Monday, August 16, 2021

ಸಂಸದ ಬಿ.ವೈ ರಾಘವೇಂದ್ರ ಹುಟ್ಟುಹಬ್ಬ ವಿಶೇಷ ಆಚರಣೆ

ಭದ್ರಾವತಿ ವೀರಾಪುರ ಗ್ರಾಮದಲ್ಲಿ ಸಂಸದ ಬಿ.ವೈ ರಾಘವೇಂದ್ರ ಹುಟ್ಟುಹಬ್ಬದ ಅಂಗವಾಗಿ ರೈತರಿಗೆ ತೆಂಗಿನ ಸಸಿಗಳನ್ನು ವಿತರಿಸಲಾಯಿತು.
   ಭದ್ರಾವತಿ, ಆ. ೧೬: ನಗರದ ಬಿ.ವೈ ರಾಘವೇಂದ್ರ ಅಭಿಮಾನಿಗಳ ಬಳಗದ ವತಿಯಿಂದ ಕಳೆದ ೧೨ ವರ್ಷಗಳಿಂದ ಶಿವಮೊಗ್ಗ ಲೋಕಸಭಾ, ಯುವ ನಾಯಕ ಬಿ.ವೈ ರಾಘವೇಂದ್ರ ಅವರ ಜನ್ಮದಿನ ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
    ತಾಲೂಕು ಪಂಚಾಯಿತಿ ಸದಸ್ಯ, ಬಿಜೆಪಿ ಪಕ್ಷದ ಯುವ ಮುಖಂಡ ಕೆ. ಮಂಜುನಾಥ್ ನೇತೃತ್ವದಲ್ಲಿ ಅಭಿಮಾನಿಗಳ ಬಳಗದಿಂದ ತಾಲೂಕು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ರೈತರಿಗೆ  ತೆಂಗಿನ ಸಸಿ ವಿತರಣೆ, ನಿರ್ಗತಿಕರು, ಅಸಹಾಯಕರು, ವಿಕಲಚೇತನರಿಗೆ ನೆರವು, ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗು ಲೇಖನ ಸಾಮಾಗ್ರಿಗಳ ವಿತರಣೆ ಸೇರಿದಂತೆ ಹಲವಾರು ರೀತಿಯ ವಿಭಿನ್ನವಾದ ಸಾಮಾಜಿಕ ಕಾರ್ಯಗಳನ್ನು ಹುಟ್ಟುಹಬ್ಬದಂದು ಕೈಗೊಳ್ಳಲಾಗುತ್ತಿದೆ.
ಈ ಬಾರಿ ಸಹ ತಾಲೂಕಿನ ವೀರಪುರ ಗ್ರಾಮದಲ್ಲಿ ಒಟ್ಟು ಸುಮಾರು ೧ ಸಾವಿರ ತೆಂಗಿನ ಸಸಿಗಳನ್ನು ರೈತರಿಗೆ ವಿತರಿಸಲಾಯಿತು. ಸಂಸದ ಬಿ.ವೈ ರಾಘವೇಂದ್ರ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಹೊಸಮನೆ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಮೆಸ್ಕಾಂ ಲೈನ್‌ಮೆನ್‌ಗಳಿಗೆ ಹಾಗು ನಗರಸಭೆ ಪೌರಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
    ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್, ಸದಸ್ಯರಾದ ವಿ. ಕದಿರೇಶ್, ರಾಮಲಿಂಗಯ್ಯ, ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ತಾಲೂಕು ಅಧ್ಯಕ್ಷ ಎಂ. ಪ್ರಭಾಕರ್, ಅರಳಿಹಳ್ಳಿ ಪ್ರಕಾಶ್, ಗಣಪತಿಭಟ್, ಗ್ರಾಮ ಪಂಚಾಯಿತಿ ಸದಸ್ಯರಾದ ಸರಸ್ವತಿ, ಲೋಲಾಕ್ಷಿ, ರಂಗಸ್ವಾಮಿ, ನಗರಸಭಾ ಸದಸ್ಯರಾದ ಅನಿತಾ ಮಲ್ಲೇಶ್, ಶಶಿಕಲಾ ನಾರಾಯಣಪ್ಪ, ಮಣಿ ಎಎನ್‌ಎಸ್, ಯುವ ಕಾಂಗ್ರೆಸ್ ಅಧ್ಯಕ್ಷ ಜಿ. ವಿನೋದ್, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್ ಹಾಗು ಹಿಂದೂ ಮಹಾಸಭಾ ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ ಪ್ರಮುಖರು, ಸ್ಥಳಿಯ ಮುಖಂಡರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.



