Saturday, July 3, 2021

ಸರ್ಕಾರ ನಿರ್ದೇಶನದಂತೆ ಸಾಲ ವಸೂಲಾತಿ ಕೈಗೊಳ್ಳಿ : ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಸೂಚನೆ

    ಭದ್ರಾವತಿ, ಜು. ೩: ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ವಸೂಲಾತಿಯಲ್ಲಿ ಒತ್ತಡ ಹೇರದೆ ಸರ್ಕಾರದ ನಿರ್ದೇಶನದಂತೆ ನಡೆದುಕೊಳ್ಳಬೇಕೆಂದು ಉಪ ತಹಸೀಲ್ದಾರ್ ಮಂಜನಾಯ್ಕ ಶನಿವಾರ ನಡೆದ ಸಭೆಯಲ್ಲಿ ಕಂಪನಿಗಳ ವ್ಯವಸ್ಥಾಪಕರಿಗೆ ಸೂಚಿಸಿದರು.
    ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊರತುಪಡಿಸಿ ಉಳಿದೆಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ವಸೂಲಾತಿಗಾಗಿ ಮಹಿಳೆಯರಿಗೆ ಪೀಡಿಸುತ್ತಿದ್ದು, ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಸಾಲ ಮರುಪಾವತಿಗೆ ಕಾಲಾವಕಾಶ ನೀಡದಿರುವುದು ಸರಿಯಲ್ಲ. ಕಂಪನಿಗಳು ಸರ್ಕಾರದ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಂಯುಕ್ತ ಜನತಾದಳ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಶುಕ್ರವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದರು.
     ಈ ಹಿನ್ನಲೆಯಲ್ಲಿ ಕಂಪನಿಗಳ ಸ್ಥಳೀಯ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿ ಸಾಲ ವಸೂಲಾತಿಯಲ್ಲಿ ಕಾನೂನು ಬಾಹಿರವಾಗಿ ಒತ್ತಡ ಹೇರದೆ ಸರ್ಕಾರದ ನಿರ್ದೇಶನದಂತೆ ನಡೆದುಕೊಳ್ಳಬೇಕೆಂದು ತಿಳಿಸಲಾಯಿತು. ಇದಕ್ಕೆ ಕಂಪನಿಗಳ ವ್ಯವಸ್ಥಾಪಕರು ಪೂರಕವಾಗಿ ಸ್ಪಂದಿಸಿದ್ದು, ಸಾಲ ವಸೂಲಾತಿಯಲ್ಲಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಶಶಿಕುಮಾರ್ ಎಸ್. ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿಯಲ್ಲಿ ಒಂದಂಕಿಗೆ ಇಳಿದ ಸೋಂಕು

      ಭದ್ರಾವತಿ, ಜು. ೩: ತಾಲೂಕಿನಲ್ಲಿ ಇದೆ ಮೊದಲ ಬಾರಿಗೆ ಸೋಂಕಿನ ಪ್ರಮಾಣ ಒಂದಂಕಿಗೆ ಇಳಿದಿದ್ದು, ಶನಿವಾರ ಕೇವಲ ೭ ಸೋಂಕು ಪತ್ತೆಯಾಗಿದೆ.
     ಒಟ್ಟು ೭೮೦ ಮಂದಿ ಮಾದರಿ ಸಂಗ್ರಹಿಸಲಾಗಿದ್ದು, ೧೭ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ಒಟ್ಟು ೭೨೧೩ ಸೋಂಕು ಪ್ರಕರಣಗಳು ದಾಖಲಾಗಿದ್ದು, ೭೧೧೩ ಮಂದಿ ಗುಣಮುಖರಾಗಿದ್ದಾರೆ. ೧೦೦ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿವೆ. ೭೭ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
     ನಗರ ವ್ಯಾಪ್ತಿಯಲ್ಲಿ ೫ ಕಂಟೈನ್‌ಮೆಂಟ್ ಜೋನ್‌ಗಳು ಸಕ್ರಿಯವಾಗಿದ್ದು, ಇದುವರೆಗೂ ಒಟ್ಟು ೧೬೩ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಗ್ರಾಮಾಂತರ ವ್ಯಾಪ್ತಿಯಲ್ಲಿ ೧೧ ಜೋನ್‌ಗಳು ಸಕ್ರಿಯಾಗಿದ್ದು, ಇದುವರೆಗೂ ೩೮ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕ್ಷೇತ್ರಗಳ ಮರುವಿಂಗಡಣೆ, ಕ್ಷೇತ್ರಗಳ ಹೆಸರು ಬದಲಾವಣೆ

