Monday, February 10, 2025

ಸಂವಿಧಾನ ಬದಲಾಯಿಸುವ ಹೇಳಿಕೆ ನೀಡುವ ವ್ಯಕ್ತಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ

ಈಗಿರುವ ಭಾರತದ ಸಂವಿಧಾನ ಬದಲಿಗೆ ಸಂಘ ಪರಿವಾರದ ಮನುಧರ್ಮ ಶಾಸ್ತ್ರ ಆಧಾರಿತ ಸಂವಿಧಾನವನ್ನು ಜಾರಿಗೆ ತರುವುದಾಗಿ ಮನುವಾದಿ ಹೇಳಿಕೆಯನ್ನು ಖಂಡಿಸಿ ಭದ್ರಾವತಿಯಲ್ಲಿ ಕರ್ನಾಟಕ ಅಂಬೇಡ್ಕರ್ ವೈಚಾರಿಕ ವೇದಿಕೆ ವತಿಯಿಂದ ನಗರದ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು. 
    ಭದ್ರಾವತಿ: ಈ ದೇಶದ ಸಂವಿಧಾನ ಬದಲಾಯಿಸುವ ಅಪಪ್ರಚಾರಗಳು ನಡೆದರೂ ರಾಷ್ಟ್ರಪತಿಯವರು ಗಂಭೀರವಾಗಿ ಪರಿಗಣಿಸದೇ ಮೌನವಹಿಸಿರುವುದು ಸರಿಯಲ್ಲ. ಹಿಂದೂ ರಾಷ್ಟ್ರದ ಸಂವಿಧಾನ ಜಾರಿಗೆ ತರಲು ಮುಂದಾಗಿರುವ ಸಂಘ ಪರಿವಾರದ ನೀತಿಯನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸುವುದು ಇಂದು ಅನಿವಾರ್ಯವಾಗಿದೆ. ತಕ್ಷಣ ಸಂವಿಧಾನ ಬದಲಾಯಿಸುವ ಹೇಳಿಕೆ ನೀಡುವ ವ್ಯಕ್ತಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಿ ಶಿಕ್ಷೆ ವಿಧಿಸಬೇಕೆಂದು ಕರ್ನಾಟಕ ಅಂಬೇಡ್ಕರ್ ವೈಚಾರಿಕ ವೇದಿಕೆ ಸಂಚಾಲಕ ಪಿ. ಮೂರ್ತಿ ಆಗ್ರಹಿಸಿದರು. 
    ಈಗಿರುವ ಭಾರತದ ಸಂವಿಧಾನ ಬದಲಿಗೆ ಸಂಘ ಪರಿವಾರದ ಮನುಧರ್ಮ ಶಾಸ್ತ್ರ ಆಧಾರಿತ ಸಂವಿಧಾನವನ್ನು ಜಾರಿಗೆ ತರುವುದಾಗಿ ಮನುವಾದಿ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ಅಂಬೇಡ್ಕರ್ ವೈಚಾರಿಕ ವೇದಿಕೆ ವತಿಯಿಂದ ನಗರದ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಕೇತಿಕ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು. 
    ದೇಶದ ಬಹುಸಂಖ್ಯಾತರಾದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ರೈತರು, ಕಾರ್ಮಿಕರು, ಮಹಿಳೆಯರು, ಮಕ್ಕಳು ಮತ್ತು ಆದಿವಾಸಿಗಳ ಧ್ವನಿಯಾಗಿ ಈಗಿರುವ ಸಂವಿಧಾನವಿದ್ದು, ಈ ಸಮುದಾಯಗಳ ಸಾಮಾಜಿಕ ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಸಮಾನತೆಯನ್ನು ಹಾಗೂ ಎಲ್ಲರ ಸ್ವಾವಲಂಬನೆ ಬಯಸುವ ವಿಶ್ವಜ್ಞಾನಿ, ಮಹಾಮಾನವತಾವಾದಿ ಅಂಬೇಡ್ಕರ್‌ರವರು ಈ ದೇಶಕ್ಕೆ ಕೊಡುಗೆಯಾಗಿರುವ ಸಂವಿಧಾನವನ್ನು ಬದಲಾಯಿಸಿ ಅಸಮಾನತೆಯನ್ನು ಮೂಲಮಂತ್ರವನ್ನಾಗಿಸಿ ಕೊಂಡಿರುವ ಮನುಸ್ಮೃತಿ ಆಧಾರಿತ `ಹಿಂದೂ ರಾಷ್ಟ್ರದ ಸಂವಿಧಾನ'  ಜಾರಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು. 
    ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದಾಗಿನಿಂದ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು `ಸಂವಿಧಾನವನ್ನು ಸುಡುತ್ತೇವೆ', ಸಂವಿಧಾನ ಬದಲಾಯಿಸಲೇ ನಾವು ಅಧಿಕಾರಕ್ಕೆ ಬಂದಿರುವುದು. ಇತ್ಯಾದಿ ಸಂವಿಧಾನ ವಿರೋಧಿ ಹೇಳಿಕೆಗಳನ್ನು ಕೊಡುತ್ತಾ ಬಂದರು. ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಬಿ .ಎನ್. ರಾಯ್ ಭಾರತ ಸಂವಿಧಾನದ ಕರಡು ರಚಿಸಿದ್ದು ಎಂದು ಅಪಪ್ರಚಾರ ಮಾಡಿದರು. `ಅಂಬೇಡ್ಕರ್ ಅಂಬೇಡ್ಕರ್ ಎಂದೇಳುವುದು ಫ್ಯಾಷನ್, ಆಗಿಹೋಗಿದೆ ಎಂದು ಸಂಸತ್ತಿನಲ್ಲೇ ಗೃಹಮಂತ್ರಿ ಅಮಿತ್ ಶಾ ಅಂಬೇಡ್ಕರ್ ಅವರಿಗೆ ಅವಮಾನಗೊಳಿಸಿ ಹೇಳಿಕೆ ನೀಡಿದರು. ಇತ್ತೀಚಿಗೆ ಪಂಜಾಬ್‌ನಲ್ಲಿ ಅಂಬೇಡ್ಕರ್ ಪ್ರತಿಮೆ ವಿರೂಪಗೊಳಿಸಿದ ಪ್ರಕರಣ ನಡೆದಿದೆ. ಈಗ ಅಂಬೇಡ್ಕರ್ ಬರೆದ ಸಂವಿಧಾನದ ಬದಲಿಗೆ ಬೇರೊಂದು ಸಂವಿಧಾನ ತರುವ ಪ್ರಸ್ತಾಪ ಬಂದಿದೆ. ಇದೆಲ್ಲಾ  ಸಂಘ ಪರಿವಾರದ ಮನುಧರ್ಮ ಶಾಸ್ತ್ರ ಆಧಾರಿತ ಸಂವಿಧಾನವನ್ನು ಜಾರಿಗೆ ತರುವ ಹುನ್ನಾರವಾಗಿದ್ದು, ವಿರೋಧ ಪಕ್ಷಗಳು ಸಹ ಈ ವಿಚಾರದ ಬಗ್ಗೆ ಪ್ರತಿರೋಧ ಒಡ್ಡದೇ ಮೌನ ವಹಿಸಿರುವುದು ಇದಕ್ಕೆ ಮತ್ತಷ್ಟು ಇಂಬು ನೀಡಿದಂತಾಗಿದೆ ಎಂದರು. 
    ಕರ್ನಾಟಕ ಚಾಣಕ್ಯ ಸೇನೆಯ ಐಹೊಳೆ ನಾರಾಯಣ, ಇಂದ್ರೇಶ್, ಮಂಜಪ್ಪ, ಸುಬ್ರಮಣಿ, ಕಲ್ಲೇಶಪ್ಪ, ದಲಿತ ಸಂಘರ್ಷ ಸಮಿತಿ ಸಂಯೋಜಕ ಜಗದೀಶ್ ಸೇರಿದಂತೆ ಇನ್ನಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. 

No comments:

Post a Comment