Sunday, May 30, 2021

ಭದ್ರಾವತಿಯಲ್ಲಿ ೧೨೦ ಸೋಂಕು ಪತ್ತೆ : ೪ ಬಲಿ


ಭದ್ರಾವತಿ ಕಾಗದನಗರ ವ್ಯಾಪ್ತಿಯ ಕೊರೋನಾ ಸೋಂಕಿತ ಪ್ರದೇಶಗಳಲ್ಲಿ ನಗರಸಭೆ ವತಿಯಿಂದ ಮುನ್ನಚ್ಚರಿಕೆ ಕ್ರಮವಾಗಿ ಸ್ಯಾನಿಟೈಜರ್ ಸಿಂಪಡಿಸಲಾಯಿತು.

   ಭದ್ರಾವತಿ, ಮೇ. ೩೦: ತಾಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಕಂಡು ಬರುತ್ತಿಲ್ಲ. ನೂರರ ಗಡಿಯಾಚೆಯಲ್ಲಿದ್ದು, ಭಾನುವಾರ ೧೨೦ ಸೋಂಕು ಪತ್ತೆಯಾಗಿದೆ.
   ಒಟ್ಟು ೧೭೯ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೧೨೦ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ೭೮ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ  ಬಿಡುಗಡೆಗೊಂಡಿದ್ದಾರೆ. ಇದುವರೆಗೂ ಒಟ್ಟು ೪೮೪೮ ಮಂದಿಗೆ ಸೋಂಕು ತಗುಲಿದ್ದು, ೪೨೦೯ ಮಂದಿ ಗುಣಮುಖರಾಗಿದ್ದಾರೆ. ೬೩೯ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿದ್ದು, ಒಂದೇ ದಿನ ೪ ಮಂದಿ ಬಲಿಯಾಗಿದ್ದಾರೆ. ಇದುವರೆಗೂ ೧೨೬ ಮಂದಿ ಮೃತಪಟ್ಟಿದ್ದು, ೩೩೨ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ೮೪ ಹಾಗು ಗ್ರಾಮಾಂತರ ವ್ಯಾಪ್ತಿಯಲ್ಲಿ ೨೮ ಕಂಟೈನ್‌ಮೆಂಟ್ ಜೋನ್‌ಗಳಿವೆ.
        ಕೊರೋನಾ ಸೋಂಕಿತ ಪ್ರದೇಶಗಳಲ್ಲಿ ಸ್ಯಾನಿಟೈಜರ್ ಸಿಂಪಡಣೆ:
    ಕಾಗದನಗರ ವ್ಯಾಪ್ತಿಯ ಕೊರೋನಾ ಸೋಂಕಿತ ಪ್ರದೇಶಗಳಲ್ಲಿ ನಗರಸಭೆ ವತಿಯಿಂದ ಮುನ್ನಚ್ಚರಿಕೆ ಕ್ರಮವಾಗಿ ಸ್ಯಾನಿಟೈಜರ್ ಸಿಂಪಡಿಸಲಾಯಿತು.
    ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ಪೌರಾಯುಕ್ತ ಕೆ. ಪರಮೇಶ್, ಕಂದಾಯಾಧಿಕಾರಿಗಳಾದ ರಾಜ್‌ಕುಮಾರ್, ಪ್ರಶಾಂತ್, ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ, ಸೂಪರ್‌ವೈಸರ್ ಎನ್. ಗೋವಿಂದ ಹಾಗು ನಗರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಬಿ. ಸಿದ್ದಬಸಪ್ಪ