ಮೀಸಲಾತಿ ಸಂಬಂಧ ಆಕ್ಷೇಪಣೆ, ಕ್ಷೇತ್ರ ಕಳೆದುಕೊಳ್ಳಲಿರುವ ಹಾಲಿ ಸದಸ್ಯರು


     ಭದ್ರಾವತಿ, ಜು. ೩: ರಾಜ್ಯ ಚುನಾವಣಾ ಆಯೋಗ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸ್ಥಾನಗಳಿಗೆ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಮೀಸಲಾತಿ ಸಂಬಂಧ ಈಗಾಗಲೇ ಆಕ್ಷೇಪಣೆಗಳು ಕೇಳಿ ಬರುತ್ತಿವೆ.
    ಚುನಾವಣಾ ಆಯೋಗ ಈಗಾಗಲೇ ತಾಲೂಕಿನಲ್ಲಿ ಒಟ್ಟು ೫ ಜಿಲ್ಲಾ ಪಂಚಾಯಿತಿ ಹಾಗು ೧೪ ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ಹೊಸದಾಗಿ ಮರು ವಿಂಗಡಿಸಿದೆ. ಈ ಹಿಂದೆ ವಿಂಗಡಿಸಲಾಗಿದ್ದ ೧೯ ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ೫ ಕ್ಷೇತ್ರಗಳನ್ನು ಕಡಿತಗೊಳಿಸಲಾಗಿದೆ. ಆದರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ೫ ಕ್ಷೇತ್ರಗಳು ತಾಲೂಕಿನಲ್ಲಿಯೇ ಉಳಿದುಕೊಂಡಿವೆ. ಆದರೆ ಕ್ಷೇತ್ರಗಳ ಹೆಸರು ಬದಲಾಗಿದೆ.
     ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ವ್ಯಾಪ್ತಿಗೆ ಒಳಪಡುವ ಆನವೇರಿ ಕ್ಷೇತ್ರವನ್ನು ಈ ಬಾರಿ ಅಗರದಹಳ್ಳಿ ಕ್ಷೇತ್ರವನ್ನಾಗಿ, ಹೊಳೆಹೊನ್ನೂರು ಕ್ಷೇತ್ರವನ್ನು ಅರಬಿಳಚಿ ಕ್ಷೇತ್ರವನ್ನಾಗಿ ಹೆಸರಿಸಲಾಗಿದೆ. ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೂಡ್ಲಿಗೆರೆ ಕ್ಷೇತ್ರವನ್ನು ತಡಸ ಕ್ಷೇತ್ರವನ್ನಾಗಿ,  ಹಿರಿಯೂರು ಕ್ಷೇತ್ರವನ್ನು ಯರೇಹಳ್ಳಿ ಕ್ಷೇತ್ರವನ್ನಾಗಿ ಹಾಗು ಸಿಂಗನಮನೆ ಕ್ಷೇತ್ರವನ್ನು ದೊಣಬಘಟ್ಟ ಕ್ಷೇತ್ರವನ್ನಾಗಿ ಹೆಸರಿಲಾಗಿದೆ.
    ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿ ರೂಪುಗೊಂಡಿರುವ ಹಿನ್ನಲೆಯಲ್ಲಿ ಈ ಹಿಂದೆ ವಿಂಗಡಿಸಲಾಗಿದ್ದ ೧೯ ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ೫ ಕ್ಷೇತ್ರಗಳು ಕಡಿತಗೊಳಿಸಲಾಗಿದೆ. ಆನವೇರಿ, ಆಗರದಹಳ್ಳಿ, ಸನ್ಯಾಸಿಕೋಡಮಗ್ಗೆ, ಯಡೇಹಳ್ಳಿ, ತಟ್ಟೆಹಳ್ಳಿ, ಅರಬಿಳಚಿ, ತಡಸ, ಅರಳಿಹಳ್ಳಿ, ಅಂತರಗಂಗೆ, ಯರೇಹಳ್ಳಿ, ಹಿರಿಯೂರು, ಹುಣಸೇಕಟ್ಟೆ, ಸಿಂಗನಮನೆ ಮತ್ತು ದೊಣಬಘಟ್ಟ ಒಟ್ಟು ೧೪ ಕ್ಷೇತ್ರಗಳನ್ನು ಹೊಸದಾಗಿ ಮರು ವಿಂಗಡಿಸಲಾಗಿದೆ.
    ಹೊಸದಾಗಿ ವಿಂಗಡಿಸಲಾಗಿರುವ ಕ್ಷೇತ್ರಗಳ ಮೀಸಲಾತಿ ಸಂಬಂಧ ಈಗಾಗಲೇ ಆಕ್ಷೇಪಣೆಗಳು ಕೇಳಿ ಬರುತ್ತಿವೆ. ಮೀಸಲಾತಿ ಬದಲಾವಣೆಯಿಂದಾಗಿ ಬಹುತೇಕ ಹಾಲಿ ಸದಸ್ಯರು ಕ್ಷೇತ್ರಗಳನ್ನು ಕಳೆದುಕೊಳ್ಳುವಂತಾಗಿದೆ. ಕಳೆದ ಅವಧಿಯಲ್ಲಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ನೇತೃತ್ವದಲ್ಲಿ ಜೆಡಿಎಸ್ ಅತಿಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.