Friday, May 19, 2023

ಸಂಗಮೇಶ್ವರ್‌ಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ

ಜಾತಕ ಪಕ್ಷಿಗಳಂತೆ ಎದುರು ನೋಡುತ್ತಿರುವ ಕ್ಷೇತ್ರದ ಮತದಾರರು

ಬಿ.ಕೆ ಸಂಗಮೇಶ್ವರ್
    ಭದ್ರಾವತಿ, ಮೇ. ೧೯ : ಈ ಬಾರಿಯಾದರೂ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿ ಕ್ಷೇತ್ರದ ಜನತೆ ಎದುರು ನೋಡುತ್ತಿದ್ದು, ಶುಕ್ರವಾರ ರಾತ್ರಿ ೧೦ ಗಂಟೆ ಕಳೆದರೂ ಸಹ ಅಧಿಕೃತ ಮಾಹಿತಿ ಹೊರಬೀಳದೆ ಇರುವುದು ನಿರಾಸೆಯನ್ನುಂಟು ಮಾಡಿದೆ.
    ಕ್ಷೇತ್ರದಲ್ಲಿ ಇದುವರೆಗೂ ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ನನಗೆ ಸಚಿವ ಸ್ಥಾನ ಸಿಗುವುದು ಖಚಿತ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕ್ಷೇತ್ರದಾದ್ಯಂತ ಮತಯಾಚನೆ ನಡೆಸಿದ್ದರು. ಅಲ್ಲದೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗು ಅಭಿಮಾನಿಗಳಲ್ಲೂ ಸಚಿವ ಸ್ಥಾನ ಸಿಗುವ ವಿಶ್ವಾಸ ಮೂಡಿಸುವ ಮೂಲಕ ಉತ್ಸಾಹ ತುಂಬಿದ್ದರು. ಇದೀಗ ಪದಗ್ರಹಣ ಸಮಾರಂಭಕ್ಕೆ ಕೆಲವು ಕೆಲವು ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಇನ್ನೂ ಸಚಿವ ಸ್ಥಾನ ಸಿಗುವ ಅಧಿಕೃತ ಘೋಷಣೆಯಾಗದಿರುವುದು ನಿರಾಸೆಯನ್ನುಂಟು ಮಾಡುತ್ತಿದೆ.
    ಜಿಲ್ಲೆಯಲ್ಲಿ ಪ್ರಸ್ತುತ ೩ ಮಂದಿ ಶಾಸಕರಿದ್ದು, ಈ ಪೈಕಿ ಶಾಸಕ ಬಿ.ಕೆ ಸಂಗಮೇಶ್ವರ್ ಹಿರಿಯರಾಗಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಶಾಸಕರಾಗಿದ್ದು, ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಿಗರಲ್ಲಿ ಒಬ್ಬರಾಗಿದ್ದಾರೆ. ಈ ಹಿನ್ನಲೆಯಲ್ಲಿ ಇವರಿಗೆ ಸಚಿವ ಸಿಗುವುದು ಬಹುತೇಕ ಖಚಿತ ಎನ್ನಲಾಗಿದ್ದು, ಆದರೂ ಸಹ ಈ ನಡುವೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗು  ಕ್ಷೇತ್ರದ ಮತದಾರರಲ್ಲಿ ಆತಂಕ ಮನೆ ಮಾಡಿದೆ.  