ಭದ್ರಾವತಿಯಲ್ಲಿ ಬಿ.ವೈ ರಾಘವಂದ್ರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಹೊಸಮನೆ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಮೆಸ್ಕಾಂ ಲೈನ್‌ಮೆನ್‌ಗಳಿಗೆ ಹಾಗು ಪೌರಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಆ.೧೮ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಆ. ೧೬: ಮೆಸ್ಕಾಂ ನಗರ ಉಪವಿಭಾಗ ಘಟಕ-೪ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.೧೮ರಂದು ಬೆಳಿಗ್ಗೆ ೧೦.೩೦ ರಿಂದ ಸಂಜೆ ೫.೩೦ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ಹೊಳೆಹೊನ್ನೂರು ವೃತ್ತ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಂತೆ ಮೈದಾನ, ಭೋವಿ ಕಾಲೋನಿ, ಎನ್‌ಎಂಸಿ ರಸ್ತೆ, ಹೊಸಮನೆ, ಸುಭಾಷ್‌ನಗರ, ಹನುಮಂತನಗರ, ವಿಜಯನಗರ, ಶಿವಾಜಿ ವೃತ್ತ, ತಮ್ಮಣ್ಣ ಕಾಲೋನಿ, ಕೇಶವಪುರ, ಕಬಳಿಕಟ್ಟೆ, ಅಶ್ವಸ್ಥನಗರ ಮತ್ತು ಕುವೆಂಪು ನಗರ ಮತ್ತು ಕಣಕಟ್ಟೆ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.


೭ ಸಾವಿರ ಕಟ್ಟಡ ಕಾರ್ಮಿಕರಿಗೆ ಇನ್ನೂ ದಿನಸಿ ಸಾಮಗ್ರಿ ಬಂದಿಲ್ಲ

ಶಾಸಕ ಬಿ.ಕೆ ಸಂಗಮೇಶ್ವರ್ ಅಸಮಾಧಾನ



ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಶ್ರೀ ವಳ್ಳುವರ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ‍್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.   ಮಾತನಾಡಿದರು.  
ಭದ್ರಾವತಿ, ಆ. ೧೬:  ಕೋವಿಡ್-೧೯  ಲಾಕ್ ಡೌನ್ ಹಿನ್ನೆಲೆಯಲ್ಲಿ  ಸಂಕಷ್ಟಕ್ಕೆ ಒಳಗಾಗಿರುವ ತಾಲ್ಲೂಕಿನಲ್ಲಿರುವ ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರದ ವತಿಯಿಂದ ನೆರವಿನ ಹಸ್ತವಾಗಿ ನೀಡಲಾಗುತ್ತಿರುವ ಆಹಾರ ಸಾಮಗ್ರಿ ಸಮರ್ಪಕವಾಗಿ ತಲುಪಿಲ್ಲ ಎಂದು ಶಾಸಕ ಬಿ ಕೆ ಸಂಗಮೇಶ್ವರ್ ಅಸಮಧಾನ ವ್ಯಕ್ತಪಡಿಸಿದರು.
ಅವರು ಸೋಮವಾರ ನಗರದ ತರೀಕೆರೆ ರಸ್ತೆಯಲ್ಲಿರುವ ಶ್ರೀ ವಳ್ಳುವರ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ‍್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ  ಹಮ್ಮಿಕೊಳ್ಳಲಾಗಿದ್ದ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.  
ತಾಲೂಕಿನಲ್ಲಿ ಸುಮಾರು ೧೪ ಸಾವಿರ ಕಟ್ಟಡ ಕಾರ್ಮಿಕರಿದ್ದು, ಈ ಪೈಕಿ ಕೇವಲ ೫ ಸಾವಿರ ಕಾರ್ಮಿಕರಿಗೆ ಮಾತ್ರ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿದೆ. ಉಳಿದ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಿಸುವಂತೆ ಒತ್ತಾಯಿಸಿದ ಪರಿಣಾಮ ಇದೀಗ ಸುಮಾರು ೨ ಸಾವಿರ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ಕಳುಹಿಸಿಕೊಡಲಾಗಿದೆ. ಇನ್ನೂ ಸುಮಾರು ೭ ಸಾವಿರ ಕಾರ್ಮಿಕರಿಗೆ ಇದುವರೆಗೂ ಆಹಾರ ಸಾಮಗ್ರಿ ತಲುಪದಿರುವುದು ವಿಷಾದನೀಯ ಬೆಳವಣಿಗೆ ಯಾಗಿದೆ ಎಂದರು.
ಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ಗುರುತಿನ ಚೀಟಿಗಳನ್ನು  ಮಾಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸದೇ ಗುರುತಿನ ಚೀಟಿ ಇಲ್ಲದವರು ತಕ್ಷಣ ಗುರುತಿನ ಚೀಟಿ ಇಲಾಖೆಯಿಂದ ಪಡೆದುಕೊಳ್ಳುವಂತೆ ಮನವಿ ಮಾಡಿದರು.  
ತಹಸೀಲ್ದಾರ್ ಆರ್. ಪ್ರದೀಪ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ನಗರಸಭಾ ಸದಸ್ಯರಾದ ಮಣಿ, ಜಾರ್ಜ್, ಸಂಘದ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷ ಅಭಿಲಾಷ್, ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ಶಿವಮೊಗ್ಗ ಜಿಲ್ಲಾ ನಗರಾಧ್ಯಕ್ಷ ಮಣಿ, ಅಂತೋಣಿ, ಗೌರವಾಧ್ಯಕ್ಷ ಅಂತೋಣಿ ಕ್ರೂಸ್, ಸಲಹೆಗಾರ ಶಿವಣ್ಣಗೌಡ, ಜಿ. ಸುರೇಶ್, ಮನೋಹರ್, ಕೃಷ್ಣ,  ನಾಗೇಂದ್ರರೆಡ್ಡಿ, ಮಂಜುನಾಥ್, ಶ್ರೀನಿವಾಸ್ ಮತ್ತು ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




