![](https://blogger.googleusercontent.com/img/a/AVvXsEg7rCAOzlZ6YeHTXesRSe9FoyXQ9LO-NjTtuHZJNZsFqSPFem7yVHNjfYCw6JsCC0773fAcJmRcSg6X4uCexFPYKBfweEDOyxGmzyUCB-8KD5RXmDldUsbBENE2ognezH8E1mhCwnFGqCNb23SUtJ5LImwOTh5VcoinMtfCHR-JqWzaKHoJ5UzYjXahQg=w400-h180-rw)
ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶ್ರೀ ಸತ್ಯಸಾಯಿ ಮಂದಿರದಲ್ಲಿ ಶಿಕ್ಷಣಾಧಿಕಾರಿಗಳು ಹಾಗು ಪದವಿನಿಮಿತ್ತ ಬ್ಲಾಕ್ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಚೇತನ ಮಕ್ಕಳ ನ್ಯೂನ್ಯತೆಗಳ ಬಗ್ಗೆ ತಾಲೂಕಿನ ಗೃಹಾಧಾರಿತ ಮಕ್ಕಳ ಪೋಷಕರಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಶಿವಮೊಗ್ಗ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯದ್ಯ ಡಾ. ಧನಂಜಯ ಸರ್ಜಿ ಅವರನ್ನು ಸನ್ಮಾನಿಸಲಾಯಿತು.
ಭದ್ರಾವತಿ, ಆ. ೨೫ : ವಿಕಲಚೇತನ ಮಕ್ಕಳ ನ್ಯೂನ್ಯತೆಗಳು ಅವರ ಬೆಳವಣಿಗೆಗೆ ಮಾರಕವಾಗಬಾರದು. ಈ ನಿಟ್ಟಿನಲ್ಲಿ ಪೋಷಕರು ಹೆಚ್ಚಿನ ಜಾಗ್ರತೆವಹಿಸಬೇಕೆಂದು ಶಿವಮೊಗ್ಗ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯದ್ಯ ಡಾ. ಧನಂಜಯ ಸರ್ಜಿ ಹೇಳಿದರು.
ಅವರು ಗುರುವಾರ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶ್ರೀ ಸತ್ಯಸಾಯಿ ಮಂದಿರದಲ್ಲಿ ಶಿಕ್ಷಣಾಧಿಕಾರಿಗಳು ಹಾಗು ಪದವಿನಿಮಿತ್ತ ಬ್ಲಾಕ್ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಚೇತನ ಮಕ್ಕಳ ನ್ಯೂನ್ಯತೆಗಳ ಬಗ್ಗೆ ತಾಲೂಕಿನ ಗೃಹಾಧಾರಿತ ಮಕ್ಕಳ ಪೋಷಕರಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಕಲಚೇತನ ಮಕ್ಕಳ ಪೋಷಣೆಯಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ಯಾವುದೇ ಕಾರಣಕ್ಕೂ ಇಂತಹ ಮಕ್ಕಳನ್ನು ನಿರ್ಲಕ್ಷ್ಯತನದಿಂದ ಕಾಣಬಾರದು. ಆತ್ಮಸ್ಥೈರ್ಯ ಹೆಚ್ಚಿಸುವ ಜೊತೆಗೆ ಅವರ ಆರೋಗ್ಯ ಮತ್ತು ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ಇಂತಹ ಮಕ್ಕಳಿಗೆ ಪೋಷಕರೇ ಶಿಕ್ಷಕರು, ವೈದ್ಯರು ಎಲ್ಲವೂ ಆಗಿರುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕೆಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿಯ ಡಿವೈಪಿಸಿಗಳಾದ ಉಮಾಮಹೇಶ್, ಗಣಪತಿ, ಡಿಯಟ್ ಹಿರಿಯ ಉಪನ್ಯಾಸಕಿಯರಾದ ಫಾತೀಮಾ, ರೇಣುಕಾ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಪ್ರಭಾಕರ ಬೀರಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರಗೌಡ, ತಾಲೂಕು ಅಧ್ಯಕ್ಷ ಪೃಥ್ವಿರಾಜ್, ಪ್ರಧಾನ ಕಾರ್ಯದರ್ಶಿ ಎಸ್.ಕೆ ಮೋಹನ್, ವೈದ್ಯಾಧಿಕಾರಿ ದತ್ತಾತ್ರೇಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ತೀರ್ಥಹಳ್ಳಿ ಸೊಪ್ಪುಗುಡ್ಡೆ ಶಿಕ್ಷಕ ಕುಮಾರ್ ಗೃಹಾಧಾರಿತ ಮಕ್ಕಳಿಗೆ ಫಿಜಿಯೋಥೆರಫಿ ಮಾಡುವ ಕ್ರಮದ ಬಗ್ಗೆ ಪ್ರೋಜೆಕ್ಟರ್ ಮೂಲಕ ವಿವರವಾದ ಮಾಹಿತಿಯನ್ನು ಪೋಷಕರಿಗೆ ತಿಳಿಸಿದರು.
ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ರೇಣುಕಾ, ಪ್ರತಿಭಾ, ಲಿಲಿತಾಕುಮಾರಿ ಸಂಗಡಿಗರು ಪ್ರಾರ್ಥಿಸಿದರು. ಡಿ.ಎಚ್ ತೀರ್ಥಪ್ಪ ನಿರೂಪಿಸಿ, ಕವಿತ ವಂದಿಸಿದರು.