Tuesday, August 3, 2021

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಮನವಿ

    ಭದ್ರಾವತಿ, ಆ. ೩: ವಿವಿಧ ಬೇಡಿಕೆಗಳನ್ನು ಈಡೇರಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
    ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಳೆದ ೪ ತಿಂಗಳಿನಿಂದ ಕಮಿಷನ್ ಹಣ ಬಿಡುಗಡೆ ಮಾಡಿರುವುದಿಲ್ಲ. ಇದರಿಂದಾಗಿ ಅಂಗಡಿ ಮಾಲೀಕರು ತೊಂದರೆ ಅನುಭವಿಸುವಂತಾಗಿದೆ ತಕ್ಷಣ ಬಿಡುಗಡೆ ಮಾಡುವುದು. ಅಲ್ಲದೆ ಕೇರಳ, ಗೋವಾ ಮತ್ತು ಮಹಾರಾಷ್ಟ್ರ ಮಾದರಿಯಂತೆ ಕಮಿಷನ್ ನೀಡುವುದು. ಜೊತೆಗೆ ಇ.ಕೆ.ವೈ.ಸಿ ಮಾಡಿರುವ ಹಣ ಸಹ ಬಿಡುಗಡೆಗೊಳಿಸುವಂತೆ ಮಾನವಿ ಮಾಡಲಾಗಿದೆ.
    ಈ ಹಿಂದೆ ಸಚಿವರಾಗಿದ್ದ ಕೆ. ಗೋಪಾಲಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿರುವಂತೆ ಕೊರೋನಾ ಸೋಂಕಿನಿಂದ ಮೃತಪಟ್ಟ ನ್ಯಾಯಬಲೆ ಅಂಗಡಿ ಮಾಲೀಕರಿಗೆ ೨ ಲಕ್ಷ ರು. ಪರಿಹಾರ ನೀಡುವುದು. ಸಗಟು ಮಳಿಗೆಗಳಿಂದ ತೂಕದಲ್ಲಿ ವಂಚನೆ ನಡೆಯುತ್ತಿದ್ದು, ಇದರಿಂದಾಗಿ ಈ ನ್ಯಾಯಬೆಲೆ ಅಂಗಡಿ ಮಾಲೀಕರು ಬೆಲೆ ತೆರುವಂತಾಗಿದೆ. ಈ ಹಿನ್ನಲೆಯಲ್ಲಿ ನ್ಯೂನ್ಯತೆಗಳನ್ನು ಸರಿಪಡಿಸುವಂತೆ ಕೋರಲಾಗಿದೆ.
    ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು ಎಂದು ಸಹ ಕಾರ್ಯದರ್ಶಿ ಸಿದ್ದಲಿಂಗಯ್ಯ ತಿಳಿಸಿದ್ದಾರೆ.

ಆ.೪ರಂದು ಅಭಿನಂದನೆ, ಸನ್ಮಾನ ಕಾರ್ಯಕ್ರಮ

ಭದ್ರಾವತಿ, ಆ. ೩: ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಆ.೪ರಂದು ಸಂಜೆ ೪ ಗಂಟೆಗೆ ಅಭಿನಂದನೆ ಮತ್ತು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಉಚಿತವಾಗಿ ನೆರವೇರಿಸುವ ಮೂಲಕ ಮಾನವೀಯತೆ ಮೆರೆಯುತ್ತಿರುವ ಬಜರಂಗದಳ ಕೊರೋನಾ ವಾರಿಯರ್ಸ್‌ಗಳಿಗೆ ಸನ್ಮಾನ ಹಾಗು ನಗರಸಭೆ ನೂತನ ಪೌರಾಯುಕ್ತ ಕೆ. ಪರಮೇಶ್ ಅವರಿಗೆ ಅಭಿನಂದನೆ ಮತ್ತು ಸಮಾಜದ ಸಂಸ್ಥಾಪಕಿ ರತ್ನಮ್ಮ ಶ್ರೀನಿವಾಸ ಮೂರ್ತಿ ಹಾಗು ಗೌರವಾಧ್ಯಕ್ಷೆ ವಸುಧಾ ಮುಕುಂದ್ ಅವರಿಗೆ ಶ್ರದ್ದಾಂಜಲಿ ನಡೆಯಲಿದೆ.
ಸಂಘದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯದರ್ಶಿ ಶೋಭಾ ಗಂಗಾರಾಜ್, ಖಜಾಂಚಿ ಜಯಂತಿ ನಾಗರಾಜ್ ಶೇಟ್ ಉಪಸ್ಥಿತರಿರುವರು.

