ಪಿಡಿಓ ಅಮಾನುತುಗೊಳಿಸಲು ಆಗ್ರಹಿಸಿ ಡಿಎಸ್‌ಎಸ್ ಪ್ರತಿಭಟನೆ
![](https://blogger.googleusercontent.com/img/a/AVvXsEiY5S7VWFzb2B-brdnjzagbPXgQ8VonGQZkCjjjwMLUGgQ5A3jgtyuHcStADsnK_s6JVOOiB437niPBASenlCipuXdeD05NSwwALSdnqyUG8EFp5jDf3o7HjR63f3tyPOyc3i6_-FUrCRnS9foJdyZyEptwgNY7kBt66dFbeCwAad__6edz81b9BxdP0tjl=w400-h281-rw)
ಮಳೆಯಿಂದ ಹಾನಿಗೊಳಗಾದ ಮನೆಗಳ ನಿರ್ಮಾಣದಲ್ಲಿ ಮನೆಗಳನ್ನು ಕ್ರಮಬದ್ಧವಾಗಿ ನಿರ್ಮಿಸದೆ ಫಲಾನುಭವಿಗಳೊಂದಿಗೆ ಶಾಮೀಲಾಗಿ ಫೋರ್ಜರಿ ಜಿಪಿಎಸ್ ಮಾಡಿ ಬಿಲ್ ಮಾಡಿಸಿ ಅಕ್ರಮವೆಸಗಿರುವ ಭದ್ರಾವತಿ ತಾಲೂಕಿನ ದಾಸರಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ) ಅಮಾನತುಗೊಳಿಸುವಂತೆ ಹಾಗು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ವತಿಯಿಂದ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ಮಳೆಯಿಂದ ಹಾನಿಗೊಳಗಾದ ಮನೆಗಳ ನಿರ್ಮಾಣದಲ್ಲಿ ಮನೆಗಳನ್ನು ಕ್ರಮಬದ್ಧವಾಗಿ ನಿರ್ಮಿಸದೆ ಫಲಾನುಭವಿಗಳೊಂದಿಗೆ ಶಾಮೀಲಾಗಿ ಫೋರ್ಜರಿ ಜಿಪಿಎಸ್ ಮಾಡಿ ಬಿಲ್ ಮಾಡಿಸಿ ಅಕ್ರಮವೆಸಗಿರುವ ತಾಲೂಕಿನ ದಾಸರಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ) ಅಮಾನತುಗೊಳಿಸುವಂತೆ ಹಾಗು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ವತಿಯಿಂದ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨೦೧೯-೨೦ ರಿಂದ ೨೦೨೨-೨೩ನೇ ಸಾಲಿನವರೆಗೆ ಮಳೆ ಹಾನಿಯಿಂದ ಒಟ್ಟು ೬೨ ಮನೆಗಳು ಹಾನಿಗೊಳಗಾಗಿವೆ ಎಂದು ಸರ್ಕಾರಕ್ಕೆ ವರದಿ ನೀಡಿ ಅನುದಾನ ಪಡೆಯಲಾಗಿದೆ. ಒಂದು ಗೋಡೆ ಬಿದ್ದ ಮನೆಗೂ ಬಿ೨ ವರದಿ ನೀಡಿ ೫ ಲಕ್ಷ ಅನುದಾನ ಮಂಜೂರಾತಿ ಮಾಡಿಸಲಾಗಿದ್ದು, ಫಲಾನುಭವಿಗಳ ಜೊತೆ ಶಾಮೀಲಾಗಿ ಫೋರ್ಜರಿ ಜಿಪಿಎಸ್ ಮಾಡಿಸಿ ನಿಯಮಾನುಸಾರ ಮನೆಗಳನ್ನು ನಿರ್ಮಿಸದೇ ಬಿಲ್ ಪಾಸ್ ಮಾಡಿಸಲಾಗಿದೆ ಎಂದು ಆರೋಪಿಸಲಾಯಿತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರ್ಕಾರಕ್ಕೆ ವಂಚಿಸಿದ್ದು, ಕರ್ತವ್ಯ ಲೋಪ ಎಸಗಿದ್ದಾರೆ. ಈ ಹಿನ್ನಲೆಯಲ್ಲಿ ಇವರನ್ನು ತಕ್ಷಣ ಕರ್ತವ್ಯದಿಂದ ಅಮಾನತುಗೊಳಿಸಬೇಕು. ೬೨ ಮನೆಗಳ ಸಂಪೂರ್ಣ ತನಿಖೆ ನಡೆಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆಗಸನಹಳ್ಳಿ, ಎಮ್ಮೆಹಟ್ಟಿ, ಅರದೊಟ್ಲು ಗ್ರಾಮಗಳಲ್ಲಿರುವ ಸ್ಮಶಾನ ಭೂಮಿಯಲ್ಲಿ ಮೃತದೇಹ ಸುಡಲು ಬರ್ನಿಂಗ್ ಶೆಡ್ ಹಾಗು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಲಾಯಿತು.
ಅರದೊಟ್ಲು ಗ್ರಾಮದ ಅಂಗನವಾಡಿ ಕೇಂದ್ರಗಳ ಕಿಟಿಕಿ ಹಾಗು ಬಾಗಿಲುಗಳನ್ನು ದುರಸ್ತಿಪಡಿಸಿ ಸುಣ್ಣ ಬಣ್ಣ ಮಾಡಿಸುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ೩ ಗ್ರಾಮಗಳಲ್ಲಿ ಎಸ್.ಸಿ/ಎಸ್.ಟಿ ಕುಟುಂಬಗಳಿಗೆ ಶೌಚಾಲಯ ನಿರ್ಮಿಸುವುದು. ರಾಷ್ಟ್ರೀಯ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಂದು ಕುಟುಂಬಕ್ಕೆ ೧೫೦ ದಿನ ಕೆಲಸ ನೀಡುವಂತೆ ಒತ್ತಾಯಿಸಲಾಯಿತು.
ಪ್ರಗತಿಪರ ಸಂಘಟನೆಗಳ ಮುಖಂಡ ಪ್ರಜಾಪ್ರತಿನಿಧಿ ಸುರೇಶ್, ಡಿಎಸ್‌ಎಸ್ ಶಿವಮೊಗ್ಗ ಗ್ರಾಮಾಂತರ ಪ್ರಧಾನ ಸಂಚಾಲಕ ಟಿ. ಹನುಮಂತಪ್ಪ, ಸಂಘಟನಾ ಸಂಚಾಲಕ ಬಿ. ನವೀನ್‌ಕುಮಾರ್ ಅರದೊಟ್ಲು, ವಸಂತ ಕಲ್ಲಜ್ಜನಹಾಳ್, ರವಿಕುಮಾರ್ ಅರಕೆರೆ, ಮಲ್ಲೇಶ್ ಕೆರೆಬೀರನಹಳ್ಳಿ, ಮೋಹನ್ ನಿಂಬೆಗುಂದಿ, ದೇವರಾಜ ಬೊಮ್ಮನಕಟ್ಟೆ, ಹರೀಶ್ ಕಲ್ಲಿಹಾಳ್ ಮತ್ತು ಇಮ್ರಾನ್ ಬಾಷಾ ಕಲ್ಲಿಹಾಳ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.