ಮೀಸಲಾತಿ ಸಂಬಂಧ ಆಕ್ಷೇಪಣೆ, ಕ್ಷೇತ್ರ ಕಳೆದುಕೊಳ್ಳಲಿರುವ ಹಾಲಿ ಸದಸ್ಯರು
ಭದ್ರಾವತಿ, ಜು. ೩: ರಾಜ್ಯ ಚುನಾವಣಾ ಆಯೋಗ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸ್ಥಾನಗಳಿಗೆ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಮೀಸಲಾತಿ ಸಂಬಂಧ ಈಗಾಗಲೇ ಆಕ್ಷೇಪಣೆಗಳು ಕೇಳಿ ಬರುತ್ತಿವೆ.
ಚುನಾವಣಾ ಆಯೋಗ ಈಗಾಗಲೇ ತಾಲೂಕಿನಲ್ಲಿ ಒಟ್ಟು ೫ ಜಿಲ್ಲಾ ಪಂಚಾಯಿತಿ ಹಾಗು ೧೪ ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ಹೊಸದಾಗಿ ಮರು ವಿಂಗಡಿಸಿದೆ. ಈ ಹಿಂದೆ ವಿಂಗಡಿಸಲಾಗಿದ್ದ ೧೯ ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ೫ ಕ್ಷೇತ್ರಗಳನ್ನು ಕಡಿತಗೊಳಿಸಲಾಗಿದೆ. ಆದರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ೫ ಕ್ಷೇತ್ರಗಳು ತಾಲೂಕಿನಲ್ಲಿಯೇ ಉಳಿದುಕೊಂಡಿವೆ. ಆದರೆ ಕ್ಷೇತ್ರಗಳ ಹೆಸರು ಬದಲಾಗಿದೆ.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ವ್ಯಾಪ್ತಿಗೆ ಒಳಪಡುವ ಆನವೇರಿ ಕ್ಷೇತ್ರವನ್ನು ಈ ಬಾರಿ ಅಗರದಹಳ್ಳಿ ಕ್ಷೇತ್ರವನ್ನಾಗಿ, ಹೊಳೆಹೊನ್ನೂರು ಕ್ಷೇತ್ರವನ್ನು ಅರಬಿಳಚಿ ಕ್ಷೇತ್ರವನ್ನಾಗಿ ಹೆಸರಿಸಲಾಗಿದೆ. ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೂಡ್ಲಿಗೆರೆ ಕ್ಷೇತ್ರವನ್ನು ತಡಸ ಕ್ಷೇತ್ರವನ್ನಾಗಿ, ಹಿರಿಯೂರು ಕ್ಷೇತ್ರವನ್ನು ಯರೇಹಳ್ಳಿ ಕ್ಷೇತ್ರವನ್ನಾಗಿ ಹಾಗು ಸಿಂಗನಮನೆ ಕ್ಷೇತ್ರವನ್ನು ದೊಣಬಘಟ್ಟ ಕ್ಷೇತ್ರವನ್ನಾಗಿ ಹೆಸರಿಲಾಗಿದೆ.
ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿ ರೂಪುಗೊಂಡಿರುವ ಹಿನ್ನಲೆಯಲ್ಲಿ ಈ ಹಿಂದೆ ವಿಂಗಡಿಸಲಾಗಿದ್ದ ೧೯ ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ೫ ಕ್ಷೇತ್ರಗಳು ಕಡಿತಗೊಳಿಸಲಾಗಿದೆ. ಆನವೇರಿ, ಆಗರದಹಳ್ಳಿ, ಸನ್ಯಾಸಿಕೋಡಮಗ್ಗೆ, ಯಡೇಹಳ್ಳಿ, ತಟ್ಟೆಹಳ್ಳಿ, ಅರಬಿಳಚಿ, ತಡಸ, ಅರಳಿಹಳ್ಳಿ, ಅಂತರಗಂಗೆ, ಯರೇಹಳ್ಳಿ, ಹಿರಿಯೂರು, ಹುಣಸೇಕಟ್ಟೆ, ಸಿಂಗನಮನೆ ಮತ್ತು ದೊಣಬಘಟ್ಟ ಒಟ್ಟು ೧೪ ಕ್ಷೇತ್ರಗಳನ್ನು ಹೊಸದಾಗಿ ಮರು ವಿಂಗಡಿಸಲಾಗಿದೆ.
ಹೊಸದಾಗಿ ವಿಂಗಡಿಸಲಾಗಿರುವ ಕ್ಷೇತ್ರಗಳ ಮೀಸಲಾತಿ ಸಂಬಂಧ ಈಗಾಗಲೇ ಆಕ್ಷೇಪಣೆಗಳು ಕೇಳಿ ಬರುತ್ತಿವೆ. ಮೀಸಲಾತಿ ಬದಲಾವಣೆಯಿಂದಾಗಿ ಬಹುತೇಕ ಹಾಲಿ ಸದಸ್ಯರು ಕ್ಷೇತ್ರಗಳನ್ನು ಕಳೆದುಕೊಳ್ಳುವಂತಾಗಿದೆ. ಕಳೆದ ಅವಧಿಯಲ್ಲಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ನೇತೃತ್ವದಲ್ಲಿ ಜೆಡಿಎಸ್ ಅತಿಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
No comments:
Post a Comment