Tuesday, February 9, 2021

ಸಮಾಜ ಸೇವಕ ರೋಸಯ್ಯ ನೆನಪಿನಲ್ಲಿ ನಿರಾಶ್ರಿತರಿಗೆ ಕ್ಷೌರ

ಮಾನವೀಯ ನೆಲೆಗಟ್ಟಿನಲ್ಲಿ ಸ್ಪಂದಿಸಿದ ವಿವಿಧ ಸಂಘಟನೆಗಳು

ಭದ್ರಾವತಿ ನ್ಯೂಟೌನ್ ತಮಿಳು ಸರ್ಕಾರಿ ಶಾಲೆ ಹಿಂಭಾಗದ ಖಾಲಿ ಜಾಗದಲ್ಲಿ ಮಂಗಳವಾರ ಸಮಾಜ ಸೇವಕ ರೋಸಯ್ಯನವರ ಸ್ಮರಣಾರ್ಥ ನಿರಾಶ್ರಿತರಿಗೆ ಉಚಿತ ಕ್ಷೌರ ಕೈಗೊಳ್ಳವ ಮೂಲಕ ಸೇವಾ ಕಾರ್ಯ ನಡೆಸಲಾಯಿತು.
    ಭದ್ರಾವತಿ, ಫೆ. ೯: ನಿರಾಶ್ರಿತರನ್ನು ಸಮಾಜದಲ್ಲಿ ಕಾಣುವ ರೀತಿ ಎಲ್ಲರಿಗೂ ತಿಳಿದಿದೆ. ಬಹಳಷ್ಟು ಮಂದಿ ನಮಗೂ ಅವರಿಗೂ ಯಾವುದೇ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಾರೆ. ಅಪರೂಪಕ್ಕೆ ಕೆಲವರು ಮಾನವೀಯ ನೆಲೆಗಟ್ಟಿನಲ್ಲಿ ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಇಂತಹ ವ್ಯಕ್ತಿಗಳಲ್ಲಿ ದಿವಂಗತ ರೋಸಯ್ಯ ಸಹ ಒಬ್ಬರಾಗಿದ್ದರು. ಇವರ ನಿಧನದ ನಂತರ ಇವರ ಪುತ್ರ ಆರ್. ಮೋಸಸ್ ತಂದೆಯ ಸೇವಾ ಕಾರ್ಯವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.
    ರೋಸಯ್ಯನವರು ತಾವು ದುಡಿದ ಸ್ವಲ್ಪ ಭಾಗವನ್ನು ನಿರಾಶ್ರಿತರ ಸೇವೆಗಾಗಿ ಮೀಸಲಿಟ್ಟಿದ್ದರು. ಪ್ರತಿದಿನ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಕೈಗೊಳ್ಳುತ್ತಿದ್ದರು. ಇದೀಗ ಅವರ ಸೇವಾ ಕಾರ್ಯದೊಂದಿಗೆ ಅವರ ನೆನಪು ಶಾಶ್ವತವಾಗಿ ಉಳಿದುಕೊಂಡಿದೆ. ಮೋಸಸ್‌ರವರು ತಂದೆ ಕೈಗೊಳ್ಳುತ್ತಿದ್ದ ಸೇವಾ ಕಾರ್ಯಕ್ಕೆ ಇದೀಗ ಮತ್ತೊಂದು ಸೇವೆಯನ್ನು ಸೇರ್ಪಡೆಮಾಡಿದ್ದಾರೆ. ನಿರಾಶ್ರಿತರಿಗೆ ಉಚಿತ ಕ್ಷೌರ ವ್ಯವಸ್ಥೆ ಕಲ್ಪಿಸುವ ಮೂಲಕ ಅವರ ವೈಯಕ್ತಿಕ ಶುಚಿತ್ವದ ಬಗ್ಗೆ ಕಾಳಜಿವಹಿಸಿದ್ದಾರೆ. ಇವರ ಕಾರ್ಯಕ್ಕೆ ಪೊಲೀಸ್ ಉಮೇಶ್ ನೇತೃತ್ವದ ಸ್ನೇಹ ಜೀವಿ ಬಳಗ ಹಾಗು ನಗರದ ಸವಿತ ಸಮಾಜ ಸಹ ಕೈಜೋಡಿಸಿದೆ.
     ಮಂಗಳವಾರ ನ್ಯೂಟೌನ್ ತಮಿಳು ಸರ್ಕಾರಿ ಶಾಲೆ ಹಿಂಭಾಗದ ಖಾಲಿ ಜಾಗದಲ್ಲಿ ರೋಸಯ್ಯನವರ ಸ್ಮರಣಾರ್ಥ ನಿರಾಶ್ರಿತರಿಗೆ ಉಚಿತ ಕ್ಷೌರ ಕೈಗೊಳ್ಳವ ಮೂಲಕ ಸೇವಾ ಕಾರ್ಯ ನಡೆಸಲಾಯಿತು.
ಈ ಕಾರ್ಯಕ್ಕೆ ಕ್ರೈಸ್ತ ಧರ್ಮಗುರುಗಳು, ಪೊಲೀಸ್ ಉಮೇಶ್, ಸತೀಶ್‌ಗೌಡ, ಸವಿತ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ದಯಾಸಾಗರ್ ಟ್ರಸ್ಟ್‌ನ ಪ್ರಮುಖರು ಸೇರಿದಂತೆ ಇನ್ನಿತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



