Sunday, December 3, 2023

ಬೃಹತ್ ಗಾತ್ರದ ಕಬ್ಬಿಣದ ಗೇಟ್ ಮುರಿದು ಬಿದ್ದು ಬಾಲಕನಿಗೆ ತೀವ್ರ ಗಾಯ

ಆಟವಾಡುತ್ತಿದ್ದ ಬಾಲಕನೋರ್ವನ ಮೇಲೆ ಬೃಹತ್ ಗಾತ್ರದ ಕಬ್ಬಿಣದ ಗೇಟ್ ಮುರಿದು ಬಿದ್ದಿರುವ ಘಟನೆ ಭದ್ರಾವತಿ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಪೊಲೀಸ್ ವಸತಿ ಗೃಹದ ಮುಖ್ಯದ್ವಾರದ ಬಳಿ ನಡೆದಿದ್ದು, ತೀವ್ರ ಗಾಯಗೊಂಡಿರುವ ಬಾಲಕನ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.
    ಭದ್ರಾವತಿ: ಆಟವಾಡುತ್ತಿದ್ದ ಬಾಲಕನೋರ್ವನ ಮೇಲೆ ಬೃಹತ್ ಗಾತ್ರದ ಕಬ್ಬಿಣದ ಗೇಟ್ ಮುರಿದು ಬಿದ್ದಿರುವ ಘಟನೆ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಪೊಲೀಸ್ ವಸತಿ ಗೃಹದ ಮುಖ್ಯದ್ವಾರದ ಬಳಿ ನಡೆದಿದೆ.
    ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ರೂಪೇಶ್‌ರವರ ೮ ವರ್ಷದ ಬಾಲಕ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಖಾಸಗಿ ಆಸ್ಪತ್ರೆ ಚಿಕಿತ್ಸೆಗೆ ದಾಖಲಿಸಲಾಯಿತು.
    ಈ ದುರ್ಘಟನೆಗೆ ಕಳಪೆ ಗುಣಮಟ್ಟದ ಕಬ್ಬಿಣದ ಗೇಟ್ ಅಳವಡಿಸಿರುವುದೇ ಕಾರಣ ಎಂದು ಬಾಲಕನ ತಂದೆ ರೂಪೇಶ್ ಆರೋಪಿಸಿದ್ದಾರೆ. ಸಂಬಂಧಿಸಿದವರು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡುವಂತೆ ಆಗ್ರಹಿಸಿದ್ದಾರೆ.

ವಿಶೇಷ ಚೇತನ‌ ಮಕ್ಕಳಲ್ಲಿ ಪ್ರತಿಭೆ 6ನೇ ಇಂದ್ರಿಯ


ಭದ್ರಾವತಿ ನಗರದ ರೋಟರಿ ಸಭಾಂಗಣದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ರೋಟರಿ ಕ್ಲಬ್ ಹಾಗು ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಉದ್ಘಾಟಿಸಿದರು.
    ಭದ್ರಾವತಿ: ವಿಶೇಷ ಚೇತನ‌ ಮಕ್ಕಳಲ್ಲಿ ಪಂಚೇಂದ್ರಿಯಗಳಲ್ಲಿ ನ್ಯೂತನೆಯಿದ್ದರೂ 6ನೇ ಇಂದ್ರಿಯವಾಗಿ ಅವರೊಳಗಿನ ಪ್ರತಿಭೆ ಕಾರ್ಯನಿರ್ವಹಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಹೇಳಿದರು.
ನಗರದ ರೋಟರಿ ಸಭಾಂಗಣದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ರೋಟರಿ ಕ್ಲಬ್ ಹಾಗು ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
     ವಿಶೇಷ ಚೇತನರ ದಿನಾಚರಣೆಗಳು ಆಚರಣೆಗೆ ಸೀಮಿತವಾಗದೆ ಮಕ್ಕಳಲ್ಲಿ ಮನೋಬಲ ಹೆಚ್ಚಿಸುವ ಕಾರ್ಯಕ್ರಮಗಳಾಗಬೇಕು. ವಿಶ್ವ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮಗಳ ಅಂಗವಾಗಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಬದಲು ವಿಶಿಷ್ಟ ಚೇತನ ಸಾಧಕರನ್ನು ಮಕ್ಕಳಿಗೆ ಪರಿಚಯಿಸಬೇಕು. ಈ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕು. ಇಂತಹ ಪ್ರಯತ್ನಕ್ಕೆ ಸಂಘಸಂಸ್ಥೆಗಳು, ಮಾಧ್ಯಮಗಳು, ಜನಪ್ರತಿನಿಧಿಗಳು, ಪೋಷಕರು, ಶಿಕ್ಷಕರು ಎಲ್ಲರೂ ಕೈಜೋಡಿಸಬೇಕೆಂದರು.
       ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೃಥ್ವಿರಾಜ್ ಮಾತನಾಡಿ, ಮಕ್ಕಳ ದಿನಾಚರಣೆ ಎಷ್ಟು ಮುಖ್ಯವೋ, ಅದೇರೀತಿ ವಿಶೇಷ ಚೇತನ ಮಕ್ಕಳಿಗೆ ವಿಶ್ವ ವಿಶೇಷಚೇತನರ ದಿನಾಚರಣೆ ಮುಖ್ಯ. ಪ್ಯಾರಾ ಒಲಂಪಿಕ್ ಕ್ರೀಡೆಯಲ್ಲಿ ಇವರ ಸಾಧನೆ ಅಪಾರವಾಗಿರುವುದು ಭಾರತೀಯರ ಹೆಮ್ಮೆ ಎಂದರು.
      ಹಳೆನಗರದ ಮಹಿಳಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ಮಾತನಾಡಿ, ಪೋಷಕರು ಮಕ್ಕಳನ್ನು ತರಬೇತಿ ನೀಡಿ ಪ್ರೋತ್ಸಾಹಿಸಬೇಕು. ತಾವೇ ಎಲ್ಲ ಕೆಲಸ ಮಾಡುವುದರಿಂದ ಮಕ್ಕಳ ಸಾಮರ್ಥ್ಯ ಕುಗ್ಗಿಸಿದಂತಾಗುತ್ತದೆ. ಆದ್ದರಿಂದ ವಿಶೇಷ ಚೇತನ ಮಕ್ಕಳಿಗೆ ನೆರವಾಗುವುದಕ್ಕಿಂತ ಅವರನ್ನು ಸ್ವಾವಲಂಬಿಗಳಾಗಿಸುವುದು ಮುಖ್ಯ ಎಂದರು.
   ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಪಂಚಾಕ್ಷರಿ, ಮಹಿಳಾ ಸೇವಾ ಸಮಾಜದ ಪ್ರಮುಖರಾದ ಅನ್ನಪೂರ್ಣ ಸತೀಶ್, ಜಯಂತಿ ಶೇಟ್, ಅನುಸೂಯ, ಇಂದಿರಾ ರಮೇಶ್ ಮತ್ತಿತರರಿದ್ದರು.
      ಟಿ.ಎನ್.ಪ್ರತಿಭಾ ಸಂವಿಧಾನ ಪೀಠಿಕೆ ವಾಚಿಸಿದರು. ತೀರ್ಥಪ್ಪ ಸ್ವಾಗತಿಸಿ, ನಿರೂಪಿಸಿದರು. ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗು ಪೋಷಕರಿಗೆ ಬಹುಮಾನ ವಿತರಿಸಲಾಯಿತು.