ಸೆ.೩ಕ್ಕೆ ವಾರ್ಡ್ ನಂ.೨೯ರ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಹಿತಾ ನಂಜಪ್ಪ ಆಯ್ಕೆ

ಭದ್ರಾವತಿ ನಗರಸಭೆ ೨೯ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ನ್ಯಾಯವಾದಿ ಲೋಹಿತಾ ನಂಜಪ್ಪ ಆಯ್ಕೆಯಾಗಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
    ಭದ್ರಾವತಿ, ಆ. ೧೬: ನಗರಸಭೆ ವಾರ್ಡ್.೨೯ಕ್ಕೆ ಸೆ.೩ರಂದು ನಡೆಯಲಿರುವ ಚುನಾವಣೆಗೆ ನ್ಯಾಯವಾದಿ ಲೋಹಿತಾ ನಂಜಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
    ಜನ್ನಾಪುರ ನಿವಾಸಿ, ನಗರದ ಪ್ರಸಿದ್ದ ನ್ಯಾಯವಾದಿಗಳಲ್ಲಿ ಒಬ್ಬರಾಗಿದ್ದ ದಿವಂಗತ ಎ.ಬಿ ನಂಜಪ್ಪ ಅವರ ಪತ್ನಿ ಲೋಹಿತಾ ನಂಜಪ್ಪ ಸಹ ನ್ಯಾಯವಾದಿಯಾಗಿದ್ದು, ನೋಟರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ತಾಲೂಕು ಒಕ್ಕಲಿಗರ ಸಂಘ, ಹಳೇನಗರದ ಮಹಿಳಾ ಸೇವಾ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಇದೀಗ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ವಾರ್ಡಿನ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.  
     ಚುನಾವಣಾ ಆಯೋಗ ನಗರಸಭೆ ೩೫ ವಾರ್ಡ್‌ಗಳಿಗೆ ಏಪ್ರಿಲ್‌ನಲ್ಲಿ ಚುನಾವಣೆ ಘೋಷಿಸಿತ್ತು. ವಾರ್ಡ್ ನಂ. ೨೯ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಸಿ ಶೃತಿ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು. ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಆಯೋಗ ಚುನಾವಣೆಯನ್ನು ರದ್ದುಗೊಳಿಸಿತ್ತು.
ಇದೀಗ ಪುನಃ ಚುನಾವಣೆ ಘೋಷಣೆಯಾಗಿದ್ದು, ಸೋಮವಾರ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ. ನಾಮಪತ್ರ ಸಲ್ಲಿಸಲು ಆ.೨೩ ಹಾಗು ನಾಮಪತ್ರ ಹಿಂಪಡೆಯಲು ಆ. ೨೬ ಕೊನೆಯ ದಿನವಾಗಿದೆ. ಸೆ.೩ರಂದು ಮತದಾನ ನಡೆಯಲಿದ್ದು, ಸೆ.೬ರಂದು ಮತ ಎಣಿಕೆ ನಡೆಯಲಿದೆ.
       ಈಗಾಗಲೇ ೩೪ ವಾರ್ಡ್‌ಗಳ ಪೈಕಿ ಕಾಂಗ್ರೆಸ್ ಅತಿ ಹೆಚ್ಚು ೧೮ ಸ್ಥಾನಗಳನ್ನು, ಜೆಡಿಎಸ್ ೧೧ ಸ್ಥಾನಗಳನ್ನು ಮತ್ತು ಬಿಜೆಪಿ ೪ ಸ್ಥಾನಗಳನ್ನು ಪಡೆದುಕೊಂಡಿದ್ದು,  ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ವಾರ್ಡ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನಲಾಗಿದ್ದು, ಉಳಿದಂತೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪ್ರತಿಷ್ಠೆಗಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಾಗಿದೆ.

