ಭಾನುವಾರ, ಆಗಸ್ಟ್ 17, 2025

ಅರಕೆರೆ ವಿರಕ್ತಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ

ಅರಕೆರೆ ವಿರಕ್ತಮಠದ ಶ್ರೀ ಕರಿಸಿದ್ದೇಶ್ವರ ಮಹಾಸ್ವಾಮಿಗಳು
    ಭದ್ರಾವತಿ: ತಾಲೂಕಿನ ಅರಕೆರೆ ಗ್ರಾಮದ ಶ್ರೀ ಚನ್ನವೀರ ಮಹಾಸ್ವಾಮಿಗಳ ವಿರಕ್ತ ಮಠದ ಗುರುಗಳಾದ ಶ್ರೀ ಕರಿಸಿದ್ದೇಶ್ವರ ಮಹಾಸ್ವಾಮಿಗಳು(೬೯) ಭಾನುವಾರ ಲಿಂಗೈಕ್ಯರಾಗಿದ್ದಾರೆ. 
    ಪತ್ನಿ, ಓರ್ವ ಪುತ್ರ ಇದ್ದಾರೆ. ಶ್ರೀಗಳ ಅಂತ್ಯಕ್ರಿಯೆ ಸೋಮವಾರ ವಿರಕ್ತ ಮಠದಲ್ಲಿ ನಡೆಯಲಿದೆ. ಶ್ರೀ ಕರಿಸಿದ್ದೇಶ್ವರ ಮಹಾಸ್ವಾಮಿಗಳು ಹಿಂದೂ ಧರ್ಮ ಹಾಗು ಸಂಸ್ಕಾರಗಳ ಕುರಿತು ಹೆಚ್ಚಿನ ಪಾಂಡಿತ್ಯ ಹೊಂದಿದ್ದರು. ಹಲವು ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಈ ಕುರಿತು ಜಾಗೃತಿ ಮೂಡಿಸಿದ್ದರು. ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಸ್ವತಃ ತಾವೇ ಮಾಸ್ಕ್‌ಗಳನ್ನು ಸಿದ್ದಪಡಿಸಿ ಉಚಿತವಾಗಿ ವಿತರಿಸಿದ್ದರು. 
    ಶ್ರೀ ಚನ್ನವೀರ ಮಹಾಸ್ವಾಮಿಗಳ ವಿರಕ್ತ ಮಠದ ವಂಶಪಾರಂಪರೆ ಮಠವಾಗಿದ್ದು, ಇವರ ತಂದೆಯ ನಿಧನ ನಂತರ ಶ್ರೀ ಮಠದ ಪೀಠಾಧಿಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. 
    ಲಿಂಗೈಕ್ಯರಾಗಿರುವ ಶ್ರೀಗಳಿಗೆ ಸಂತಾಪ: 
    ಲಿಂಗೈಕೈರಾಗಿರುವ ಶ್ರೀ ಕರಿಸಿದ್ದೇಶ್ವರ ಮಹಾಸ್ವಾಮಿಗಳಿಗೆ ತಾಲೂಕಿನ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಬಿ.ಕೆ ಸಂಗಮೇಶ್ವರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗ್ರಾಮದ ಮುಖಂಡ ಎಚ್.ಎಲ್ ಷಡಾಕ್ಷರಿ, ಅರಕರೆ ಗ್ರಾಮಸ್ಥರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ. 

