Thursday, September 30, 2021

ಅ.೧ರಿಂದ ಹಗಲು ರಾತ್ರಿ ಪ್ರತಿಭಟನಾ ಸತ್ಯಾಗ್ರಹ

    ಭದ್ರಾವತಿ, ಸೆ. ೩೦: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಕಛೇರಿ ಮುಂಭಾಗ ಅ.೧ರಂದು ಬೆಳಿಗ್ಗೆ ೧೧ ಗಂಟೆಯಿಂದ ಹಗಲು ರಾತ್ರಿ ಪ್ರತಿಭಟನಾ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
    ತಾಲೂಕು ಕಛೇರಿ ಮುಂಭಾಗದ ಎಡ ಮತ್ತು ಬಲ ಭಾಗದಲ್ಲಿ ಕಬ್ಬಿಣದ ಗ್ರಿಲ್ ಅಳವಡಿಸಿರುವ ಸ್ಥಳವನ್ನು ಸಾರ್ವಜನಿಕರು ಸತ್ಯಗ್ರಹ ನಡೆಸಲು ಮೀಸಲಿಡುವುದು. ಬಡವರಿಗೆ ಆದಾಯ ಮಿತಿ ಹೆಚ್ಚಿಸಿ ಸಾವಿರಾರು ಪಡಿತರ ಚೀಟಿಗಳನ್ನು ರದ್ದುಗೊಳಿಸಿರುವುದು ಹಾಗು ದೀನದಲಿತರ ಪಿಂಚಣಿಗಳನ್ನು ವಜಾ ಮಾಡಿರುವ ಕ್ರಮವನ್ನು ಖಂಡಿಸಿ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಪ್ರತಿಭಟನಾ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನಾ ಸತ್ಯಾಗ್ರಹ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

‘ಭಾರತ ಸ್ವಾತಂತ್ರ್ಯದ ೭೫ ವರ್ಷಗಳು-ನನ್ನ ದೃಷ್ಠಿಯಲ್ಲಿ ಸ್ವಾತಂತ್ರ್ಯವೆಂದರೆ ಏನು?’

