Monday, October 18, 2021

ಡಿಎಸ್‌ಎಸ್ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸಭೆ

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸಭೆ ಭದ್ರಾವತಿ ನಗರದ ರಂಗಪ್ಪ ವೃತ್ತ ಸಮೀಪದ ಜೈಭೀಮಾ ನಗರದಲ್ಲಿರುವ ಸಮಿತಿಯ ಕೇಂದ್ರ ಕಛೇರಿಯಲ್ಲಿ ಸೋಮವಾರ ನಡೆಯಿತು.
    ಭದ್ರಾವತಿ, ಅ. ೧೮: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸಭೆ ನಗರದ ರಂಗಪ್ಪ ವೃತ್ತ ಸಮೀಪದ ಜೈಭೀಮಾ ನಗರದಲ್ಲಿರುವ ಸಮಿತಿಯ ಕೇಂದ್ರ ಕಛೇರಿಯಲ್ಲಿ ಸೋಮವಾರ ನಡೆಯಿತು.
     ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಂಘಟನೆಯ ಕಾರ್ಯ ಚಟುವಟಿಕೆಗಳ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು. 
    ರಾಜ್ಯ ಸಂಘಟನಾ ಸಂಚಾಲಕರಾದ ಹಾಸನದ ಎಸ್.ಎನ್ ಮಲ್ಲಪ್ಲ, ಧಾರವಾಡದ ಮರೀಶ್ ನಾಗಣ್ಣವರ್, ಚಿಕ್ಕಬಳ್ಳಾಪುರದ ವಿಜಯನರಸಿಂಹ, ಕೋಲಾರದ ಸೂಲಿಕುಂಟೆ ರಮೇಶ್, ಗದಗದ ಎಸ್.ಎನ್ ಬಳ್ಳಾರಿ ಹಾಗೂ ದಲಿತ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಮಂಗಳೂರಿನ ಶ್ರೀನಿವಾಸಲು,  ಕಾರ್ಯಾಧ್ಯಕ್ಷ ಸಿ. ಜಯಪ್ಪ, ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಚಿಕ್ಕಮಗಳೂರಿನ ಕೆ.ಸಿ ವಸಂತಕುಮಾರ್, ವಿಭಾಗೀಯ ಸಂಚಾಲಕ ಸೊರಬದ ಗುರುರಾಜ್, ಶಿವಮೊಗ್ಗ ಜಿಲ್ಲಾ ಸಂಚಾಲಕ ಚಿನ್ನಯ್ಯ, ಮಂಡ್ಯದ ನಂಜುಂಡಮೌರ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಘಟನಾ ಸಂಚಾಲಕ ಮುನಿರಾಜ್, ಪ್ರಮುಖರಾದ ಸತ್ಯ ಭದ್ರಾವತಿ, ತಾಲೂಕು ಸಂಚಾಲಕ ರಂಗನಾಥ್, ಜಿಲ್ಲಾ ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್‌ರಾಜ್, ಈಶ್ವರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಸರ್ಕಾರದ ಆದೇಶ ಉಲ್ಲಂಘಿಸಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸ್ಥಾನಕ್ಕೆ ಗ್ರೇಡ್-೨ ಕಾರ್ಯದರ್ಶಿ ನೇಮಕ