ಬಿ. ಸಿದ್ದಬಸಪ್ಪ
ಭದ್ರಾವತಿ, ಮೇ. ೩೦: ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಸಹ ಶಿಕ್ಷಕ ಬಿ. ಸಿದ್ದಬಸಪ್ಪ ನೇಮಕಗೊಂಡಿದ್ದಾರೆ.
    ಪ್ರಸ್ತುತ ಅಧ್ಯಕ್ಷರಾಗಿ ಎನ್. ಕೃಷ್ಣಪ್ಪ ಅವರು ಸೋಮವಾರ ನಿವೃತ್ತಿ ಹೊಂದುತ್ತಿರುವ ಹಿನ್ನಲೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರು ತಾತ್ಕಾಲಿಕವಾಗಿ ಪ್ರಭಾರ ಅಧ್ಯಕ್ಷರನ್ನಾಗಿ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿರುವ ಬಿ. ಸಿದ್ದಬಸಪ್ಪ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
     ಬಿ. ಸಿದ್ದಬಸಪ್ಪ ಅವರು ೪ ಬಾರಿ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ೩ ಬಾರಿ ಜಿಲ್ಲಾ ಸರ್ಕಾರಿ ನೌಕರರ ಕಾರ್ಯಕಾರಿ ಸಮಿತಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ತಾಲೂಕು ಸರ್ಕಾರಿ ನೌಕರರ ಸಂಘ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಸಂಘ-ಸಂಸ್ಥೆಗಳು, ಶಿಕ್ಷಕರು ಸೇರಿದಂತೆ ಇನ್ನಿತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದ್ದಾರೆ.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಕೃಷ್ಣಪ್ಪ ನಿವೃತ್ತಿ

ಎನ್. ಕೃಷ್ಣಪ್ಪ
    ಭದ್ರಾವತಿ, ಮೇ. ೩೦: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ  ಎನ್. ಕೃಷ್ಣಪ್ಪ ಸೋಮವಾರ ನಿವೃತ್ತಿ ಹೊಂದಲಿದ್ದಾರೆ.
    ಮೂಲತಃ ಕಂದಾಯ ಇಲಾಖೆಯಲ್ಲಿ ವೃತ್ತಿ ಆರಂಭಿಸಿದ ಎನ್.ಕೃಷ್ಣಪ್ಪ ಅವರು ಅನಿರೀಕ್ಷಿತವಾಗಿ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆಗೊಳ್ಳುವ ಮೂಲಕ ಈ ಇಲಾಖೆಯಲ್ಲಿಯೇ ಉಳಿದುಕೊಂಡು ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ೨ ತಿಂಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾಗಿದ್ದ ದೂದ್‌ಪೀರ್ ಮುಂಬಡ್ತಿ ಹೊಂದಿ ಉಡುಪಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಇವರ ಸ್ಥಾನಕ್ಕೆ ಪ್ರಭಾರ ಅಧಿಕಾರ ವಹಿಸಿಕೊಂಡಿದ್ದರು.
      ಸತತ ೪ ಬಾರಿ ಅಧ್ಯಕ್ಷರಾಗಿ ಆಯ್ಕೆ:
    ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಗೆ ಮೊದಲ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಎನ್. ಕೃಷ್ಣಪ್ಪ ನಂತರ ೨ನೇ ಅವಧಿಯಿಂದ ಸತತವಾಗಿ ೪ ಬಾರಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಕರ್ನಾಟಕ ಸರ್ಕಾರದ ಜಂಟಿ ಸಮಾಲೋಚನಾ ಸಮಿತಿ ಸದಸ್ಯರಾಗಿ ಸಹ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
     ವಿಇಎಸ್ ವಿದ್ಯಾಸಂಸ್ಥೆ ಕೃತಜ್ಞತೆ :
ನಗರದ ಹೊಸಸೇತುವೆ ರಸ್ತೆಯ ಸಿದ್ಧಾರೂಢನಗರದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಬೆಳವಣಿಗೆಗೆ ಎನ್. ಕೃಷ್ಣಪ್ಪನವರ ಶ್ರಮ ಹೆಚ್ಚಿನದ್ದಾಗಿದೆ. ನೌಕರರ ಸಂಘಕ್ಕೆ ಮೊದಲ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ವಿದ್ಯಾಸಂಸ್ಥೆಯಲ್ಲಿ ಖಜಾಂಚಿಯಾಗಿ ಕರ್ತವ್ಯ ನಿರ್ವಹಿಸಿದರು. ನಂತರ ಪದನಿಮಿತ್ತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ವಿದ್ಯಾಸಂಸ್ಥೆಯು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಎನ್. ಕೃಷ್ಣಪ್ಪನವರ ಶ್ರಮ ಹೆಚ್ಚಿನದ್ದಾಗಿದೆ. ಈ ಹಿನ್ನಲೆಯಲ್ಲಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.