Thursday, March 6, 2025

ರಾಮ್ಕೋಸ್‌ಗೆ ೨ನೇ ಬಾರಿಗೆ ನಿರ್ದೇಶಕರಾಗಿ ಎಚ್.ಎಸ್ ಸಂಜೀವಕುಮಾರ್ ಆಯ್ಕೆ

ಭದ್ರಾವತಿ ನಗರದ ರೈತರ ಅಡಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ ನಿಯಮಿತ(ರಾಮ್ಕೋಸ್) ನಿರ್ದೇಶಕರಾಗಿ ಎಚ್.ಎಸ್ ಸಂಜೀವಕುಮಾರ್ ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ನಗರದ ರೈತರ ಅಡಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ ನಿಯಮಿತ(ರಾಮ್ಕೋಸ್) ನಿರ್ದೇಶಕರಾಗಿ ಎಚ್.ಎಸ್ ಸಂಜೀವಕುಮಾರ್ ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. 
    ಮುಂದಿನ ೫ ವರ್ಷಗಳ ಅವಧಿಗೆ ನಿರ್ದೇಶಕರ ಸ್ಥಾನಕ್ಕೆ ಜ.೨೫ರಂದು ಚುನಾವಣೆ ನಡೆದಿದ್ದು, ಫೆ.೩ರಂದು ಫಲಿತಾಂಶ ಹೊರಬಿದ್ದಿದೆ. ಸಂಜೀವಕುಮಾರ್‌ರವರ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಿ ಪುನಃ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿರುವ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಶಾಂತರಾಜ್‌ರವರು ಫಲಿತಾಂಶ ಘೋಷಿಸಿದ್ದಾರೆ. 
    ಸಂಜೀವಕುಮಾರ್‌ರವರು ನಗರದ ಶಿವ ವಿವಿದೋದ್ದೇಶ ಸಹಕಾರ ಸಂಘದ ಚುನಾವಣೆಯಲ್ಲೂ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಪ್ರಸ್ತುತ ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಜೀವಕುಮಾರ್‌ರವರನ್ನು ನಗರದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿವೆ. 

ಮಾ.೯ರಂದು `ಮಂಥನ' ೨ನೇ ಕಾರ್ಯಕ್ರಮ

    ಭದ್ರಾವತಿ: ನಗರದ `ಮಂಥನ'ವತಿಯಿಂದ ೨ನೇ ಕಾರ್ಯಕ್ರಮ ಮಾ. ೯ರ ಭಾನುವಾರ ಸಂಜೆ ೬ ಗಂಟೆಗೆ ಹಳೇನಗರದ ಶ್ರೀವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ  ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ. 
    ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನಡೆಯಲಿದ್ದು, ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಸಂವಿಧಾನ ತಜ್ಞ ಹಾಗು ಅಂಕಣಕಾರ ಡಾ. ಸುಧಾಕರ ಹೊಸಹಳ್ಳಿ ಉಪನ್ಯಾಸಕರಾಗಿ ಆಗಮಿಸಿ `ಅಂಬೇಡ್ಕರ್ ಮತ್ತು ಇಸ್ಲಾಂ'  ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮಂಥನ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

೪ ದಶಕಗಳ ಹೋರಾಟಕ್ಕೆ ಇದೀಗ ಫಲ : ಶೀಘ್ರದಲ್ಲಿಯೇ ಉದ್ಘಾಟನೆಗೊಳ್ಳಲಿದೆ ಡಾ.ಬಿ.ಆರ್ ಅಂಬೇಡ್ಕರ್ ಭವನ