'ಆಜಾದಿ ಕ ಅಮೃತ್ ಮಹೋತ್ಸವ' ಆಚರಣೆ ಅಂಗವಾಗಿ ವಿಐಎಸ್‌ಎಲ್ ವತಿಯಿಂದ ಭಾಷಣ ಸ್ಪರ್ಧೆ


'ಆಜಾದಿ ಕ ಅಮೃತ್ ಮಹೋತ್ಸವ' ಆಚರಣೆಯ ಅಂಗವಾಗಿ ಭಾರತೀಯ ಉಕ್ಕು ಪ್ರಾಧಿಕಾರದ ಅಂಗ ಸಂಸ್ಥೆಯಾದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆವತಿಯಿಂದ ಕನ್ನಡ ಭಾಷೆಯಲ್ಲಿ 'ಭಾರತ ಸ್ವಾತಂತ್ರ್ಯದ ೭೫ ವರ್ಷಗಳು - ನನ್ನ ದೃಷ್ಠಿಯಲ್ಲಿ ಸ್ವಾತಂತ್ರ್ಯವೆಂದರೆ ಏನು?' ವಿಷಯವಾಗಿ ಗುರುವಾರ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ(ಎಸ್.ಎ.ವಿ) ಪ್ರೌಢಶಾಲೆಯಲ್ಲಿ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.
    ಭದ್ರಾವತಿ, ಸೆ. ೩೦:  'ಆಜಾದಿ ಕ ಅಮೃತ್ ಮಹೋತ್ಸವ' ಆಚರಣೆಯ ಅಂಗವಾಗಿ ಭಾರತೀಯ ಉಕ್ಕು ಪ್ರಾಧಿಕಾರದ ಅಂಗ ಸಂಸ್ಥೆಯಾದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆವತಿಯಿಂದ ಕನ್ನಡ ಭಾಷೆಯಲ್ಲಿ 'ಭಾರತ ಸ್ವಾತಂತ್ರ್ಯದ ೭೫ ವರ್ಷಗಳು - ನನ್ನ ದೃಷ್ಠಿಯಲ್ಲಿ ಸ್ವಾತಂತ್ರ್ಯವೆಂದರೆ ಏನು?' ವಿಷಯವಾಗಿ ಗುರುವಾರ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ(ಎಸ್.ಎ.ವಿ) ಪ್ರೌಢಶಾಲೆಯಲ್ಲಿ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.
    ಮಹಾ ಪ್ರಬಂಧಕರ ಪ್ರಭಾರಿ(ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ. ಚಕ್ರವರ್ತಿ ಸ್ಪರ್ಧೆಗೆ ಚಾಲನೆ ನೀಡಿದರು. ಮಹಾ ಪ್ರಬಂಧಕ(ನಗರಾಡಳಿತ) ಮೋಹನ್ ರಾಜ್ ಶೆಟ್ಟಿ, ಪ್ರೌಢಶಾಲೆ ಹಾಗು ಕಾಲೇಜು ವಿಭಾಗದ ಪ್ರಾಂಶುಪಾಲೆ ಡಾ. ಎಸ್. ಹರಿಣಾಕ್ಷಿ, ನಿವೃತ್ತ ವೈದ್ಯೆ ಡಾ. ಎಸ್. ಕವಿತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕನ್ನಡ ಶಿಕ್ಷಕ ನಯನ್ ಕುಮಾರ್ 'ಇಂದಿನ ಜನಾಂಗಕ್ಕೆ ಭಾರತ ಸ್ವಾತಂತ್ರ್ಯ ಸಂಗ್ರಾಮದಿಂದ ಕಲಿಯಬೇಕಾದ ಪಾಠಗಳು' ಎಂಬ ವಿಷಯ ಕುರಿತು ಭಾಷಣ ಮಾಡಿದರು.
    ಅಶ್ವಿನಿ ಮತ್ತು ತಂಡದವರು ಪ್ರಾರ್ಥಿಸಿದರು. ಸಿಬ್ಬಂದಿ, ಮಹಾ ಪ್ರಬಂಧಕ (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್ ಸ್ವಾಗತಿಸಿದರು. ಜೀವಿತಾ ಮತ್ತು ರಶ್ಮಿ ಕಾರ್ಯಕ್ರಮ ನಿರೂಪಿಸಿದರು.
೧೮ ಶಾಲೆಗಳ ೩೪ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನದ ರೂಪದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಕುರಿತು ಪುಸ್ತಕಗಳನ್ನು ನೀಡಲಾಯಿತು.
    ವಿಜೇತ ವಿದ್ಯಾರ್ಥಿಗಳು:
    ಎಸ್‌ಎವಿ ಪ್ರೌಢಶಾಲೆಯ ಇಂಚರ ಪ್ರಥಮ, ಕಾರೇಹಳ್ಳಿ ಬಿಜಿಎಸ್ ಪ್ರೌಢ ಶಾಲೆಯ ಶ್ರೇಯ ಎನ್ ಗೌಡ ದ್ವಿತೀಯ, ಎಸ್‌ಎವಿ ಪ್ರೌಢಶಾಲೆಯ ಅಫೀಯಾ ತಸ್ಮೀನ್ ತೃತೀಯ ಹಾಗು ಸೇಂಟ್ ಚಾರ್ಲ್ಸ್ ಕನ್ನಡ ಪ್ರೌಢಶಾಲೆಯ ಎಸ್. ಧನ್ಯಶ್ರೀ ಮತ್ತು ಪೂರ್ಣಪ್ರಜ್ಞ ಪ್ರೌಢಶಾಲೆಯ ಎಸ್. ರುಚಿತ ಹಾಗು ಕಾರೇಹಳ್ಳಿ ಬಿಜಿಎಸ್ ಪ್ರೌಢಶಾಲೆಯ ಎಸ್. ಶ್ರೀ ರಕ್ಷ ಸಮಾಧಾನಕರ ಬಹುಮಾನ ಪಡೆದುಕೊಂಡರು.