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಆಗ್ರಹ

ಸಾಮಾಜಿಕ ಹೋರಾಟಗಾರ ಶಿವಕುಮಾರ್ ಶಿವಕುಮಾರ್
    ಭದ್ರಾವತಿ, ಅ. ೧೮: ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಅಧಿಕಾರಿಗಳ ಸ್ಥಾನಕ್ಕೆ ಪ್ರಭಾರವಾಗಿ ಪಂಚಾಯಿತಿ ಗ್ರೇಡ್-೨  ಕಾರ್ಯದರ್ಶಿಗಳನ್ನು ನೇಮಕ ಮಾಡುವ ಮೂಲಕ ಸರ್ಕಾರದ ಆದೇಶ ಉಲ್ಲಂಘಿಸಲಾಗಿದ್ದು, ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದಾರೆ.
    ಸರ್ಕಾರದ ಆದೇಶದ ಪ್ರಕಾರ ನಿವೃತ್ತಿ, ವರ್ಗಾವಣೆ ಸೇರಿದಂತೆ ಇನ್ನಿತರ ಕಾರಣಗಳಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸ್ಥಾನ ಖಾಲಿ ಇದ್ದಲ್ಲಿ  ಪ್ರಭಾರವಾಗಿ ಪಂಚಾಯಿತಿ ಗ್ರೇಡ್-೧ ಕಾರ್ಯದರ್ಶಿಯನ್ನು ನೇಮಿಸಬಹುದಾಗಿದೆ. ಒಂದು ಗ್ರೇಡ್-೧ ಕಾರ್ಯದರ್ಶಿ ಇಲ್ಲದಿದ್ದಲ್ಲಿ ಬೇರೆ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗೆ ಹೆಚ್ಚುವರಿಯಾಗಿ ಪ್ರಭಾರ ವಹಿಸಬಹುದಾಗಿದೆ. ಆದರೆ ತಾಲೂಕಿನಲ್ಲಿ ಈ ಆದೇಶವನ್ನು ಉಲ್ಲಂಘಿಸಿ ಅರಳಿಕೊಪ್ಪ, ಕಾರೇಹಳ್ಳಿ, ಮಂಗೋಟೆ, ಕಾಗೆಕೋಡಮಗ್ಗಿ, ದೊಡ್ಡೇರಿ, ಸೈದರಕಲ್ಲಹಳ್ಳಿ, ಗುಡಮಘಟ್ಟ ಸೇರಿದಂತೆ ಕೆಲವು ಗ್ರಾಮ ಪಂಚಾಯಿತಿಗಳಿಗೆ ಪಂಚಾಯಿತಿ ಗ್ರೇಡ್-೨ ಕಾರ್ಯದರ್ಶಿಗಳನ್ನು ಪ್ರಭಾರವಾಗಿ ನೇಮಕ ಮಾಡಲಾಗಿದೆ.
    ಪಂಚಾಯಿತಿ ಗ್ರೇಡ್-೨ ಕಾರ್ಯದರ್ಶಿಗಳಿಗೆ ಸೂಕ್ತ ತರಬೇತಿ ಇಲ್ಲದ ಕಾರಣ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಕೋಟ್ಯಾಂತರ ರು. ಹಣಕಾಸಿನ ವ್ಯವಹಾರ ನಿರ್ವಹಿಸುವುದು ಕಷ್ಟಕರವಾಗಿದೆ. ಅಲ್ಲದೆ ಕೆ.ಸಿ.ಎಸ್.ಆರ್ ನಿಯಮಾಳಿ ೧೯೫೭ರ ಪ್ರಕಾರ ಹಣಕಾಸಿನ ವ್ಯವಹಾರ ನಿರ್ವಹಿಸುವುದು ಉಲ್ಲಂಘನೆಯಾಗಿದೆ ಎಂದು ದೂರಲಾಗಿದೆ.
    ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯಿತಿ ಗ್ರೇಡ್-೨ ಕಾರ್ಯದರ್ಶಿ ಹುದ್ದೆಗಳಲ್ಲಿ ಕೆಲವರು ಬಹಳ ವರ್ಷಗಳಿಂದ ವರ್ಗಾವಣೆಗೊಳ್ಳದೆ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಸರ್ಕಾರದ ಪೂರ್ವಾನುಮತಿ ಪಡೆಯದೇ ಅಭಿವೃದ್ಧಿ ಅಧಿಕಾರಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಮತ್ತು ಕಾರ್ಯದರ್ಶಿಗಳನ್ನು ಶೇ.೬೦ ರಿಂದ ೭೦ರಷ್ಟು ಮೂಲ ಗ್ರಾಮ ಪಂಚಾಯಿತಿಗಳಿಂದ ಬೇರೆ ಗ್ರಾಮ ಪಂಚಾಯಿತಿಗಳಿಗೆ ಪ್ರಭಾರವಾಗಿ ನೇಮಕ ಮಾಡಲಾಗಿರುತ್ತದೆ ಎಂದು ಆರೋಪಿಸಲಾಗಿದೆ.
ಸರ್ಕಾರದ ಆದೇಶಗಳಿಗೆ ಬೆಲೆಕೊಡದೆ ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕರ್ತವ್ಯ ಲೋಪ ಎಸಗಿರುವ ಆರೋಪದ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ಜಾಗ ತೆರವು : ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹ

ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ನಿವಾಸಿಗಳಿಂದ ಮನವಿ


ಭದ್ರಾವತಿ ಕಡದಕಟ್ಟೆ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ಜಾಗ ಬಿಟ್ಟುಕೊಡುವ ನಿವಾಸಿಗಳಿಗೆ, ವ್ಯಾಪಾರಸ್ಥರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ಸೋಮವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಅ. ೧೮: ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಕಡದಕಟ್ಟೆ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ಈ ಜಾಗದಲ್ಲಿ ಕಳೆದ ಸುಮಾರು ೩೦ ವರ್ಷಗಳಿಂದ ವ್ಯಾಪಾರ ವ್ಯವಹಾರ ನಡೆಸಿಕೊಂಡು ಜೀವನ ಸಾಗಿಸುತ್ತಿರುವವರನ್ನು ಪ್ರತ್ಯೇಕವಾಗಿ ಪರಿಗಣಿಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸೋಮವಾರ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
    ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜೂ.೬ರಂದು ನಡೆದ ಸಭೆಯಲ್ಲಿ ಈ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹಾಗು ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರಿಗೆ ತೆರವು ಮಾಡುವಂತೆ ಮೌಕಿಕವಾಗಿ ಸೂಚಿಸುವ ಮೂಲಕ ನಿವಾಸಗಳನ್ನು ಹೊಂದಿರುವವರಿಗೆ ಪರಿಹಾರವಾಗಿ ೫ ಲಕ್ಷ ರು. ಹಾಗು ಜೇಡಿಕಟ್ಟೆಯಲ್ಲಿ ೨೦*೩೦ ನಿವೇಶನ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಈ ನಡುವೆ ಸಭೆಯಲ್ಲಿ ಪಾಲ್ಗೊಂಡಿದ್ದ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಪ್ರಸ್ತುತ ೫ ಲಕ್ಷ ರು. ವೆಚ್ಚದಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಪರಿಹಾರ ಮೊತ್ತವನ್ನು ೧೦ ಲಕ್ಷ  ರು. ಗಳಿಗೆ ಹೆಚ್ಚಿಸುವಂತೆ ಮನವಿ ಮಾಡಿದ್ದರು.
    ಈ ಜಾಗದಲ್ಲಿ ಕುಲುಮೆ, ಕಟಿಂಗ್ ಶಾಪ್, ಹೋಟೆಲ್, ಚಿಲ್ಲರೆ ಅಂಗಡಿ ಹಾಗು ಜೆರಾಕ್ಸ್ ಅಂಗಡಿ ಸೇರಿದಂತೆ ಇನ್ನಿತರ ವ್ಯಾಪಾರ ವ್ಯವಹಾರ ನಡೆಸಿಕೊಂಡು ಜೀವನ ಸಾಗಿಸುತ್ತಿರುವವರು ಮುಂದೆ ಸಹ ಇದೆ ವೃತ್ತಿಗಳನ್ನು ನಡೆಸಿಕೊಂಡು ಹೋಗುವಂತೆ ಅನುಕೂಲವಾಗುವ ನಿಟ್ಟಿನಲ್ಲಿ ಅವರ ಬೇಡಿಕೆಗಳನ್ನು ಪ್ರತ್ಯೇಕವಾಗಿ ಪರಿಗಣಿಸುವಂತೆ ವಿನಂತಿಸಲಾಗಿತ್ತು.
    ಈ ಹಿನ್ನಲೆಯಲ್ಲಿ ಇದೀಗ ಈ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ನೇತೃತ್ವದಲ್ಲಿ ನಿವಾಸಿಗಳು ಮನವಿ ಸಲ್ಲಿಸಿದರು.