ಭದ್ರೆ ಪ್ರತಿ ಬಾರಿ ಪೂರ್ಣ ಪ್ರಮಾಣದಲ್ಲಿ ತುಂಬಲಿ, ಕೊನೆಯ ಭಾಗದ ರೈತರಿಗೂ ನೀರು ತಲುಪಲಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್ ಮಂಗಳವಾರ ಸರ್ವ ಧರ್ಮ ಗುರುಗಳ ಹಾಗು ಕಾರ್ಯಕರ್ತರು, ಅಭಿಮಾನಿಗಳು ಮತ್ತು ಮುಖಂಡರ ಸಮ್ಮುಖದಲ್ಲಿ ಭದ್ರಾ ಜಲಾಶಯದಲ್ಲಿ ಭದ್ರೆಗೆ ಬಾಗಿನ ಸಮರ್ಪಣೆ ಹಾಗು ಗಂಗಾ ಪೂಜೆ ನೆರವೇರಿಸಿದರು.
     ಭದ್ರಾವತಿ, ಆ. ೩: ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯ ಪ್ರತಿ ವರ್ಷ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ಮೂಲಕ ಕೊನೆಯ ಭಾಗದ ರೈತರಿಗೂ ನೀರು ತಲುಪುವಂತಾಗಲಿ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
      ಅವರು ಮಂಗಳವಾರ ಸರ್ವ ಧರ್ಮ ಗುರುಗಳ ಹಾಗು ಕಾರ್ಯಕರ್ತರು, ಅಭಿಮಾನಿಗಳು ಮತ್ತು ಮುಖಂಡರ ಸಮ್ಮುಖದಲ್ಲಿ ಭದ್ರಾ ಜಲಾಶಯದಲ್ಲಿ ಭದ್ರೆಗೆ ಬಾಗಿನ ಸಮರ್ಪಣೆ ಹಾಗು ಗಂಗಾ ಪೂಜೆ ನೆರವೇರಿಸಿ ಮಾತನಾಡಿದರು.
    ನಾನು ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ಪ್ರತಿ ಬಾರಿ ಸಹ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುತ್ತಿರುವುದು ನನ್ನ ಸೌಭಾಗ್ಯವಾಗಿದೆ. ಜಲಾಶಯದ ಅಚ್ಚಕಟ್ಟು ವ್ಯಾಪ್ತಿಯಲ್ಲಿರುವ ಹಾಗು ಕೊನೆ ಭಾಗದ ರೈತರು ನೆಮ್ಮದಿಯಿಂದ ಬದುಕುವಂತಾಗಬೇಕು.  ಈ ಬಾರಿ ಜಲಾಶಯ ೧೫ ದಿನಗಳ ಮೊದಲೇ ಭರ್ತಿಯಾಗಿರುವುದು ಸಂತಸವನ್ನುಂಟು ಮಾಡಿದೆ. ಇದೆ ರೀತಿ ಪ್ರತಿ ವರ್ಷ ಸಹ ಜಲಾಶಯ ಭರ್ತಿಯಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
     ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರಿಯೂರು ಅಚಲ ಸದ್ಗುರು ಆಶ್ರಮದ ಶ್ರೀ ಲಕ್ಷ್ಮಣಾರ್ಯ ಸ್ವಾಮೀಜಿ, ಜನ್ನಾಪುರ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಕೃಷ್ಣಮೂರ್ತಿ ಸೋಮಯಾಜಿ ಸೇರಿದಂತೆ ಸರ್ವಧರ್ಮ ಗುರುಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಪ್ರತಿ ಬಾರಿ ಬಾಗಿನ ಸಮರ್ಪಣೆ ಕಾರ್ಯಕ್ರಮ ಕ್ಷೇತ್ರದಲ್ಲಿ ಹಬ್ಬದ ವಾತಾವರಣ ಉಂಟು ಮಾಡುತ್ತಿರುವುದು ವಿಶೇಷವಾಗಿದೆ.
     ಶಾಸಕರ ಕುಟುಂಬ ವರ್ಗದವರಾದ ಸಹೋದರರಾದ ಬಿ.ಕೆ ಜಗನ್ನಾಥ್, ಬಿ.ಕೆ ಮೋಹನ್, ಬಿ.ಕೆ ಶಿವಕುಮಾರ್, ಪುತ್ರರಾದ ಬಿ.ಎಸ್ ಗಣೇಶ್, ಬಿ.ಎಸ್ ಬಸವೇಶ್, ಬಿ.ಎಂ ಮಂಜುನಾಥ್, ಬಿ.ಎಂ ರವಿಕುಮಾರ್, ನಂದೀಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ತಾಲೂಕು ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ, ನಗರಸಭೆ ಮತ್ತು ತಾಲೂಕು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.