ಭದ್ರಾವತಿ ಹಳೇನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನ. 
* ಅನಂತಕುಮಾರ್
     ಭದ್ರಾವತಿ: ಕ್ಷೇತ್ರದಲ್ಲಿ ಸುಮಾರು ೪ ದಶಕಗಳ ಹೋರಾಟಕ್ಕೆ ಇದೀಗ ಫಲ ಲಭಿಸಿದ್ದು, ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಇದೀಗ ಬಹುತೇಕ ಪೂರ್ಣಗೊಂಡು ಉದ್ಘಾಟನೆಗೆ ಸಿದ್ದಗೊಳ್ಳುತ್ತಿದೆ. 
    ದಲಿತ ಚಳುವಳಿ ಹುಟ್ಟಿದ ನೆಲದಲ್ಲಿ ಅದರ ಮೂಲ ಪ್ರೇರಕ ಶಕ್ತಿ, ಜಗತ್ತಿನ ಶ್ರೇಷ್ಠ ಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಾ. ಬಿ.ಆರ್ ಅಂಬೇಡ್ಕರ್‌ರವರ ಭವನದ ಕನಸು ಇದೀಗ ನನಸಾಗುತ್ತಿದೆ. ಕ್ಷೇತ್ರದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಿಸಬೇಕೆಂದು ವಿವಿಧ ದಲಿತಪರ ಸಂಘಟನೆಗಳು ಸುಮಾರು ೪ ದಶಕಗಳ ಹಿಂದೆ ಆರಂಭಿಸಿದ ಹೋರಾಟ ಇದೀಗ ಅಂತ್ಯಗೊಳ್ಳುವಂತಾಗಿದೆ.
    ಆರಂಭದ ಹೋರಾಟದಲ್ಲಿ ಜಯ ಲಭಿಸಿದಾದರೂ ನಿರೀಕ್ಷೆಯಂತೆ ಸುಸಜ್ಜಿತ ಭವನ ನಿರ್ಮಾಣಗೊಳ್ಳಲಿಲ್ಲ. ಆರಂಭದಲ್ಲಿ ನಗರದ ಬಿ.ಎಚ್ ರಸ್ತೆ ಅಪ್ಪರ್ ಹುತ್ತಾ ರೈಲ್ವೆ ಕೆಳಸೇತುವೆ ಬಳಿ ಅತಿ ಚಿಕ್ಕದಾದ, ಗುಡಿಸಲಿನ ಮಾದರಿಯ ಭವನ ನಿರ್ಮಾಣಗೊಂಡಿತು. ಆದರೆ ಈ ಭವನವನ್ನು ಯಾರು ಸಹ ಅಂಬೇಡ್ಕರ್ ಭವನವೆಂದು ಸ್ವೀಕರಿಸಲು ಸಿದ್ದರಿರಲಿಲ್ಲ. ಈ ಹಿನ್ನಲೆಯಲ್ಲಿ ಈ  ಭವನ ಸುಮಾರು ೪-೫ ವರ್ಷಗಳವರೆಗೆ ಪಾಳು ಬಿದ್ದಿತ್ತು. ನಂತರದ ದಿನಗಳಲ್ಲಿ ಈ ಭವನವನ್ನು ನಗರಸಭೆ ಆಡಳಿತ ಸಾರ್ವಜನಿಕ ಗ್ರಂಥಾಲಯಕ್ಕೆ ಬಿಟ್ಟುಕೊಡುವ ಮೂಲಕ ಇದರ ನಿರ್ವಹಣೆ ಜವಾಬ್ದಾರಿಯನ್ನು ಗ್ರಂಥಾಲಯ ಇಲಾಖೆಗೆ ವಹಿಸಿದೆ.
     ಪುನಃ ಮುಂದುವರೆದ ಹೋರಾಟ : ಜಾಗ ಹುಡುಕಾಟ
    ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಪುನಃ ದಲಿತಪರ ಸಂಘಟನೆಗಳು ಹೋರಾಟ ಮುಂದುವರೆಸಿದ ಪರಿಣಾಮ ನಗರಸಭೆ ವ್ಯಾಪ್ತಿಯಲ್ಲಿ ಜಾಗ ಹುಡುಕುವ ಪ್ರಕ್ರಿಯೆ ಆರಂಭಗೊಂಡಿತು. ಮೊದಲು ಹೊಸಮನೆ ಮುಖ್ಯರಸ್ತೆಯಲ್ಲಿರುವ ಹಳೇ ಸಂತೆ ಮೈದಾನದಲ್ಲಿ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಲಾಯಿತು. ಆದರೆ ಈ ಸ್ಥಳ ಸೂಕ್ತವಲ್ಲ ಬೇರೆಡೆ ನಿರ್ಮಿಸಬೇಕೆಂದು ಒತ್ತಾಯಗಳು ಕೇಳಿ ಬಂದ ಹಿನ್ನಲೆಯಲ್ಲಿ ಕೈಬಿಡಲಾಯಿತು. ನಂತರ ಜಟ್‌ಪಟ್ ನಗರದಲ್ಲಿ ಭವನಕ್ಕೆ ಜಾಗ ಮಂಜೂರಾತಿ ಪಡೆದುಕೊಂಡರೂ ಈ ಜಾಗ ಸಹ ಸೂಕ್ತವಲ್ಲ ಎಂದು ಕೈಬಿಡಲಾಯಿತು. ಕೊನೆಯದಾಗಿ ತಾಲೂಕು ಕಚೇರಿ ರಸ್ತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗ ನಗರಸಭೆಗೆ ಸೇರಿದ ಖಾಲಿ ಜಾಗದಲ್ಲಿ ಭವನ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು. ೨೦೧೭ರಲ್ಲಿ ಅಂದಿನ ಶಾಸಕರಾಗಿದ್ದ ದಿವಂಗತ ಎಂ.ಜೆ ಅಪ್ಪಾಜಿಯವರು ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಸುಮಾರು ೮ ವರ್ಷಗಳ ನಂತರ ಬಹುತೇಕ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಭವನ ಉದ್ಘಾಟನೆಗೊಳ್ಳಲಿದೆ.  
ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದ ಪರಿಣಾಮವಾಗಿ ಅಂಬೇಡ್ಕರ್ ಭವನದ ಕಾಮಗಾರಿ ಮುಕ್ತಾಯ ಹಂತ ತಲುಪುತ್ತಿದೆ. ಏ.೧೦ರೊಳಗೆ ಕಾಮಗಾರಿ ಕಾಮಗಾರಿ ಪೂರ್ಣಗೊಳಿಸಿ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲು ಸೂಚಿಸಲಾಗಿದೆ. ಕೊನೆಗೂ ನಮ್ಮ ಹೋರಾಟಕ್ಕೆ ಫಲ ಲಭಿಸುತ್ತಿದೆ. ನಮ್ಮ ಹೋರಾಟಕ್ಕೆ ಸ್ಪಂದಿಸಿ ಈ ನಡುವೆ ಸರ್ಕಾರದಿಂದ ಪುನಃ ೧ ಕೋ.ರು. ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ. 
        -ಬಿ.ಎನ್ ರಾಜು, ಅಧ್ಯಕ್ಷರು, ಮಾನವ ಹಕ್ಕುಗಳ ಹೋರಾಟ ಸಮಿತಿ. 
 