ಗಾಂಧಿ ಜಯಂತಿ : ಪ್ರಾಣಿವಧೆ, ಮಾಂಸಮಾರಾಟ ನಿಷೇಧ


    ಭದ್ರಾವತಿ, ಸೆ. ೩೦: ರಾಷ್ಟ್ರಪಿತ ಮಹಾತ್ಮಗಾಂಧಿಯವರ ಜನ್ಮದಿನ ಹಿನ್ನಲೆಯಲ್ಲಿ ಅ.೨ರಂದು ನಗಸಭೆ ವ್ಯಾಪ್ತಿಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
    ಬಾರ್ & ರೆಸ್ಟೋರೆಂಟ್ ಹಾಗು ಮಾಂಸಹಾರಿ ಹೋಟೆಲ್‌ಗಳಲ್ಲಿ ಮಾಂಸಹಾರ ತಯಾರಿಸುವುದನ್ನು ಹಾಗು  ಕುರಿ/ಕೋಳಿ ಮತ್ತು ಇತರೆ ಮಾಂಸ ಮಾರಾಟಗಾರರು ಮಾಂಸ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ನಗರಸಭೆ ಪೌರಾಯುಕ್ತರು ಎಚ್ಚರಿಸಿದ್ದಾರೆ.

ಅಭಿವೃದ್ಧಿ ಅಧಿಕಾರಿ ಮಧುಸೂದನ್ ವಿರುದ್ಧ ಹಲವು ಭ್ರಷ್ಟಾಚಾರ ಆರೋಪ : ಕಾನೂನು ಕ್ರಮಕ್ಕೆ ಆಗ್ರಹ

ಈ ಹಿಂದೆ ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಮಧುಸೂದನ್ ಅವರು ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಪಂಚಾಯಿತಿ ಮಾಜಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮದ ಮುಖಂಡರು ಒತ್ತಾಯಿಸಿದರು.
    ಭದ್ರಾವತಿ, ಸೆ. ೩೦: ಈ ಹಿಂದೆ ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಮಧುಸೂದನ್ ಅವರು ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದು, ಈ ಸಂಬಂಧ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಂಚಾಯಿತಿ ಮಾಜಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮದ ಮುಖಂಡರು ಆರೋಪಿಸಿದರು.
    ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ೨೦೧೯-೨೦ನೇ ಸಾಲಿನಲ್ಲಿ ಅವ್ಯವಹಾರ ನಡೆಸಲಾಗಿದೆ. ದಾಖಲೆಗಳಲ್ಲಿ ಕಾಮಗಾರಿ ನಡೆಸಿರುವುದಾಗಿ ನಮೂದಿಸಲಾಗಿದ್ದು, ಆದರೆ ವಾಸ್ತವವಾಗಿ ಯಾವುದೇ ಕಾಮಗಾರಿ ನಡೆದಿಲ್ಲ. ಅಲ್ಲದೆ ಗ್ರಾಮದ ಉದ್ಯೋಗ ಖಾತ್ರಿ ಫಲಾನುಭವಿಗಳಿಗೂ ಯಾವುದೇ ಅನುಕೂಲವಾಗಿಲ್ಲ. ಉದ್ಯೋಗ ಚೀಟಿಯಲ್ಲಿ ನಕಲಿ ಕೆಲಸಗಾರರ ಹೆಸರನ್ನು ಸೇರಿಸಿ ಲಕ್ಷಾಂತರ ರು. ಭ್ರಷ್ಟಾಚಾರ ನಡೆಸಲಾಗಿದೆ. ೧೪ನೇ ಹಣಕಾಸಿನ ಯೋಜನೆ ಹಾಗು ವರ್ಗ-೧ರಲ್ಲಿ ಸಹ ಸಾಕಷ್ಟು ಭ್ರಷ್ಟಾಚಾರ ನಡೆಸಲಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಅಂಗವಿಕಲರಿಗೆ ನೀಡಿರುವ ಹೊಲಿಗೆ ಯಂತ್ರ ಹಾಗು ಸೋಲಾರ್ ದೀಪಗಳು ಅರ್ಹ ಫಲಾನುಭವಿಗಳಿಗೆ ನೀಡದೇ ಭ್ರಷ್ಟಾಚಾರ ನಡೆಸಲಾಗಿದೆ ಎಂದು ದೂರಿದರು.
