ಸಾಹಿಸಲು ವಿಭಿನ್ನ ಕಾರ್ಯಕ್ರಮ

ನಗದು ಪ್ರೋತ್ಸಾಹ, ಉಚಿತ ಕಾರು ಚಾಲನಾ ತರಬೇತಿ

ಜಾನ್ ಬೆನ್ನಿ
    ಭದ್ರಾವತಿ: ನಗರದ ಉಂಬ್ಳೆಬೈಲು ರಸ್ತೆಯ ವಿಜಯ್ ಡ್ರೈವಿಂಗ್ ಸ್ಕೂಲ್ ವತಿಯಿಂದ ಚಾಲನಾ ತರಬೇತಿ ಜೊತೆಗೆ ಹಲವು ವಿಭಿನ್ನ ರೀತಿಯ ಸಾಮಾಜಿಕ ಕಾರ್ಯಗಳನ್ನು ಸಹ ಕೈಗೊಳ್ಳಲಾಗುತ್ತಿದೆ. ಇದೀಗ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ಈ ಬಾರಿ ವಿಧಾನಕ್ಷೇತ್ರದ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದ ಓರ್ವ ವಿದ್ಯಾರ್ಥಿಗೆ ೧ ಸಾವಿರ ರು.  ನಗದು ಪ್ರೋತ್ಸಾಹ ಧನ ನೀಡಲಾಗುವುದು. ಅಲ್ಲದೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದ ಓರ್ವ ವಿದ್ಯಾರ್ಥಿಗೆ ೨೦ ಸಾವಿರ ರು. ಪ್ರೋತ್ಸಾಹ ಧನ ನೀಡಲಾಗುವುದು. ಒಂದು ವೇಳೆ ಒಂದಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ೬೨೫ಕ್ಕೆ ೬೨೫ ಅಂಕಗಳನ್ನು ಪಡೆದುಕೊಂಡಲ್ಲಿ ೨೦ ಸಾವಿರ ರು. ಹಣದಲ್ಲಿ ಹಂಚಿಕೆ ಮಾಡಿ ನೀಡಲಾಗುವುದು. ಅಲ್ಲದೆ ವಿದ್ಯಾರ್ಥಿಗೆ ಅಥವಾ ಆ ವಿದ್ಯಾರ್ಥಿಯ ಕುಟುಂಬದಲ್ಲಿನ ಓರ್ವ ಸದಸ್ಯರಿಗೆ ಮಾತ್ರ ಉಚಿತವಾಗಿ ಕಾರು ಚಾಲನಾ ತರಬೇತಿ ನೀಡಲಾಗುವುದು. ಶಾಲೆಯ ವಾರ್ಷಿಕೋತ್ಸವ ದಿನದಂದು ಪ್ರೋತ್ಸಾಹ ಧನ ನೀಡಲಾಗುವುದು ಎಂದು ವಿಜಯ್ ಡ್ರೈವಿಂಗ್ ಸ್ಕೂಲ್ ಮಾಲೀಕ, ವಿಧಾನಸಭಾ ಕ್ಷೇತ್ರದ ಪರಾಜಿತ ಪಕ್ಷೇತರ ಅಭ್ಯರ್ಥಿ ಜಾನ್ ಬೆನ್ನಿ ತಿಳಿಸಿದ್ದಾರೆ.

ಸಂವಿಧಾನ ಬದಲಾಯಿಸುವ ಹೇಳಿಕೆ ನೀಡುವ ವ್ಯಕ್ತಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ

ಈಗಿರುವ ಭಾರತದ ಸಂವಿಧಾನ ಬದಲಿಗೆ ಸಂಘ ಪರಿವಾರದ ಮನುಧರ್ಮ ಶಾಸ್ತ್ರ ಆಧಾರಿತ ಸಂವಿಧಾನವನ್ನು ಜಾರಿಗೆ ತರುವುದಾಗಿ ಮನುವಾದಿ ಹೇಳಿಕೆಯನ್ನು ಖಂಡಿಸಿ ಭದ್ರಾವತಿಯಲ್ಲಿ ಕರ್ನಾಟಕ ಅಂಬೇಡ್ಕರ್ ವೈಚಾರಿಕ ವೇದಿಕೆ ವತಿಯಿಂದ ನಗರದ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು. 
    ಭದ್ರಾವತಿ: ಈ ದೇಶದ ಸಂವಿಧಾನ ಬದಲಾಯಿಸುವ ಅಪಪ್ರಚಾರಗಳು ನಡೆದರೂ ರಾಷ್ಟ್ರಪತಿಯವರು ಗಂಭೀರವಾಗಿ ಪರಿಗಣಿಸದೇ ಮೌನವಹಿಸಿರುವುದು ಸರಿಯಲ್ಲ. ಹಿಂದೂ ರಾಷ್ಟ್ರದ ಸಂವಿಧಾನ ಜಾರಿಗೆ ತರಲು ಮುಂದಾಗಿರುವ ಸಂಘ ಪರಿವಾರದ ನೀತಿಯನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸುವುದು ಇಂದು ಅನಿವಾರ್ಯವಾಗಿದೆ. ತಕ್ಷಣ ಸಂವಿಧಾನ ಬದಲಾಯಿಸುವ ಹೇಳಿಕೆ ನೀಡುವ ವ್ಯಕ್ತಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಿ ಶಿಕ್ಷೆ ವಿಧಿಸಬೇಕೆಂದು ಕರ್ನಾಟಕ ಅಂಬೇಡ್ಕರ್ ವೈಚಾರಿಕ ವೇದಿಕೆ ಸಂಚಾಲಕ ಪಿ. ಮೂರ್ತಿ ಆಗ್ರಹಿಸಿದರು. 
    ಈಗಿರುವ ಭಾರತದ ಸಂವಿಧಾನ ಬದಲಿಗೆ ಸಂಘ ಪರಿವಾರದ ಮನುಧರ್ಮ ಶಾಸ್ತ್ರ ಆಧಾರಿತ ಸಂವಿಧಾನವನ್ನು ಜಾರಿಗೆ ತರುವುದಾಗಿ ಮನುವಾದಿ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ಅಂಬೇಡ್ಕರ್ ವೈಚಾರಿಕ ವೇದಿಕೆ ವತಿಯಿಂದ ನಗರದ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಕೇತಿಕ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು. 
    ದೇಶದ ಬಹುಸಂಖ್ಯಾತರಾದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ರೈತರು, ಕಾರ್ಮಿಕರು, ಮಹಿಳೆಯರು, ಮಕ್ಕಳು ಮತ್ತು ಆದಿವಾಸಿಗಳ ಧ್ವನಿಯಾಗಿ ಈಗಿರುವ ಸಂವಿಧಾನವಿದ್ದು, ಈ ಸಮುದಾಯಗಳ ಸಾಮಾಜಿಕ ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಸಮಾನತೆಯನ್ನು ಹಾಗೂ ಎಲ್ಲರ ಸ್ವಾವಲಂಬನೆ ಬಯಸುವ ವಿಶ್ವಜ್ಞಾನಿ, ಮಹಾಮಾನವತಾವಾದಿ ಅಂಬೇಡ್ಕರ್‌ರವರು ಈ ದೇಶಕ್ಕೆ ಕೊಡುಗೆಯಾಗಿರುವ ಸಂವಿಧಾನವನ್ನು ಬದಲಾಯಿಸಿ ಅಸಮಾನತೆಯನ್ನು ಮೂಲಮಂತ್ರವನ್ನಾಗಿಸಿ ಕೊಂಡಿರುವ ಮನುಸ್ಮೃತಿ ಆಧಾರಿತ `ಹಿಂದೂ ರಾಷ್ಟ್ರದ ಸಂವಿಧಾನ'  ಜಾರಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು. 
    ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದಾಗಿನಿಂದ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು `ಸಂವಿಧಾನವನ್ನು ಸುಡುತ್ತೇವೆ', ಸಂವಿಧಾನ ಬದಲಾಯಿಸಲೇ ನಾವು ಅಧಿಕಾರಕ್ಕೆ ಬಂದಿರುವುದು. ಇತ್ಯಾದಿ ಸಂವಿಧಾನ ವಿರೋಧಿ ಹೇಳಿಕೆಗಳನ್ನು ಕೊಡುತ್ತಾ ಬಂದರು. ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಬಿ .ಎನ್. ರಾಯ್ ಭಾರತ ಸಂವಿಧಾನದ ಕರಡು ರಚಿಸಿದ್ದು ಎಂದು ಅಪಪ್ರಚಾರ ಮಾಡಿದರು. `ಅಂಬೇಡ್ಕರ್ ಅಂಬೇಡ್ಕರ್ ಎಂದೇಳುವುದು ಫ್ಯಾಷನ್, ಆಗಿಹೋಗಿದೆ ಎಂದು ಸಂಸತ್ತಿನಲ್ಲೇ ಗೃಹಮಂತ್ರಿ ಅಮಿತ್ ಶಾ ಅಂಬೇಡ್ಕರ್ ಅವರಿಗೆ ಅವಮಾನಗೊಳಿಸಿ ಹೇಳಿಕೆ ನೀಡಿದರು. ಇತ್ತೀಚಿಗೆ ಪಂಜಾಬ್‌ನಲ್ಲಿ ಅಂಬೇಡ್ಕರ್ ಪ್ರತಿಮೆ ವಿರೂಪಗೊಳಿಸಿದ ಪ್ರಕರಣ ನಡೆದಿದೆ. ಈಗ ಅಂಬೇಡ್ಕರ್ ಬರೆದ ಸಂವಿಧಾನದ ಬದಲಿಗೆ ಬೇರೊಂದು ಸಂವಿಧಾನ ತರುವ ಪ್ರಸ್ತಾಪ ಬಂದಿದೆ. ಇದೆಲ್ಲಾ  ಸಂಘ ಪರಿವಾರದ ಮನುಧರ್ಮ ಶಾಸ್ತ್ರ ಆಧಾರಿತ ಸಂವಿಧಾನವನ್ನು ಜಾರಿಗೆ ತರುವ ಹುನ್ನಾರವಾಗಿದ್ದು, ವಿರೋಧ ಪಕ್ಷಗಳು ಸಹ ಈ ವಿಚಾರದ ಬಗ್ಗೆ ಪ್ರತಿರೋಧ ಒಡ್ಡದೇ ಮೌನ ವಹಿಸಿರುವುದು ಇದಕ್ಕೆ ಮತ್ತಷ್ಟು ಇಂಬು ನೀಡಿದಂತಾಗಿದೆ ಎಂದರು. 
    ಕರ್ನಾಟಕ ಚಾಣಕ್ಯ ಸೇನೆಯ ಐಹೊಳೆ ನಾರಾಯಣ, ಇಂದ್ರೇಶ್, ಮಂಜಪ್ಪ, ಸುಬ್ರಮಣಿ, ಕಲ್ಲೇಶಪ್ಪ, ದಲಿತ ಸಂಘರ್ಷ ಸಮಿತಿ ಸಂಯೋಜಕ ಜಗದೀಶ್ ಸೇರಿದಂತೆ ಇನ್ನಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.