    ಅನುದಾನ ಬಿಡುಗಡೆಯಾದರೂ ಕಾಮಗಾರಿ ವಿಳಂಬ : 
    ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭವನ ನಿರ್ಮಿಸಲಾಗುತ್ತಿದ್ದು, ಆರಂಭದಲ್ಲಿ ಇಲಾಖೆಗೆ ಸರ್ಕಾರದಿಂದ ರು. ೧ ಕೋ. ಅನುದಾನ ಬಿಡುಗಡೆಗೊಂಡಿದ್ದು, ಈ ಅನುದಾನ ಬಳಸಿಕೊಂಡು ಮೊದಲ ಹಂತದ ಕಾಮಗಾರಿ ನಡೆಸಲಾಯಿತು. ಹೆಚ್ಚಿನ ಅನುದಾನ ಅಗತ್ಯತೆ ಹಿನ್ನಲೆಯಲ್ಲಿ ಪುನಃ ಇಲಾಖೆಗೆ ರು. ೧ ಕೋ. ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ನಗರಸಭೆ ವತಿಯಿಂದ ರು.೫೦ ಲಕ್ಷ ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರು.೩೭.೩೭ ಲಕ್ಷ ರು. ಹಾಗು ಸಂಸದರ ನಿಧಿಯಿಂದ ೨೫ ಲಕ್ಷ ರು. ಸೇರಿದಂತೆ ಒಟ್ಟು ೩.೧೨ ಕೋ. ರು. ಅನುದಾನ ಲಭ್ಯವಾದರೂ ಸಹ ಭವನ ಪೂರ್ಣಗೊಳ್ಳಲಿಲ್ಲ. ಈ ನಡುವೆ ಸರ್ಕಾರ ಹೆಚ್ಚುವರಿಯಾಗಿ ಪುನಃ ೧.೫೦ ಕೋ.ರು ಅನುದಾನ ಬಿಡುಗಡೆಗೊಳಿಸಿದ್ದು, ಆದರೂ ಸಹ ಕಾಮಗಾರಿ ಪೂರ್ಣಗೊಳಿಸುವಲ್ಲಿ ನಿರ್ಮಿತಿ ಕೇಂದ್ರ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಈ ನಡುವೆ ಹೋರಾಟಗಳು ತೀವ್ರಗೊಂಡು ಭವನ ಕಾಮಗಾರಿ ಪೂರ್ಣಗೊಳಿಸುವಂತೆ ಎಚ್ಚರಿಸಿದ ಹಿನ್ನಲೆಯಲ್ಲಿ ಇದೀಗ ಕಾಮಗಾರಿ ಶೀಘ್ರವಾಗಿ ಮುಕ್ತಾಯಗೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಕಳೆದ ಎರಡು ದಿನಗಳ ಹಿಂದೆ ನಿರ್ಮಿತಿ ಕೇಂದ್ರಕ್ಕೆ ಪತ್ರ ಬರೆದು ಉಳಿದಿರುವ ಕಾಮಗಾರಿ ಪೂರ್ಣಗೊಳಿಸಿ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಿದೆ. ಬುಧವಾರದಿಂದ ಕಾಮಗಾರಿ ಆರಂಭಗೊಂಡಿದ್ದು, ಶೀಘ್ರದಲ್ಲಿಯೇ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. 