ಭದ್ರಾವತಿ ಕ್ಷೇತ್ರದ ಸರ್ವತೋಮುಖ ಅಭಿವೃದಿಗೆ ಸಂಗಮೇಶ್ವರ್‌ಗೆ ಸಚಿವ ಸ್ಥಾನ ನೀಡಿ

ಭದ್ರಾವತಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಹಿನ್ನಲೆಯಲ್ಲಿ ಈ ಬಾರಿ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸಚಿವ ಸ್ಥಾನ ನೀಡಬೇಕೆಂದು ವೀರಶೈವ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳು ಒತ್ತಾಯಿಸಿವೆ.
     ಭದ್ರಾವತಿ, ಮೇ. ೧೯ : ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಹಿನ್ನಲೆಯಲ್ಲಿ ಈ ಬಾರಿ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸಚಿವ ಸ್ಥಾನ ನೀಡಬೇಕೆಂದು ವೀರಶೈವ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳು ಒತ್ತಾಯಿಸಿವೆ.
    ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಗಳ ಪ್ರಮುಖರು, ವೀರಶೈವ ಲಿಂಗಾಯತ ಸಮಾಜ ರಾಜಕೀಯವಾಗಿ ಸಮನ್ವಯತೆ ಕಾಯ್ದುಕೊಂಡು ಬರುತ್ತಿದೆ. ಚುನಾವಣೆ ಸಂದರ್ಭದಲ್ಲಿ ಎಲ್ಲಾ ಪಕ್ಷಗಳಲ್ಲೂ ಸಮಾಜದವರು ಗುರುತಿಸಿಕೊಂಡಿದ್ದು, ಚುನಾವಣೆ ನಂತರ ನಾವೆಲ್ಲರೂ ಒಗ್ಗಟ್ಟಿನಿಂದ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಚಿಂತಿಸುವ ಮನೋಭಾವನೆ ಹೊಂದಿದ್ದೇವೆ. ಸಮಾಜದ ಬಿ.ಕೆ ಸಂಗಮೇಶ್ವರ್‌ರವರು ೪ನೇ ಬಾರಿಗೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
    ಸಂಗಮೇಶ್ವರ್‌ರವರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ವಿಶೇಷವಾಗಿ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿದ್ದಾರೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಕೈಗೊಳ್ಳಲು ಸಂಗಮೇಶ್ವರ್ ಸಮರ್ಥರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸುತ್ತೇವೆ ಎಂದರು.
    ಸಮಾಜದ ವಿವಿಧ ಸಂಘಟನೆಗಳ ಪ್ರಮುಖರಾದ ಅಡವೀಶಯ್ಯ, ಜಿ. ಸುರೇಶಯ್ಯ, ಸಿದ್ದಲಿಂಗಯ್ಯ, ಬಸವರಾಜಯ್ಯ, ಸತೀಶ್, ಆರ್. ಮಹೇಶ್‌ಕುಮಾರ್, ಬಸವಂತಪ್ಪ, ಡಾ. ಜಿ.ಎಂ ನಟರಾಜ್, ವಾಗೀಶ್, ಪೂರ್ಣಿಮಾ, ಮಹಾದೇವ್, ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸಚಿವ ಸ್ಥಾನ ನೀಡಲು ಆಗ್ರಹ

ಭದ್ರಾವತಿ ಕ್ಷೇತ್ರದಲ್ಲಿ ಇದುವರೆಗೂ ಯಾರಿಗೂ ಸಚಿವ ಸ್ಥಾನ ಲಭಿಸಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಭರವಸೆ ನೀಡಿರುವಂತೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಈ ಬಾರಿ ಸಚಿವ ನೀಡಲೇಬೇಕೆಂದು ಸಂಗೊಳ್ಳಿ ರಾಯಣ್ಣ ಯುವಪಡೆ ಪ್ರಮುಖರು ಆಗ್ರಹಿಸಿದರು.
    ಭದ್ರಾವತಿ, ಮೇ. ೧೯: ಕ್ಷೇತ್ರದಲ್ಲಿ ಇದುವರೆಗೂ ಯಾರಿಗೂ ಸಚಿವ ಸ್ಥಾನ ಲಭಿಸಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಭರವಸೆ ನೀಡಿರುವಂತೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಈ ಬಾರಿ ಸಚಿವ ನೀಡಲೇಬೇಕೆಂದು ಸಂಗೊಳ್ಳಿ ರಾಯಣ್ಣ ಯುವಪಡೆ ಪ್ರಮುಖರು ಆಗ್ರಹಿಸಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾಜದ ನಾಯಕರು ಹಾಗು ರಾಜಕೀಯ ಮುತ್ಸದ್ದಿಯಾಗಿರುವ ಸಿದ್ದರಾಮಯ್ಯನವರು ಶನಿವಾರ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.
    ಕ್ಷೇತ್ರದ ಶಾಸಕರಾಗಿ ೪ನೇ ಬಾರಿಗೆ ಆಯ್ಕೆಯಾಗಿರುವ ಬಿ.ಕೆ ಸಂಗಮೇಶ್ವರ್‌ರವರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕು. ವಿಐಎಸ್‌ಎಲ್ ಮತ್ತು ಎಂಪಿಎಂ ಎರಡೂ ಕಾರ್ಖಾನೆಗಳು ಅಭಿವೃದ್ಧಿಯಾಗಬೇಕು. ಈಗಾಗಲೇ ಸಂಗಮೇಶ್ವರ್‌ರವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಎಂಪಿಎಂ ಕಾರ್ಖಾನೆ ಪುನರ್ ಆರಂಭಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
    ಪತ್ರಿಕಾಗೋಷ್ಠಿಯಲ್ಲಿ ಯುವಪಡೆ ಪ್ರಮುಖರಾದ ದೊಡ್ಮನೆ ನಾಗಭೂಷಣ್, ಅಭಿಲಾಷ್, ಎಚ್. ರವಿಕುಮಾರ್, ನಗರಸಭಾ ಸದಸ್ಯರಾದ ಕಾಂತರಾಜ್, ಆರ್. ಶ್ರೇಯಸ್, ಶಿವಣ್ಣಗೌಡ, ಸುನಿಲ್‌ಕುಮಾರ್, ಶ್ರೀನಿವಾಸ್, ಗೋಪಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.