೪ ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರು ಅವಿರೋಧ ಆಯ್ಕೆ

ಶಾಸಕ ಬಿ.ಕೆ ಸಂಗಮೇಶ್ವರ್, ಜಿ.ಪಂ. ಮಾಜಿ ಸದಸ್ಯ ಎಸ್. ಕುಮಾರ್ ಬೆಂಬಲಿಗರಿಗೆ ಅಧಿಕಾರ

ಭದ್ರಾವತಿ ಹಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಅಯ್ಕೆಯಾದ ನೂತನ ಅಧ್ಯಕ್ಷರು, ಉಪಾಧ್ಯಕ್ಷರೊಂದಿಗೆ ಕಾಂಗ್ರೆಸ್ ಹಾಗು ಜೆಡಿಎಸ್ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.

   ಭದ್ರಾವತಿ, ಫೆ. ೯: ತಾಲೂಕಿನ ೪ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ಚುನಾವಣೆ ನಡೆದಿದ್ದು, ಬಹುತೇಕ ಕಡೆ  ಅವಿರೋಧ ಆಯ್ಕೆ ನಡೆಯಿತು.
    ಹಿರಿಯೂರು ಗ್ರಾಮ ಪಂಚಾಯಿತಿ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಜಿ.ಜಿ ಗಂಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದು, ಇವರು ಈ ಪಂಚಾಯಿತಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಏಕೈಕ ಸದಸ್ಯೆಯಾಗಿದ್ದಾರೆ. ಉಳಿದಂತೆ ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದು, ಒಬ್ಬರ ನಾಮಪತ್ರ ತಿರಸ್ಕೃತಗೊಂಡ ಹಿನ್ನಲೆಯಲ್ಲಿ ಪವಿತ್ರ ಜಿ. ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೨ನೇ ಬಾರಿಗೆ ಪಂಚಾಯಿತಿಗೆ ಆಯ್ಕೆಯಾಗಿರುವ ಇವರು ಮೊದಲ ಅವಧಿಯಲ್ಲಿಯೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿಗರು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಕೆ. ಬಸವರಾಜ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
   ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಹಿಂದುಳಿದ 'ಎ' ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಮಂಜುಳ ಹಾಗು ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಬಿ. ಆನಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
   ಅರಳಿಕೊಪ್ಪ ಗ್ರಾಮ ಪಂಚಾಯಿತಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಉತ್ತರೇಶ್ .ಎಸ್ ಹಾಗು ಸಾಮಾನ್ಯ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀ ಬಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕು ಪಂಚಾಯಿತಿ ಅಧ್ಯಕ್ಷ ದಾಸೋಹ ಸಹಾಯಕ ನಿರ್ದೇಶಕ ಬಿ. ನಟರಾಜ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಬೆಂಬಲಿಗರು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