ನ್ಯಾಯಕ್ಕಾಗಿ, ಬಡವರಿಗಾಗಿ ಹೋರಾಟ ನಡೆಸುವವರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಪೀಪಲ್ ಲಿಬರೇಷನ್ (ಬಿ ಪಿ ಎಲ್) ನೂತನ ಸಂಘ ಹಾಗು ೭೫ನೇ ಸ್ವಾತ್ರ್ಯೋತ್ಸವ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಆ. ೧೬: ನ್ಯಾಯಕ್ಕಾಗಿ, ಬಡವರಿಗಾಗಿ ಹೋರಾಟ ನಡೆಸುವವರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ ಎಂದು ಶಾಸಕ ಬಿ ಕೆ ಸಂಗಮೇಶ್ವರ್ ಹೇಳಿದರು.
    ಅವರು ನ್ಯೂಟೌನ್ ಭದ್ರಾವತಿ ಪೀಪಲ್ ಲಿಬರೇಷನ್(ಬಿಪಿಎಲ್) ನೂತನ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಅಧಿಕಾರಿಗಳು, ರಾಜಕಾರಣಿಗಳು ಯಾರೇ ಆಗಿರಲಿ ತಪ್ಪು ಮಾಡುವವರ ವಿರುದ್ಧ ಹೋರಾಟ ನಡೆಸಿ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ  ಶ್ರಮಿಸಬೇಕು. ಅಸಹಾಯಕರು, ನಿರ್ಗತಿಕರು, ಬಡವರಿಗೆ ನೆರವಾಗಬೇಕು. ಸಂಘದ ಸದಸ್ಯರೆಲ್ಲರೂ ಒಟ್ಟಾಗಿ ಮುನ್ನಡೆಯಬೇಕೆಂದರು.
    ಕೊರೋನಾ ಸಂದರ್ಭದಲ್ಲಿ ಅಸಹಾಯಕರು, ನಿರ್ಗತಿಕರು ಹಾಗು ಬಡವರ ಹಸಿವನ್ನು ನೀಗಿಸುವಲ್ಲಿ ಸಂಘದ ಸದಸ್ಯರೆಲ್ಲರೂ ಒಟ್ಟಾಗಿ ನಡೆಸಿದ ಸೇವಾ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಸಂಘದ ಗೌರವಾಧ್ಯಕ್ಷ ಎಸ್.ಕೆ ಸುಧೀಂದ್ರ ಮಾತನಾಡಿ, ಸಂಘದ ಮೂಲ ಉದ್ದೇಶ ನಿರ್ಗತಿಕರು, ಅಸಹಾಯಕರು ಹಾಗೂ ಬಡವರಿಗೆ ನೆರವಾಗಬೇಕೆಂಬುದಾಗಿದೆ. ಸದಸ್ಯರೆಲ್ಲರೂ ಬಡವರ್ಗದವರೇ ಆಗಿದ್ದು, ಇಲ್ಲಿ ಯಾವುದೇ ರೀತಿಯ ಹಣದ ವಹಿವಾಟು ಇಲ್ಲ. ಹೋರಾಟದ ಮೂಲಕ ನ್ಯಾಯ ಒದಗಿಸಿಕೊಡುವುದು. ಸರ್ಕಾರದ ಸೌಲಭ್ಯಗಳು ನಿಜವಾದ ಫಲಾನುಭವಿಗಳಿಗೆ ತಲುಪಿಸುವುದು ಸೇರಿದಂತೆ ಹಲವಾರು ಉದ್ದೇಶಗಳನ್ನಿಟ್ಟುಕೊಂಡು ಸಂಘವನ್ನು ಸ್ಥಾಪಿಸಲಾಗಿದೆ ಎಂದರು.  