    ಗ್ರಾಮದಲ್ಲಿರುವ ಸರ್ಕಾರಿ ಜಾಗಗಳನ್ನು ನಿಯಮಗಳನ್ನು ಮೀರಿ ಹಣವಂತರಿಗೆ ಖಾತೆ ಮಾಡಿಕೊಡಲಾಗಿದೆ. ಅಲ್ಲದೆ ಖಾಸಗಿ ವ್ಯಕ್ತಿಗಳ ರೆವಿನ್ಯೂ ಜಾಗವನ್ನು ರಿಜಿಸ್ಟ್ರಾರ್ ಪತ್ರದ ಆಧಾರದ ಮೇಲೆ ಸ್ಥಳ ಪರಿಶೀಲನೆ ಮಾಡದೆ ಖಾತೆ ಮಾಡಿ ಇ-ಸ್ವತ್ತು ನೀಡಲಾಗಿದೆ. ಆಶ್ರಯ ವಸತಿ ಯೋಜನೆಯಡಿ ಹಾಗು ಕೊಟ್ಟಿಗೆ ನಿರ್ಮಾಣದಲ್ಲೂ ಸಹ ಸಾಕಷ್ಟು ಭ್ರಷ್ಟಾಚಾರ ನಡೆಸಲಾಗಿದೆ. ಪಂಚಾಯಿತಿ ವ್ಯಾಪ್ತಿಯ ಹಳೆ ಹಿರಿಯೂರು ಗ್ರಾಮದ ಗ್ರಾಮ ಠಾಣಾ ಜಾಗದಲ್ಲಿ ಅಕ್ರಮವಾಗಿ ಸುಮಾರು ೯ ಮಂದಿ ಹೆಸರಿಗೆ ಎಕರೆಗಟ್ಟಲೆ ಜಾಗವನ್ನು ಖಾತೆ ಮಾಡಿಕೊಡಲಾಗಿದೆ ಎಂದು ಆರೋಪಿಸಿದರು.
    ಮಧುಸೂದನ್ ಅವರು ಒಟ್ಟಾರೆ ಸಾಕಷ್ಟು ಭ್ರಷ್ಟಾಚಾರಗಳನ್ನು ನಡೆಸಿರುವುದು ದಾಖಲೆಗಳಿಂದ ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಸಂಬಂಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕ್ರಮ ಕೈಗೊಳ್ಳುವ ಬದಲು ದಾಸರಕಲ್ಲಹಳ್ಳಿ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಲಾಗಿದೆ. ತಕ್ಷಣ ಮಧುಸೂದನ್ ಅವರನ್ನು ಕೆಲಸದಿಂದ ಅಮಾನುತ್ತುಗೊಳಿಸಬೇಕೆಂದರು ಆಗ್ರಹಿಸಿದರು. ಅಲ್ಲದೆ ಇತ್ತೀಚೆಗೆ ವರ್ಗಾವಣೆಗೊಂಡು ಬಂದಿದ್ದ ಪ್ರಾಮಾಣಿಕ ಅಧಿಕಾರಿಯಾಗಿರುವ ಸುಮಿತ್ರ ಸುಬೇದಾರ್ ಅವರನ್ನು ಕಾರಣ ನೀಡದೆ ೨ ತಿಂಗಳು ಕಳೆಯುವಷ್ಟರಲ್ಲಿ ವರ್ಗಾವಣೆ ಮಾಡಿರುವುದನ್ನು ಖಂಡಿಸಿದರು.
    ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಚ್.ವೈ ಕುಮಾರ್ ಮತ್ತು ಕಮಲಬಾಯಿ ಹಾಗು ಮಾಜಿ ಸದಸ್ಯರಾದ ಸತ್ಯನಾರಾಯಣ, ಕೆ.ಟಿ ಪ್ರಸನ್ನ, ಗ್ರಾಮದ ಮುಖಂಡರಾದ ಕೋಡ್ಲುಯಜ್ಞಯ್ಯ, ಬಿ. ರವಿ, ಗಿರಿ, ಜಯದೇವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.