ಸಂತೋಷ್ ಎನ್ ಶೆಟ್ಟಿ ಸಾಹಿತ್ಯದ ಮೊದಲ ೩ ಹಾಡುಗಳು ಬೆಂಗಳೂರಿನಲ್ಲಿ ಬಿಡುಗಡೆ

ಶಾಮಿಯಾನ ಕೆಲಸದಿಂದ ಸಾಹಿತ್ಯದ ಕಡೆ ಪಯಣ 

ಭದ್ರಾವತಿ ನಗರದ ಉಜ್ಜನಿಪುರ ಸಂತೋಷ್ ಶಾಮಿಯಾನ ಮಾಲೀಕ ಸಂತೋಷ್ ಎನ್ ಶೆಟ್ಟಿ ಕನ್ನಡ ಚಲನಚಿತ್ರ ರಂಗಕ್ಕೆ ಚಿತ್ರ ಸಾಹಿತಿಯಾಗಿ ಪ್ರವೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಾಹಿತ್ಯದ ೩ ಹಾಡುಗಳು(ಆಲ್ಬಮ್ ಸಾಂಗ್)  ಬೆಂಗಳೂರಿನ ಮಾಗಡಿ ರೋಡ್, ಜಿಟಿ ಮಾಲ್‌ನಲ್ಲಿ ಶುಕ್ರವಾರ ಬಿಡುಗಡೆಗೊಂಡಿವೆ. ಈ ಸಂಬಂಧ ಜರುಗಿದ ಕಾರ್ಯಕ್ರಮವನ್ನು ಚಲನಚಿತ್ರ ಸಾಹಿತಿಗಳು, ಸಂಗೀತ ನಿರ್ದೇಶಕರು, ನಿರ್ಮಾಪಕರು ಹಾಗು ಕುಟುಂಬ ವರ್ಗದವರು ಉದ್ಘಾಟಿದರು. 
    ಭದ್ರಾವತಿ : ಶಾಮಿಯಾನ ಕೆಲಸದಿಂದ ಇದೀಗ ಸಾಹಿತ್ಯದ ಕಡೆಗೆ ಒಲವು ತೋರಿಸಿರುವ ನಗರದ ಉಜ್ಜನಿಪುರ ಸಂತೋಷ್ ಶಾಮಿಯಾನ ಮಾಲೀಕ ಸಂತೋಷ್ ಎನ್ ಶೆಟ್ಟಿ ಕನ್ನಡ ಚಲನಚಿತ್ರ ರಂಗಕ್ಕೆ ಚಿತ್ರ ಸಾಹಿತಿಯಾಗಿ ಪ್ರವೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಾಹಿತ್ಯದ ೩ ಹಾಡುಗಳು(ಆಲ್ಬಮ್ ಸಾಂಗ್) ಶುಕ್ರವಾರ ಬಿಡುಗಡೆಗೊಂಡಿವೆ. 
    ಬೆಂಗಳೂರಿನ ಮಾಗಡಿ ರೋಡ್, ಜಿಟಿ ಮಾಲ್‌ನಲ್ಲಿ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.  ಪ್ರಪ್ರಥಮ ಬಾರಿಗೆ ಬಿಡುಗಡೆಗೊಂಡಿತ್ತಿರುವ ಹಾಡುಗಳಿಗೆ ಎಲ್ಲರ ಮೆಚ್ಚುಗೆ ಕಂಡು ಬಂದಿತು.  
    ವಸಂತ ಮಾಧವ ಭದ್ರಾವತಿಯವರ ಸಂಗೀತ ಮತ್ತು ಗಾಯನದಲ್ಲಿ ಮೊದಲ ಹಾಡು `ತುತ್ತು ನೀಡುವ ಹೆತ್ತ ತಾಯಿಯು', ಬೆಂಗಳೂರಿನ ಎ.ಟಿ ರವೀಶ್ ಸಂಗೀತದಲ್ಲಿ ಎರಡನೇ ಹಾಡು `ಗಣೇಶ ಡಿಜೆ ಹಾಡು' ಮತ್ತು  ಮೂರನೇ ಹಾಡು `ಪೋಲ್ಸ್ ಪೆಂಡಾಲ್, ಪೈಪ್ ಪೆಂಡಾಲ್' ಸಂತೋಷ್ ಎನ್. ಶೆಟ್ಟಿ ಸಾಹಿತ್ಯ ಹಾಗು ನಿರ್ಮಾಣದಲ್ಲಿ ಬಿಡುಗಡೆಗೊಂಡಿರುವ ಹಾಡುಗಳಾಗಿವೆ. 
ಸಮಾರಂಭದಲ್ಲಿ ಚಿತ್ರರಂಗದ ಹೆಸರಾಂತ ಚಿತ್ರ ಸಾಹಿತಿಗಳು, ಸಂಗೀತ ನಿರ್ದೇಶಕರು, ನಿರ್ಮಾಪಕರು, ಕುಟುಂಬ ವರ್ಗದವರು, ಹಿತೈಷಿಗಳು ಪಾಲ್ಗೊಂಡು ಸಂಭ್ರಮ ಹಂಚಿಕೊಂಡರು.
    ಕಳೆದ ಸುಮಾರು ಒಂದೂವರೆ ವರ್ಷದಲ್ಲಿ ಸಂತೋಷ್ ಎನ್ ಶೆಟ್ಟಿ ಶಾಮಿಯಾನ ಕೆಲಸದೊಂದಿಗೆ ಸಾಹಿತ್ಯದ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದು, ಈಗಾಗಲೇ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಕುರಿತು ಭಕ್ತಿ ಗೀತೆಗಳ ಧ್ವನಿಸುರಳಿ ಸಹ ಬಿಡುಗಡೆಗೊಳಿಸಿದ್ದಾರೆ. ಶ್ರೀ ಕ್ಷೇತ್ರದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗಡೆಯವರು ಧ್ವನಿಸುರಳಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
    ಇದೀಗ ಕನ್ನಡ ಚಲನಚಿತ್ರ ರಂಗಕ್ಕೆ ಚಿತ್ರ ಸಾಹಿತಿಯಾಗಿ ಪ್ರವೇಶಿಸಿದ್ದು, ಉತ್ತಮ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ. ಈಗಾಗಲೇ ಕನ್ನಡ ಚಲನಚಿತ್ರ ರಂಗದ ಪ್ರಸಿದ್ದ ಸಾಹಿತಿಗಳನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆದುಕೊಂಡಿದ್ದು, ಎಲ್ಲಕ್ಕಿಂತ ಮುಖ್ಯವಾಗಿ ನಾಡಿನ ಕನ್ನಡಿಗರ  ಮೆಚ್ಚುಗೆ, ಅಭಿಮಾನ, ಪ್ರೋತ್ಸಾಹ ಎದುರು ನೋಡುತ್ತಿದ್ದಾರೆ. 