    ಅತ್ತಿಗುಂದ ಗ್ರಾಮ ಪಂಚಾಯಿತಿ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ರತ್ನಮ್ಮ ಹಾಗು ಹಿಂದುಳಿದ 'ಎ' ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಮೊಹ್ಸಿನಾ ಬಾನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಚುನಾವಣಾಧಿಕಾರಿಯಾರಿ ಕರ್ತವ್ಯ ನಿರ್ವಹಿಸಿದರು. ಕಾಂಗ್ರೆಸ್ ಬೆಂಬಲಿಗರು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ನೀರಾವರಿ ನಿಗಮದ ಕೆರೆಗಳನ್ನು ನಗರಸಭೆಗೆ ಹಸ್ತಾಂತರಿಸಿ : ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಮನವಿ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಹಿನ್ನಲೆಯಲ್ಲಿ ನಗರಸಭೆಗೆ ಕೆರೆಗಳನ್ನು ಹಸ್ತಾಂತರಿಸುವಂತೆ ಒತ್ತಾಯಿಸಿ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಕರ್ನಾಟಕ ನೀರಾವರಿ ನಿಗಮ ನಿಯಮಿತ ನಂ.೩ ಬಿ.ಆರ್.ಎಲ್.ಬಿ.ಸಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್.ಬಿ ಮಂಜುನಾಥ್‌ಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಫೆ. ೯: ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಹಿನ್ನಲೆಯಲ್ಲಿ ನಗರಸಭೆಗೆ ಕೆರೆಗಳನ್ನು ಹಸ್ತಾಂತರಿಸುವಂತೆ ಒತ್ತಾಯಿಸಿ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಕರ್ನಾಟಕ ನೀರಾವರಿ ನಿಗಮ ನಿಯಮಿತ ನಂ.೩ ಬಿ.ಆರ್.ಎಲ್.ಬಿ.ಸಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್.ಬಿ ಮಂಜುನಾಥ್‌ಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
   ಕಳೆದ ಸುಮಾರು ೨೫ ವರ್ಷಗಳಿಂದ ನಗರಸಭೆ ವ್ಯಾಪ್ತಿಯಲ್ಲಿರುವ ಯಾವುದೇ ಕೆರೆಯ ಬೌಂಡರಿ ನಿಗದಿಪಡಿಸಿಲ್ಲ. ಜೊತೆಗೆ ಅಭಿವೃದ್ದಿ ಸಹ ಕೈಗೊಂಡಿಲ್ಲ. ದಕ್ಷ ಅಧಿಕಾರಿಯಾಗಿರುವ ಮನೋಹರ್ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ರೈತರಿಗೆ, ದನಗಾಹಿಗಳಿಗೆ ಹಾಗು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ನಗರಸಭೆ ವ್ಯಾಪ್ತಿಯಲ್ಲಿರುವ ಸುಮಾರು ೭೦ ಕೆರೆಗಳನ್ನು ಗುರುತಿಸಿದ್ದು, ತಾಲೂಕು ಆಡಳಿತದಿಂದ ಬೌಂಡರಿ ನಿಗದಿಪಡಿಸುವಲ್ಲಿ ಯಶಸ್ವಿಯಾಗಿದ್ದು,  ಇದೀಗ ಕೆರೆಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ.
    ಈಗಾಗಲೇ ತಾಲೂಕು ಆಡಳಿತದ ಅಧೀನದಲ್ಲಿರುವ ಸುಮಾರು ೧೭ ಕೆರೆಗಳನ್ನು, ಜಿಲ್ಲಾ ಪಂಚಾಯಿತಿ ಅಧೀನದಲ್ಲಿರುವ ಸುಮಾರು ೧೫ ಕೆರೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ನಗರಸಭೆ ಆಡಳಿತಕ್ಕೆ ಹಸ್ತಾಂತರಿಸಲಾಗಿದೆ.  ಕರ್ನಾಟಕ ನೀರಾವರಿ ನಿಗಮದಲ್ಲಿ ಕೆರೆಗಳ ಅಭಿವೃದ್ಧಿಗೆ ಯಾವುದೇ ವಿಶೇಷ ಅನುದಾನ ಲಭ್ಯವಿರುವುದಿಲ್ಲ. ಈ ಹಿನ್ನಲೆಯಲ್ಲಿ ನಿಗಮಕ್ಕೆ ಸೇರಿದ ಕೆರೆಗಳನ್ನು ನಗರಸಭೆಗೆ ಹಸ್ತಾಂತರಿಸುವಂತೆ ಮನವಿಯಲ್ಲಿ ಕೋರಲಾಗಿದೆ.
   ಟ್ರಸ್ಟ್ ಛೇರ್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್, ಮುಖಂಡರಾದ ವಿಶ್ವೇಶ್ವರರಾವ್ ಗಾಯಕ್ವಾಡ್, ಗಿರಿನಾಯ್ದು, ಎನ್. ರಾಮಕೃಷ್ಣ, ಮುರುಗನ್, ಪ್ರಸನ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.