ಮಕ್ಕಳು ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪುಕೊಳ್ಳಲು ವಿದ್ಯಾದಾನ ಸಹಕಾರಿ : ಎ.ಕೆ ನಾಗೇಂದ್ರಪ್ಪ

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಕೂಲಿ ಕಾರ್ಮಿಕರಿಗೆ ವಸ್ತ್ರ ವಿತರಣೆ 

ಭದ್ರಾವತಿಯಲ್ಲಿ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಹಾಗು ಬಡ ಕೂಲಿ ಕಾರ್ಮಿಕರಿಗೆ ವಸ್ತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ : ದಾನಗಳಲ್ಲಿ ವಿದ್ಯಾದಾನ ಸಹ ಶ್ರೇಷ್ಠವಾಗಿದ್ದು, ಮಕ್ಕಳು ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪುಕೊಳ್ಳಲು ವಿದ್ಯಾದಾನ ಸಹಕಾರಿಯಗಲಿದೆ ಈ ಹಿನ್ನಲೆಯಲ್ಲಿ ದಾನಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮನವಿ ಮಾಡಿದರು. 
    ಅವರು ನಗರದ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಹಾಗು ಬಡ ಕೂಲಿ ಕಾರ್ಮಿಕರಿಗೆ ವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.  
    ಧರ್ಮಸಂಸ್ಥೆ ವತಿಯಿಂದ ಪ್ರತಿ ವರ್ಷ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ನೆರವು ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಇದರ ಜೊತೆಗೆ ದಾನಿಗಳು ವಿದ್ಯಾದಾನ ಮಾಡುವ ಮೂಲಕ ಇನ್ನೂ ಹೆಚ್ಚಿನ ಸೇವೆ ನೀಡಬೇಕು. ಆ ಮೂಲಕ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು. . 
    ಹಿರಿಯ ಮುಖಂಡ, ಉದ್ಯಮಿ ಬಿ.ಕೆ ಜಗನ್ನಾಥ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮಸಂಸ್ಥೆ ಸೇವಾ ಕಾರ್ಯ ಇತರರಿಗೆ ಮಾದರಿಯಾಗಿದೆ. ಸಮಾಜದಲ್ಲಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕೆಂದರು.  
    ಧರ್ಮಸಂಸ್ಥೆ ಅಧ್ಯಕ್ಷ ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಧರ್ಮಸಂಸ್ಥೆಯನ್ನು ೧೯೯೮ರಲ್ಲಿ ಆರಂಭಿಸಲಾಯಿತು. ಎಲ್ಲರ ಸಹಕಾರದಿಂದ ಅಂದಿನಿಂದ ನಿರಂತರವಾಗಿ ಹಲವಾರು ಸೇವಾ ಕಾರ್ಯಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಆಶಯ ನಮ್ಮದಾಗಿದೆ ಎಂದರು. 
    ಸಮಾಜ ಸೇವಕ ರಾಜುನಾಯ್ಕ, ಚಲನಚಿತ್ರ ನಟ, ನಿರ್ಮಾಪಕ ಮಂಜು(ಮಿಲ್ಟ್ರಿ) ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಧರ್ಮಸಂಸ್ಥೆ ಟ್ರಸ್ಟಿ ಶಶಿಕಲಾ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. 
. ನಂದಿನಿ ಮಲ್ಲಿಕಾರ್ಜುನ ಪ್ರಾರ್ಥಿಸಿ, ಪೇಪರ್‌ಟೌನ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಪಿ. ಬಸವರಾಜ್ ಸ್ವಾಗತಿಸಿದರು. ಅಪೇಕ್ಷ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.