ಗಾಂಧಿಸ್ಮೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕಿ ಗೀತಾ
![](https://blogger.googleusercontent.com/img/b/R29vZ2xl/AVvXsEiu9xpMsffibDgyxah2rKQzEFWhh3WYT6eMtWwnJrCeBV5WtxTqv1EoYCQ115bdUo2L5l4f1uGr-TnDOh5teQbuafaojkbvDITsX43OjZ9hy6Vd4k2kOM1CQFYKLq0Fz2eU1QlLD_YMCyYN/w400-h180-rw/D15-BDVT2-714831.jpg)
ಭದ್ರಾವತಿ ಹಳೇನಗರದ ಬಲಿಜ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಜನಜಾಗೃತಿ ವೇದಿಕೆ ಮತ್ತು ನವಜೀವನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಾಂಧಿಸ್ಮೃತಿ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಗೀತಾ ಪಾಲ್ಗೊಂಡು ಮಾತನಾಡಿದರು.
ಭದ್ರಾವತಿ, ಅ. ೧೫: ಮಹಾತ್ಮಗಾಂಧಿಯವರು ಕಂಡ ಕನಸು ನನಸು ಮಾಡುವ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂದಾಗಿದೆ ಎಂದು ಯೋಜನೆ ಜಿಲ್ಲಾ ನಿರ್ದೇಶಕಿ ಗೀತಾ ತಿಳಿಸಿದರು.
ಅವರು ಗುರುವಾರ ಹಳೇನಗರದ ಬಲಿಜ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಜನಜಾಗೃತಿ ವೇದಿಕೆ ಮತ್ತು ನವಜೀವನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಾಂಧಿಸ್ಮೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಬದುಕು ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದು, ಅವರು ಕಂಡ ಬಹುಮುಖ್ಯವಾದ ೩ ಕನಸುಗಳಲ್ಲಿ ಸ್ವಚ್ಛ ಭಾರತ್ ಮತ್ತು ರಾಮರಾಜ್ಯದ ಪರಿಕಲ್ಪನೆ ಸಾಕಾರಗೊಳ್ಳುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯನ್ನು ಅಸ್ತಿತ್ವಕ್ಕೆ ತಂದರು. ಇದರ ಮೂಲಕ ಸ್ವಚ್ಛ ಗ್ರಾಮಗಳ ನಿರ್ಮಾಣ, ಗ್ರಾಮಗಳಲ್ಲಿ ಸ್ವ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಗುಡಿ ಕೈಗಾರಿಕೆ, ಹೈನುಗಾರಿಕೆ, ಕೃಷಿ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಗ್ರಾಮೀಣ ಜನರು ತೊಡಗಿಸಿಕೊಳ್ಳುವಂತೆ ಮಾಡುತ್ತಿದೆ. ಅಲ್ಲದೆ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುವ ಮೂಲಕ ಮದ್ಯಪಾನ ನಿರ್ಮೂಲನೆ ಜೊತೆಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದೆ ಎಂದರು.
ಪ್ರಸ್ತುತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಯೋಜನೆ ತನ್ನ ಕಾರ್ಯಕ್ರಮಗಳನ್ನು ಸೀಮಿತ ಚೌಕಟ್ಟಿನಲ್ಲಿ ಆಯೋಜಿಸಿಕೊಂಡು ಬರುತ್ತಿದ್ದು, ಪ್ರತಿವರ್ಷದಂತೆ ಈ ಬಾರಿ ಮಹಾತ್ಮಗಾಂಧಿಯವರನ್ನು ಸ್ಮರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಹಿರಿಯ ನಗರಸಭಾ ಸದಸ್ಯ, ಜಿಲ್ಲಾ ಜನಜಾಗೃತಿ ವೇದಿಕೆಯ ಆರ್. ಕರುಣಾಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭವಿಷ್ಯದ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಹಲವು ಸಮಾಜಮುಖಿ ಕಾರ್ಯಗಳೊಂದಿಗೆ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಪ್ರತಿಯೊಬ್ಬರು ಯೋಜನೆಯ ಆಶಯಗಳನ್ನು ಅರಿತುಕೊಳ್ಳಬೇಕೆಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪಾಲಕ್ಷಪ್ಪ, ತಾ.ಪಂ. ಮಾಜಿ ಸದಸ್ಯ ಹಾಜ್ಯನಾಯ್ಕ, ಹಿರಿಯ ನಗರಸಭಾ ಸದಸ್ಯ ಕೆ.ಎನ್ ಭೈರಪ್ಪಗೌಡ, ಗೊಂದಿ ಜಯರಾಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಕೆ. ಪ್ರಸಾದ್ ಸ್ವಾಗತಿಸಿದರು. ಕೃಷಿ ಅಧಿಕಾರಿ ಗೋವಿಂದಪ್ಪ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನವ ಜೀವನ ಸಮಿತಿ ಸದಸ್ಯರು, ಯೋಜನೆಯ ಅಧಿಕಾರಿಗಳು, ಒಕ್ಕೂಟಗಳ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.