3 ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ : ವಿಜಯೋತ್ಸವ

3 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಭದ್ರಾವತಿ ನಗರದ ರಂಗಪ್ಪ ವೃತ್ತದಲ್ಲಿ ಭಾನುವಾರ ವಿಜಯೋತ್ಸವ ಆಚರಿಸಲಾಯಿತು.
ಭದ್ರಾವತಿ:  3 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ನಗರದ ರಂಗಪ್ಪ ವೃತ್ತದಲ್ಲಿ ಭಾನುವಾರ ವಿಜಯೋತ್ಸವ ಆಚರಿಸಲಾಯಿತು.
ಪಕ್ಷದ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ನೇತೃತ್ವದಲ್ಲಿ ಪಕ್ಷದ ಬಾವುಟ ಹಿಡಿದು ಸಂಭ್ರಮಾಚರಣೆ ನಡೆಸಿ ಸಿಹಿ ಹಂಚಲಾಗಿರುವ.
ಪಕ್ಷದ ಪ್ರಮುಖರಾದ ಮಂಗೋಟೆ ರುದ್ರೇಶ್, ಕೆ. ಮಂಜುನಾಥ್, ಚನ್ನೇಶ್, ರಂಗಸ್ವಾಮಿ, ಕೆ.ಎನ್ ಶ್ರೀಹರ್ಷ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಸಂಚಾರಿ ಪೊಲೀಸ್ ಠಾಣೆಯಲ್ಲಿ ಶಿಬಿರ : ೫೪ ಮಂದಿ ರಕ್ತದಾನ

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ ಶಿವಮೊಗ್ಗ, ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗು ಪೊಲೀಸ್ ಉಪವಿಭಾಗದ ವತಿಯಿಂದ ಭದ್ರಾವತಿ ನ್ಯೂಟೌನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಭಾನುವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
    ಭದ್ರಾವತಿ: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ ಶಿವಮೊಗ್ಗ, ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗು ಪೊಲೀಸ್ ಉಪವಿಭಾಗದ ವತಿಯಿಂದ ನಗರದ ನ್ಯೂಟೌನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಭಾನುವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
    ಉಪವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು, ಕುಟುಂಬ ವರ್ಗದವರು ಮಾತ್ರವಲ್ಲದೆ ಸಾರ್ವಜನಿಕರು ಸಹ ಶಿಬಿರದಲ್ಲಿ ಪಾಲ್ಗೊಂಡಿದ್ದರು. ೬ ಜನ ಮಹಿಳೆಯರು ಸೇರಿದಂತೆ ಒಟ್ಟು ೫೪ ಮಂದಿ ರಕ್ತದಾನ ಮಾಡಿದರು.
    ವೈದ್ಯರಾದ ಡಾ. ಚೈತನ್ಯ ಮತ್ತು ಡಾ. ಪ್ರದ್ಯುಹ್ನ ನೇತೃತ್ವದ ತಂಡ ಹಾಗು ಪೊಲೀಸ್ ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್, ವಿವಿಧ ಠಾಣೆಗಳ ಠಾಣಾಧಿಕಾರಿಗಳಾದ ಶಾಂತಲಾ, ರಮೇಶ್, ಕೃಷ್ಣಕುಮಾರ್, ಶರಣಪ್ಪ ಹಂಡ್ರಗಲ್, ಸಹಾಯಕ ಠಾಣಾಧಿಕಾರಿಗಳಾದ ಸೂರ್ಯನಾರಾಯಣ, ಶಿವಸ್ವಾಮಿ, ಸಿಬ್ಬಂದಿ ಹಾಲೇಶಪ್ಪ, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಶಿಬಿರದ ಯಶಸ್ವಿಗೆ ಹಲವು ಸಿಬ್ಬಂದಿ ಪಾಲ್ಗೊಂಡಿದ್ದರು.