ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವು : ವಿಜಯೋತ್ಸವ
ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಭದ್ರಾವತಿಯಲ್ಲಿ ಬಿಜೆಪಿ ಮಂಡಲ ವತಿಯಿಂದ ನಗರದ ಮಾಧವಾಚಾರ್ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.
ಭದ್ರಾವತಿ : ಲಿಕ್ಕರ್ ವ್ಯವಹಾರದ ಕೋಟ್ಯಾಂತರ ರು. ವಂಚನೆ ಆರೋಪದಲ್ಲಿ ಜೈಲು ಸೇರಿ ಜೈಲಿನಿಂದಲೇ ಆಡಳಿತ ಮಾಡುವುದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಅವಮಾನಿಸಿದ ವ್ಯಕ್ತಿಯ ಸೋಲಾಗಿದೆ. ದೆಹಲಿಯಲ್ಲೂ ಮೋದಿಯವರ ಆಡಳಿತಕ್ಕೆ ಜನಮನ್ನಣೆ ಲಭಿಸಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು.
ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಡಲ ವತಿಯಿಂದ ನಗರದ ಮಾಧವಾಚಾರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಭ್ರಮಾಚರಣೆ ನೇತೃತ್ವ ವಹಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಯ ದಿಕ್ಕನ್ನು ಬದಲಿಸಲಿರುವ ದೆಹಲಿ ಚುನಾವಣೆ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಬಾರಿ ಪಕ್ಷಕ್ಕೆ ಜನಮನ್ನಣೆ ಲಭಿಸಿರುವುದು ಸಂತಸದ ಸಂಗತಿಯಾಗಿದೆ. ೪೮ ಸ್ಥಾನಗಳನ್ನು ಗೆದ್ದು ೨೭ ವರ್ಷಗಳ ಬಳಿಕ ದೇಶದ ಕೇಂದ್ರ ಭಾಗದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಕಾರ್ಯಕರ್ತರಲ್ಲಿ ಹೊಸ ಹುರುಪನ್ನು ತಂದಿದೆ. ಸಂಘದ ಶತಮಾನೋತ್ಸವ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ಪಕ್ಷದ ವಶವಾಗಿದೆ. ಇದು ಭಾರತ ವಿಶ್ವಗುರುವಾಗುವ ಶುಭ ಸೂಚನೆ. ಇಡೀ ಜಗತ್ತು ನರೇಂದ್ರ ಮೋದಿಜಿ ಅವರ ನಾಯಕತ್ವವನ್ನು ಒಪ್ಪಿಕೊಂಡಿದೆ ಎಂದರು.
ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಮುಖಂಡರಾದ ಎಚ್. ತೀರ್ಥಯ್ಯ, ಎಂ. ಮಂಜುನಾಥ್, ಜೆಡಿಎಸ್ ಪಕ್ಷದ ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಚೆನ್ನೇಶ್, ಪ್ರಮುಖರಾದ ರಾಮಲಿಂಗಯ್ಯ, ಎಂ.ಎಸ್ ಸುರೇಶಪ್ಪ, ಕಾ.ರಾ ನಾಗರಾಜ್, ರಂಗಸ್ವಾಮಿ, ರಾಜಶೇಖರ್ ಉಪ್ಪಾರ್, ಧನುಷ್ ಬೋಸ್ಲೆ, ಸರಸ್ವತಿ, ಸತೀಶ್, ನಿರಂಜನ್ ಗೌಡ, ಪ್ರಸನ್ನ ಕುಮಾರ್, ರಘುರಾವ್, ಅನ್ನಪೂರ್ಣ, ಸಾಗರ್, ಮಂಜುಳಾ, ಉಮಾವತಿ, ಲತಾ ಪ್ರಭಾಕರ್, ಮಂಡಲದ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಹಾಗೂ ವಿವಿಧ ಮೋರ್ಚಾಗಳ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
No comments:
Post a Comment