ಅಂಬೇಡ್ಕರ್‌ರವರ ವಿಚಾರಧಾರೆ ಎಲ್ಲರೂ ಪರಿಪೂರ್ಣವಾಗಿ ಅರ್ಥಮಾಡಿಕೊಂಡಾಗ ಮಾತ್ರ ಪರಿವರ್ತನೆ ಸಾಧ್ಯ : ಅಹಿಂಸಾ ಚೇತನ್

ಭದ್ರಾವತಿ ನಗರದ ಮಿಲ್ಟ್ರಿಕ್ಯಾಂಪ್ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಚಲನಚಿತ್ರ ನಟ ಅಹಿಂಸಾ ಚೇತನ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ: ಈ ದೇಶದ ಜನರು ಅಂಬೇಡ್ಕರ್‌ರವರ ವಿಚಾರಧಾರೆಗಳನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳುವವರೆಗೂ ದೇಶದಲ್ಲಿ ಪರಿವರ್ತನೆ ತರಲು ಸಾಧ್ಯವಿಲ್ಲ ಎಂದು ಚಲನಚಿತ್ರ ನಟ ಅಹಿಂಸಾ ಚೇತನ್ ಹೇಳಿದರು. 
    ಅವರು ನಗರದ ಮಿಲ್ಟ್ರಿಕ್ಯಾಂಪ್ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. 
    ಡಾ. ಬಿ.ಆರ್ ಅಂಬೇಡ್ಕರ್‌ರವರು ದೇಶದ ಸಂವಿಧಾನ ರಚಿಸುವಾಗ ಬಲ ಮತ್ತು ಎಡ ಪಂಥಿಯರು ಹಾಗು ಮನುವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ನಡುವೆ ಕಾಂಗ್ರೆಸ್ ಪಕ್ಷ ಸಹ ಅಂಬೇಡ್ಕರ್‌ರವರಿಗೆ ಪೂರ್ಣಪ್ರಮಾಣದಲ್ಲಿ ಬೆಂಬಲ ನೀಡಲಿಲ್ಲ. ಈಗಿರುವಾಗ ನಾವು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಹೊಂದುವುದು ಸರಿಯಲ್ಲ. ಅಂಬೇಡ್ಕರ್‌ರವರ ವಿಚಾರಧಾರೆಗಳನ್ನು ಈ ದೇಶದ ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ಏನಾದರೂ ಪರಿವರ್ತನೆ ತರಲು ಸಾಧ್ಯ ಎಂದರು. 
    ಸಭೆಯಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಸುರೇಶ್, ಶಿವಬಸಪ್ಪ, ಸತ್ಯ ಭದ್ರಾವತಿ, ಚಿನ್ನಯ್ಯ, ಡಿ. ರಾಜು, ವಿ. ವಿನೋದ್, ಕೃಷ್ಣನಾಯ್ಕ, ಪುಟ್ಟರಾಜ್, ಆರ್. ಅರುಣ್, ಮಂಜುನಾಥ್, ಯು. ಮಹಾದೇವಪ್ಪ, ಶರವಣ, ಲೋಕೇಶ್, ಸುಕನ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.