       ಪತ್ರಕರ್ತ ಸುರೇಶ್ ಮಾತನಾಡಿ, ಇಂದು ಅನ್ಯಾಯಗಳ ವಿರುದ್ಧ ಪ್ರಶ್ನಿಸುವ ಮನೋಭಾವ ಕಣ್ಮರೆಯಾಗುತ್ತಿದೆ. ಇದರಿಂದ  ಭ್ರಷ್ಟಾಚಾರಗಳು ಹೆಚ್ಚಾಗುತ್ತಿರುವುದು ವಿಪರ್ಯಾಸದ ಸಂಗತಿ. ಯಾವುದನ್ನೂ ಸಹ ಪ್ರಶ್ನಿಸದ ಕಾರಣ ಇಂದು ನಾವುಗಳು ವಿಐಎಸ್‌ಎಲ್ ಮತ್ತು ಎಂಪಿಎಂ  ಕಾರ್ಖಾನೆಗಳ ಯಂತ್ರಗಳು ಸ್ಥಗಿತಗೊಂಡು ಉದ್ಯೋಗವಿಲ್ಲದೆ ಸಂಕಷ್ಟದಲ್ಲಿ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಸಂಘ ಹೆಸರಿಗೆ ತಕ್ಕಂತೆ ಹೋರಾಟದಲ್ಲೂ ಕೂಡ ಮುಂಚೂಣಿಯಲ್ಲಿರಬೇಕೆಂದರು.
ಸಂಘದ ಅಧ್ಯಕ್ಷ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕರು ಮಾರಿಯಮ್ಮ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಕುಪ್ಪಸ್ವಾಮಿ,  ಬ್ಲಾಕ್ ಕಾಂಗ್ರೆಸ್ ಸಮಿತಿ ಸಾಮಾಜಿಕ ಜಾಲತಾಣ ತಾಲೂಕು ಅಧ್ಯಕ್ಷ  ಸದಾಶಿವಮೂರ್ತಿ, ನಗರಸಭಾ ಸದಸ್ಯ ಕೆ. ಸುದೀಪ್ ಕುಮಾರ್,  ಮುಖಂಡ ನರಸಿಂಹಮೂರ್ತಿ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಂಘದ ಕಾರ್ಯಾಧ್ಯಕ್ಷ ಎಂ ರವಿಕುಮಾರ್, ಉಪಾಧ್ಯಕ್ಷರಾದ ಸಂಪತ್ ಕುಮಾರ್, ಜಿ. ಗೋವಿಂದ, ಪ್ರಧಾನ ಕಾರ್ಯದರ್ಶಿ ಶ್ಯಾಮುವೇಲ್, ಕಾರ್ಯದರ್ಶಿ ಎಂ.ಸಿ ಸುನೀಲ್ ಕುಮಾರ್, ಸಂಘಟನಾ ಕಾರ್ಯದರ್ಶಿ ಲೋಕೇಶ್, ಸಹ ಕಾರ್ಯದರ್ಶಿಗಳಾದ ರವೀಂದ್ರ, ಅಜಂತ ಕುಮಾರ್, ಖಜಾಂಚಿ ಎ.ವಿ ಮುರಳಿಕೃಷ್ಣ ಹಾಗು ಸದಸ್ಯರಾದ ಮುತ್ತುಕುಮಾರನ್ ಮಾಯಪ್ಪ, ಶಂಕರ್,  ಕರುಣಾನಿಧಿ,  ನವೀನ್,  ಪ್ರಶಾಂತ್,  ಶ್ರೀನಿವಾಸ್, ವೆಂಕಟೇಶ್,  ಶ್ರೀಕಾಂತ್, ಸಂಜೀವರೆಡ್ಡಿ, ಅಭಿಲಾಶ್, ಯೋಗೇಶ್,  ಹರ್ಷ,  ಸಂದೀಪ, ಅನಿಲ್,  ಸತೀಶ್, ಸುಬ್ಬು,  ಮಂಜುನಾಥ್, ರಾಬರ್ಟ್, ಯೋಹಾನ್,  ಮೋಹನ್  ಮತ್ತು ರಜಾಲಿ ಬೇಗ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.