ತ್ಯಾಜ್ಯ ವೈಜ್ಞಾನಿಕವಾಗಿ ಬೇರ್ಪಡಿಸಿ ವಿಲೇವಾರಿ ಮಾಡಿ ಪರಿಸರ ರಕ್ಷಿಸಿ : ವಿ. ರಮೇಶ್
ಭದ್ರಾವತಿ ನ್ಯೂಟೌನ್ ಭದ್ರಾ ಅತಿಥಿಗೃಹದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪರಿಸರ ಮಾಸಾಚರಣೆ-೨೦೨೪ರ ಸಮಾರೋಪ ಸಮಾರಂಭ ಶಿವಮೊಗ್ಗ ಕೆ.ಎಸ್.ಪಿ.ಸಿ.ಬಿ ಪ್ರಾದೇಶಿಕ ಕಛೇರಿ ಪರಿಸರ ಅಧಿಕಾರಿ ವಿ. ರಮೇಶ್ ಉದ್ಘಾಟಿಸಿ ಮಾತನಾಡಿದರು.
ಭದ್ರಾವತಿ: ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವೈಜ್ಞಾನಿಕವಾಗಿ ಬೇರ್ಪಡಿಸಿ ಮತ್ತು ವಿಲೇವಾರಿ ಮಾಡುವ ಮೂಲಕ ನಮ್ಮ ಪರಿಸರವನ್ನು ರಕ್ಷಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕೆಂದು ಶಿವಮೊಗ್ಗ ಕೆ.ಎಸ್.ಪಿ.ಸಿ.ಬಿ ಪ್ರಾದೇಶಿಕ ಕಛೇರಿ ಪರಿಸರ ಅಧಿಕಾರಿ ವಿ. ರಮೇಶ್ ಮನವಿ ಮಾಡಿದರು.
ಅವರು ನಗರದ ನ್ಯೂಟೌನ್ ಭದ್ರಾ ಅತಿಥಿಗೃಹದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪರಿಸರ ಮಾಸಾಚರಣೆ-೨೦೨೪ರ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದು ದೊಡ್ಡ ಸವಾಲಾಗಿದ್ದು, ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗದ ಹಿನ್ನಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಉಲ್ಬಣವಾಗುತ್ತಿವೆ. ಈ ಹಿನ್ನಲೆಯಲ್ಲಿ ನಾವೆಲ್ಲರೂ ಜಾಗೃತಗೊಂಡು ಮೂಲ ಹಂತದಲ್ಲಿಯೇ ತ್ಯಾಜ್ಯ ವೈಜ್ಞಾನಿಕವಾಗಿ ಬೇರ್ಪಡಿಸಿ ವಿಲೇವಾರಿ ಮಾಡಬೇಕೆಂದರು. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹೆಚ್ಚಾಗಿ ಸಸಿಗಳನ್ನು ನೆಡುವ ಮೂಲಕ ಅವುಗಳನ್ನು ಪೋಷಿಸಿ ಸಂರಕ್ಷಣೆ ಮಾಡುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಕೋರಿದರು.
ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಪ್ರತಿಯೊಬ್ಬ ವ್ಯಕ್ತಿ ಒಂದು ಗಿಡವನ್ನು ನೆಟ್ಟು ರಕ್ಷಿಸುವ ಪ್ರತಿಜ್ಞೆ ಮಾಡಿದರೆ ೧೪೦ ಕೋಟಿ ಗಿಡಗಳನ್ನು ನೆಡಬಹುದು. ಇದು ಭವಿಷ್ಯದಲ್ಲಿ ಮಾಲಿನ್ಯ ತೊಡೆದುಹಾಕಲು ಮತ್ತು ಪರಿಸರ ಸಮಸ್ಯೆಗಳನ್ನು ತಗ್ಗಿಸಲು ನೆರವಾಗುತ್ತದೆ ಎಂದರು.
ಮುಖ್ಯ ಮಹಾಪ್ರಬಂಧಕ (ಸ್ಥಾವರ) ಕೆ.ಎಸ್. ಸುರೇಶ್, ಮಹಾಪ್ರಬಂಧಕ (ಪರಿಸರ ನಿರ್ವಹಣೆ ವಿಭಾಗ ಮತ್ತು ಸಿವಿಲ್ ಇಂಜಿನಿಯರಿಂಗ್) ಮುತ್ತಣ್ಣ ಸುಬ್ಬರಾವ್, ಕಾರ್ಖಾನೆ ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರಾ, ಉಪ ಪರಿಸರ ಅಧಿಕಾರಿ ಕೆ. ಶಿಲ್ಪಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಬರೆಯುವುದು, ಪರಿಸರ ರಸಪ್ರಶ್ನೆ ಮತ್ತು ಘೋಷವಾಕ್ಯ ಬರೆಯುವ ಸ್ಪರ್ಧೆಗಳನ್ನು ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಮತ್ತು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಎಲ್ಲರಿಗೂ ಸಸಿಗಳನ್ನು ವಿತರಿಸಲಾಯಿತು. ಅಲ್ಲದೆ ಪರಿಸರ ಮತ್ತು ಪ್ರಕೃತಿ ಕುರಿತಾದ ಮೊದಲ ದಿನದ ಕವರ್‌ಗಳು ಮತ್ತು ಮಿನಿಯೇಚರ್ ಸ್ಟ್ಯಾಂಪ್‌ಗಳ ಪ್ರದರ್ಶನ ಆಯೋಜಿಸಲಾಗಿತ್ತು.
ಪ್ರಕೃತಿ ಕುರಿತಾದ ಹಾಡು ಮತ್ತು ಪ್ರಾರ್ಥನೆ ಗೀತೆ ತ್ರಿವೇಣಿ ಮತ್ತು ಮಂಜುಶ್ರೀ ಸುಶ್ರಾವ್ಯವಾಗಿ ಹಾಡಿದರು. ಸಹಾಯಕ ಮಹಾಪ್ರಬಂಧಕರು (ಪರಿಸರ ಇಲಾಖೆ) ವಿಕಾಸ್ ಬಸೇರ್,ಕಾರ್ಯಕ್ರಮ ನಿರೂಪಿಸಿದರು. ಕಿರಿಯ ಪ್ರಬಂಧಕ (ನಗರಾಡಳಿತ) ಜಿ.ಎಚ್. ನಂದನ ವಂದಿಸಿದರು.